AU Student Crowdfunding: ಕಸಿನ್ ಚಿಕಿತ್ಸೆಗೆ 7 ಲಕ್ಷ ರೂ ಸಂಗ್ರಹಿಸಿದ LLB ವಿದ್ಯಾರ್ಥಿನಿ

By Suvarna NewsFirst Published Jan 24, 2022, 1:59 PM IST
Highlights

*ತನ್ನ ಸಹೋದರ ಸಂಬಂಧಿ ಶಸ್ತ್ರಚಿಕಿತ್ಸೆಗಾಗಿ ವಿಶಿಷ್ಟ ಐಡಿಯಾ ಮೂಲಕ ಹಣ ಸಂಗ್ರಹಿಸಿದ ವಿದ್ಯಾರ್ಥಿನಿ
*ಕ್ರೌಡ್‌ಫಂಡಿಂಗ್ ಮೂಲಕ ಈವರೆಗೆ 7  ಲಕ್ಷ ಸಂಗ್ರಹ 
*ಕಾನೂನು ವಿದ್ಯಾರ್ಥಿನಿಯದ ಪ್ರಯತ್ನಕ್ಕೆ ಎಲ್ಲರಿಂದಲೂ ವ್ಯಾಪಕ ಮೆಚ್ಚುಗೆ

ಪ್ರಯಾಗರಾಜ್(ಜ.24): ವಿದ್ಯಾರ್ಥಿಗಳು ಬರೀ ಓದುವುದರಲ್ಲಿ ತಲ್ಲೀನರಾಗಿರುತ್ತಾರೆ. ತಮ್ಮ ಸುತ್ತ ಮುತ್ತಲಿನ ಸಮಸ್ಯೆ ಕೌಟುಂಬಿಕ ಕಲಹಗಳತ್ತ ಸ್ವಲ್ಪವೂ ಕಿವಿಗೊಡುವುದಿಲ್ಲ. ಸದಾ ವಿದ್ಯಾಭ್ಯಾಸದಲ್ಲೇ, ತಮ್ಮ ಗುರಿ ಮುಟ್ಟುವುದರಲ್ಲೇ ಮುಳುಗಿ ಹೋಗಿರುತ್ತಾರೆ. ಆದ್ರೆ ಇಲ್ಲೊಬ್ಬ ವಿದ್ಯಾರ್ಥಿನಿ ಮಾಡಿರೋ ಮಹತ್ಕಾರ್ಯ, ಒಂದು ಜೀವವನ್ನೇ ಉಳಿಸಿದೆ.  ಅಲಹಾಬಾದ್ ಯೂನಿವರ್ಸಿಟಿಯ ವಿದ್ಯಾರ್ಥಿನಿ, ಕ್ರೌಡ್‌ಫಂಡಿಂಗ್ ಮೂಲಕ ತನ್ನ ಅಸ್ವಸ್ಥ ಸೋದರ ಸಂಬಂಧಿಗಾಗಿ ₹ 7 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಸಂಗ್ರಹಿಸಿಕೊಟ್ಟಿದ್ದಾಳೆ. ಅನಾರೋಗ್ಯದಿಂದ ಬಳಲುತ್ತಿರುವ ತನ್ನ ಸೋದರ ಸಂಬಂಧಿಯ ಜೀವ ಉಳಿಸಲು  ಆರ್ಥಿಕ ಸಹಾಯಕ್ಕಾಗಿ ವಿದ್ಯಾರ್ಥಿನಿ ಮಾಡಿದ ಮನವಿಗೆ ನೆಟಿಜನ್‌ಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.  ಅಲಹಾಬಾದ್ ವಿಶ್ವವಿದ್ಯಾನಿಲಯದ (Allahabad University ) ಮೂರನೇ ವರ್ಷದ BA LLB ವಿದ್ಯಾರ್ಥಿನಿ ವರ್ತಿಕಾ ಮೌರ್ಯ (Vartika Mourya),  ತಮ್ಮ ಸಂಬಂಧಿ ಸಂದೀಪ್ ಮೌರ್ಯ ಅವರ ಚಿಕಿತ್ಸೆಗಾಗಿ ಜನರಿಂದ ಸಹಾಯ ಪಡೆಯಲು ಸೋಷಿಯಲ್‌ ಮೀಡಿಯಾವನ್ನು ಬಳಸಿಕೊಂಡಿದ್ದಾರೆ. ಆ ಮೂಲಕ ಬರೋಬ್ಬರೀ 7 ಲಕ್ಷ ರೂ. ನೆರವು ಹರಿದು ಬಂದಿದೆ.

ಮಾರ್ಚ್ 2021ರಲ್ಲಿ ವಿವಾಹವಾದ ಸಂದೀಪ್ ಪ್ರತಾಪ್‌ಗಢ್ ಜಿಲ್ಲೆಯ ರಾಣಿಗಂಜ್ ಪ್ರದೇಶದಲ್ಲಿರುವ ಸರೈ ಶೇರ್ಖಾನ್ ಗ್ರಾಮದವರು. ಅವರು ಜೀವನೋಪಾಯಕ್ಕಾಗಿ ಗ್ರಾಮದಿಂದ ಸುಮಾರು 20 ಕಿಮೀ ದೂರದಲ್ಲಿರುವ ಪ್ರತಾಪ್‌ಗಢ್‌ನ ಕೊಹದೌರ್‌ನಲ್ಲಿ ಸಣ್ಣ ಸಾಮಾನ್ಯ  ಅಂಗಡಿಯನ್ನು ನಡೆಸುತ್ತಿದ್ದರು.

BFM Course: ಫೈನಾನ್ಸ್ ಮಾರ್ಕೆಟ್ಸ್ ಪದವಿ ಕಲಿತರೆ ಹತ್ತಾರು ಉದ್ಯೋಗ

ಮದುವೆಯ ನಂತರ ಸಂದೀಪ್ ಅವರು ಅನಾರೋಗ್ಯಕ್ಕೆ ಒಳಗಾದರು. ಪ್ರಯಾಗ್‌ರಾಜ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಬಳಿಕ ಅವರನ್ನು ಜೂನ್ 2021ರಲ್ಲಿ ಲಕ್ನೋದ ಸಂಜಯ್ ಗಾಂಧಿ ಪೋಸ್ಟ್ ಗ್ರಾಜುಯೇಟ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (SGPGIMS) ಗೆ ಕಳುಹಿಸಲಾಯಿತು. ಅವರಿಗೆ ತೀವ್ರವಾದ ರಕ್ತಹೀನತೆ ಇರುವುದು ಪತ್ತೆಯಾಯಿತು. ತುರ್ತು ಮೂಳೆ ಮಜ್ಜೆಯ ಕಸಿ ಮಾಡಲು ವೈದ್ಯರು ಸಲಹೆ ನೀಡಿದ್ರು. ಸಂದೀಪ್ ಅವರ ಹಿರಿಯ ವಿವಾಹಿತ ಸಹೋದರಿ ಪ್ರತಿಮಾ ಅವರ ಅಸ್ಥಿಮಜ್ಜೆ ಹೊಂದಿಕೆಯಾಯಿತು. ನವೆಂಬರ್ 2021ರಲ್ಲಿ ಎಸ್‌ಜಿಪಿಜಿಐಎಂಎಸ್‌ನಲ್ಲಿ ಯಶಸ್ವಿಯಾಗಿ ಅಸ್ಥಿಮಜ್ಜೆಯ ಕಸಿ ಮಾಡಿಸಿಕೊಂಡರು. ಆನಂತರ ಸಂದೀಪ್‌ನ ಚಿಕಿತ್ಸೆಗಾಗಿ ಹಣವನ್ನು ಸಂಗ್ರಹಿಸಲು ಅವರ ಕುಟುಂಬ ಬಹಳ ಹೋರಾಟ ನಡೆಸಿತ್ತು. 

ಕಸಿ ಮಾಡಿದ ಅಸ್ಥಿಮಜ್ಜೆಗೆ ದೇಹದ ಪ್ರತಿರೋಧವನ್ನು ಕಡಿಮೆ ಮಾಡಲು ನೀಡಲಾದ ಔಷಧಗಳು, ಸಂಕೀರ್ಣತೆಯನ್ನು ಸೃಷ್ಟಿಸಿದವು.  ಕೆಂಪು ರಕ್ತ ಕಣಗಳ ನಾಶ, ಕಡಿಮೆ ಪ್ಲೇಟ್‌ಲೆಟ್‌ಗಳು ಮತ್ತು ಸೂಕ್ಷ್ಮ ರಕ್ತ ಹೆಪ್ಪುಗಟ್ಟುವಿಕೆಯಿಂದ ಅಂಗ ಹಾನಿಯಾಗಿ ಥ್ರಂಬೋಟಿಕ್ ಮೈಕ್ರೋಆಂಜಿಯೋಪತಿ (TMA) ಬೆಳವಣಿಗೆಗೆ ಕಾರಣವಾಯಿತು. ಇದರಿಂದಾಗಿ ಸಂದೀಪ್‌ಗೆ ಪ್ರತಿದಿನ ಪ್ಲಾಸ್ಮಾ ಥೆರಪಿ ಅಗತ್ಯವಿತ್ತು. ನೆದರ್‌ಲ್ಯಾಂಡ್‌ನಿಂದ ಔಷಧ ಆಮದು ಮಾಡಿಕೊಳ್ಳಬೇಕಾಗಿತ್ತು ಎಂದು ಹಿಂದೂಸ್ತಾನ ಟೈಮ್ಸ್ ವರದಿ ಮಾಡಿದೆ. 

DRDO APPRENTICE RECRUITMENT 2022: ಆರ್‌ಸಿಐ ಕೇಂದ್ರದಲ್ಲಿ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ DRDO

ಸಂದೀಪ್  ಕುಟುಂಬವು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ ಪರಿಣಾಮವಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಎರಡು ಕಂತುಗಳಲ್ಲಿ ₹10 ಲಕ್ಷ ಮತ್ತು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಯಿಂದ ₹ 3 ಲಕ್ಷ ಹಣ ದೊರೆಯಿತು. ಸಂದೀಪ್ ಅವರ ತಂದೆ ಹಾಗೂ ವರ್ತಿಕಾ ಅವರ ಚಿಕ್ಕಪ್ಪ ಅಂಗವಿಕಲರಾಗಿದ್ದಾರೆ. ಸಂದೀಪ್ ಅನಾರೋಗ್ಯ ಸ್ಥಿತಿಯಿಂದ ಇಡೀ ಕುಟುಂಬವೇ ಚಿಂತಾಕ್ರಾಂತಾಗಿತ್ತು. ಚಿಕಿತ್ಸೆಗೆ ಹಣ ಹೊಂದಿಸಲು ಪರದಾಡುತ್ತಿತ್ತು.  ಈಗಾಗಲೇ ಅವರ ಚಿಕಿತ್ಸೆಗಾಗಿ ಸುಮಾರು ₹ 17 ಲಕ್ಷವನ್ನು ಖರ್ಚು ಮಾಡಿದ್ದರಿಂದ ನಿಸ್ಸಹಾಯಕರಾಗಿದ್ದರು. ಹೀಗಾಗಿ ವರ್ತಿಕಾ, ಟ್ವಿಟರ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಇತ್ಯಾದಿವ ಸಾಮಾಜಿಕ ಮಾಧ್ಯಮಗಳಲ್ಲಿ ಆರ್ಥಿಕ ಸಹಾಯಕ್ಕಾಗಿ ಮನವಿ ಮಾಡಿದರು. ವರ್ತಿಕಾ ಅವರ ಮನವಿಗೆ ಸ್ಪಂದಿಸಿದ ಜನರು 10 ರೂ.ನಿಂದ 10,000 ದವರೆಗರ ದೇಣಿಗೆ ನೀಡದ್ದು, ಒಟ್ಟು 7 ಲಕ್ಷ ರೂ.ಕ್ಕೂ ಹೆಚ್ಚು ಸಂಗ್ರಹವಾಗಿದೆ. ಆದರೂ ಇನ್ನೂ 10 ಲಕ್ಷ ರೂ. ಬೇಕಾಗಿದೆ. 

ಒಟ್ಟಿನಲ್ಲಿ ವಕೀಲ ವಿದ್ಯಾರ್ಥಿಯಾಗಿರುವ ವರ್ತಿಕಾರ ಈ ಐಡಿಯಾ ಒಳ್ಳೆಯ ಪ್ರತಿಫಲ ಕೊಟ್ಟಿದೆ. ಸೋಷಿಯಲ್ ಮೀಡಿಯಾ ಮೂಲಕ ಕ್ರೌಡ್ ಫಂಡ್ ಕಲೆಹಾಕಿದ್ದು ಶ್ಲಾಘನೀಯ. ಆದಷ್ಟು ಬೇಗ ಉಳಿದ ಹಣವೂ ಹೊಂದಿಕೆಯಾಗಿ ಸಂದೀಪ್ ಮೊದಲಿನಂತಾಗಬೇಕು ಎಂದ ವರ್ತಿಕಾ ಆಸೆ ಈಡೇರಲಿ ಅನ್ನೋದೇ ನೇಟಿಜನ್‌ಗಳ ಆಶಯವಾಗಿದೆ. 

click me!