ಚಿಕ್ಕಮಗಳೂರು: ನೀರಿಲ್ಲ ಅಂತ ಹೈಟೆಕ್ ಕೇಂದ್ರೀಯ ವಿದ್ಯಾಲಯ ಸುಪರ್ದಿಗೆ ತೆಗೆದುಕೊಳ್ಳಲು ಜಿಲ್ಲಾಡಳಿತ ಹಿಂದೇಟು

By Girish Goudar  |  First Published Oct 5, 2023, 10:45 PM IST

ಸಂಸದರಿಗೂ ಹೇಳಿಯಾಯ್ತು. ಜಿಲ್ಲಾಧಿಕಾರಿಗೂ ಮನವಿ ಮಾಡಾಯ್ತು. ಆದ್ರೆ, ಅಧಿಕಾರಿಗಳು ಬಿಲ್ಡಿಂಗ್‌ ಹ್ಯಾಂಡ್ಓವರ್ ತೆಗೆದುಕೊಳ್ಳೋಕೆ ಮನಸ್ಸು ಮಾಡ್ತಿಲ್ಲ. 30 ಕೋಟಿ ಹಣ ನಿರುಪಯುಕ್ತ ವಸ್ತುವಿನಂತೆ ಬಿದ್ದಿದೆ. ಡಯಟ್ ಬಿಲ್ಡಿಂಗ್‌ನಲ್ಲಿ ಮಕ್ಕಳು ಇಕ್ಕಟ್ಟಿನ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಅ.05):  ಚಿಕ್ಕಮಗಳೂರಲ್ಲಿ ನೂತನವಾಗಿ ನಿರ್ಮಾಣವಾಗಿರುವ ಕೇಂದ್ರೀಯ ವಿದ್ಯಾಲಯದ ಕಟ್ಟಡದ ಕಾಮಗಾರಿ ಮುಗಿದು ನಾಲ್ಕು ತಿಂಗಳಾದ್ರು ಉದ್ಘಾಟನೆಯಾಗೋ ಭಾಗ್ಯ ಇಲ್ಲ. ಕಂಟ್ರಾಕ್ಟರ್ ಕೀ ಕೊಡೋದಕ್ಕೆ ಸಿದ್ಧರಿದ್ದಾರೆ. ಆದ್ರೆ, ತೆಗೆದುಕೊಳ್ಳೋಕೆ ಜಿಲ್ಲಾಡಳಿತ ಮನಸ್ಸು ಮಾಡ್ತಿಲ್ಲವಂತೆ. 

Latest Videos

undefined

ಹತ್ತಾರು ಎಕರೆಯಲ್ಲಿ ನಿರ್ಮಾಣವಾದ ಬೃಹತ್ ಹೈಟೆಕ್ ಕಟ್ಟಡವಾಗಿದ್ದು ಸುಸರ್ಜಿತ ಆಟದ ಮೈದಾನ, ಸುಮಾರು ಮೂವತ್ತು ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಹೈಟೆಕ್ ಕೇಂದ್ರೀಯ ವಿದ್ಯಾಲಯ ಕಟ್ಟಡವಾಗಿದೆ. ಬಣ್ಣ ಆಗಿದೆ. ಎಲ್ಲಾ ಕೆಲಸ ಮುಗಿದು ಉದ್ಘಾಟನೆಗೆ ಸಿದ್ಧಗೊಂಡಿದೆ. ಆದ್ರೆ, ಕಾಮಗಾರಿ ಮುಗಿದು ನಾಲ್ಕು ತಿಂಗಳು ಕಳೆದ್ರೂ ತನ್ನ ಸುಪರ್ದಿಗೆ ತೆಗೆದುಕೊಳ್ತಿಲ್ಲ. ಸ್ವಚ್ಛಂದ ಪರಿಸರದ ಮಧ್ಯೆಯ ಆ ಹೈಟೆಕ್ ಬಿಲ್ಡಿಂಗ್‌ನಲ್ಲಿ ಮಕ್ಕಳಿಗೆ ಪಠ್ಯವೂ ಇಲ್ಲ. ಜಿಲ್ಲಾಡಳಿತವೂ ವಶಪಡಿಸಿಕೊಳ್ತಿಲ್ಲ. ಪೋಷಕರು ಮಾತ್ರ ಜಾತಕಪಕ್ಷಿಗಳಂತೆ ಕಾಯ್ತಿದ್ದಾರೆ. 

ಚಿಕ್ಕಮಗಳೂರು: ಕುಡುಕರ ಅಡ್ಡೆಯಾದ ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಾಣವಾದ ಮಳಿಗೆಗಳು..!

ನೀರು ಸಮರ್ಪಕವಾಗಿಲ್ಲ ಅಂತ ಸುಪರ್ದಿಗೆ ತೆಗೆದುಕೊಳ್ಳಲು ಹಿಂದೇಟು!

ಸುಮಾರು 10 ಎಕರೆ ಜಾಗದಲ್ಲಿ ನಿರ್ಮಾಣವಾಗಿರೋ ಬೃಹತ್ ಕಟ್ಟಡ. ಗೇಟ್ ಮುಂದೆ ನಿಂತರೆ ಎತ್ತ ನೋಡಿದ್ರು ಬೃಹತ್ ಕಟ್ಟಡಗಳೇ ಕಾಣೋ ಹೈಟೆಕ್ ಬಿಲ್ಡಿಂಗ್. ಸುಣ್ಣ-ಬಣ್ಣ ಕಂಡು ಜಗಮಗಿಸುತ್ತಿದೆ. ಆದ್ರೆ, ಈ ಬಿಲ್ಡಿಂಗ್ಗೆ ಉದ್ಘಾಟನೆ ಭಾಗ್ಯ, ಇಲ್ಲಿ ಮಕ್ಕಳು ಪಾಠ ಕೇಳೋ ಭಾಗ್ಯ ಎರಡೂ ಇಲ್ಲ. ಕಾರಣ ಇಷ್ಟೆ. ನೀರು ಸಮರ್ಪಕವಾಗಿಲ್ಲ ಅಂತ. ಮೂರು ಬೋರ್ ಕೊರೆಸಿದ್ರು ನೀರು ಸಿಕ್ಕಿರೋದು ಅಲ್ಪಪ್ರಮಾಣದಲ್ಲಿ. ಎರಡು ಬೋರ್ ಫೇಲ್ ಆಗಿ. ಮೂರನೇ ಬೋರ್ನಲ್ಲಿ ಅರ್ಧ ಇಂಚು ನೀರು ಸಿಕ್ಕಿದೆಯಂತೆ. ಸೋ, 400 ಮಕ್ಕಳಿಗೆ ಆ ನೀರು ಸಾಲುವುದಿಲ್ಲ ಅಂತ ಜಿಲ್ಲಾಡಳಿತ ಸುಪರ್ದಿಗೆ ತೆಗೆದುಕೊಳ್ಳಲು ಹಿಂದೇಟು ಹಾಕ್ತಿದೆ. ಸಾಲದಕ್ಕೆ ಈ ಕೇಂದ್ರೀಯ ವಿದ್ಯಾಲಯದಲ್ಲಿ ಪ್ರಸ್ತುತ ತಾತ್ಕಾಲಿಕ ಪ್ರಾಂಶುಪಾಲರಿದ್ದು, ನೀರಿನ ಸಮಸ್ಯೆ ಇರೋದ್ರಿಂದ ಸುಪರ್ದಿಗೆ ತೆಗೆದುಕೊಳ್ಳಲು ಹಿಂದೇಟು ಹಾಕ್ತಿದ್ದಾರೆ ಎಂದು ಪೋಷಕರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ಆರೋಪಿಸಿದ್ದಾರೆ. 

ವಾರದಲ್ಲಿ ಕಟ್ಟಡವನ್ನ ನಮ್ಮ ಹ್ಯಾಂಡ್ಓವರ್‌ಗೆ : 

ಇಷ್ಟೊಂದು ದೊಡ್ಡ ಮಟ್ಟದಲ್ಲಿ ಕೇಂದ್ರ ಸರ್ಕಾರ ಹಣ ನೀಡಿದೆ. ಹಣಕ್ಕೆ ತಕ್ಕಂತೆ ಬಿಲ್ಡಿಂಗ್ ಕೂಡ ರೆಡಿಯಾಗಿದೆ. ಸುಸಜ್ಜಿತ ಆಟ ಮೈದಾನ. ಒಳಹೊಕ್ಕರೆ ಉತ್ತಮ ಪರಿಸರವಿರೋ ಕೇಂದ್ರಿಯ ವಿದ್ಯಾಲಯದ ಕಟ್ಟಡದಲ್ಲಿ ನೀರಿನ ಸಮಸ್ಯೆಯನ್ನ ಬಗೆಹರಿಸೋ ಮನಸ್ಸು ಮಾತ್ರ ನಾಲ್ಕು ತಿಂಗಳಿನಿಂದ ಮಾಡ್ತಿಲ್ಲ. ಕಾಮಗಾರಿ ಮುಗಿಯಿತು. ಕಟ್ಟಡವೂ ಆಯ್ತು. ಈಗ ಅಲ್ಲಿರೋದು ಓರ್ವ ಸೆಕ್ಯೂರಿಟಿ ಗಾರ್ಡ್ ಮಾತ್ರ. ಪ್ರಸ್ತುತ 400 ಮಕ್ಕಳಿರೋ ಈ ಕೇಂದ್ರೀಯ ವಿದ್ಯಾಲಯ ಸದ್ಯಕ್ಕೆ ಡಯಟ್ ಕಾಲೇಜಿನ ಆವರಣದಲ್ಲಿ ನಡೆಯುತ್ತಿದೆ. ಅಲ್ಲಿ ನಾನಾ ಸಮಸ್ಯೆಗಳಿವೆ. ಹೈಟೆಕ್ ಬಿಲ್ಡಿಂಗ್ ತಲೆಎತ್ತಿ ನಿಂತಿದ್ರು ಸರ್ಕಾರ ಮಕ್ಕಳನ್ನ ವರ್ಗಾವಣೆ ಮಾಡುತ್ತಿಲ್ಲ. ಪೋಷಕರು ಕೂಡ ಈಗಾಗಲೇ ನಗರದಿಂದ 5 ಕಿ.ಮೀ. ದೂರದ ಶಾಲೆಗೆ ಹೋಗಿ ಬರೋದಕ್ಕೆ ಬಸ್ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಆದ್ರೆ, ಸರ್ಕಾರ ಕಟ್ಟಡವನ್ನ ಸುಪರ್ದಿಗೆ ತೆಗೆದುಕೊಳ್ಳದಿರೋದು ಪೋಷಕರಿಗೂ ಬೇಸರ ತರಿಸಿದೆ.

ಈ ಸಂಬಂಧ ಏಷ್ಯಾನೆಟ್ ಸುವರ್ಣ ನ್ಯೂಸ್‌ನೊಂದಿಗೆ ಮಾತನಾಡಿದ ಡಿಸಿ ಮೀನಾ ನಾಗರಾಜ್ ಅವರು, ನೀರಿನ ಸಮಸ್ಯೆ ಇಲ್ಲ. ಇನ್ನೊಂದು ವಾರದಲ್ಲಿ ಕಟ್ಟಡವನ್ನ ನಮ್ಮ ಹ್ಯಾಂಡ್ಓವರ್‌ಗೆ ತೆಗೆದುಕೊಳ್ತೀವಿ ಅಂತಿದ್ದಾರೆ.
ಒಟ್ಟಾರೆ, ಸಂಸದರಿಗೂ ಹೇಳಿಯಾಯ್ತು. ಜಿಲ್ಲಾಧಿಕಾರಿಗೂ ಮನವಿ ಮಾಡಾಯ್ತು. ಆದ್ರೆ, ಅಧಿಕಾರಿಗಳು ಬಿಲ್ಡಿಂಗ್‌ ಹ್ಯಾಂಡ್ಓವರ್ ತೆಗೆದುಕೊಳ್ಳೋಕೆ ಮನಸ್ಸು ಮಾಡ್ತಿಲ್ಲ. 30 ಕೋಟಿ ಹಣ ನಿರುಪಯುಕ್ತ ವಸ್ತುವಿನಂತೆ ಬಿದ್ದಿದೆ. ಡಯಟ್ ಬಿಲ್ಡಿಂಗ್‌ನಲ್ಲಿ ಮಕ್ಕಳು ಇಕ್ಕಟ್ಟಿನ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಹಾಗಾಗಿ, ಪೋಷಕರು ಕೂಡ ಸರ್ಕಾರ ಕೂಡಲೇ ನೀರಿನ ಸಮಸ್ಯೆ ಸೇರಿದಂತೆ ಅಲ್ಲಿರುವ ಇತರೆ ಸಮಸ್ಯೆಯನ್ನ ಬಗೆಹರಿಸಿ ಕೂಡಲೇ ಬಿಲ್ಡಿಂಗ್‌ ಸುಪರ್ದಿಗೆ ತೆಗೆದುಕೊಂಡು ಅಲ್ಲೇ ಶಾಲೆಯನ್ನ ಓಪನ್ ಮಾಡಲಿ ಎಂದು ಆಗ್ರಹಿಸಿದ್ದಾರೆ.

click me!