132 ಕೋಟಿ ರು. ವೆಚ್ಚದಲ್ಲಿ ಶೂ ಮತ್ತು ಸಾಕ್ಸ್ ನೀಡಲು ಒಪ್ಪಿಗೆ ನೀಡಲಾಗಿದೆ.
ಬೆಂಗಳೂರು(ಜು.22): 2022-23ನೇ ಶೈಕ್ಷಣಿಕ ಸಾಲಿಗೆ ವಿದ್ಯಾ ವಿಕಾಸ ಯೋಜನೆಯಡಿ ಸರ್ಕಾರಿ ಶಾಲೆಗಳ 1ರಿಂದ 10ನೇ ತರಗತಿಯ 43 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಶೂ ಮತ್ತು ಸಾಕ್ಸ್ ನೀಡಲು ಸಚಿವ ಸಂಪುಟ ಸಭೆ ಘಟನೋತ್ತರ ಒಪ್ಪಿಗೆ ನೀಡಿದೆ. ಶುಕ್ರವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, 132 ಕೋಟಿ ರು. ವೆಚ್ಚದಲ್ಲಿ ಶೂ ಮತ್ತು ಸಾಕ್ಸ್ ನೀಡಲು ಒಪ್ಪಿಗೆ ನೀಡಲಾಗಿದೆ. ಈಗಾಗಲೇ ಸ್ಥಳೀಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ) ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ವಿದ್ಯಾ ವಿಕಾಸ ಯೋಜನೆಯಡಿ ನೀಡಲಾಗುವುದು ಎಂದು ತಿಳಿಸಿದರು.
ಸಹಾಯಕರ ನೇಮಕ:
ಇನ್ನು, ಸರ್ಕಾರಿ ಪ್ರಥಮ ಕಾಲೇಜುಗಳಲ್ಲಿ ಕಚೇರಿ ಸಹಾಯಕರು ಮತ್ತು ಶೈಕ್ಷಣಿಕ ಸಹಾಯಕರಾಗಿ 1152 ಮಂದಿಯನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಒಪ್ಪಿಗೆ ನೀಡಲಾಗಿದೆ ಎಂದು ಇದೇ ವೇಳೆ ಸಚಿವರು ಹೇಳಿದರು.
2022-23ನೇ ಸಾಲಿಗೆ ರಸಗೊಬ್ಬರ ಕಾಪು ದಾಸ್ತಾನು ಮಾಡುವ ಯೋಜನೆಗೆ ರಾಜ್ಯ ಬೀಜ ನಿಗಮ ಮತ್ತು ರಾಜ್ಯ ಸಹಕಾರ ಮಾರಾಟ ಮಹಾಮಂಡಳಿಗೆ ತಲಾ 200 ಕೋಟಿ ರು. ದುಡಿಯುವ ಬಂಡವಾಳ ಸಾಲ ಪಡೆದುಕೊಳ್ಳಲು ರಾಜ್ಯ ಸರ್ಕಾರದ ಖಾತ್ರಿ ನೀಡಲು ಸಹಮತ ಸೂಚಿಸಲಾಗಿದೆ. ಇನ್ನು, ಬಳ್ಳಾರಿ ಜಿಲ್ಲೆಯ ಕುರುಗೋಡು ಪಟ್ಟಣ ಮತ್ತು ಕಂಪ್ಲಿಯಲ್ಲಿ ಜಿಲ್ಲಾ ಖನಿಜ ಪ್ರತಿಷ್ಠನಾ ಟ್ರಸ್ಟ್ ಕ್ರಿಯಾ ಯೋಜನೆಯಡಿ ತಲಾ 200 ಕೋಟಿ ರು. ವೆಚ್ಚದಲ್ಲಿ 100 ಹಾಸಿಗೆಗಳ ಆಸ್ಪತ್ರೆಗಳ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
CBSE 10th Result : ಸಿಬಿಎಸ್ಇ 10ನೇ ತರಗತಿ ಫಲಿತಾಂಶವೂ ಪ್ರಕಟ, ಶೇ. 94.40 ವಿದ್ಯಾರ್ಥಿಗಳು ಉತ್ತೀರ್ಣ
ಶಾಲೆ ಆರಂಭಗೊಂಡರೂ ಮಕ್ಕಳಿಗೆ ಶೂ ಮತ್ತು ಸಾಕ್ಸ್‌ಗಳನ್ನು ವಿತರಣೆ ಮಾಡಿರಲಿಲ್ಲ. ಇದನ್ನು ವಿರೋಧಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸರ್ಕಾರದಿಂದ ನೀಡಲು ಸಾಧ್ಯವಾಗದಿದ್ದರೆ ಭಿಕ್ಷೆ ಎತ್ತಿಯಾದರೂ ಪಕ್ಷದಿಂದ ನೀಡಲಾಗುವುದು ಎಂದು ಸರ್ಕಾರಕ್ಕೆ ತಿರುಗೇಟು ನೀಡಿದ್ದರು. ಇದರಿಂದ ಎಚ್ಚೆತ್ತ ಸರ್ಕಾರವು ಶೂ ಮತ್ತು ಸಾಕ್ಸ್ ನೀಡಲು ಕ್ರಮ ಕೈಗೊಂಡಿತ್ತು. ಅಲ್ಲದೇ, ಡಿ.ಕೆ.ಶಿವಕುಮಾರ್ ವಿರುದ್ಧ ಮುಖ್ಯಮಂತ್ರಿ ಸೇರಿದಂತೆ ಹಲವು ಸಚಿವರು ಟೀಕಾಪ್ರಹಾರ ನಡೆಸಿದ್ದರು.