
ಬೆಂಗಳೂರು (ಏ.27): ರಾಜ್ಯದಲ್ಲಿ ಇತ್ತೀಚೆಗೆ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) 2025ರ ಪರಿಷ್ಕೃತ ಕೀ ಉತ್ತರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಸಿಇಟಿ ಪರೀಕ್ಷೆ ನಡೆಸಲಾದ 16 ವರ್ಷನ್‌ಗಳ ಪ್ರಶ್ನೆ ಪತ್ರಿಕೆಗೂ ಕೀ ಉತ್ತರಗಳನ್ನು ಪ್ರಕಟಿಸಲಾಗಿದ್ದು, ಭೌತಶಾಸ್ತ್ರದ ಒಂದು ಪ್ರಶ್ನೆ ಮಾತ್ರ ಉತ್ತರದ ಆಯ್ಕೆ ಸರಿಯಾಗಿಲ್ಲದ್ದರಿಂದ ಒಂದು ಕೃಪಾಂಕವನನ್ನು ನೀಡಲಾಗಿದೆ.
ಯುಜಿಸಿಇಟಿ 2025ರ ಪರೀಕ್ಷೆಯ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯಗಳಿಗೆ ಸಂಬಂಧಿಸಿದಂತೆ ಏ.16 ಮತ್ತು ಏ.17ರಂದು ಪರೀಕ್ಷೆಗಳನ್ನು ನಡೆಸಲಾಗಿದೆ. ಸದರಿ ಪರೀಕ್ಷೆಗಳ 16 ವರ್ಷನ್‌ಗಳ ಕೀ ಉತ್ತರಗಳನ್ನು ಏ.18ರಂದು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿತ್ತು. ಜೊತೆಗೆ, ಸದರಿ ಕೀ-ಉತ್ತರಗಳಿಗೆ ಆಕ್ಷೇಪಣೆಗಳಿದ್ದಲ್ಲಿ ಏ.22ರ ಒಳಗಾಗಿ ಸಲ್ಲಿಕೆ ಮಾಡುವುದಕ್ಕೆ ಕಾಲಾವಕಾಶ ನೀಡಲಾಗಿತ್ತು. ಅದರಂತೆ ಪ್ರಾಧಿಕಾರದಲ್ಲಿ ಸ್ವೀಕೃತವಾದ ಆಕ್ಷೇಪಣೆಗಳನ್ನು ವಿಷಯ ತಜ್ಞರ ಸಮಿತಿಗಳ ಮೂಲಕ ಪರಿಶೀಲಿಸಿ, ವಿಷಯ ತಜ್ಞರ ಸಮಿತಿಗಳ ಶಿಫಾರಸ್ಸಿನಂತೆ ಭೌತಶಾಸ್ತ್ರ, ರಸಾಯನಶಾಸ್ತ್ರ, ಮತ್ತು ಜೀವಶಾಸ್ತ್ರ ವಿಷಯಗಳಲ್ಲಿ ಬದಲಾವಣೆಗೊಂಡ ಪ್ರಶ್ನೆಗಳ ಪರಿಷ್ಕೃತ ಕೀ ಉತ್ತರಗಳನ್ನು ಪ್ರಕಟಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ತಿಳಿಸಲಾಗಿದೆ.
ಆದರೆ, ಗಣಿತಶಾಸ್ತ್ರ (Mathematics) (Code: 2M0417K25) ವಿಷಯದ ಪ್ರಕಟಿತ ಕೀ ಉತ್ತರಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಇನ್ನು ಭೌತಶಾಸ್ತ್ರದ ವಿಷಯದಲ್ಲಿ ಒಂದು ಅಂಕವನ್ನು ಗ್ರೇಸ್ ಅಂಗವಾಗಿ ನಿಡಲಾಗಿದೆ. ಆಯಾ ವರ್ಷನ್ ಕೋಡ್‌ಗೆ ಸಂಬಂಧಿಸಿದಂತೆ 1, 2, 3 ಹಾಗೂ 4ನೇ ಉತ್ತರ ಆಯ್ಕೆ ಮಾಡಿದ್ದರೂ ಅದನ್ನು ಪರಿಗಣನೆ ಮಾಡದೇ ಒಂದು ಗ್ರೇಸ್ ಅಂಕವನ್ನು ಮಕ್ಕಳಿಗಾಗಿ ನೀಡಲಾಗುತ್ತದೆ.
ಇದನ್ನೂ ಓದಿ: ಜನಿವಾರ ಪ್ರಕರಣ: ಸರಾಸರಿ ಅಂಕಕ್ಕೆ ವಿದ್ಯಾರ್ಥಿ ಸುಚಿವ್ರತ್ ಒಪ್ಪಿಗೆ!
ವಿಷಯ ತಜ್ಞರ ಸಮಿತಿ ಪರಿಶೀಲನೆ ನಡೆಸಿ, ಕೊಟ್ಟ ವರದಿ ನಂತರ ಕೀ ಉತ್ತರ ಪ್ರಕಟ ಮಾಡಲಾಗಿದೆ ಎಂದು ಪರಿಷ್ಕೃತ ಕೀ ಉತ್ತರಗಳನ್ನು ಪ್ರಕಟಿಸಲಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ. ಭೌತಶಾಸ್ತ್ರ ದಲ್ಲಿ ಒಂದು ಪ್ರಶ್ನೆಗೆ ಕೃಪಾಂಕ ನೀಡಲಾಗಿದ್ದು, ರಸಾಯನಶಾಸ್ತ್ರದಲ್ಲಿ ಎರಡು ಮತ್ತು ಜೀವಶಾಸ್ತ್ರ ದಲ್ಲಿ ಒಂದು ಪ್ರಶ್ನೆಗೆ ಈ ಹಿಂದೆ ಪ್ರಕಟಿಸಿದ್ದ ಉತ್ತರದ ಜತೆಗೆ ಮತ್ತೊಂದು ಉತ್ತರ ಕೂಡ ಸರಿ ಇದೆ ಎಂದು ಸಮಿತಿ ಹೇಳಿದೆ. ಗಣಿತ ವಿಷಯದಲ್ಲಿ ಯಾವ ಬದಲಾವಣೆ ಇಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಿರ್ದೇಶಕ ಹೆಚ್.ಪ್ರಸನ್ನ ಮಾಹಿತಿ ನಿಡಿದ್ದಾರೆ.
ಕನ್ನಡ ಭಾಷಾ ಪರೀಕ್ಷೆಯ ಅಂಕಪಟ್ಟಿ ಪ್ರಕಟ:
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಯುಜಿಸಿಇಟಿ-2025 ನೇ ಸಾಲಿನ ಹೊರನಾಡು ಮತ್ತು ಗಡಿನಾಡು ಅಭ್ಯರ್ಥಿಗಳಿಗೆ ಏ.15ರಂದು ಕನ್ನಡ ಭಾಷಾ ಪರೀಕ್ಷೆಯನ್ನು ನಡೆಸಲಾಗಿದೆ. ಸದರಿ ಪರೀಕ್ಷೆಯ ಅಂಕಪಟ್ಟಿಯನ್ನು ಅಭ್ಯರ್ಥಿಗಳ ಮಾಹಿತಿಗಾಗಿ ಕೆಇಎ ವೆಬ್‌ಸೈಟ್ (https://cetonline.karnataka.gov.in/kea/) ಯುಜಿಸಿಇಟಿ ಮಾಹಿತಿ ಪುಸ್ತಕದಲ್ಲಿ ತಿಳಿಸಿರುವಂತೆ ಏ.15ರಂದು ನಡೆದ ಕನ್ನಡ ಭಾಷಾ ಪರೀಕ್ಷೆಯಲ್ಲಿ ಅರ್ಹರಾಗಲು ಕನಿಷ್ಠ 12 ಅಂಕಗಳನ್ನು ಗಳಿಸಬೇಕಾಗಿರುತ್ತದೆ. ಹೀಗೆ ಕನ್ನಡ ಪರೀಕ್ಷೆಯನ್ನು ಉತ್ತೀರ್ಣವಾದ ಮತ್ತು ಅನುತ್ತೀರ್ಣರಾದ ಅಭ್ಯರ್ಥಿಗಳ ಪಟ್ಟಿಯನ್ನು ಅಂಕವಾರು ಪ್ರಕಟಿಸಲಾಗಿದೆ. ಒಟ್ಟು 1,520 ಅಭ್ಯರ್ಥಿಗಳು ಕನ್ನಡ ಪರೀಕ್ಷೆಯನ್ನು ಬರೆದಿದ್ದು, ಇದರಲ್ಲಿ 1,064 ಅಭ್ಯರ್ಥಿಗಳು ಕನ್ನಡ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಆದರೆ, ಬಾಕಿ 456 ವಿದ್ಯಾರ್ಥಿಗಳು ಕನ್ನಡ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ. ಇವರಿಗೆ ಸರ್ಕಾರದಿಂದ ನೀಡಲಾಗುವ ಕಾಲೇಜು ಸೀಟುಗಳನ್ನು ಪಡೆಯಲು ಅನರ್ಹರಾಗುತ್ತಾರೆ.
ಇದನ್ನೂ ಓದಿ: ಫಿಸಿಯೋಥೆರಪಿ ಕೋರ್ಸ್‌ಗೆ ನೀಟ್ ಕಡ್ಡಾಯ: ಶರಣ ಪ್ರಕಾಶ್ ಪಾಟೀಲ್