ಬೆಂಗಳೂರಿನ 7 ಸಾವಿರ ಮಕ್ಕಳಿಗೆ ಶಿಕ್ಷಣವೇ ಸಿಗುತ್ತಿಲ್ಲ! ಮಾನ್ಯ ಸಚಿವರೇ ಎಲ್ಲಿದೆ ಉಚಿತ ಶಿಕ್ಷಣ?

Published : Mar 11, 2025, 07:07 PM ISTUpdated : Mar 11, 2025, 07:38 PM IST
ಬೆಂಗಳೂರಿನ 7 ಸಾವಿರ ಮಕ್ಕಳಿಗೆ ಶಿಕ್ಷಣವೇ ಸಿಗುತ್ತಿಲ್ಲ! ಮಾನ್ಯ ಸಚಿವರೇ ಎಲ್ಲಿದೆ ಉಚಿತ ಶಿಕ್ಷಣ?

ಸಾರಾಂಶ

ಬೆಂಗಳೂರಿನಲ್ಲಿ ಸುಮಾರು 7 ಸಾವಿರ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 1,08,203 ಮಕ್ಕಳ ಸಮೀಕ್ಷೆಯಲ್ಲಿ ಈ ಮಾಹಿತಿ ಲಭ್ಯವಾಗಿದೆ. 6-14 ವರ್ಷದ ಮಕ್ಕಳಿಗೆ ಶಿಕ್ಷಣ ಮೂಲಭೂತ ಹಕ್ಕು. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಲು ಬಿಬಿಎಂಪಿ ವಲಯವಾರು ಸಮೀಕ್ಷೆ ನಡೆಸುತ್ತಿದೆ. ನ್ಯಾಯಾಲಯದ ನಿರ್ದೇಶನದಂತೆ, 'ಕರ್ನಾಟಕ ಹೆಚ್2ಹೆಚ್ ಮಕ್ಕಳ ಸಮೀಕ್ಷೆ' ಆಪ್ ಮೂಲಕ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸಾರ್ವಜನಿಕರು ಸಹಕರಿಸಲು ಕೋರಲಾಗಿದೆ.

ಬೆಂಗಳೂರು (ಮಾ.11): ದೇಶದಲ್ಲಿ ಸರ್ವರಿಗೂ ಶಿಕ್ಷಣ, 14 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡಬೇಕು ಎಂದು ಸಂವಿಧಾನದಲ್ಲಿ ತಿಳಿಸಲಾಗಿದೆ. ಆದರೆ, ರಾಜ್ಯ ಸರ್ಕಾರದ ಆಡಳಿತ ಕೇಂದ್ರವಾಗಿರುವ ಬೆಂಗಳೂರು ನಗರದಲ್ಲಿಯೇ ಸುಮಾರು 7 ಸಾವಿರ ಮಕ್ಕಳು ಶಾಲೆಯಿಂದ ಹೊರಗುಳಿದು ಶಿಕ್ಷಣ ವಂಚಿತರಾಗಿದ್ದಾರೆ. ಶಿಕ್ಷಣ ಸಚಿವರು ಈಗಲಾದರೂ ಎಚ್ಚೆತ್ತುಕೊಂಡು ಖಾಸಗಿ ಶಾಲೆಗಳ ಶುಲ್ಕ ವಸೂಲಿಗೆ ಕಡಿವಾಣ ಹಾಕಿ ಎಲ್ಲೆಡೆ ಸರ್ಕಾರಿ ಶಾಲೆಗಳನ್ನು ಆರಂಭಿಸಿ ಬಡ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡುವುದು ಅಗತ್ಯವಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಬಿಬಿಎಂಪಿ ಶಿಕ್ಷಣ ವಿಭಾಗದ ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಗುರುತಿಸುವ ಸಮೀಕ್ಷಾ ಕಾರ್ಯ ನಡೆಸಲಾಗುತ್ತಿದ್ದು, ಇದುವರೆಗೆ 1,08,203 ಮಕ್ಕಳ ಪೈಕಿ ಶಾಲೆಯಿಂದ ಹೊರಗುಳಿದ 6,936 ಮಕ್ಕಳನ್ನು ಗುರುತಿಸಲಾಗಿದೆ. ಬಿಬಿಎಂಪಿಯ 8 ವಲಯಗಳ ಜಂಟಿ ಆಯುಕ್ತರನ್ನು ಶಾಲೆಯಿಂದ ಹೊರಗುಳಿದ ಮಕ್ಕಳ ಗುರುತಿಸುವ ಸಮೀಕ್ಷಾ ಕಾರ್ಯಕ್ಕೆ ನೋಡಲ್ ಅಧಿಕಾರಿಗಳನ್ನಾಗಿ ನಿಯೋಜಿಸಲಾಗಿದೆ. ಅದರಂತೆ ಎಲ್ಲಾ ವಲಯಗಳಲ್ಲಿ ವಾರ್ಡ್ ವಾರು ಸಿಬ್ಬಂದಿಗಳನ್ನು ನಿಯೋಜಿಸಿ ಸಮೀಕ್ಷಾ ಕಾರ್ಯವನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಸಂವಿಧಾನದ ಕಲಂ21(ಎ) ಪ್ರಕಾರ 6 ರಿಂದ 14 ವರ್ಷದ ಪ್ರತಿ ಮಗು 8 ವರ್ಷಗಳ ಕಾಲ ಶಾಲಾ ಶಿಕ್ಷಣವನ್ನು ಪಡೆಯುವುದು ಮೂಲಭೂತ ಹಕ್ಕಾಗಿರುತ್ತದೆ.  ಶಾಲೆಯಿಂದ ಹೊರಗುಳಿದ ಮಕ್ಕಳನ್ನು ‘ಕರ್ನಾಟಕ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ನಿಯಮಗಳು, 2012’ ರನ್ವಯ ಸ್ಥಳೀಯ ಸಂಸ್ಥೆಗಳು ಶಿಕ್ಷಣ ರಿಜಿಸ್ಟರ್ ನಿರ್ವಹಿಸಬೇಕಾಗಿರುತ್ತದೆ. ‘ಕರ್ನಾಟಕ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು(ತಿದ್ದುಪಡಿ) ನಿಯಮಗಳು, 2014’ ರನ್ವಯ ಮಕ್ಕಳ ಹಾಜರಾತಿಗೆ ಸಂಬಂಧಿಸಿದಂತೆ ಸ್ಥಳೀಯ ಸಂಸ್ಥೆಗಳು ನಿರ್ವಹಿಸಬೇಕಾದ ಜವಾಬ್ದಾರಿಗಳ ಬಗ್ಗೆ ತಿಳಿಸಲಾಗಿದೆ ಎಂದರು.

ಇದನ್ನೂ ಓದಿ: Kodagu News: ಕೊಡಗಿನಲ್ಲಿ ಮತ್ತೆ ಚಿಗುರಿದ 'ಏರ್ ಸ್ಟ್ರಿಪ್' ಕನಸು; ಕಾಮಗಾರಿ ಶೀಘ್ರ ಎಂದ ಸಂಸದ ಯದುವೀರ್ ಒಡೆಯರ್!

ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರುವುದು ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳು ಶಾಲೆಗೆ ದಾಖಲಾಗದ ಮಕ್ಕಳ ಕುರಿತು ಹೈಕೋರ್ಟ್‌ನಲ್ಲಿ ವಿಚಾರಣಾ ಪ್ರಕ್ರಿಯೆ ಚಾಲನೆಯಲ್ಲಿದೆ. ಈ ಸಂಬಂಧ, ಮಾನ್ಯ ಉಚ್ಚ ನ್ಯಾಯಾಲಯವು ನೀಡಿರುವ ನಿರ್ದೇಶನದಂತೆ ಪಾಲಿಕೆ ವ್ಯಾಪ್ತಿಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ನಿಖರ ಸಂಖ್ಯೆಯನ್ನು ಗುರುತಿಸುವ ಕಾರ್ಯ ಪ್ರಕ್ರಿಯೆಯಲ್ಲಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಗುರುತಿಸುವಿಕೆ ಸಮೀಕ್ಷೆ ಕಾರ್ಯವನ್ನು, ಸೆಂಟರ್ ಫಾರ್ ಇ-ಗವರ್ನೆನ್ಸ್ ಇಲಾಖೆ ವತಿಯಿಂದ ‘ಕರ್ನಾಟಕ ಸರ್ಕಾರ ಆಪ್ ತಾಣ’ದಲ್ಲಿರುವ ‘ಕರ್ನಾಟಕ ಹೆಚ್2ಹೆಚ್ ಮಕ್ಕಳ ಸಮೀಕ್ಷೆ ಅಪ್ಲಿಕೇಶನ್’ (Karnataka H2H Children Survey App) ಎಂಬ ಮೊಬೈಲ್ ಆಪ್ ಮೂಲಕ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಫೆ.24ರಿಂದ ಸಮೀಕ್ಷೆ ಆರಂಭ: ಬಿಬಿಎಂಪಿ ವ್ಯಾಪ್ತಿಯಲ್ಲಿ ಇರುವಂತಹ ಎಲ್ಲಾ ಮನೆಗಳನ್ನು ಉಚ್ಛ ನ್ಯಾಯಾಲಯದ ನಿರ್ದೇಶನದಂತೆ 24ನೇ ಫೆಬ್ರಬರಿ 2025ರಿಂದ ಪಾಲಿಕೆಯ ಎಂಟು ವಲಯಗಳಲ್ಲಿ ಶಿಕ್ಷಣ ವಿಭಾಗದ ಹೊಲಿಗೆ ಶಿಕ್ಷಕರು, ಆಶಾ ಕಾರ್ಯಕರ್ತೆಯರು, ಲಿಂಕ್ ವರ್ಕರ್ಸ್ ಗಳ ಮೂಲಕ ಮನೆ ಮನೆ ಸಮೀಕ್ಷೆ ನಡೆಸಲಾಗುತ್ತಿದೆ. ಪ್ರತಿ ವಾರ್ಡ್ ಗೆ ಸುಮಾರು 10 ಗಣತಿದಾರರನ್ನು ನೇಮಿಸಲಾಗಿದ್ದು, ಸದರಿ ಗಣತಿದಾರರು ಪ್ರತಿಯೊಂದು ಮನೆಗೆ ಭೇಟಿ ನೀಡಿ 6 ರಿಂದ 18 ವರ್ಷದ ವಯಸ್ಸಿನ ಎಲ್ಲರನ್ನೂ ಸಮೀಕ್ಷೆ ನಡೆಸಿ ಆಪ್ ನಲ್ಲಿ ಮಾಹಿತಿ ದಾಖಲಿಸಲಾಗುತ್ತಿದೆ ಎಂದರು.

ಇದನ್ನೂ ಓದಿ: ಬಂದ್‌ ಭೀತಿ ಎದುರಿಸುತ್ತಿರುವ 9 ಹೊಸ ವಿವಿಗಳಲ್ಲಿ ಗುತ್ತಿಗೆ ನೌಕರರಿಗೆ 4 ತಿಂಗಳಿಂದ ವೇತನ ಇಲ್ಲ

ಶಾಲೆಯಿಂದ ಹೊರಗುಳಿದ 6,936 ಮಕ್ಕಳ ಗುರುತು: ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ 8 ವಲಯಗಳಲ್ಲಿಯೂ ಶಾಲೆಯಿಂದ ಹೊರಗುಳಿದ ಮಕ್ಕಳ ಗುರುತಿಸುವಿಕೆ ಸಮೀಕ್ಷಾ ಕಾರ್ಯ ಸಕ್ರಿಯವಾಗಿ ನಡೆಯುತ್ತಿದೆ. ಪಾಲಿಕೆಯ 8 ವಲಯಗಳಲ್ಲಿ 10ನೇ ಮಾರ್ಚ್ 2025 ರವರೆಗೆ 1,08,203 ಮಕ್ಕಳ ಪೈಕಿ, ಶಾಲೆಯಿಂದ ಹೊರಗುಳಿದ 6,936 ಮಕ್ಕಳನ್ನು ಗುರುತಿಸಲಾಗಿದೆ. ಶೀಘ್ರ ಎಲ್ಲಾ ಮನೆ-ಮನೆ ಭೇಟಿ ನೀಡಿ ಸಮೀಕ್ಷಾ ಕಾರ್ಯವನ್ನು ಪೂರ್ಣಗೊಳಿಸಲಾಗುವುದು. ಈ ಸಮೀಕ್ಷಾ ಕಾರ್ಯಕ್ಕೆ ಸಾರ್ವಜನಿಕರು ಸಹಕರಿಸಲು ಕೋರಿದೆ.

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ