8 ರಾಜ್ಯಗಳಲ್ಲಿ ಶಾಲೆ ಶುರು, 6 ತಿಂಗಳ ಬಳಿಕ ವಿದ್ಯಾರ್ಥಿಗಳು ತರಗತಿಗೆ!

By Kannadaprabha News  |  First Published Sep 22, 2020, 7:25 AM IST

8 ರಾಜ್ಯಗಳಲ್ಲಿ ಶಾಲೆ ಶುರು| ಕೊರೋನಾ ನಡುವೆಯೂ 6 ತಿಂಗಳ ಬಳಿಕ ವಿದ್ಯಾರ್ಥಿಗಳು ತರಗತಿಗೆ| ಜಮ್ಮು, ಅಸ್ಸಾಂ, ಪಂಜಾಬ್‌, ಹರ್ಯಾಣ, ಆಂಧ್ರ ಸೇರಿ 8 ಕಡೆ ಆರಂಭ| ಸಾಮಾಜಿಕ ಅಂತರ ಕಾಪಾಡಿಕೊಂಡು ತರಗತಿಗಳಲ್ಲಿ ಶಿಕ್ಷಕರಿಂದ ಬೋಧನೆ| ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಸೆಪ್ಟೆಂಬರ್‌ ಅಂತ್ಯವರೆಗೂ ಶಾಲೆ ಇಲ್ಲ


ನವದೆಹಲಿ(ಸೆ.22): ಕೊರೋನಾ ಆತಂಕದ ಮಧ್ಯೆಯೂ ದೇಶದ 8 ರಾಜ್ಯಗಳಲ್ಲಿ ಶಾಲಾ- ಕಾಲೇಜುಗಳು ಸೋಮವಾರದಿಂದ ಪುನಾರಂಭಗೊಂಡಿವೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯ ಅನ್ವಯ 9ರಿಂದ 12ನೇ ತರಗತಿಯ ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿ ಪಾಠ ಕಲಿಯುವುದಕ್ಕೆ ಈ ರಾಜ್ಯಗಳು ಅವಕಾಶ ಕಲ್ಪಿಸಿವೆ.

ಕೇಂದ್ರದ ಮಾರ್ಗಸೂಚಿಯ ಅನುಸಾರ ಮಧ್ಯಪ್ರದೇಶ, ಜಮ್ಮು-ಕಾಶ್ಮೀರ, ಅಸ್ಸಾಂ, ಚಂಡೀಗಢ, ಹಿಮಾಚಲ ಪ್ರದೇಶ, ಆಂಧ್ರ ಪ್ರದೇಶ, ಪಂಜಾಬ್‌ ಹಾಗೂ ಹರ್ಯಾಣದಲ್ಲಿ ವಿದ್ಯಾರ್ಥಿಗಳು ಆರು ತಿಂಗಳ ಬಳಿಕ ಮತ್ತೆ ಶಾಲೆಯತ್ತ ಮುಖ ಮಾಡಿದ್ದಾರೆ.

Tap to resize

Latest Videos

ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಶಾಲೆಗಳು ಸೋಮವಾರದಿಂದ ಪುನಾರಂಭಗೊಂಡಿದ್ದು, 9ರಿಂದ 12ನೇ ತರಗತಿಯ ವಿದ್ಯಾರ್ಥಿಗಳು ಸ್ವಯಂಪ್ರೇರಿತವಾಗಿ ಶಾಲೆಗೆ ಬರುವುದಕ್ಕೆ ಅವಕಾಶ ನೀಡಲಾಗಿದೆ. ಆಂಧ್ರ ಪ್ರದೇಶದಲ್ಲಿ 9 ಮತ್ತು 10ನೇ ತರಗತಿಗಳು ಆರಂಭವಾಗಿದ್ದು, ಸಾಮಾಜಿಕ ಅಂತರದೊಂದಿಗೆ ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತಿದೆ. ಹಿಮಾಚಲ ಪ್ರದೇಶದಲ್ಲಿ ಸ್ವಯಂ ಪ್ರೇರಿತವಾಗಿ ವಿದ್ಯಾರ್ಥಿಗಳು ಶಾಲೆಗಳಿಗೆ ಆಗಮಿಸಿದ್ದಾರೆ. ಇದೇ ವೇಳೆ ಕೇಂದ್ರಾಡಳಿತ ಪ್ರದೇಶ ಜಮ್ಮು​- ಕಾಶ್ಮೀರದಲ್ಲೂ ಶಾಲೆಗಳು ಆರಂಭಗೊಂಡಿವೆ. ಶ್ರೀನಗರದಲ್ಲಿ ಬಹುದಿನಗಳ ಬಳಿಕ ಶಾಲೆಗಳು ಆರಂಭ ಆಗಿರುವುದಕ್ಕೆ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಚಂಡೀಗಢದಲ್ಲೂ ಶಾಲೆಗಳು ಪುನಾರಂಭಗೊಂಡಿದ್ದರೂ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಶಾಲೆಯತ್ತ ಮುಖಮಾಡಿದ್ದಾರೆ. ಇದೇ ವೇಳೆ ಪಂಜಾಬ್‌ನಲ್ಲಿ ಕೇವಲ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ವಿದ್ಯಾರ್ಥಿಗಳು ಆಗಮಿಸುವುದಕ್ಕೆ ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌ ಅವಕಾಶ ನೀಡಿದ್ದಾರೆ.

ಕರ್ನಾಟಕ ಸೇರಿ ಹಲವೆಡೆ ಆರಂಭ ಇಲ್ಲ:

ಕರ್ನಾಟಕದಲ್ಲಿ ಈ ತಿಂಗಳ ಅಂತ್ಯದವರೆಗೂ ವಿದ್ಯಾರ್ಥಿಗಳು ಶಾಲೆಗೆ ಬರುವುದಕ್ಕೆ ಅವಕಾಶ ನೀಡಲಾಗಿಲ್ಲ. ದೆಹಲಿ, ಗುಜರಾತ್‌, ಕೇರಳ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳು ಶಾಲೆ ಆರಂಭದ ಕುರಿತು ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಗೋವಾ, ನಾಗಾಲ್ಯಾಂಡ್‌, ಒಡಿಶಾ, ತಮಿಳುನಾಡು ರಾಜ್ಯಗಳು ಶಾಲೆ ಆರಂಭಕ್ಕೆ ಅನುಮತಿ ನೀಡಿಲ್ಲ. ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇರಳದಲ್ಲಿ ಈ ತಿಂಗಳ ಅಂತ್ಯದ ವರೆಗೂ ಶಾಲೆ- ಕಾಲೇಜುಗಳನ್ನು ಬಂದ್‌ ಮಾಡುವ ನಿರ್ಧಾರಕ್ಕೆ ಬರಲಾಗಿದೆ.

ಅಲ್ಲಿನ ಸ್ಥಿತಿ ಗಮನಿಸಿ ರಾಜ್ಯದಲ್ಲಿ ಶಾಲೆ ಆರಂಭಿಸಿ

ಕೊರೋನಾ ನಡುವೆಯೇ ಉತ್ತರ ಭಾರತದ ರಾಜ್ಯಗಳಲ್ಲಿ ಶಾಲೆ ಆರಂಭವಾಗಿದ್ದು ಅಲ್ಲಿ ಮುಂದಿನ ದಿನಗಳಲ್ಲಿ ಮಕ್ಕಳ ಮೇಲೆ ಹೇಗೆ ಸೋಂಕು ಪರಿಣಾಮ ಹೇಗೆ ಬೀರುತ್ತದೆ ಎಂಬುದನ್ನು ಗಮನಿಸಿ ನಂತರ ಕರ್ನಾಟಕದಲ್ಲೂ ಶಾಲೆ ಆರಂಭ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಬೇಕೆಂದು ಎಂದು ಶಿಕ್ಷಣ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಎಲ್ಲೆಲ್ಲಿ ಆರಂಭ?

ಮಧ್ಯಪ್ರದೇಶ, ಜಮ್ಮು-ಕಾಶ್ಮೀರ, ಅಸ್ಸಾಂ, ಚಂಡೀಗಢ, ಹಿಮಾಚಲ ಪ್ರದೇಶ, ಆಂಧ್ರ ಪ್ರದೇಶ, ಪಂಜಾಬ್‌, ಹರ್ಯಾಣ.

click me!