ರಾಜ್ಯ ಸರ್ಕಾರದ ತಿದ್ದುಪಡಿ ಕಾನೂನು ಹೈಕೋರ್ಟ್‌ನಲ್ಲಿ ಅಸಿಂಧು| ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಕನ್ನಡಿಗರಿಗೆ ಮೀಸಲು ಇಲ್ಲ| ನ್ಯಾಷನಲ್ ಲಾ ಸ್ಕೂಲ್ ಇಂಡಿಯಾ ಯೂನಿವರ್ಸಿಟಿ ಕಾಯ್ದೆಗೆ 2020 ಮಾರ್ಚ್ ತಿಂಗಳಲ್ಲಿ ತಿದ್ದುಪಡಿ ತಂದಿದ್ದ ರಾಜ್ಯ ಸರ್ಕಾರ|
ಬೆಂಗಳೂರು(ಸೆ.30): ನಗರದಲ್ಲಿರುವ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ (ಎನ್‌ಎಲ್‌ಎಸ್‌ಐಯು) ಕರ್ನಾಟಕದ ವಿದ್ಯಾರ್ಥಿಗಳಿಗೆ ಶೇ.25 ಸೀಟು ಮೀಸಲು ಕಲ್ಪಿಸಿ ಕಳೆದ ಮಾರ್ಚ್‌ನಲ್ಲಿ ರಾಜ್ಯ ಸರ್ಕಾರ ಜಾರಿಗೊಳಿಸಿದ್ದ ತಿದ್ದುಪಡಿ ಕಾನೂನನ್ನು ಅಸಿಂಧುಗೊಳಿಸಿ ಹೈಕೋರ್ಟ್ ಆದೇಶಿಸಿದೆ.
ಇದೇ ವೇಳೆ ಶೇ.25 ಮೀಸಲು ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕದ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆಯ ಕಟ್ ಆಫ್ ಅಂಕದಲ್ಲಿ ಶೇ.5 ವಿನಾಯಿತಿ ನೀಡಿ ಎನ್‌ಎಲ್‌ಎಸ್‌ಐಯು ಆ.4ರಂದು ಹೊರಡಿಸಿದ್ದ ಅಧಿಸೂಚನೆಯನ್ನೂ ನ್ಯಾಯಪೀಠ ರದ್ದುಪಡಿಸಿದೆ.
ತಿದ್ದುಪಡಿ ಕಾಯ್ದೆಯ ಸಿಂಧುತ್ವ ಪ್ರಶ್ನಿಸಿ ಭಾರತೀಯ ವಕೀಲರ ಪರಿಷತ್ ಹಾಗೂ ಕೆಲವು ಕಾನೂನು ಪದವಿ ಆಕಾಂಕ್ಷಿ ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ನ್ಯಾಷನಲ್ ಲಾ ಸ್ಕೂಲ್ ವಿವಿಯ ವಿದ್ಯಾರ್ಥಿನಿಗೆ 18 ಚಿನ್ನದ ಪದಕ
ಎನ್‌ಎಲ್‌ಎಸ್‌ಐಯು ಸ್ವಾಯತ್ತ ಮತ್ತು ರಾಷ್ಟ್ರೀಯ ಶಿಕ್ಷಣ ಸಂಸ್ಥೆಯಾಗಿದೆ. ಐಐಟಿ, ಐಐಎಂ ಸೇರಿದಂತೆ ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ರಾಜ್ಯಗಳಿಗೆ ಮೀಸಲು ವ್ಯವಸ್ಥೆ ಇಲ್ಲ. ಅಂತೆಯೇ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯಾಗಿರುವ ಎನ್‌ಎಲ್‌ಎಸ್‌ಐಯು ಅನ್ನು ರಾಜ್ಯ ಸರ್ಕಾರ ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತು. ಅಲ್ಲದೆ, ವಿವಿಗೆ ಅಗತ್ಯವಾದ ಭೂಮಿ ಸೇರಿದಂತೆ ಕೆಲ ಸವಲತ್ತುಗಳನ್ನು ರಾಜ್ಯ ಸರ್ಕಾರವೇ ಒದಗಿಸಿದ್ದರೂ ಸಂಸ್ಥೆಯ ಮೇಲೆ ಸೀಮಿತ ಅಧಿಕಾರವನ್ನಷ್ಟೇ ಹೊಂದಿರುತ್ತದೆ. ವಿವಿಯು ರಾಜ್ಯದ ನಿಯಂತ್ರಣದಿಂದ ಮುಕ್ತವಾಗಿದೆ. ಹೀಗಾಗಿ, ರಾಜ್ಯ ಸರ್ಕಾರ ಕಾಯ್ದೆಗೆ ಮಾಡಿರುವ ತಿದ್ದುಪಡಿ ಕಾನೂನುಬಾಹಿರವಾಗಿದೆ ಎಂದು ತಿಳಿಸಿದ ನ್ಯಾಯಪೀಠ, ತಿದ್ದುಪಡಿ ಕಾನೂನನ್ನು ಅಸಿಂಧುಗೊಳಿಸಿತು.
ಬೆಂಗಳೂರು ಲಾ ಸ್ಕೂಲ್‌ನಲ್ಲಿ ಕನ್ನಡಿಗರ ಮೀಸಲಿಗೆ ಕುತ್ತು..!
ಕನ್ನಡಿಗರಿಗೆ ಸೀಟು ಮೀಸಲು ಇಲ್ಲ:
ನ್ಯಾಷನಲ್ ಲಾ ಸ್ಕೂಲ್ ಇಂಡಿಯಾ ಯೂನಿವರ್ಸಿಟಿ ಕಾಯ್ದೆಗೆ 2020 ಮಾರ್ಚ್ ತಿಂಗಳಲ್ಲಿ ತಿದ್ದುಪಡಿ ತಂದಿದ್ದ ರಾಜ್ಯ ಸರ್ಕಾರ, ರಾಜ್ಯದ ವಿದ್ಯಾರ್ಥಿಗಳಿಗೆ ಶೇ.25 ಸೀಟುಗಳನ್ನು ಮೀಸಲಿರಿಸಿತ್ತು. ತಿದ್ದುಪಡಿ ಕಾನೂನಿನ ಪ್ರಕಾರ ರಾಜ್ಯದಲ್ಲಿ 10 ವರ್ಷಗಳ ಕಾಲ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಎನ್‌ಎಲ್‌ಎಸ್‌ಐಯು ಪ್ರವೇಶ ಪರೀಕ್ಷೆ ಪಾಸ್ ಮಾಡುವ ಮೂಲಕ ಸೀಟು ಪಡೆದುಕೊಳ್ಳಬಹುದಾಗಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ತಕರಾರು ಅರ್ಜಿಗಳನ್ನು ಸಲ್ಲಿಸಲಾಗಿತ್ತು.