Latest Videos

5, 8ನೇ ತರಗತಿಗಳಿಗೆ ಬೋರ್ಡ್‌ ಪರೀಕ್ಷೆ ರದ್ದು: ಹೈಕೋರ್ಟ್‌

By Kannadaprabha NewsFirst Published Mar 11, 2023, 6:43 AM IST
Highlights

ರಾಜ್ಯ ಪಠ್ಯಕ್ರಮದ ಶಾಲೆಗಳ 5 ಮತ್ತು 8ನೇ ತರಗತಿಗಳ ವಿದ್ಯಾರ್ಥಿಗಳಿಗೆ ಶಾಲಾ ಮಟ್ಟದ ಮೌಲ್ಯಮಾಪನದ ಬದಲಾಗಿ ರಾಜ್ಯ ಮಟ್ಟದ ಮಂಡಳಿ (ಬೋರ್ಡ್‌) ಪರೀಕ್ಷೆ ನಡೆಸಲು ತೀರ್ಮಾನಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಸುತ್ತೋಲೆಯನ್ನು ಹೈಕೋರ್ಟ್‌ ರದ್ದುಪಡಿಸಿದೆ. 

ಬೆಂಗಳೂರು (ಮಾ.11): ರಾಜ್ಯ ಪಠ್ಯಕ್ರಮದ ಶಾಲೆಗಳ 5 ಮತ್ತು 8ನೇ ತರಗತಿಗಳ ವಿದ್ಯಾರ್ಥಿಗಳಿಗೆ ಶಾಲಾ ಮಟ್ಟದ ಮೌಲ್ಯಮಾಪನದ ಬದಲಾಗಿ ರಾಜ್ಯ ಮಟ್ಟದ ಮಂಡಳಿ (ಬೋರ್ಡ್‌) ಪರೀಕ್ಷೆ ನಡೆಸಲು ತೀರ್ಮಾನಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಸುತ್ತೋಲೆಯನ್ನು ಹೈಕೋರ್ಟ್‌ ರದ್ದುಪಡಿಸಿದೆ. ಸರ್ಕಾರದ ಸುತ್ತೋಲೆ ರದ್ದು ಕೋರಿ ಕರ್ನಾಟಕ ನೋಂದಾಯಿತ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘ ಮತ್ತಿತರರು ಸಲ್ಲಿಸಿದ್ದ ತಕರಾರು ಅರ್ಜಿಗಳನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಪ್ರದೀಪ್‌ಸಿಂಗ್‌ ಯೆರೂರ್‌ ಅವರ ನ್ಯಾಯಪೀಠ ಶುಕ್ರವಾರ ಈ ಆದೇಶ ಮಾಡಿದೆ.

ಇದರೊಂದಿಗೆ ಮಾ.13ರಿಂದ ಆರಂಭವಾಗುವ 5 ಮತ್ತು 8ನೇ ತರಗತಿ ಪರೀಕ್ಷೆಗಳು ಈವರೆಗಿನ ವ್ಯವಸ್ಥೆಯಂತೆಯೇ ನಡೆಯಲಿವೆ. ಆಯಾ ಶಾಲೆಗಳೇ ಪ್ರಶ್ನೆ ಪತ್ರಿಕೆ ಸಿದ್ಧಪಡಿಸುತ್ತವೆ ಹಾಗೂ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ನಡೆಸಿ ಫಲಿತಾಂಶ ಪ್ರಕಟಿಸಲಿವೆ. ಪರೀಕ್ಷೆಗಳು ಆಯಾ ಶಾಲಾ ಕೇಂದ್ರಗಳಲ್ಲಿಯೇ ನಡೆಯುತ್ತವೆ. ಇದೇ ವೇಳೆ ಸುತ್ತೋಲೆ ಹೊರಡಿಸಿದ ಸರ್ಕಾರದ ಹಿಂದಿನ ಉದ್ದೇಶವನ್ನು ಹೈಕೋರ್ಟ್‌ ಶ್ಲಾಘಿಸಿದೆಯಾದರೂ, ಈ ನೀತಿಯನ್ನು ಜಾರಿಗೊಳಿಸಲು ಅನುಸರಿಸಿದ ವಿಧಾನವೇ ಸೂಕ್ತವಾಗಿಲ್ಲ. ಸುತ್ತೋಲೆ ಹೊರಡಿಸುವಲ್ಲಿ ಕಾನೂನು ಪ್ರಕ್ರಿಯೆ ಪಾಲಿಸಿಲ್ಲ ಎಂದು ಟೀಕಿಸಿದೆ.

ಮಹೇಶ್‌ ಕುಮಟಳ್ಳಿಗೆ ಟಿಕೆಟ್‌ ಸಿಗದಿದ್ದರೆ ನಾನು ಚುನಾವಣೆಗೆ ಸ್ಪರ್ಧಿಸಲ್ಲ: ರಮೇಶ್‌ ಜಾರಕಿಹೊಳಿ

ವ್ಯಾಸಂಗದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟಹಾಗೂ ಅವರ ಬುದ್ಧಿವಂತಿಕೆ ಪರೀಕ್ಷಿಸುವ, ಮೌಲ್ಯಮಾಪನ ಕಾರ್ಯ ವಿಧಾನವನ್ನು ಸುಧಾರಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ಸುತ್ತೋಲೆ ಹೊರಡಿಸಿದೆ. ಇದು ಶ್ಲಾಘನೀಯವಾಗಿದೆ. ಏಕೆಂದರೆ, ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಬೀದಿಗಳ ಮೂಲೆ ಮೂಲೆಗಳಲ್ಲಿ ಶಾಲೆಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿವೆ. ಇಂದಿನ ಪೀಳಿಗೆಯಲ್ಲಿ ಒಂದನೇ ತರಗತಿಯಿಂದ 9ನೇ ತರಗತಿಯವರೆಗೆ ಮಕ್ಕಳ ಬುದ್ಧಿವಂತಿಕೆ ತಪಾಸಣೆ ಮಾಡಬೇಕಿದೆ. ವ್ಯಾಸಂಗದ ಗುಣಮಟ್ಟದಲ್ಲಿ ಸಮತೋಲನ ಕಾಯ್ದುಕೊಳ್ಳಬೇಕಿದೆ. 

ಹಾಗೆಯೇ, ಪರೀಕ್ಷಾ ಮೌಲ್ಯಮಾಪನ ಕಾರ್ಯ ವಿಧಾನ ಸುಧಾರಿಸಬೇಕಿದೆ. ಶಾಲೆಗಳ-ಬೋಧನಾ ಸಿಬ್ಬಂದಿಯ ಮೌಲ್ಯಮಾಪನವನ್ನೂ ಮಾಡುವ ಅಗತ್ಯವಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಆದರೆ, ಕಾಯ್ದೆಯಡಿ ನಿರ್ದಿಷ್ಟಅಧ್ಯಯನ ಮತ್ತು ಹಾಗೂ ಮೌಲ್ಯಮಾಪನ ಪ್ರಕ್ರಿಯೆಯನ್ನು ನಿಗದಿಪಡಿಸಲು ಸರ್ಕಾರ ಈ ಸುತ್ತೋಲೆ ಹೊರಡಿಸಿದೆ. ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಪ್ರಕಾರ ಶೈಕ್ಷಣಿಕ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಸುತ್ತೋಲೆ ಹೊರಡಿಸುವ ಮುನ್ನ ರಾಜ್ಯ ಶಾಸಕಾಂಗದ ಮುಂದೆ ಮಂಡಿಸಬೇಕು. 

ಶಾಸಕ ಮಾಡಾಳ್‌ ಮೆರವಣಿಗೆ ಮುಜುಗರ ತಂದಿದೆ: ನಳಿನ್‌ ಕುಮಾರ್‌ ಕಟೀಲ್‌

ಪ್ರಕರಣದಲ್ಲಿ ಈ ಪ್ರಕ್ರಿಯೆ ಪಾಲನೆಯಾಗಿಲ್ಲ. ಸುತ್ತೋಲೆಯು ಆರ್‌ಟಿಇ ಕಾಯ್ದೆ ಧ್ಯೇಯೋದ್ದೇಶಗಳಿವೆ ವಿರುದ್ಧವಾಗಿದೆ. ಸುತ್ತೋಲೆ ಕಾಯ್ದೆ ಅಥವಾ ನಿಯಮಗಳಿಗೆ ಪೂರಕವಾಗಿರಬೇಕೇ ಹೊರತು ಅತಿಕ್ರಮಿಸುವಂತೆ ಇರಬಾರದು. ನಿಯಮಗಳನ್ನು ಅತಿಕ್ರಮಿಸುವಂತೆ ಇದ್ದರೆ ಅಂತಹ ಸುತ್ತೋಲೆಗಳು ರದ್ದುಪಡಿಸಲು ಅರ್ಹವಾಗಿರುತ್ತವೆ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ. ರಾಜ್ಯ ಪಠ್ಯಕ್ರಮ ಶಾಲೆಗಳ 5 ಮತ್ತು 8ನೇ ತರಗತಿಗಳ ವಿದ್ಯಾರ್ಥಿಗಳಿಗೆ ಶಾಲಾ ಮಟ್ಟದ ಮೌಲ್ಯಮಾಪನದ ಬದಲಾಗಿ ರಾಜ್ಯ ಮಟ್ಟದ ಬೋರ್ಡ್‌ ಪರೀಕ್ಷೆ ನಡೆಸಲು ತೀರ್ಮಾನಿಸಿ ಸರ್ಕಾರವು 2022ರ ಡಿ.12, 13 ಮತ್ತು 2023ರ ಜ.4ರಂದು ಸುತ್ತೋಲೆ ಹೊರಡಿಸಿತ್ತು.

click me!