
ನವದೆಹಲಿ: ವಿದ್ಯಾರ್ಥಿಗಳಲ್ಲಿ ಖಿನ್ನತೆ, ಮಾನಸಿಕ ಒತ್ತಡ, ಏಕಾಗ್ರತೆಯ ಕೊರತೆ ಸೇರಿದಂತೆ ಹಲವು ಮಾನಸಿಕ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ತನ್ನ ಅಧೀನದಲ್ಲಿರುವ ಎಲ್ಲಾ ಶಾಲೆಗಳಲ್ಲಿ ಆಪ್ತ ಸಮಾಲೋಚಕರ (Counsellors) ನೇಮಕವನ್ನು ಕಡ್ಡಾಯಗೊಳಿಸುವ ಮಹತ್ವದ ನಿರ್ಧಾರವನ್ನು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಕೈಗೊಂಡಿದೆ. ವಿದ್ಯಾರ್ಥಿಗಳ ಸಮಗ್ರ ಕ್ಷೇಮಾಭಿವೃದ್ಧಿ ಹಾಗೂ ಮಾನಸಿಕ ಆರೋಗ್ಯವನ್ನು ಬಲಪಡಿಸುವ ಉದ್ದೇಶದಿಂದ ಈ ಕ್ರಮ ಜಾರಿಗೆ ತರಲಾಗಿದೆ.
ಸಿಬಿಎಸ್‌ಇ ಮಾನ್ಯತೆ ಹೊಂದಿರುವ ಶಾಲೆಗಳಲ್ಲಿ ಆಪ್ತ ಸಮಾಲೋಚಕರ ನಿಯೋಜನೆ ಕಡ್ಡಾಯಗೊಳಿಸುವಂತೆ ಕೋರಿ ರಾಜಸ್ಥಾನದ ಕೋಟಾ ನಗರದಿಂದ ಕೆಲವರು ಕಳೆದ ವರ್ಷದ ಜುಲೈ ತಿಂಗಳಲ್ಲಿ ರಾಜಸ್ಥಾನ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಪರಿಗಣಿಸಿದ ನ್ಯಾಯಾಲಯದ ಸೂಚನೆಗಳ ಬೆನ್ನಲ್ಲೇ, ರಾಷ್ಟ್ರೀಯ ಶಿಕ್ಷಣ ಮಂಡಳಿ ಹಾಗೂ ಸಿಬಿಎಸ್‌ಇ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕಾನೂನು ತಿದ್ದುಪಡಿಗೆ ಮುಂದಾಗಿದೆ.
ಈ ಹಿನ್ನೆಲೆಯಲ್ಲಿ ಸಿಬಿಎಸ್‌ಇ ತನ್ನ ಬೈಲಾ–2018ರ ಕೆಲವು ನಿಯಮಗಳಿಗೆ ತಿದ್ದುಪಡಿ ತಂದು ಸುತ್ತೋಲೆ ಹೊರಡಿಸಿದೆ. ತಿದ್ದುಪಡಿ ನಿಯಮಗಳ ಪ್ರಕಾರ, ಸಿಬಿಎಸ್‌ಇ ಮಾನ್ಯತೆ ಹೊಂದಿರುವ ಪ್ರತಿಯೊಂದು ಶಾಲೆಯೂ ಪ್ರತಿ 500 ವಿದ್ಯಾರ್ಥಿಗಳಿಗೆ ಕನಿಷ್ಠ ಒಬ್ಬ ಪೂರ್ಣಾವಧಿಯ ಸಾಮಾನ್ಯ ಸಮಾಲೋಚಕ ಅಥವಾ ಮಾನಸಿಕ ಆರೋಗ್ಯ ಸಮಾಲೋಚಕ (ಕ್ಷೇಮಪಾಲನ ಶಿಕ್ಷಕ), ಜೊತೆಗೆ ಒಬ್ಬ ವೃತ್ತಿ ಮಾರ್ಗದರ್ಶಕ ಅಥವಾ ಸಾಮಾಜಿಕ–ಭಾವನಾತ್ಮಕ ಸಲಹೆಗಾರರನ್ನು ನೇಮಿಸುವುದು ಕಡ್ಡಾಯವಾಗಿದೆ.
ಈ ಹಿಂದೆ ಜಾರಿಯಲ್ಲಿದ್ದ ನಿಯಮಗಳ ಪ್ರಕಾರ, 9ರಿಂದ 12ನೇ ತರಗತಿಗಳವರೆಗೆ 300ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿದ್ದ ಶಾಲೆಗಳಲ್ಲಿ ಮಾತ್ರ ಪೂರ್ಣಾವಧಿ ಆಪ್ತ ಸಮಾಲೋಚಕರ ನೇಮಕಕ್ಕೆ ಅವಕಾಶವಿತ್ತು. ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳಿರುವ ಶಾಲೆಗಳಿಗೆ ಅರೆಕಾಲಿಕ ಸಲಹೆಗಾರರನ್ನು ನೇಮಿಸಿಕೊಳ್ಳಲು ಅನುಮತಿ ನೀಡಲಾಗಿತ್ತು. ಆದರೆ ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು, ಈ ವ್ಯವಸ್ಥೆ ಸಾಕಾಗುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ, ಈಗ ಎಲ್ಲಾ ಶಾಲೆಗಳಿಗೆ ಅನ್ವಯವಾಗುವಂತೆ ಹೊಸ ನಿಯಮಗಳನ್ನು ಕಡ್ಡಾಯಗೊಳಿಸಲಾಗಿದೆ.
ಈ ಹೊಸ ನಿರ್ಧಾರದಿಂದ ವಿದ್ಯಾರ್ಥಿಗಳಲ್ಲಿ ಕಂಡುಬರುವ ಮಾನಸಿಕ ಒತ್ತಡ, ಪರೀಕ್ಷಾ ಭಯ, ಆತ್ಮವಿಶ್ವಾಸ ಕೊರತೆ, ವೃತ್ತಿ ಆಯ್ಕೆ ಕುರಿತ ಗೊಂದಲಗಳು ಹಾಗೂ ಸಾಮಾಜಿಕ–ಭಾವನಾತ್ಮಕ ಸಮಸ್ಯೆಗಳಿಗೆ ಸಮಯೋಚಿತ ಪರಿಹಾರ ದೊರೆಯಲಿದೆ ಎಂಬ ನಿರೀಕ್ಷೆಯನ್ನು ಸಿಬಿಎಸ್‌ಇ ವ್ಯಕ್ತಪಡಿಸಿದೆ. ಜೊತೆಗೆ, ವಿದ್ಯಾರ್ಥಿಗಳು ಆರೋಗ್ಯಕರ ಮನಸ್ಥಿತಿಯೊಂದಿಗೆ ವಿದ್ಯಾಭ್ಯಾಸ ಮುಂದುವರಿಸಲು ಈ ಕ್ರಮ ಸಹಕಾರಿಯಾಗಲಿದೆ ಎಂದು ಮಂಡಳಿ ಅಭಿಪ್ರಾಯಪಟ್ಟಿದೆ.
ಒಟ್ಟಾರೆ, ವಿದ್ಯಾರ್ಥಿಗಳ ಮಾನಸಿಕ ಆರೋಗ್ಯವನ್ನು ಶೈಕ್ಷಣಿಕ ವ್ಯವಸ್ಥೆಯ ಅವಿಭಾಜ್ಯ ಅಂಗವನ್ನಾಗಿಸುವ ದಿಸೆಯಲ್ಲಿ ಸಿಬಿಎಸ್‌ಇ ಕೈಗೊಂಡಿರುವ ಈ ನಿರ್ಧಾರವನ್ನು ಶಿಕ್ಷಣ ತಜ್ಞರು ಮತ್ತು ಪೋಷಕರು ಸ್ವಾಗತಿಸಿದ್ದು, ಇದು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಮಹತ್ವದ ಹೆಜ್ಜೆಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.