ಪ್ರವಾಹದಲ್ಲೇ ಮಕ್ಕಳಿಗೆ ಪಾಠ, ದೋಣಿಯೇ ಶಾಲೆ

By Suvarna News  |  First Published Sep 8, 2021, 6:36 PM IST

ಬಿಹಾರದಲ್ಲಿ ಕೆಲವು ದಿನಗಳಿಂದ  ಭಾರಿ ಮಳೆಯಾಗುತ್ತಿದ್ದೆ. ಪರಿಣಾಮ ಗಂಗಾನದಿಗೆ ಪ್ರವಾಹ ಉಂಟಾಗಿದ್ದು, ಮಕ್ಕಳು ಶಾಲೆಗಳಿಂದ ವಂಚಿತರಾಗುತ್ತಿದ್ದಾರೆ. ಕೆಲವು ಶಿಕ್ಷಕರು ಬೋಟ್‌ಗಳಲ್ಲಿ ಮಕ್ಕಳಿದ್ದಲ್ಲಿಗೆ ತೆರಳಿ, ಅವರಿಗೆ  ಬೋಟ್‌ನಲ್ಲಿ ಪಾಠ ಹೇಳಿಕೊಡುವ ಕೆಲಸವನ್ನು ಮಾಡುತ್ತಿದ್ದಾರೆ. ಶಿಕ್ಷಕರ ಈ ಕರ್ತವ್ಯ ಪ್ರಜ್ಞೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.


ಮಳೆ ಬಂದ್ರೆ ಹೊರಗೆ ಕಾಲಿಡೋಕೆ ಆಗಲ್ಲ..ಅಂಥದ್ರಲ್ಲಿ ಪ್ರವಾಹ ಬಂದು ಎಲ್ಲೆಡೆ ನೀರು ತುಂಬಿ ಬಿಟ್ಟರೆ ಹೇಗಿರುತ್ತೆ ಹೇಳಿ ಪರಿಸ್ಥಿತಿ. ಸಮೀಪದ ಅಂಗಡಿ, ಕೆಲ್ಸ ಕಾರ್ಯಗಳಿಗೆ ಓಡಾಡೋಕು ಆಗಲ್ಲ. ಇನ್ನು ಶಾಲಾ- ಕಾಲೇಜು ಇದ್ದರೆ ಮಕ್ಕಳ ಸ್ಥಿತಿ ಹೇಳತೀರದು. ನೆರೆ ತಗ್ಗು ವವರೆಗೂ ಕ್ಲಾಸ್ ಅಟೆಂಡ್ ಮಾಡೋಕ್ಕಾಗಲ್ಲ. ಪಾಠ ಕೇಳೋಕ್ಕಾಗಲ್ಲ. 

ಆದ್ರೆ ಬಿಹಾರದ ಶಾಲಾ ಮಕ್ಕಳಿಗೆ ಮಾತ್ರ ನೆರೆ ಬಂದ್ರೂ ಪಾಠ ಮಿಸ್ ಆಗಲ್ಲ. ಅದು ಹೇಗೆ ಅಂತೀರಾ.. ಮಕ್ಕಳು ಶಾಲೆಗೆ ಹೋಗಲಾಗದಿದ್ರೇನು? ಶಿಕ್ಷಕರೇ ಅವರ ಬಳಿಗೆ ಬಂದು ಪಾಠ ಮಾಡ್ತಾರೆ. ಅದು ದೋಣಿಯಲ್ಲಿ ಅನ್ನೋದು ವಿಶೇಷ. ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಪ್ರತಿ ವರ್ಷದ ಈ ಸಮಸ್ಯೆಗೆ ಕೆಲ ಶಿಕ್ಷಕರು ಪರಿಹಾರ ಕಂಡುಕೊಂಡಿದ್ದಾರೆ. ಪ್ರವಾಹದಿಂದ ಮಕ್ಕಳ ಭವಿಷ್ಯಕ್ಕೆ ಕಷ್ಟ ಆಗಬಾರದೆಂದು ಪ್ರವಾಹದಲ್ಲೇ ದೋಣಿಗಳನ್ನು ನಿಲ್ಲಿಸಿ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಮುಂದಾಗಿದ್ದಾರೆ.

Tap to resize

Latest Videos

ಅಮೆರಿಕದಲ್ಲಿ ಉನ್ನತ ಶಿಕ್ಷಣ, ಮನೆಯಲ್ಲೇ ಕುಳಿತು ಎಲ್ಲ ಪ್ರಶ್ನೆಗೆ ಉತ್ತರ!

ಕಳೆದ ಕೆಲವು ದಿನಗಳ ಹಿಂದೆ ಬಿಹಾರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಪ್ರವಾಹ ಸ್ಥಿತಿ ತಲೆದೋರಿದೆ. ಕತಿಯಾರ್ ಜಿಲ್ಲೆಯ ಮಣಿಹರಿ ಪ್ರದೇಶ ಸಂಪೂರ್ಣ ಜಲಾವೃತಗೊಂಡಿದೆ. ಈ ಏರಿಯಾದ ಪರಿಸ್ಥಿತಿ ಅರಿತ ಮೂವರು ಯುವ ಶಿಕ್ಷಕರು, ವಿದ್ಯಾರ್ಥಿಗಳ ಬಳಿಗೆ ಬಂದು‌ ಪಾಠ ಹೇಳಿ ಕೊಡುತ್ತಿದ್ದಾರೆ. ಜಲಾವೃತವಾದ ಪ್ರದೇಶದ ಎಲ್ಲಾ ಮಕ್ಕಳನ್ನು  ಬೋಟ್ ನಲ್ಲಿ ಕೂರಿಸಿಕೊಂಡು ಅಲ್ಲೇ ಪಾಠ ಮಾಡುತ್ತಿದ್ದಾರೆ.

ಗಂಗಾ ನದಿಯುದ್ದಕ್ಕೂ ಕತಿಹಾರ್‌ನ ಮಣಿಹರಿ ಉಪವಿಭಾಗ, ಪ್ರತಿ ವರ್ಷವೂ ಪ್ರವಾಹಕ್ಕೆ ಸಿಲುಕುತ್ತದೆ. ಹಲವು ತಿಂಗಳುಗಳ ಕಾಲ ಈ ಪ್ರದೇಶ ನೀರಿನಿಂದಲೇ ಆವೃತವಾಗಿರುತ್ತದೆ.  ಇದು ಜನಸಾಮಾನ್ಯರ ಜೀವನ ಮತ್ತು ಮಕ್ಕಳ ಶಿಕ್ಷಣಕ್ಕೆ ಭಾರೀ ಅಡಚಣೆಯಾಗುತ್ತದೆ. 

ಕುಂದನ್ ಕುಮಾರ್ ಸಾಹಾ, ಪಂಕಜ್ ಕುಮಾರ್ ಸಾಹಾ ಮತ್ತು ರವೀಂದ್ರ ಮಂಡಲ್ ಎಂಬ ಮೂವರು ಶಿಕ್ಷಕರು, ಬೆಳಗ್ಗೆಯೇ ತಮ್ಮ ಮನೆಗಳಿಂದ ಹೊರಟು ಪ್ರವಾಹ ಪೀಡಿತ ಹಳ್ಳಿ ಗಳನ್ನು ತಲುಪಿ ಮಕ್ಕಳನ್ನು ಒಗ್ಗೂಡಿಸಿ ಪಾಠ ಮಾಡುತ್ತಾರೆ. ಸ್ಥಳೀಯ ಮೀನುಗಾರರು ಹಾಗೂ ದೋಣಿಗಾರರಿಂದ ದೋಣಿಗಳನ್ನು ಸಾಲ ಪಡೆದು ಮಣಿಹರಿ ಪ್ರದೇಶದ ಮಕ್ಕಳಿಗಾಗಿಯೇ ಕ್ಲಾಸ್ ನಡೆಸುತ್ತಾರೆ. ದೋಣಿಯಲ್ಲಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ಪ್ರೌಢಶಾಲಾ ವಿದ್ಯಾರ್ಥಿಗಳವರೆಗೆ ವೈವಿಧ್ಯಮಯ ವಿಷಯಗಳನ್ನು ಬೋಧಿಸುತ್ತಾರೆ. ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ, ಹಿಂದಿ ಮತ್ತು ಇಂಗ್ಲಿಷ್ ವಿಷಯಗಳನ್ನು ಮಕ್ಕಳಿಗೆ ಕಲಿಸುತ್ತಾರೆ.

ಮನೆ ಬಾಗಿಲಲ್ಲೇ ಪಾಲಿಟೆಕ್ನಿಕ್ ಕೋರ್ಸ್‌ಗೆ ದಾಖಲಾದ ವಿದ್ಯಾರ್ಥಿಗೆ ಪೂರ್ಣ ಉಚಿತ ಶಿಕ್ಷಣ

ಒಮ್ಮೆ ಸುಮಾರು 20 ವಿದ್ಯಾರ್ಥಿಗಳನ್ನು ದೋಣಿಯಲ್ಲಿ ಕೂರಿಸಿಕೊಂಡು ಸಮೀಪದ ಮರಕ್ಕೆ ಅದನ್ನು ಕಟ್ಟಿ, ವೈಟ್‌ಬೋರ್ಡ್ ಹಾಕಿಕೊಂಡು ತರಗತಿಗಳನ್ನು ನಡೆಸಲಾಗುತ್ತದೆ. ಈ ವೇಳೆ  ಗಂಗೆಯ ಅಲೆಗಳು ಬಂದ್ರೆ ದೋಣಿಯನ್ನು ಮೃದುವಾಗಿ ಅಲುಗಾಡಿಸಿದಂತಾಗುತ್ತದೆ. ಈ ಶಿಕ್ಷಕರು ಇಲ್ಲಿನ ಮಕ್ಕಳಿಗೆ ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ. ಬದಲಾಗಿ ಅವರೇ ಮಕ್ಕಳಿಗಾಗಿ ಪುಸ್ತಕಗಳು, ನೋಟ್‌ಬುಕ್‌ಗಳು ಮತ್ತು ಪೆನ್ಸಿಲ್‌ಗಳನ್ನು ಖರೀದಿಸುತ್ತಾರೆ ಎಂದು ಈ ಟೀಚರ್‌ಗಳ ಬಗ್ಗೆ ದಿ ಟೆಲಿಗ್ರಾಫ್ ವರದಿ ಮಾಡಿದೆ.

ಅಂದ ಹಾಗೇ ಮಣಿಹರಿಯ ಮಕ್ಕಳಿಗೆ ಶಿಕ್ಷಣವು ಎಂದಿಗೂ ಸುಗಮ ನೌಕಾಯಾನವಾಗಿಲ್ಲ. ಹೆಚ್ಚಾಗಿ ಬಡ ರೈತರು ಮತ್ತು ಕಾರ್ಮಿಕರು ವಾಸಿಸುತ್ತಿರುವ ಈ ಪ್ರದೇಶದಲ್ಲಿ ಮಕ್ಕಳ ವಿದ್ಯಾಭ್ಯಾಸ ಮಾಡಿಸುವುದು ಪೋಷಕರಿಗೆ ಕಷ್ಟದ ವಿಚಾರ. ಅಂಥದ್ರಲ್ಲಿ ಕೊರೊನಾ ಸಾಂಕ್ರಾಮಿಕ ಹಾವಳಿಯಿಂದಾಗಿ ಇಲ್ಲಿನ ಮಕ್ಕಳ ಕಲಿಕೆ ಮತ್ತಷ್ಟು ಹದಗೆಟ್ಟಿದೆ. ಲಾಕ್ಡೌನ್ ನಿಂದಾಗಿ ಸರ್ಕಾರಿ ಶಾಲೆಗಳು ಮುಚ್ಚಿ ಹೋಗಿದ್ರೆ, ಆನ್‌ಲೈನ್‌ ಕ್ಲಾಸ್ ಕೇಳಬೇಕು ಅನ್ನೋರಿಗೆ ಇಂಟರ್ನೆಟ್ ಸಂಪರ್ಕವೇಅಡ್ಡಿಪಡಿಸ.

ಮೊದಲನೇ ಕೋವಿಡ್ -19 ಅಲೆಯಿಂದಾಗಿ,  ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲಾಯಿತು. ನಂತರ ಬಂದ ಪ್ರವಾಹವು ಕನಿಷ್ಠ ನಾಲ್ಕು ತಿಂಗಳು ಈ ಪ್ರದೇಶವನ್ನು ಹಾಳು ಮಾಡಿತು. ಕಳೆದ ವರ್ಷದಲ್ಲಾಗಿರೋ ಈ ಎರಡು  ತೊಂದರೆಗಳು ಮಕ್ಕಳ ಶಿಕ್ಷಣವನ್ನು ಅಡ್ಡಿಪಡಿಸಿವೆ ಅಂತಾರೆ ಶಿಕ್ಷಕರಲ್ಲೊಬ್ಬರು. ಅದೇನೆಯಿರಲಿ, ಪ್ರತೀ ಬಾರಿಯೂ ಪ್ರವಾಹದಿಂದಾಗಿ ಅರ್ಧ ವರ್ಷವಿಡೀ ನೀರಿನಲ್ಲೇ ಬದುಕುವ ಈ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ಒದಗಿಸ್ತಿರುವ ಈ ಯುವ ಶಿಕ್ಷಕರ ನಿಸ್ವಾರ್ಥ ಸೇವೆಗೆ ಸಲಾಂ ಹೇಳಲೇಬೇಕು.

ಕೊರೋನಾ: ಶೇ.37ರಷ್ಟು ಗ್ರಾಮೀಣ ವಿದ್ಯಾರ್ಥಿಗಳು ಕಲಿಕೆಯಿಂದ ದೂರ

click me!