- ಅಜ್ಜ-ಅಜ್ಜಿ ಜೊತೆ ವಾಸಿಸುತ್ತ ರಾಜ್ಯಕ್ಕೇ ಟಾಪರ್ ಆದ ಬಾಲಕಿ
- ದುರದೃಷ್ಟವನ್ನು ಮೆಟ್ಟಿನಿಂತ ಬಿಹಾರದ ಶ್ರೀಜಾ ಯಶೋಗಾಥೆ
- ಶ್ರೀಜಾಗೆ 5 ವರ್ಷ ತುಂಬಿದ್ದಾಗ ಆಕೆಗೆ ತಂಗಿ ಜನನ
ಪಟನಾ (ಜುಲೈ 26): ಎಲ್ಲಾ ಸವಲತ್ತು ಇದ್ದ ಹೊರತಾಗಿಯೂ ಉತ್ತಮ ವಿದ್ಯಾಭ್ಯಾಸ ಮಾಡದ, ಪೋಷಕರನ್ನು ಕಳೆದುಕೊಂಡ ನೋವಿನಲ್ಲಿ ಮಕ್ಕಳ ವಿದ್ಯಾಭ್ಯಾಸ ಹಾಳಾಗುವ ದುರದೃಷ್ಟಕರ ಘಟನೆಗಳ ನಡುವೆಯೇ, ತಾಯಿ ಸತ್ತ ಬಳಿಕ ತಂದೆಯಿಂದಲೂ ತಿರಸ್ಕರಿಸಲ್ಪಟ್ಟಿದ್ದ ಬಾಲಕಿಯೊಬ್ಬಳು ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆಯಲ್ಲಿ ಶೇ.99.4ರಷ್ಟುಅಂಕ ಪಡೆದು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾಳೆ. ಬಿಹಾರ ಶ್ರೀಜಾ ಎಂಬ ಈ ಪ್ರೇರಣಾದಾಯಕ ಬಾಲಕಿಯ ನೋವು ಮತ್ತು ಸಾಧನೆಯ ಕಥೆಯನ್ನು ಬಿಜೆಪಿ ಸಂಸದ ವರುಣ್ ಗಾಂಧಿ ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಬಳಿಕ ಆಕೆಯ ಸಾಧನೆಯ ಬಗ್ಗೆ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಶ್ರೀಜಾಳಗೆ 5 ವರ್ಷ ತುಂಬಿದ್ದ ವೇಳೆ ಆಕೆಯ ತಾಯಿ ರುಚಿ ಸೋನಿ ತಮ್ಮ ಎರಡನೇ ಮಗುವಿಗೆ ಜನ್ಮ ನೀಡಿದ್ದರು. ಆದರೆ ಹೆರಿಗೆ ವೇಳೆ ಆದ ಸಮಸ್ಯೆಯಿಂದಾಗಿ ಮಗು ಬದುಕು ಉಳಿದರೂ ರಚಿ ಸೋನಿ ಸಾವನ್ನಪ್ಪಿದ್ದರು. ಹೀಗೆ ಇಬ್ಬರೂ ಮಕ್ಕಳೂ ಹೆಣ್ಣಾಗಿದ್ದರಿಂದ ಬೇಸತ್ತ ಶ್ರೀಜಾಳ ತಂದೆ ಆಕೆ ಮತ್ತು ಆಕೆಯ ಸೋದರಿಯನ್ನು ಪತ್ನಿಯ ಅಜ್ಜಿಯ ಮನೆಯಲ್ಲಿ ಬಿಟ್ಟು ತೆರಳಿ, ಬೇರೊಂದು ಮದುವೆಯಾಗಿದ್ದರು. ಹೀಗಾಗಿ ಅಂದಿನಿಂದಲೂ ಶ್ರೀಜಾ ಮತ್ತು ಆಕೆ ಸೋದರಿ ಇಬ್ಬರೂ ತಾಯಿ ಪೋಷಕರ ಮನೆಯಲ್ಲೇ ವಾಸವಿದ್ದು ವಿದ್ಯಾಭ್ಯಾಸ ಮುಂದುವರೆಸಿದ್ದರು.
ಸಾಧನೆ ಕಥೆ: ಹೀಗೆ ವಯಸ್ಸಾದ ಅಜ್ಜಿ ಮೂವರು ಮಕ್ಕಳನ್ನು ಹೊಂದಿರುವ ಮಾವನ ಮನೆಯಲ್ಲಿ ಬೆಳೆದ ಶ್ರೀಜಾ ಇತ್ತೀಚೆಗೆ ಪ್ರಕಟವಾದ ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆಯಲ್ಲಿ ಬಿಹಾರಕ್ಕೆ ಟಾಪರ್ ಆಗಿದ್ದಾರೆ. ಪುಸ್ತಕ ಓದುವುದು, ಕವನ ಬರೆಯುವ ಹವ್ಯಾಸ ಹೊಂದಿರುವ ಶ್ರೀಜಾ, ಯಾವುದೇ ಟ್ಯೂಷನ್ ಪಡೆಯದೆಯೇ 500ಕ್ಕೆ 497 ಅಂಕ ಪಡೆದು (ಶೇ.99.4) ಎಲ್ಲರ ಗಮನ ಸೆಳೆದಿದ್ದಾರೆ. ರಾಜಧಾನಿ ಪಟನಾದ ರಾಜವಂಶಿನಗರದ ಡಿಎವಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿಯಾಗಿರುವ ಶ್ರೀಜಾ, ಸಂಸ್ಕೃತ, ವಿಜ್ಞಾನದಲ್ಲಿ 100 ಹಾಗೂ ಇಂಗ್ಲೀಷ್, ಗಣಿತ ಹಾಗೂ ಸಮಾಜ ವಿಜ್ಞಾನದಲ್ಲಿ 99 ಅಂಕ ಪಡೆದಿದ್ದಾಳೆ. ಭವಿಷ್ಯದಲ್ಲಿ ಈಕೆಗೆ ಎಲೆಕ್ಟ್ರಿಕ್ ಎಂಜಿನಿಯರ್ ಆಗಬೇಕೆಂಬ ಆಸೆ ಇದೆಯಂತೆ.
ತಮ್ಮ ಮೊಮ್ಮಗಳ ಸಾಧನೆ ಬಗ್ಗೆ ಪ್ರತಿಕ್ರಿಯಿಸಿರುವ ಶ್ರೀಜಾಳ ಅಜ್ಜಿ, ಕೃಷ್ಣಾ ದೇವಿ ‘ಮೊಮ್ಮಗಳ ಫಲಿತಾಂಶ ನೋಡಿ ಬಹಳ ಖುಷಿಯಾಗಿದೆ. ಬಾಲಕಿಯ ತಾಯಿ ತೀರಿಕೊಂಡ ಬಳಿಕ ಶ್ರೀಜಾ ನಮ್ಮೊಂದಿಗಿದ್ದಾಳೆ. ತೊರೆದ ಹೋದ ಬಳಿಕ ಒಂದು ದಿನವೂ ಶ್ರೀಜಾಳದ ತಂದೆ ಒಂದು ಬಾರಿಯೂ ಆಕೆಯನ್ನು ನೋಡಲು ಬಂದಿಲ್ಲ. ಬೋರ್ಡ್ ಫಲಿತಾಂಶ ನೋಡಿ ಆತ ತನ್ನ ಈ ನಿರ್ಧಾರಕ್ಕೆ ವಿಷಾದಿಸುತ್ತಿರಬೇಕು’ ಎಂದಿದ್ದಾಳೆ.
CBSE 10th Result : ಸಿಬಿಎಸ್ಇ 10ನೇ ತರಗತಿ ಫಲಿತಾಂಶವೂ ಪ್ರಕಟ, ಶೇ. 94.40 ವಿದ್ಯಾರ್ಥಿಗಳು ಉತ್ತೀರ್ಣ
ಮದ್ರಾಸ್ ಐಐಟಿಯಲ್ಲಿ ಓದಿಸುತ್ತೇವೆ: ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ, ಶ್ರೀಜಾ ಅವರ ಅಜ್ಜಿ, ಇಂದು ನಾವು ತುಂಬಾ ಸಂತೋಷವಾಗಿದ್ದೇವೆ, ಏಕೆಂದರೆ ನನ್ನ ಮೊಮ್ಮಗಳು ಈಗಲೇ ಸಾಕಷ್ಟು ಹೆಸರು ಮಾಡಿದ್ದಾಳೆ. ನಮ್ಮ ಮನೆಯ ಹೆಸರನ್ನು ಈಗಲೇ ಪ್ರಖ್ಯಾತಿ ಮಾಡಿದ್ದಾಳೆ. ಈಗ ಶ್ರೀಜಾಳ ತಂದೆಗೆ ಈ ಸುದ್ದಿ ಕೇಳಿದಾಗಲೇ ಮಕ್ಕಳನ್ನು ಬಿಟ್ಟು ತಾನು ಮಾಡಿದ ತಪ್ಪಿನ ಅರಿವಾಗಬೇಕು. ಶ್ರೀಜಾ ಭರವಸೆ ಮೂಡಿಸಿದ್ದಾರೆ ಮತ್ತು ಮದ್ರಾಸ್‌ನ ಐಐಟಿಯಲ್ಲಿ ಹೆಚ್ಚಿನ ಅಧ್ಯಯನವನ್ನು ಮುಂದುವರಿಸಲು ಬಯಸಿದ್ದಾರೆ. ಆಕೆಯ ಆಸೆಯನ್ನು ಈಡೇರಿಸುತ್ತೇವೆ ಎಂದು ಹೇಳಿದ್ದಾರೆ.
CBSE Result 2022: ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟ, ಬಾಲಕಿಯರೇ ಮೇಲುಗೈ
ವರುಣ್ ಗಾಂಧಿ ಟ್ವೀಟ್: ಬಿಜೆಪಿ ಸಂಸದ ವರುಣ್ ಗಾಂಧಿ ಕೂಡ ಶ್ರೀಜಾ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಅಭಿನಂದಿಸಿದ್ದು, "ತ್ಯಾಗ ಮತ್ತು ಸಮರ್ಪಣೆಯ ಅದ್ಭುತ ಕಥೆಗಳು! ತಾಯಿಯ ನಿಧನರಾದ ನಂತರ ತಂದೆಯ ಸಾಮಿಪ್ಯದಿಂದ ದೂರವಾದ ಮಗಳು, ಅಜ್ಜಿಯ ಮನೆಯಲ್ಲಿ ಕಠಿಣ ಪರಿಶ್ರಮ ತೋರುವ ಮೂಲಕ ಇತಿಹಾಸ ಸೃಷ್ಟಿಸಿದ್ದಾಳೆ 10ನೇ ತರಗತಿಯಲ್ಲಿ ಮಗಳು ಶೇ.99.4 ಅಂಕ ಗಳಿಸಿರುವುದು ಪ್ರತಿಭೆಗೆ ಅವಕಾಶಗಳ ಅಗತ್ಯವಿಲ್ಲ ಎಂಬುದನ್ನು ತೋರಿಸುತ್ತದೆ ಎಂದು ಗಾಂಧಿ ಬರೆದಿದ್ದಾರೆ. ಅದೇ ರೀತಿ ನಿಮಗೆ ಯಾವ ರೀತಿಯಲ್ಲಿ ಸಹಾಯವಾಗಬಹುದಾದರೆ, ನಾನೇ ಅದೃಷ್ಟವಂತ ಎಂದೂ ಬರೆದುಕೊಂಡಿದ್ದಾರೆ.