* ರಾಷ್ಟ್ರ ಮಟ್ಟದ ‘ಕ್ಲಾಟ್’ನಲ್ಲಿ 7ನೇ ರ್‍ಯಾಂಕ್
* ಶಿವರಾಂ, ಅಮಿತಾ ಮಿಶ್ರಾಗೆ ರಾಜ್ಯದಲ್ಲಿ 2, 3ನೇ ಸ್ಥಾನ
* ಬೆಂಗಳೂರಿನ ರಾಷ್ಟ್ರೀಯ ಕಾನೂನು ಕಾಲೇಜಿನಲ್ಲಿ ಪ್ರವೇಶ ಪಡೆಯಲು ನಿರ್ಧಾರ
ಬೆಂಗಳೂರು(ಜೂ.26): ದೇಶದ 22 ರಾಷ್ಟ್ರೀಯ ಕಾನೂನು ಕಾಲೇಜುಗಳ ಪ್ರವೇಶಕ್ಕೆ ನಡೆಸಲಾಗಿದ್ದ ಪ್ರಸಕ್ತ ಸಾಲಿನ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (ಕ್ಲಾಟ್) ಫಲಿತಾಂಶ ಶುಕ್ರವಾರ ತಡರಾತ್ರಿ ಪ್ರಕಟವಾಗಿದ್ದು, ಅಖಿಲ ಭಾರತ ಮಟ್ಟದಲ್ಲಿ 7ನೇ ರ್‍ಯಾಂಕ್ ಪಡೆದಿರುವ ಬೆಂಗಳೂರು ಮೂಲದ ಸಂಜನಾ ರಾವ್ ರಾಜ್ಯಕ್ಕೆ ಟಾಪರ್ ಆಗಿದ್ದಾರೆ.
ಅದೇ ರೀತಿ ಕರ್ನಾಟಕ ಮೂಲದ ಶಿವರಾಂ, ಬೆಂಗಳೂರಿನ ಅಮಿತಾ ಮಿಶ್ರಾ ಕ್ರಮವಾಗಿ ಅಖಿಲ ಭಾರತ ಮಟ್ಟದಲ್ಲಿ 12ನೇ ಮತ್ತು 14ನೇ ರ್‍ಯಾಂಕ್ ಪಡೆಯುವ ಮೂಲಕ ರಾಜ್ಯ ಮಟ್ಟದಲ್ಲಿ ದ್ವಿತೀಯ ರ್‍ಯಾಂಕ್ ಮತ್ತು ತೃತೀಯ ಟಾಪರ್‌ಗಳೆನಿಸಿದ್ದಾರೆ. ಇವರಷ್ಟೇ ಅಲ್ಲದೆ ರಾಜ್ಯದ ಪ್ರೇಮ್ ವಿನೋದ್ ಅಖಿಲ ಭಾರತ ಮಟ್ಟದಲ್ಲಿ 16ನೇ ರ್‍ಯಾಂಕ್ ಪಡೆದಿದ್ದು ರಾಜ್ಯ ಮಟ್ಟದಲ್ಲಿ 4ನೇ ರ್‍ಯಾಂಕ್ ಪಡೆದುಕೊಂಡವರಾಗಿದ್ದಾರೆ.
Bagalkot: ನೀಟ್ ಪರೀಕ್ಷೆಯಲ್ಲಿ ಮುಧೋಳದ ಕೂಲಿಕಾರನ ಮಗ ದೇಶಕ್ಕೇ ಪ್ರಥಮ..!
ಬೆಂಗಳೂರು ಆಯ್ಕೆ:
ಕ್ಲಾಟ್‌ನಲ್ಲಿ ಉತ್ತಮ ರ್‍ಯಾಂಕ್ ಪಡೆದಿರುವ ಈ ಎಲ್ಲ ವಿದ್ಯಾರ್ಥಿಗಳೂ ಬೆಂಗಳೂರಿನ ಜ್ಞಾನಭಾರತಿ ಆವರಣದಲ್ಲಿರುವ ರಾಷ್ಟ್ರೀಯ ಕಾನೂನು ಕಾಲೇಜಿನಲ್ಲಿ ಪ್ರವೇಶ ಪಡೆಯಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿರುವ ರಾಜ್ಯದ ಟಾಪರ್ ಸಂಜನಾ ರಾವ್, ಪಿಯುಸಿ ಬಳಿಕ ಓಪನ್ ಸ್ಕೂಲ್ ಮೂಲಕ ಕ್ಲಾಟ್‌ಗೆ ತರಬೇತಿ ಪಡೆದೆ. ಉತ್ತಮ ರ್‍ಯಾಂಕ್ ಪಡೆಯುವುದು ನನ್ನ ಗುರಿಯಾಗಿತ್ತು. ಆದರೆ ರಾಜ್ಯಕ್ಕೆ ಟಾಪರ್ ಆಗುತ್ತೇನೆ ಎಂದುಕೊಂಡಿರಲಿಲ್ಲ. ತಂದೆ ಸಾಫ್ಟ್‌ವೇರ್ ಎಂಜಿನಿಯರ್, ತಾಯಿ ಉದ್ಯಮಿ. ಅವರ ಆಸೆಯಂತೆ ಕಾನೂನು ಪದವಿ ಮಾಡಲಿಚ್ಛಿಸಿದ್ದೇನೆ. ಬೆಂಗಳೂರಿನ ರಾಷ್ಟ್ರೀಯ ಕಾನೂನು ಕಾಲೇಜಿನಲ್ಲಿ ಪ್ರವೇಶ ಪಡೆಯುತ್ತೇನೆ ಎಂದು ಹೇಳಿದ್ದಾರೆ. ಸಂಜನಾ ಮಾತ್ರವಲ್ಲದೆ, ಶಿವರಾಂ, ಅಮಿತಾ ಮಿಶ್ರಾ ಹಾಗೂ ಪ್ರೇಮ್ ವಿನೋದ್ ಕೂಡ ಬೆಂಗಳೂರಿನಲ್ಲೇ ತಮ್ಮ ಕಾನೂನು ಪದವಿ ವ್ಯಾಸಂಗ ನಡೆಸಲು ಇಚ್ಛಿಸಿರುವುದಾಗಿ ಹೇಳಿದ್ದಾರೆ.