98ರಲ್ಲಿ ಏರೋ ಶೋ ನೋಡಲು ಬಂದಿದ್ದ ಬೆಂಗಳೂರು ಹುಡುಗ, ಈಗ 2025ರಲ್ಲಿ ಫೈಟರ್ ಜೆಟ್ ಪೈಲಟ್‌!

Published : Feb 11, 2025, 04:41 PM ISTUpdated : Feb 11, 2025, 05:13 PM IST
98ರಲ್ಲಿ ಏರೋ ಶೋ ನೋಡಲು ಬಂದಿದ್ದ ಬೆಂಗಳೂರು ಹುಡುಗ, ಈಗ 2025ರಲ್ಲಿ ಫೈಟರ್ ಜೆಟ್ ಪೈಲಟ್‌!

ಸಾರಾಂಶ

ಬೆಂಗಳೂರಿನಲ್ಲಿ 1998ರ ಏರೋ ಇಂಡಿಯಾ ನೋಡಿ ಸ್ಫೂರ್ತಿ ಪಡೆದ ಹುಡುಗನೊಬ್ಬ, ಇಂದು ಸೂರ್ಯಕಿರಣ್‌ ವೈಮಾನಿಕ ಪ್ರದರ್ಶನ ತಂಡದ ವಿಂಗ್‌ ಕಮಾಂಡರ್‌ ಆಗಿ, ತನ್ನ ಬಾಲ್ಯದ ಕನಸನ್ನು ನನಸಾಗಿಸಿಕೊಂಡಿದ್ದಾರೆ. ಜಯಮಹಲ್‌ನಲ್ಲಿ ಬೆಳೆದ ಅರ್ಜುನ್‌, ಯುದ್ಧ ವಿಮಾನಗಳಲ್ಲಿ ಸ್ಟಂಟ್‌ಗಳನ್ನು ಪ್ರದರ್ಶಿಸುವ ಫೈಟರ್‌ ಜೆಟ್‌ ಪೈಲಟ್‌ ಆಗಿದ್ದಾರೆ.

ಬೆಂಗಳೂರು (ಫೆ.11): ಬೆಂಗಳೂರಿನಲ್ಲಿ 1998ರಲ್ಲಿ ಏರೋ ಇಂಡಿಯಾ ನೋಡಲು ಪೋಷಕರೊಂದಿಗೆ ಬಂದಿದ್ದ ಆರನೇ ತರಗತಿಯ ಬೆಂಗಳೂರಿನ ಹುಡುಗ ಅಂದು ಪಣ ತೊಟ್ಟ ಫಲವಾಗಿ ಈಗ ದೇಶದ ಹೆಮ್ಮೆಯ ಸೂರ್ಯಕಿರಣ್‌ ವೈಮಾನಿಕ ಪ್ರದರ್ಶನ ತಂಡದ ವಿಂಗ್‌ ಕಮಾಂಡರ್‌ ಆಗಿದ್ದಾರೆ.

ಬೆಂಗಳೂರಿನ ಜಯಮಹಲ್‌ನ ನಂದಿದುರ್ಗ ರಸ್ತೆಯಲ್ಲಿ ಪೇಪರ್‌ ವಿಮಾನ ಹಾರಿಸುತ್ತಾ ಬೆಳೆದ ಅರ್ಜುನ್‌ ಈಗ ಯುದ್ಧ ವಿಮಾನದಲ್ಲಿ ಅತ್ಯಂತ ಕಠಿಣ ಸ್ಟಂಟ್‌ಗಳನ್ನು ಮಾಡುವ ಫೈಟರ್‌ ಜೆಟ್‌ ಪೈಲಟ್‌.

1- ಅರ್ಜುನ್‌ ಎಲ್ಲಿಯವರು? ಸೂರ್ಯಕಿರಣ್‌ ಸೇರಿದ್ದು ಹೇಗೆ?
ಜಯಮಹಲ್‌ನ ನಂದಿದುರ್ಗ ರಸ್ತೆಯಲ್ಲಿ ನನ್ನ ಮನೆ ಇದೆ. ನನ್ನ ಪೂರ್ವಜರ ಊರು ಸಹ ಇದೇ, ಹೀಗಾಗಿ ನಾನು ಬೆಂಗಳೂರಿಗ. ಆರ್‌.ಟಿ. ನಗರದ ಪ್ರೆಸಿಡೆನ್ಸಿ ಶಾಲೆ ಹಾಗೂ ಸೇಂಟ್‌ ಜೋಸೆಫ್‌ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಬಳಿಕ ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿ ಸೇರಿದೆ.
2- ಫೈಟರ್‌ ಜೆಟ್‌ ಪೈಲಟ್‌ ಆಗಲು ಕಾರಣವೇನು?
1998ರಲ್ಲಿ ಪೋಷಕರ ಜತೆ ಬೆಂಗಳೂರು ಏರೋ ಇಂಡಿಯಾಗೆ ತೆರಳಿದ್ದೆ. ಆಗ ಸಿಂಗಲ್‌ ಏರ್‌ಕ್ರ್ಯಾಫ್ಟ್‌ ಹಾರಾಟ, ಗ್ರೂಪ್‌ ಫಾರ್ಮೆಷನ್ಸ್‌ ನೋಡಿ ಥ್ರಿಲ್ಲಾಗಿದ್ದೆ. ನನಗೂ ಈ ರೀತಿ ಪೈಲಟ್‌ ಆಗಬೇಕು ಎಂಬ ಆಸೆ ಹುಟ್ಟಿತು. ಅಂದಿನಿಂದ ಅದನ್ನೇ ಪ್ಯಾಷನ್‌ ಆಗಿ ಸ್ವೀಕರಿಸಿದ್ದೆ.

3- ಇದಕ್ಕೆ ನಿಮ್ಮ ತಯಾರಿ ಹೇಗಿತ್ತು?
ನಾನು ಪಿಯು ಶಿಕ್ಷಣ ಮುಗಿಸಿ ಎನ್‌ಡಿಎ ಸೇರ್ಪಡೆಯಾದೆ. ಬಳಿಕ ಯುದ್ಧ ವಿಮಾನ ನಡೆಸಲು ಬೀದರ್‌ನಲ್ಲಿ ತರಬೇತಿ ನೀಡುತ್ತಾರೆ. ಅದನ್ನು ಮುಗಿಸಿ ಹೈದಬಾದ್‌ನ ಐಎಫ್‌ಎನಲ್ಲಿ ತರಬೇತಿ ಪಡೆದು ವಾಯುಸೇನೆಗೆ ಸೇರ್ಪಡೆಯಾದೆ. 1,000 ಗಂಟೆಗಳ ಹಾರಾಟ ಅನುಭವದ ಬಳಿಕ ಸೂರ್ಯಕಿರಣ್‌ ತಂಡದ ಕದ ತಟ್ಟಿದೆ.

4- ಸೂರ್ಯಕಿರಣ್‌ ತಂಡ ಸೇರುವ ಪ್ರಕ್ರಿಯೆ ಹೇಗೆ?
ಸೂರ್ಯಕಿರಣ್‌ ತಂಡ ಸೇರಲು ಕನಿಷ್ಠ ಅರ್ಹತೆ 1000 ಗಂಟೆಗಳ ಯುದ್ಧ ವಿಮಾನದ ಹಾರಾಟ. ಅಲ್ಲದೆ ಫೈಟರ್‌ ಇನ್‌ಸ್ಟ್ರಕ್ಟರ್‌, ಎಕ್ಸಾಮಿನರ್‌ ಆಗಿ ಅನುಭವ ಪಡೆಯಬೇಕು. ಬಳಿಕ ನಿಮಗೆ ಆಸಕ್ತಿ ಇದ್ದರೆ ಹೋಗಿ ಅಪ್ರೋಚ್ ಆಗಬಹುದು. ಅದಕ್ಕಾಗಿಯೇ ಪ್ರತ್ಯೇಕ ಸಮಿತಿ ಇರುತ್ತದೆ. ಎಲ್ಲಾ ರೀತಿಯಲ್ಲೂ ಪರೀಕ್ಷೆ ನಡೆಸಿ ನಿಮ್ಮ ಶಿಸ್ತು, ಬದ್ಧತೆ, ಕಾರ್ಯಕ್ಷಮತೆ ಎಲ್ಲವೂ ಪರಿಶೀಲಿಸಿ ಆರು ತಿಂಗಳ ತರಬೇತಿಗೆ ನೇಮಿಸಿಕೊಳ್ಳುತ್ತಾರೆ. ಬಳಿಕ ಆಯ್ಕೆ ಮಾಡುತ್ತಾರೆ.

ಇದನ್ನೂ ಓದಿ: ₹1499ಕ್ಕೆ ಫ್ಲೈಟ್ ! ಏರ್ ಇಂಡಿಯಾ ಬಸ್ ಟಿಕೆಟ್ ರೇಟಲ್ಲಿ!

5- ಒಟ್ಟಾರೆ ಎಷ್ಟು ಗಂಟೆ ಹಾರಾಟ ಮಾಡಿದ್ದೀರಿ? ಯಾವ್ಯಾವ ವಿಮಾನ ಹಾರಾಟ ಮಾಡಿದ್ದೀರಿ?
ಒಟ್ಟು 17 ವರ್ಷದ ಅನುಭವದಲ್ಲಿ (ತರಬೇತಿ ಸೇರಿ 18 ವರ್ಷ) 2100 ಗಂಟೆಗಳ ಯುದ್ಧ ವಿಮಾನದ ಹಾರಾಟ ಮಾಡಿದ್ದೇನೆ. ಇದರಲ್ಲಿ 400 ಗಂಟೆಗಳ ತೇಜಸ್‌ ಲಘು ಯುದ್ಧ ವಿಮಾನ ಸ್ಕ್ವಾಡ್ರನ್‌ನಲ್ಲೂ ಹಾರಾಟ ಮಾಡಿದ್ದೇನೆ. ಇದಕ್ಕೂ ಮೊದಲು ಮಿಗ್‌-21, ಮಿಗ್‌-27 ಮಾಡಿದ್ದೇನೆ. ಈಗ ಸೂರ್ಯಕಿರಣ್‌ನಲ್ಲಿ ಹಾಕ್‌ ಯುದ್ಧ ವಿಮಾನದಲ್ಲಿ ಹಾರಾಟ ಮಾಡುತ್ತಿದ್ದೇನೆ.

6- ಬೆಂಗಳೂರಿನಲ್ಲಿ ಪ್ರದರ್ಶನ ನೀಡುತ್ತಿರುವ ಅನುಭವ ಹೇಗಿದೆ?
ತುಂಬಾ ಖುಷಿಯಾಗುತ್ತಿದೆ. ಫೈಟರ್‌ ಜೆಟ್‌ನ ಪೈಲಟ್ ಆಗಬೇಕು ಎಂಬುದು ನನ್ನ ಆಸೆಯಾಗಿತ್ತು. ಆದರೆ ಬೆಂಗಳೂರು ಏರ್‌ಶೋದಲ್ಲೇ ಪ್ರದರ್ಶನ ನೀಡುತ್ತಿರುವುದು ದೇವರು ನನಗೆ ಕೊಟ್ಟ ಹೆಚ್ಚುವರಿ ವರ. ನನ್ನ ಹೃದಯಕ್ಕೆ ತುಂಬಾ ಆಪ್ತತೆಯ ಅನುಭವ ಆಗುತ್ತಿದೆ. ತರಂಗ ಶಕ್ತಿ, ಗೋವಾದ ವೈಮಾನಿಕ ಪ್ರದರ್ಶನ ಸೇರಿ ಹಲವು ಕಡೆ ಪ್ರದರ್ಶನ ನೀಡಿದರೂ ನನಗೆ ಇದು ಹೆಚ್ಚುವರಿ ಥ್ರಿಲ್‌ ನೀಡುತ್ತಿದೆ.

ಇದನ್ನೂ ಓದಿ: ಮೈಸೂರಿನಲ್ಲಿ ಮತಾಂಧರಿಂದ ಪೊಲೀಸರ ಮೇಲೆ ಹಲ್ಲೆಗೆ ಸಿಎಂ ಸಿದ್ದರಾಮಯ್ಯ ಕಾರಣ; ಆರ್. ಅಶೋಕ

7- ವೈಮಾನಿಕ ಪ್ರದರ್ಶನಕ್ಕೆ ನಿಮ್ಮ ಸಿದ್ಧತೆ ಹೇಗಿರುತ್ತದೆ?
ಶೇ.60 ರಷ್ಟು ಭಾಗ ವೈಮಾನಿಕ ಪ್ರದರ್ಶನದಲ್ಲಿ ಹಾರಾಟ ಮಾಡಿದರೆ ಶೇ.40 ರಷ್ಟು ತರಬೇತಿಗಾಗಿಯೇ ಹಾರಾಟ ಮಾಡುತ್ತೇವೆ. ವೈಮಾನಿಕ ಪ್ರದರ್ಶನ ಮುಗಿದ ಕೂಡಲೇ ಬೀದರ್‌ನ ವಾಯುನೆಲೆಯಲ್ಲಿ ಎಲ್ಲವನ್ನೂ ಮತ್ತೊಮ್ಮೆ ಪರಾಮರ್ಶೆ ಮಾಡಿಕೊಂಡು ಮಾಡಿರುವ ತಪ್ಪುಗಳನ್ನು ಸರಿ ಮಾಡಿಕೊಳ್ಳುತ್ತೇವೆ.

PREV
Read more Articles on
click me!

Recommended Stories

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ
SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ