ಕೆಕೆಆರ್ಡಿಬಿ ವಿವಿಗೆ ನೀಡಿರುವ 20 ಕೋಟಿ ಅನುದಾನದಲ್ಲಿ ಶೇ. 40ರಷ್ಟು ಕಮಿಷನ್ ಹಗರಣ ನಡೆದಿದೆ ಎಂದು ‘ಕನ್ನಡ ವಿವಿ ಉಳಿಸಿ ಹೋರಾಟಗಾರರು’ ಎಂಬ ಹೆಸರಿನಲ್ಲಿ ಹರಿದಾಡುತ್ತಿರುವ ಇ-ಮೇಲ್ ಪತ್ರ
ಹೊಸಪೇಟೆ(ಆ.30): ರಾಜ್ಯ ಸರ್ಕಾರದ ವಿರುದ್ಧ ಕೇಳಿ ಬಂದಿದ್ದ ಶೇ.40ರಷ್ಟು ಕಮಿಷನ್ ಆರೋಪ ಈಗ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿರುದ್ಧವೂ ಕೇಳಿ ಬಂದಿದೆ. ಕೆಕೆಆರ್‌ಡಿಬಿ ವಿವಿಗೆ ನೀಡಿರುವ 20 ಕೋಟಿ ಅನುದಾನದಲ್ಲಿ ಶೇ. 40ರಷ್ಟು ಕಮಿಷನ್ ಹಗರಣ ನಡೆದಿದೆ ಎಂದು ‘ಕನ್ನಡ ವಿವಿ ಉಳಿಸಿ ಹೋರಾಟಗಾರರು’ ಎಂಬ ಹೆಸರಿನಲ್ಲಿ ಮಿಂಚಂಚೆ (ಇ-ಮೇಲ್) ಪತ್ರ ಹರಿದಾಡುತ್ತಿದೆ.
ಕನ್ನಡ ವಿಶ್ವವಿದ್ಯಾಲಯಕ್ಕೆ ಅನುದಾನದ ಕೊರತೆ ಎಂದು ಕನ್ನಡ ಸಂಘಟನೆಗಳು ರಾಜ್ಯಾದ್ಯಂತ ನಡೆಸಿದ ಹೋರಾಟದ ಫಲವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು .20 ಕೋಟಿ ಅನುದಾನ ಘೋಷಿಸಿದ್ದಾರೆ. ಮುಖ್ಯಮಂತ್ರಿಗಳು ಅನುದಾನ ಘೋಷಿಸುವಾಗ ಈ ಅನುದಾನವನ್ನು ಎಸ್ಸಿ, ಎಸ್ಟಿವಿದ್ಯಾರ್ಥಿಗಳ ಫೆಲೋಶಿಪ್, ತಾತ್ಕಾಲಿಕ ಸಿಬ್ಬಂದಿ, ಅಧ್ಯಾಪಕರ ವೇತನಕ್ಕಾಗಿ .8 ಕೋಟಿ ಇನ್ನಿತರೆ ಮೂಲಭೂತ ಸೌಕರ್ಯಕ್ಕಾಗಿ ಬಳಸಲು ನೀಡುತ್ತಿರುವೆ ಎಂದು ಘೋಷಿಸಿದ್ದರು. ಆದರೆ, ವಿವಿ ಕುಲಪತಿ ಇದ್ಯಾವುದನ್ನು ಪರಿಗಣಿಸದೆ ಕೇವಲ ಕಾಮಗಾರಿಗಳಿಗಾಗಿ ಅನುದಾನ ಮಂಜೂರು ಮಾಡಿಸಿಕೊಂಡು ಬಂದು, ಇದರಲ್ಲಿ ಯಾವುದೇ ಅನುದಾನವನ್ನು ಎಸ್ಸಿ, ಎಸ್ಟಿವಿದ್ಯಾರ್ಥಿಗಳ ಫೆಲೋಶಿಪ್, ತಾತ್ಕಾಲಿಕ ಸಿಬ್ಬಂದಿ, ಅಧ್ಯಾಪಕರ ವೇತನಕ್ಕಾಗಿ ನೀಡಿಲ್ಲ ಎಂದು ಹೇಳಿ ಕಾಮಗಾರಿಗಳಲ್ಲಿ ನೇರ ಶೇ. 40 ಕಮಿಷನ್ ಪಡೆದಿರುವ ಸುದ್ದಿ ವಿವಿ ಆವರದಲ್ಲಿ ಕೇಳಿ ಬರುತ್ತಿದೆ. ಅದಕ್ಕೆ ನಿದರ್ಶನವೆಂಬಂತೆ ವಿವಿಯಲ್ಲಿ ಕಮ್ಯುನಿಟಿ ರೇಡಿಯೋ ಸ್ಥಾಪಿಸಲು .4 ಕೋಟಿ ವ್ಯಯಿಸುತ್ತಿದ್ದು, ಇದರಲ್ಲಿ ನೇರ .2 ಕೋಟಿ ಗುಳುಂ ಮಾಡಲಾಗಿದೆ. ಈ ಕೆಲಸವನ್ನು ಉನ್ನತ ಶಿಕ್ಷಣ ಮಂತ್ರಿಗಳ ಕಡೆಯವರಿಗೆ ನೀಡಿದ್ದೇನೆ, ಇದರಲ್ಲಿ ಉನ್ನತ ಶಿಕ್ಷಣ ಮಂತ್ರಿಗಳ ಪಾಲೂ ಇದೆ ಎಂದು ಕುಲಪತಿಗಳೇ ಹೇಳಿಕೊಂಡಿದ್ದಾರೆ ಎಂಬ ಗುಸುಗುಸು ಸುದ್ದಿ ಇದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಪ್ರಶ್ನೆ ಮಾಡೋದೇ ತಪ್ಪಾ? ಸಿಎಂ ಭಾಷಣಕ್ಕೆ ಅಡ್ಡಿ, ವಿದ್ಯಾರ್ಥಿಗೆ ನೋಟಿಸ್ ನೀಡಿದ ವಿವಿ
ವಿವಿಯದಲ್ಲಿ ಈಗಾಗಲೇ ಪ್ರಸಾರಾಂಗದ 2 ಕಟ್ಟಡಗಳಿದ್ದು (ಯುಜಿಸಿ ಅನುದಾನದಲ್ಲಿ ನಿರ್ಮಿಸಿರುವ ಬೃಹತ್ ಕಟ್ಟಡವಿದೆ) ಆದರೂ ಕೆಕೆಆರ್‌ಡಿಬಿಗೆ ಕಟ್ಟಡವಿಲ್ಲ ಎಂದು ಸುಳ್ಳು ಹೇಳಿ ಕಟ್ಟಡ ಕಟ್ಟಲು ಹೊರಟಿದ್ದಾರೆ. ಇದಕ್ಕೆ .4 ಕೋಟಿ ಅಂದಾಜು ಮಾಡಿ ಟೆಂಡರ್ ಕರೆದಿದ್ದಾರೆ. ಚೋಮನಕೆರೆ ಅಭಿವೃದ್ಧಿ ಎಂಬ ನೆಪದಲ್ಲಿ ಇಲ್ಲದ ಕೆರೆಗೆ .6 ಕೋಟಿ ಅಂದಾಜು ಮಾಡಿ ಗೋಲ್ಮಾಲ್ ಮಾಡುತ್ತಿದ್ದಾರೆ. ಈಗಾಗಲೇ ಶಿಲ್ಪವನಕ್ಕೆ ಕಲ್ಲು ಹಾಸು ಹಾಕಿ ವೀಕ್ಷಣೆಗೆ ಅವಕಾಶವಿದ್ದರೂ, ಮತ್ತೆ .60 ಲಕ್ಷ ಕಲ್ಲುಹಾಸು ಎಂದು ಕಾಮಗಾರಿ ಮಾಡಲು ಹೊರಟಿದ್ದಾರೆ. ಹೈಮಾಸ್ಟ್ ದೀಪದ ಅವಶ್ಯಕತೆ ಇಲ್ಲವೆಂದು ತೀರ್ಮಾನಿಸಿದ್ದರೂ .50 ಲಕ್ಷ ವೆಚ್ಚದಲ್ಲಿ ಹೈಮಾಸ್ಟ್ ದೀಪ ಅಳವಡಿಸಲು ಹೊರಟಿರುವುದು ಕಮಿಷನ್‌ಗೆ, ಎಸ್ಸಿ, ಎಸ್ಟಿವಿದ್ಯಾರ್ಥಿಗಳ ಹಾಸ್ಟೆಲ್ ಕಾಂಪೌಂಡ್ ನಿರ್ಮಾಣ ಮಾಡಲು .2 ಕೋಟಿ ವ್ಯಯಿಸುತ್ತಿದ್ದಾರೆ. ಹಿಂದಿನ ಕುಲಪತಿಗಳು ಎಸ್ಸಿ, ಎಸ್ಟಿವಿದ್ಯಾರ್ಥಿಗಳ ಹಾಸ್ಟೆಲ್ ಕಟ್ಟಲು .4 ಕೋಟಿ ಖರ್ಚು ಮಾಡಿದ್ದರು. ಈಗಿನ ಕುಲಪತಿಗಳು ಬರೀ ಕಾಪೌಂಡ್ ನಿರ್ಮಾಣ ಮಾಡಲು .2 ಕೋಟಿ ವ್ಯಯಿಸುತ್ತಿದ್ದಾರೆ. ಕಂಪ್ಯೂಟರ್ ಖರೀದಿಗಾಗಿ .75 ಲಕ್ಷ ಅನುದಾನ ವ್ಯಯಿಸುತ್ತಿದ್ದಾರೆ. ಈ ಕುರಿತು ಸಂಬಂಧಪಟ್ಟವರು ಸೂಕ್ತ ತನಿಖೆ ನಡೆಸಿ ಸಂಬಂಧಿಸಿದವರನ್ನು ಶಿಕ್ಷಿಸಬೇಕು ಎಂದು ಕನ್ನಡ ವಿವಿ ಉಳಿಸಿ ಹೋರಾಟಗಾರರು ಎಂದು ಬರೆದಿರುವ ಪತ್ರದಲ್ಲಿ ಆಗ್ರಹಿಸಲಾಗಿದೆ. ಜತೆಗೆ ಪತ್ರದ ಪ್ರತಿಯನ್ನು ರಾಜ್ಯಪಾಲರು, ಸಿಎಂ, ಉನ್ನತ ಶಿಕ್ಷಣ ಸಚಿವರು, ಕೆಕೆಆರ್ಡಿಬಿ ಕಲಬುರಗಿಗೂ ರವಾನಿಸಲಾಗಿದೆ.
ಕನ್ನಡ ವಿವಿಗೆ .20 ಕೋಟಿ ಅನುದಾನ ನೀಡಲಾಗುತ್ತಿದೆ. ವಿವಿಯಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಕಮಿಷನ್ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಕನ್ನಡ ವಿವಿಯ ಬೆಳವಣಿಗೆಗೆ ಪ್ರಸಾರಾಂಗ ಕಟ್ಟಡ, ಕೆರೆ ಅಭಿವೃದ್ಧಿ ಸೇರಿ ಇನ್ನಿತರ ಕಾಮಗಾರಿ ಕೈಗೊಳ್ಳಲಾಗಿದೆ ಅಂತ ಹಂಪಿ ಕನ್ನಡ ವಿವಿ ಕುಲಪತಿ ಡಾ. ಸುಬ್ಬಣ್ಣ ರೈ ತಿಳಿಸಿದ್ದಾರೆ.