ಸಿಇಟಿ ಪರೀಕ್ಷೆ ಮುಗಿದ ಮೇಲೆ ಪಿಯು ಹೊಸ ಪಠ್ಯದ ಮಾಹಿತಿ ಕೇಳಿದ ಕೆಇಎ!

By Kannadaprabha News  |  First Published Apr 21, 2024, 8:45 AM IST

ಸಿಇಟಿಗೆ ಪ್ರಶ್ನೆ ಪತ್ರಿಕೆ ತಯಾರಿಗೂ ಮೊದಲೇ ಪಿಯು ಪಠ್ಯಕ್ರಮದ ಬಗ್ಗೆ ಸ್ಪಷ್ಟ ಮಾಹಿತಿ ಪಡೆಯಬೇಕಾದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿಇಟಿಯಲ್ಲಿ ಸಾಕಷ್ಟು ಪಠ್ಯೇತರ ಪ್ರಶ್ನೆಗಳನ್ನು ಕೇಳಿ ತೀವ್ರ ಆಕ್ರೋಶ, ಅಸಮಾಧಾನಕ್ಕೆ ಗುರಿಯಾದ ಬಳಿಕ ಪಠ್ಯಕ್ರಮದ ಬಗ್ಗೆ ಪಿಯು ಇಲಾಖೆಗೆ ಮಾಹಿತಿ ಕೋರಿರುವುದು ಬೆಳಕಿಗೆ ಬಂದಿದೆ. 
 


ಬೆಂಗಳೂರು (ಏ.21): ಸಿಇಟಿಗೆ ಪ್ರಶ್ನೆ ಪತ್ರಿಕೆ ತಯಾರಿಗೂ ಮೊದಲೇ ಪಿಯು ಪಠ್ಯಕ್ರಮದ ಬಗ್ಗೆ ಸ್ಪಷ್ಟ ಮಾಹಿತಿ ಪಡೆಯಬೇಕಾದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿಇಟಿಯಲ್ಲಿ ಸಾಕಷ್ಟು ಪಠ್ಯೇತರ ಪ್ರಶ್ನೆಗಳನ್ನು ಕೇಳಿ ತೀವ್ರ ಆಕ್ರೋಶ, ಅಸಮಾಧಾನಕ್ಕೆ ಗುರಿಯಾದ ಬಳಿಕ ಪಠ್ಯಕ್ರಮದ ಬಗ್ಗೆ ಪಿಯು ಇಲಾಖೆಗೆ ಮಾಹಿತಿ ಕೋರಿರುವುದು ಬೆಳಕಿಗೆ ಬಂದಿದೆ. ಪ್ರಾಧಿಕಾರದ ಕಾರ್ಯನಿರ್ವಹಣಾ ನಿರ್ದೇಶಕಿ ರಮ್ಯಾ ಅವರು ಸಿಇಟಿಯ ಕೊನೆಯ ದಿನವಾದ ಏ.19ರಂದು ತಮ್ಮ ಕಚೇರಿಯ ಪಕ್ಕದಲ್ಲೇ ಇರುವ ಪಿಯು ಇಲಾಖೆಗೆ ಪತ್ರ ಬರೆದು 2023-24ನೇ ಸಾಲಿನ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿಜ್ಞಾನ ವಿಷಯಗಳ ಪಠ್ಯಕ್ರಮ ಪರಿಷ್ಕರಿಸಿದ್ದಲ್ಲಿ, ಪರಿಷ್ಕರಿಸಿದ ಪಠ್ಯಕ್ರಮವನ್ನು ಮತ್ತು ಸಂಬಂಧಿಸಿದ ಆದೇಶಗಳನ್ನು ನೀಡುವಂತೆ ಕೋರಿದ್ದಾರೆ. 

ಪ್ರಾಧಿಕಾರದ ಈ ನಡೆ ಈ ಬಾರಿಯ ಸಿಇಟಿಗೆ ಪಿಯುಸಿಯ ಪರಿಷ್ಕೃತ ಪಠ್ಯಕ್ರಮದ ಮಾಹಿತಿ ಪಡೆಯದೆ ಹಳೆಯ ಪಠ್ಯಕ್ರಮ ಆಧರಿಸಿ ಪ್ರಶ್ನೆ ಪತ್ರಿಕೆ ತಯಾರಿಸಿರುವ ಗುಮಾನಿ ಹುಟ್ಟಿಸಿದೆ. ಅಲ್ಲದೆ, ಈ ಕಾರಣಕ್ಕಾಗಿಯೇ ನಾಲ್ಕೂ ವಿಷಯಗಳಿಂದ 50ಕ್ಕೂ ಹೆಚ್ಚು ಪಠ್ಯೇತರ ಪ್ರಶ್ನೆಗಳನ್ನು ಕೇಳಿರುವಂತಹ ಲೋಪಕ್ಕೆ ಕಾರಣವಾಗಿರಬಹುದು ಎಂಬ ಅನುಮಾನಗಳಿಗೆ ಎಡೆಮಾಡಿದೆ. ಇನ್ನು, ಪರೀಕ್ಷಾ ಪ್ರಾಧಿಕಾರದ ಪತ್ರಕ್ಕೆ ಅದೇ ದಿನವೇ (ಏ.19) ಪಿಯು ಇಲಾಖೆ ನಿರ್ದೇಶಕರಾದ ಸಿಂಧು ರೂಪೇಶ್‌ ಅವರು ಸ್ಪಷ್ಟ ಪ್ರತಿಕ್ರಿಯೆ ನೀಡಿ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ 2023-24ನೇ ಸಾಲಿನಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಪಠ್ಯಕ್ರಮ ಪರಿಷ್ಕರಣೆಯಾಗಿರುವ ಬಗ್ಗೆ ಕಳೆದ ಜೂನ್‌ನಲ್ಲೇ ಪ್ರಾಧಿಕಾರಕ್ಕೆ ಮಾಹಿತಿ ನೀಡಿರುವ ಪತ್ರ ವ್ಯವಹಾರವನ್ನು ಉಲ್ಲೇಖಿಸಿದ್ದಾರೆ.

Tap to resize

Latest Videos

undefined

ರಾಜ್ಯದಲ್ಲಿ ತಾಲಿಬಾನ್‌ ಆಡಳಿತ ಇದೆಯೇ?: ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಜಯೇಂದ್ರ ಕಿಡಿ

ಕಣ್ಮುಚ್ಚಿ ಕುಳಿತ ಸರ್ಕಾರ: ಸಿಇಟಿ ಪರೀಕ್ಷೆಯಲ್ಲಿ 50ಕ್ಕೂ ಹೆಚ್ಚು ಪಠ್ಯೇತರ ಪ್ರಶ್ನೆಗಳನ್ನು ಕೇಳಿರುವುದರಿಂದ ವಿದ್ಯಾರ್ಥಿಗಳು ಫಲಿತಾಂಶದ ಬಗ್ಗೆ ತೀವ್ರ ಗೊಂದಲ, ಆತಂಕಗೊಂಡಿದ್ದರೂ ಸರ್ಕಾರ ಮಾತ್ರ ಈ ವಿಚಾರದಲ್ಲಿ ಇದುವರೆಗೂ ಮಧ್ಯಪ್ರವೇಶ ಮಾಡಿಲ್ಲ. ವಿದ್ಯಾರ್ಥಿ ಸಂಘಟನೆಗಳು, ಪೋಷಕ ಸಂಘಟನೆಗಳು, ಪಿಯು ಉಪನ್ಯಾಸಕರು, ಕಾಲೇಜುಗಳ ಆಡಳಿತ ಮಂಡಳಿಗಳು, ಕೆಲ ಜನಪ್ರತಿನಿಧಿಗಳು ಕೂಡ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಪರೀಕ್ಷೆ ರದ್ದುಪಡಿಸುವ ಎಂದು ಕೆಲವರು, ಇನ್ನು ಕೆಲವರು ಗ್ರೇಸ್‌ ಅಂಕ ನೀಡುವ ಬಗ್ಗೆ ಕ್ರಮ ವಹಿಸಬೇಕೆಂದು ಆಗ್ರಹ ವ್ಯಕ್ತಪಡಿಸಿದ್ದಾರೆ. 

ಆದರೆ, ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂಧಿಸಬೇಕಾದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಅವರು ಕೂಡ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡದೆ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಮುಳುಗಿದ್ದಾರೆ. ಆದರೆ, ಇಲಾಖಾ ಮೂಲಗಳ ಪ್ರಕಾರ, ಸಚಿವರು ಪ್ರಾಧಿಕಾರದ ಅಧಿಕಾರಿಗಳಿಂದ ಆಗಿರುವ ಲೋಪಕ್ಕೆ ಕಾರಣ ಕೇಳಿದ್ದಾರೆ. ಇದಕ್ಕೆ ಅಧಿಕಾರಿಗಳು ಪಿಯು ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಪಠ್ಯಕ್ರಮ ಆಧರಿಸಿ ಸಿಇಟಿ ಪ್ರಶ್ನೆ ಪತ್ರಿಕೆ ನೀಡಲಾಗಿದೆ. ಆದರೆ, ಅವರು ಪರಿಷ್ಕೃತ ಪಠ್ಯ ಪ್ರಕಟಿಸಿಲ್ಲ ಎಂದು ಆರೋಪಿಸಿದ್ದಾರೆ ಎನ್ನಲಾಗಿದೆ. ಆದರೆ, ಪಿಯು ಇಲಾಖೆಯ ಅಧಿಕಾರಿಗಳು ಪರಿಷ್ಕೃತ ಪಠ್ಯಕ್ರಮದ ಬಗ್ಗೆ 2023ರ ಜೂನ್‌ಲ್ಲೇ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವುದಾಗಿ ತಿಳಿಸಿದ್ದಾರೆ.

ಪತ್ರ ವಿವರ ಹೀಗಿದೆ: ಸಿಂಧು ರೂಪೇಶ್ ಅವರು, 2023ರ ಜೂನ್‌ 13ರಂದು ಪರೀಕ್ಷಾ ಪ್ರಾಧಿಕಾರಕ್ಕೆ ಪತ್ರ ಬರೆದು ‘2023-24ನೇ ಸಾಲಿನಲ್ಲಿ ಪಿಯು ಇಲಾಖೆಯು ಎನ್‌ಸಿಇಆರ್‌ಟಿಯ ಪರಿಷ್ಕೃತ ಪಠ್ಯ ಅಳವಡಿಸಿಕೊಂಡಿದೆ. ಇದು ಕಳೆದ ಸಾಲಿಗಿಂತ ಸ್ವಲ್ಪ ಪ್ರಮಾಣದಲ್ಲಿ ಕಡಿತವಾಗಿದೆ. ಹಾಗಾಗಿ 2023-24ನೇ ಸಾಲಿನ ಅಂತ್ಯದಲ್ಲಿ ನಡೆಸಲಾಗುವ ಸಿಇಟಿ ಪರೀಕ್ಷೆಯನ್ನು ಪರಿಷ್ಕೃತ ಪಠ್ಯವಸ್ತುವಿಗೆ ಸಂಬಂಧಿಸಿದಂತೆ ನಡೆಸಲಾಗುತ್ತದೆಯೋ ಅಥವಾ ಹಿಂದಿನ ಪೂರ್ಣ ಪ್ರಮಾಣದ ಪಠ್ಯವಸ್ತುವನ್ನು ಆಧರಿಸಿ ನಡೆಸಲಾಗುತ್ತೆಯೋ ಎಂಬ ಬಗ್ಗೆ ಹಲವು ಉಪನ್ಯಾಸಕರು ಸ್ಪಷ್ಟೀಕರಣ ಕೋರಿದ್ದಾರೆ. ಈ ಬಗ್ಗೆ ಪ್ರಾಧಿಕಾರದ ನಿರ್ಧರವನ್ನು ತುರ್ತಾಗಿ ತಿಳಿಸಿದರೆ ಎಲ್ಲ ವಿದ್ಯಾರ್ಥಿಗಳು, ಉಪನ್ಯಾಸಕರಿಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ. 

ಕಾಂಗ್ರೆಸ್‌ ಕೊಟ್ಟ ಖಾಲಿ ಚೊಂಬನ್ನು ಮೋದಿ ಅಕ್ಷಯಪಾತ್ರೆ ಮಾಡಿದರು: ಎಚ್‌.ಡಿ.ದೇವೇಗೌಡ

ಇದಕ್ಕೆ, ಅದೇ ಜೂನ್‌ 29ರಂದು ಪ್ರಾಧಿಕಾರದ ಕಾರ್ಯನಿರ್ವಹಣಾ ಅಧಿಕಾರಿಗಳು ಪತ್ರ ಬರೆದು ನಿಯಮಾನುಸಾರ ಪ್ರಸಕ್ತ ಸಾಲಿನ ಪ್ರಥಮ ಮತ್ತು ದ್ವಿತೀಯ ಪಿಯು ಪಠ್ಯಕ್ರಮ ವಸ್ತುವನ್ನು ಸಿಇಟಿಗೆ ಪರಿಗಣಿಸುವುದಾಗಿ ಉತ್ತರಿಸಿದ್ದಾರೆ. ಬಳಿಕ ಪ್ರಾಧಿಕಾರ ಈ ಮಾಹಿತಿಯನ್ನು ಪಿಯು ಇಲಾಖೆಯು ಸುತ್ತೋಲೆ ಹೊರಡಿಸಿ, ಎಲ್ಲಾ ಪಿಯು ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಿಗೆ ತಿಳಿಸಿದೆ. ಸಿಇಟಿಗೆ ಪ್ರಸಕ್ತ ಸಾಲಿನ ಪಠ್ಯವನ್ನೇ ಪರಿಗಣಿಸುವುದಾಗಿ ಪ್ರಾಧಿಕಾರ ಮೊದಲೇ ಹೇಳಿದ್ದರೂ ಪಠ್ಯೇತರ ಪ್ರಶ್ನೆಗಳನ್ನು ಸಿಇಟಿಯಲ್ಲಿ ಕೇಳಿದ್ದಾದರೂ ಹೇಗೆ? ಪರೀಕ್ಷೆ ಮುಗಿದ ಮೇಲೆ ಪಿಯು ಪಠ್ಯಕ್ರಮ ಪರಿಷ್ಕರಣೆಯಾಗಿದ್ದರೆ ಮಾಹಿತಿ ಕೊಡಿ ಎಂದು ಪ್ರಾಧಿಕಾರದ ಅಧಿಕಾರಿಗಳು ಪಿಯು ಇಲಾಖೆಗೆ ಮತ್ತೊಂದು ಪತ್ರ ಬರೆದಿದ್ದಾದರೂ ಏಕೆ ಎಂಬುದು ಯಕ್ಷಪ್ರಶ್ನೆಯಾಗಿದೆ.

click me!