ಕೋವಿಡ್‌ನಿಂದ ಅನಾಥರಾದ 20 ಮಕ್ಕಳ ದತ್ತು ಪಡೆದ ನಟ ಸಲೀಂ ದಿವಾನ್

By Suvarna NewsFirst Published Jun 19, 2021, 7:31 PM IST
Highlights

ಕೋವಿಡ್ ಕಷ್ಟ ಕಾಲದಲ್ಲಿ ಮಾನವೀಯ ಕಾರ್ಯದ ಮೂಲಕ ನಟ ನೋನು ಸೂದ್ ಹೆಚ್ಚು ಗಮನ ಸೆಳೆದಿದ್ದಾರೆ. ಇದೀಗ ಅದೇ ಹಾದಿಯನ್ನು ಮತ್ತೊಬ್ಬ ನಟ ತುಳಿಯುತ್ತಿದ್ದಾರೆ. ಸೂದ್ ಸ್ನೇಹಿತರೇ ಆಗಿರುವ ನಟ ಸಲೀಂ ದಿವಾನ್, ಕೋವಿಡ್ ಅನಾಥರಾಗಿರುವ 20 ಮಕ್ಕಳನ್ನು ದತ್ತು ಪಡೆದು, ಅವರ ಶೈಕ್ಷಣಿಕ ವೆಚ್ಚವನ್ನು ಭರಿಸಲಿದ್ದಾರೆ.

ಸಾಂಕ್ರಾಮಿಕ ರೋಗ ಕೊರೊನಾ ಅದೆಷ್ಟೋ ಮಕ್ಕಳನ್ನ ತಬ್ಬಲಿಗಳನ್ನಾಗಿ ಮಾಡಿದೆ. ೨ನೇ ಅಲೆಯ ಆರ್ಭಟಕ್ಕೆ ಸಿಕ್ಕಿ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡು ಅನಾಥರಾಗಿದ್ದಾರೆ. ಇಂಥ ಅನಾಥ ಮಕ್ಕಳಿಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ನೆರವಿನ ಹಸ್ತ ಚಾಚಿವೆ. ಉಚಿತ ಶಿಕ್ಷಣ, ಪಿಂಚಣಿಯಂತಹ ಹಲವು ಸೌಲಭ್ಯಗಳನ್ನ ಒದಗಿಸಿವೆ.

ಆದ್ರೆ ಸರ್ಕಾರವೊಂದೇ ಎಷ್ಟು ಜನರಿಗೆ ಸಹಾಯ ಮಾಡಲು ಸಾಧ್ಯ ಹೇಳಿ?. ಸೆಲೆಬ್ರಿಟಿಗಳು, ಉದ್ಯಮಿಗಳು, ಸಹೃದಯಿ ಶ್ರೀಮಂತರು ಸ್ವಲ್ಪ ಕರುಣೆ ತೋರಿದ್ರೆ ಅನಾಥರಾಗಿರೋ ಮಕ್ಕಳಿಗೆ ನಿಜಕ್ಕೂ ಒಂದು ಸುಂದರ ಜೀವನ ಸಿಕ್ಕಂತಾಗುತ್ತದೆ. ಮಹಾಮಾರಿಯಿಂದಾಗಿ ತಬ್ಬಲಿಗಳಾಗಿರೋ ಮಕ್ಕಳನ್ನ ದತ್ತು ತೆಗೆದುಕೊಳ್ಳುವವರಿಗೆ ಸರ್ಕಾರಗಳೂ ಪ್ರೋತ್ಸಾಹ ನೀಡುತ್ತಿವೆ. 

ಕೊರೋನಾದಿಂದ ಅನಾಥರಾದ ಮಕ್ಕಳ ದತ್ತು: ದಿಂಗಾಲೇಶ್ವರ ಶ್ರೀ

ಮೊದಲ ಕೊರೊನಾ ಅಲೆಯ ಸಂಕಷ್ಟ ಕಾಲದಿಂದಲೂ ಬಾಲಿವುಡ್ ನಟ ಸೋನು ಸೂದ್, ನೊಂದವರು, ಬಡವರಿಗೆ ಸಹಾಯ ಹಸ್ತ ಚಾಚುತ್ತಲೇ ಬಂದಿದ್ದಾರೆ. ೨ನೇ ಅಲೆಯ ಸಂದರ್ಭದಲ್ಲೂ ಸೋನು ಸೂದ್, ಬಡವರ ಸಂಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ. ತಬ್ಬಲಿಗಳಾಗಿರೋ ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ಸೂಕ್ತ ಸೌಲಭ್ಯ ಒದಗಿಸುವಂತೆ ಮೊದಲು ಸರ್ಕಾರಗಳ ಕಣ್ತೆರೆಸಿದ್ದೇ ಸೋನು ಸೂದ್. 

ಇನ್ಸ್‌ಟಾಗ್ರಾಮ್‌ನಲ್ಲಿ ವಿಡಿಯೋಯೊಂದನ್ನ ಶೇರ್ ಮಾಡೋ ಮೂಲಕ ಸೋನು ಸೂದ್, ಅನಾಥರಾಗಿರೋ ಮಕ್ಕಳ ಭವಿಷ್ಯ ರೂಪಿಸುವಂತೆ ಸರ್ಕಾರಗಳಿಗೆ ಮನವಿ ಮಾಡಿಕೊಂಡಿದ್ರು. ಅದಾದ ನಂತ್ರ, ಒಂದೊಂದಾಗೇ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರ ಸರ್ಕಾರ ಕೋವಿಡ್‌ನಿಂದ ತಬ್ಬಲಿಗಳಾದ ಮಕ್ಕಳಿಗೆ ಉಚಿತ ಶಿಕ್ಷಣ ಘೋಷಿಸಿದ್ವು. 

ಇದೀಗ ಸೋನು ಸೂದ್‌ರ ಸ್ನೇಹಿತ ನಟ ಸಲೀಂ ದಿವಾನ್ ಸಹ ಅವರ ಹಾದಿಯಲ್ಲೇ ಸಾಗುತ್ತಿದ್ದಾರೆ. ಕೋವಿಡ್‌ನಿಂದ ಹೆತ್ತವರನ್ನ ಕಳೆದುಕೊಂಡು ಅನಾಥರಾಗಿರುವ 20 ಮಕ್ಕಳನ್ನ ದತ್ತು ಪಡೆದುಕೊಂಡಿದ್ದಾರೆ. ೨೦ ಮಕ್ಕಳ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ಅವರೇ ವಹಿಸಿಕೊಂಡಿದ್ದಾರೆ. ಸಾಂಕ್ರಾಮಿಕ ಬಿಕ್ಕಟ್ಟಿನ ಮಧ್ಯೆ ಅಗತ್ಯವಿರುವವರಿಗೆ ಸಹಾಯ ಮಾಡುವ ಮೂಲಕ ಸಮಾಜ ತಮಗೆ ಕೊಟ್ಟಿದ್ದನ್ನ ಮರಳಿ ನೀಡಲು ಪ್ರಯತ್ನಿಸುತ್ತಿದ್ದೇನೆ ಅಂತಾರೆ ಸಲೀಂ ದಿವಾನ್.

ಕೊರೋನಾ ಕಾಟ: 5-10 ಕ್ಲಾಸ್‌ ಮಕ್ಕಳಿಗೆ ಚಂದನ, FMನಲ್ಲಿ ಪಾಠ

ಈ ಮಕ್ಕಳು ನನ್ನ ಕುಟುಂಬ. ಅವರ ಶಿಕ್ಷಣ ಮತ್ತು ಯೋಗಕ್ಷೇಮವನ್ನು ನಾನು ನೋಡಿಕೊಳ್ಳುತ್ತೇನೆ. ಅವರು ಸಹ ಮುಂದೆ ಹೋಗುತ್ತಾರೆ ಎಂದು ನಾನು ಭಾವಿಸುತ್ತೇನೆ. ನಾನು ಮನುಷ್ಯನಾಗಿ ನನ್ನ ಕೆಲಸವನ್ನು ಮಾಡುತ್ತಿದ್ದೇನೆ. ನಿಮ್ಮ ಬಳಿ ಅಗತ್ಯಕ್ಕಿಂತ ಹೆಚ್ಚಿನ ಹಣ ಇದ್ದರೆ, ನೀವು ಇತರರಿಗೆ ಸಹಾಯ ಮಾಡಿ ಅಂತ ನಟ ಸಲೀಂ ಕೋರಿದ್ದಾರೆ. 

ಪ್ರತಿಯೊಂದು ರೀತಿಯ ಸಹಾಯವೂ ಬಹಳ ಮುಖ್ಯವಾದುದು. ಯಾವಾಗಲೂ ಹಣದ ಬಗ್ಗೆ ಅಲ್ಲ, ಯಾರಿಗಾದರೂ ಬೆಂಬಲ ಬೇಕಾದಾಗ ಅವರೊಂದಿಗೆ ನಿಲ್ಲುವುದು ಸಹ ಸಹಾಯವೇ. ನಾವು ಭಾರತೀಯರು ಭಾವನಾತ್ಮಕ ಜೀವಿಗಳು. ಯಾರಿಗಾದರೂ ಸಹಾಯ ಮಾಡುವ ಮೊದಲು ನಾವು ಎರಡು ಬಾರಿ ಯೋಚಿಸಬಾರದು. ಯಾರನ್ನಾದರೂ ಸಂತೋಷಪಡಿಸುವುದು ಒಂದು ಸುಂದರವಾದ ಭಾವನೆ ಆಗಿರುತ್ತ ಅಂತಾರೆ ನಟ ಸಲೀಂ.

ನಟ ಸೋನು ಸೂದ್, ಸಲೀಂರ ಹಳೆಯ ಸ್ನೇಹಿತರಂತೆ. ಸಾಂಕ್ರಾಮಿಕ ಸಮಯದಲ್ಲಿ ನಿರ್ಗತಿಕರಿಗೆ ಸಹಾಯ ಮಾಡುತ್ತಿರೋ ಅವರನ್ನ ಇತ್ತೀಚೆಗೆ ಸಲೀಂ ಭೇಟಿಯಾಗಿದ್ದರಂತೆ. ಅಂದಹಾಗೇ ನಟ ಸಲೀಂ ದಿವಾನ್, ವೈದ್ಯರ ಕುಟುಂಬದಿಂದ ಬಂದವರು. ಅವರ ತಂದೆ ಹಾಗೂ ಸಹೋದರ ಸತ್ತರ್ ದಿವಾನ್ ವೈದ್ಯರಾಗಿದ್ದಾರೆ. ೨೦ ಮಕ್ಕಳನ್ನ ದತ್ತು ಪಡೆಯಲು ನಮ್ಮ ಕುಟುಂಬ ನನಗೆ ಸಂಪೂಣ ಸಹಕಾರ ನೀಡಿದೆ ಅಂತಾರೆ ಸಲೀಂ.

ಮುಗಿಯದ ಕೊರೋನಾ ಗೋಳು: ಮೊಬೈಲಲ್ಲೇ ಪಾಠಕ್ಕೆ ಶಿಕ್ಷಣ ಇಲಾಖೆ ಅಣಿ..!

ಒಟ್ನಲ್ಲಿ ನಟ ಸಲೀಂ ದಿವಾನ್ ೨೦ ಮಕ್ಕಳ ಪಾಲಿಗೆ ಆಪತ್ಬಾಂಧವರಾಗಿ ಬಂದಿದ್ದಾರೆ. ಅಪ್ಪ-ಅಮ್ಮನಿಂದ ದೂರವಾಗಿರುವ ಮಕ್ಕಳನ್ನ ಪೋಷಿಸಲು ಬಂಧುಗಳೇ ಹಿಂದೆ-ಮುಂದೆ ನೋಡುತ್ತಿರೋ ಈ ಸಂದರ್ಭದಲ್ಲಿ ಸಲೀಂ ಸಹೃದಯತೆ ನಿಜಕ್ಕೂ ಮೆಚ್ಚುವಂಥದ್ದು. ಸಲೀಂರ ಈ ನಿರ್ಧಾರ ಇತರರಿಗೆ ಮಾದರಿ ಅಂದ್ರೆ ತಪ್ಪಾಗಲಾರದು. 
 

click me!