ಬಿದಿರಿನ ಜೋಪಡಿಯೇ ಹಸುಗೂಸುಗಳ ಅಂಗನವಾಡಿ, ಅಪಾಯಕಾರಿ ಕಾಡುಪ್ರಾಣಿಗಳಿದ್ದರೂ ಸರಕಾರದ ನಿರ್ಲಕ್ಷ್ಯ!

By Suvarna News  |  First Published May 27, 2023, 7:03 PM IST

ಅಪಾಯಕಾರಿ ಕಾಡುಪ್ರಾಣಿಗಳಿಂದ ಕೂಡಿರುವ ಅರಣ್ಯದ ತುಂಡು ಮುಂಡುಗೆ ಹಾಡಿ ಮಕ್ಕಳ ಬಗ್ಗೆ ಅಧಿಕಾರಿಗಳ ನಿರ್ಲಕ್ಷ್ಯ. ಕೊಡಗಿನ ಈ ಭಾಗದಲ್ಲಿ ಬಿದಿರು ಬೊಂಬುಗಳಿಂದ ಮಾಡಿದ ಜೋಪಡಿಯೇ ಹಸುಗೂಸುಗಳ ಅಂಗನವಾಡಿ.
 


ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಮೇ.27): ರಾಜ್ಯ, ದೇಶವನ್ನು ಹಾಗೆ ಉದ್ದಾರ ಮಾಡುತ್ತೇವೆ, ಹೀಗೆ ಉದ್ದಾರ ಮಾಡುತ್ತೇವೆ ಎಂದೆಲ್ಲಾ ನಮ್ಮ ರಾಜಕಾರಣಿಗಳು ಇನ್ನಿಲ್ಲದೆ ಆಶ್ವಾಸನೆಗಳನ್ನು ನೀಡುತ್ತಾರೆ. ಎಲ್ಲವನ್ನು ಉಚಿತ ಕೊಡುತ್ತೇವೆ ಎಂದೆಲ್ಲಾ ಹೇಳುವ ಸರ್ಕಾರಗಳು ಶಿಕ್ಷಣ, ಆರೋಗ್ಯವನ್ನು ಮಾತ್ರ ಉಚಿತವಾಗಿ ಕೊಡುತ್ತೇವೆ ಎಂದು ಮಾತ್ರ ಹೇಳುವುದಿಲ್ಲ. ಶಿಕ್ಷಣವನ್ನು ಸರ್ಕಾರಗಳು ಎಷ್ಟು ಕಡೆಗಣಿಸಿವೆ ಎನ್ನುವುದಕ್ಕೆ ಈ ಅಂಗನವಾಡಿಯೇ ಸಾಕ್ಷಿ ನೋಡಿ. ಸುತ್ತಲೂ ಬಿದಿರು ದೆಬ್ಬೆಗಳಿಂದ ಮಾಡಿದ ತಡಿಕೆಯೇ ಗೋಡೆ. ಮೇಲೆ ಹೊದಿಸಿರುವ ಟಾರ್ಪಲ್ಲೇ ಮೇಲ್ಛಾವಣಿ. ಇದು ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ನಾಗರಹೊಳೆ ರಾಷ್ಟ್ರೀಯ ಅರಣ್ಯದ ವ್ಯಾಪ್ತಿಯಲ್ಲಿ ಇರುವ ತುಂಡುಮುಂಡುಗೆ ಕೊಲ್ಲಿಯಲ್ಲಿರುವ ಅಂಗನವಾಡಿಯ ದುಃಸ್ಥಿತಿ. ಇದನ್ನು ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ, ಇದು ಹಾಲುಗೆನ್ನೆಯ ಕಂದಮ್ಮಗಳು ಕಲಿಯಬೇಕಾಗಿರುವ ಅಂಗನವಾಡಿ ಎನ್ನುವುದಂತು ಸತ್ಯ. ನಾವು ಎಷ್ಟು ಉನ್ನತ ಶಿಕ್ಷಣ ಪಡೆಯಬೇಕಾದರೂ ಅದಕ್ಕೆಲ್ಲಾ ಶಾಲಾ ಪೂರ್ವ ಶಿಕ್ಷಣವೇ ಮುಖ್ಯ ಎಂದು ನಮ್ಮ ಸರ್ಕಾರಗಳೇ ಹೇಳುತ್ತವೆ. ನಾವು ಎಷ್ಟೆಲ್ಲಾ ಆಧುನಿಕವಾಗಿ ಮುಂದುವರೆದಿದ್ದೇವೆ. ಆದರೆ ಹಾಡಿಯ ಜನರ 12 ಹಸುಗೂಸುಗಳಿಗಾಗಿ ಇರುವ ಅಂಗನವಾಡಿಯ ಸ್ಥಿತಿ ಹೇಗಿದೆ ನೋಡಿ.

Tap to resize

Latest Videos

undefined

ಕಳೆದ ಹಲವು ವರ್ಷಗಳಿಂದ ಈ ಅಂಗನವಾಡಿ ಇದೇ ಸ್ಥಿತಿಯಲ್ಲಿ ಇದ್ದರೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಾಗಲಿ, ಗಿರಿಜನ ಅಭಿವೃದ್ಧಿ ಇಲಾಖೆ ಅಧಿಕಾರಿಗಳಾಗಲಿ ಯಾವುದೇ ಕ್ರಮ ಕೈತೊಂಡಿಲ್ಲ. ಇಲ್ಲಿನ ಗಿರಿಜನರೇ ಕಾಡಿನಲ್ಲಿ ಸಿಗುವ ವಿವಿಧ ಮರಗಳ ಕಟ್ಟಿಗೆಗಳನ್ನು ಬಳಸಿ ಅಂಗನವಾಡಿ ನಿರ್ಮಿಸಿದ್ದಾರೆ. ಅರಣ್ಯ ಪ್ರದೇಶದಲ್ಲೇ ತುಂಡುಮುಂಡುಗೆ ಹಾಡಿ ಇದ್ದು ಕರಡಿ, ಹುಲಿ, ಆನೆ ಸೇರಿದಂತೆ ಅಪಾಯಕಾರಿ ಪ್ರಾಣಿಗಳು ಇಲ್ಲಿ ಓಡಾಡುತ್ತವೆ. ಹೀಗಿದ್ದರೂ ಬಿದಿರಿನ ಬೊಂಬು, ವಿವಿಧ ಮರಗಳ ಕಟ್ಟಿಗಳನ್ನು ಬಳಸಿ ನಿರ್ಮಿಸಿರುವ ಗುಡಿಸಿಲಿನಲ್ಲೇ ಅಂಗನವಾಡಿ ನಡೆಯುತ್ತಿದೆ.

ಮತ್ತೆ ಪಠ್ಯಪುಸ್ತಕ ಪರಿಷ್ಕರಣೆ, ಕಾಂಗ್ರೆಸ್ ಸರ್ಕಾರದ ಹೊಸ ಪಠ್ಯಪುಸ್ತಕ ಮುದ್ರಣ!

ಈ ಕುರಿತು ಅಧಿಕಾರಿಗಳನ್ನು ಕೇಳಿದರೆ ಇದು ರಾಷ್ಟ್ರೀಯ ಅರಣ್ಯ ಪ್ರದೇಶದಲ್ಲಿ ಇರುವುದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಕಟ್ಟಡ ಮಾಡುವುದಕ್ಕೆ ಬಿಡುವುದಿಲ್ಲ ಎನ್ನುತ್ತಾರೆ. ಆದರೆ ಈಗಾಗಲೇ ಪಂಚಾಯಿತಿಯ ಗಮನಕ್ಕೆ ತರಲಾಗಿದ್ದು, ಪರಿಸರ ಪೂರಕವಾದ ಕಟ್ಟಡ ನಿರ್ಮಾಣ ಮಾಡುವುದಕ್ಕೆ ಅವಕಾಶ ನೀಡಲಾಗಿದೆ ಎನ್ನುತ್ತಿದ್ದಾರೆ. ಸದ್ಯ ನಾವು ನಮ್ಮ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಹಣ ಬಿಡುಗಡೆ ಆದಲ್ಲಿ ಶಾಶ್ವತ ಕಟ್ಟಡ ನಿರ್ಮಿಸಿಕೊಡಲಾಗುವುದು ಎಂದು ಹೇಳುತ್ತಿದ್ದಾರೆ. ಹೀಗೆ ಎರಡೆರಡು ರೀತಿಯ ಹೇಳಿಕೆಗಳನ್ನು ನೀಡುವುದನ್ನು ನೋಡಿದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳದ್ದೇ ದಿವ್ಯ ನಿರ್ಲಕ್ಷ್ಯವಿದೆ ಎನ್ನುವುದು ಸ್ಪಷ್ಟವಾಗುತ್ತದೆ.

KCET 2023: ಆನ್ ಲೈನ್ ನಲ್ಲಿ ಪಿಯು ಅಂಕ ದಾಖಲಿಸಲು ಕೆಇಎ ಕಡ್ಡಾಯ ಸೂಚನೆ

ಒಂದೆಡೆ ಅರಣ್ಯ ಇಲಾಖೆ ಕಟ್ಟಡ ನಿರ್ಮಿಸುವುದಕ್ಕೆ ಅವಕಾಶ ನೀಡುವುದಿಲ್ಲ ಎನ್ನುವುದು ಸತ್ಯವಾದರೂ, ಇಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಿಂದ ಯಾವುದೇ ತಕರಾರಿಲ್ಲ ಎನ್ನುವ ಮಾಹಿತಿ ಇದೆ. ಇದಕ್ಕೆ ಪ್ರತಿಕ್ರಿಯಿಸಿರುವ ವಿರಾಜಪೇಟೆ ನೂತನ ಶಾಸಕ ಎ.ಎಸ್.ಪೊನ್ನಣ್ಣ ಕೂಡಲೇ ಇದನ್ನು ಪರಿಶೀಲಿಸುತ್ತೇನೆ. ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿ ಸಮಸ್ಯೆ ಬಗೆಹರಿಸಲು ಕ್ರಮವಹಿಸಲಾಗುವುದು ಎಂದಿದ್ದಾರೆ. ಏನೇ ಆಗಲಿ ಇಷ್ಟೊಂದು ಆಧುನಿಕತೆನ್ನು ಸಾಧಿಸಿರುವ ನಮ್ಮ ವ್ಯವಸ್ಥೆಯಲ್ಲಿ ಇಂದಿಗೂ ಈ ಪುಟ್ಟ ಕಂದಮ್ಮಗಳು ಕಲಿಯಬೇಕಾಗಿರುವ ಅಂಗನವಾಡಿ ಎಂತಹ ಅಪಾಯಕಾರಿ ಮತ್ತು ದುಃಸ್ಥಿತಿಯಲ್ಲಿದೆ ಎನ್ನುವುದು ನಿಜಕ್ಕೂ ನಾಗರಿಕ ಸಮಾಜ ತಲೆತಗ್ಗಿಸುವಂತೆ ಇರುವುದು ಮಾತ್ರ ವಿಪರ್ಯಾಸ.

click me!