ಎಂಜಿನಿಯರಿಂಗ್‌ ಕಾಲೇಜು ಪ್ರವೇಶ 1 ತಿಂಗಳು ವಿಳಂಬ: ನವೆಂಬರಲ್ಲಿ ಡಿಗ್ರಿ ಕಾಲೇಜು ಆರಂಭ!

By Kannadaprabha NewsFirst Published Oct 20, 2020, 7:50 AM IST
Highlights

ಎಂಜಿನಿಯರಿಂಗ್‌ ಕಾಲೇಜು ಪ್ರವೇಶ 1 ತಿಂಗಳು ವಿಳಂಬ| ನವೆಂಬರಲ್ಲಿ ಕಾಲೇಜು ಆರಂಭಕ್ಕೆ ಸಿದ್ಧತೆ| ಪದವಿ ತರಗತಿಗಳನ್ನು ಆರಂಭಿಸುವ ಬಗ್ಗೆ ಸಿಎಂ ಜೊತೆ ಚರ್ಚಿಸಿ ನಿರ್ಧಾರ| ಯುಜಿಸಿ ಮಾರ್ಗಸೂಚಿ ಪ್ರಕಾರ ತಯಾರಿ: ಡಿಸಿಎಂ ಅಶ್ವತ್ಥನಾರಾಯಣ

ಮೈಸೂರು(ಅ.20): ನವೆಂಬರ್‌ನಿಂದ ಪದವಿ ಕಾಲೇಜುಗಳನ್ನು ತೆರೆಯಲು ಸರ್ಕಾರ ತಯಾರಿ ಮಾಡಿಕೊಳ್ಳುತ್ತಿದೆ. ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೇರಿ ಸಂಬಂಧಿಸಿದವರ ಜತೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹೇಳಿದರು.

ಮೈಸೂರು ವಿವಿಯ 100ನೇ ಘಟಿಕೋತ್ಸವದಲ್ಲಿ ಪಾಲ್ಗೊಂಡ ನಂತರ ಸೋಮವಾರ ಮಾತನಾಡಿದ ಅವರು, ಈಗಾಗಲೇ ಎಲ್ಲ ಕಾಲೇಜುಗಳಲ್ಲಿ ಆನ್‌ಲೈನ್‌ ತರಗತಿಗಳು ಉತ್ತಮವಾಗಿ ನಡೆಯುತ್ತಿವೆ. ಡಿಜಿಟಲ್‌ ಕಲಿಕೆ ಮತ್ತು ಬೋಧನೆ ನಿರೀಕ್ಷೆಗೂ ಮೀರಿ ನಡೆಯುತ್ತಿದೆ. ಯುಜಿಸಿಯಿಂದ ಕಾಲೇಜು ಆರಂಭಕ್ಕೆ ಸೂಕ್ತ ಮಾಹಿತಿ, ಮಾರ್ಗಸೂಚಿ ಬಂದಿದೆ. ಅದರನ್ವಯ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳೂ ಆಫ್‌ಲೈನ್‌ ತರಗತಿಗಳು ಆರಂಭವಾಗಲಿ ಎನ್ನುತ್ತಿದ್ದಾರೆ. ಶೀಘ್ರ ಈ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಕಾಲೇಜು ಆರಂಭದ ದಿನಾಂಕ ಪ್ರಕಟಿಸಲಾಗುವುದು ಎಂದರು.

ಆತುರ ಸಲ್ಲ: ಕೋವಿಡ್‌ ಸಂಕಷ್ಟಕಾಲದಲ್ಲಿ ಶಾಲಾ-ಕಾಲೇಜುಗಳನ್ನು ಆರಂಭಿಸುವುದಕ್ಕೂ, ಸಿನಿಮಾ ಟಾಕೀಸ್‌ ತೆರೆಯುವುದಕ್ಕೂ ಹೋಲಿಕೆ ಸಲ್ಲ. ಪದವಿ ಕಾಲೇಜುಗಳ ಬಗ್ಗೆ ಹೇಳುವುದಾದರೆ, ತರಗತಿ ನಡೆಯುವ ಕೋಣೆಗಳನ್ನು ಸ್ಯಾನಿಟೈಸ್‌, ವಿದ್ಯಾರ್ಥಿಗಳ ಥರ್ಮಲ್‌ ಸ್ಕ್ರೀನಿಂಗ್‌ ಅನ್ನು ನಿರಂತರವಾಗಿ ಮಾಡುತ್ತಿರಬೇಕು. ಎಲ್ಲೂ ಎಚ್ಚರ ತಪ್ಪುವಂತಿಲ್ಲ. ವಿದ್ಯಾರ್ಥಿಗಳು ಮತ್ತು ಬೋಧಕರು, ಮತ್ತಿತರೆ ಸಿಬ್ಬಂದಿಯ ಆರೋಗ್ಯ ಕಾಪಾಡುವುದು ಅಷ್ಟುಸುಲಭದ ವಿಚಾರವಲ್ಲ. ಮುಖ್ಯವಾಗಿ ವೈರಸ್‌ ನಮ್ಮ ನಡುವೆಯೇ ಜೀವಂತವಾಗಿ ಓಡಾಡಿಕೊಂಡಿದೆ. ಹೀಗಾಗಿ ಪರಿಸ್ಥಿತಿ ನೋಡಿಕೊಂಡು ಕಾಲೇಜು ಆರಂಭಿಸುತ್ತೇವೆ. ಈ ವಿಷಯದಲ್ಲಿ ಆತುರ ಸಲ್ಲ ಎಂದರು.

ನೂತನ ಶಿಕ್ಷಣ ನೀತಿ ಜಾರಿಗೆ ಕ್ರಮ: ಕೇಂದ್ರ ಸರ್ಕಾರ ರೂಪಿಸಿರುವ ನೂತನ ಶಿಕ್ಷಣ ನೀತಿ ಜಾರಿಗೆ ಸರ್ಕಾರ ಎಲ್ಲ ತಯಾರಿ ಮಾಡಿಕೊಳ್ಳುತ್ತಿದೆ. ಈಗಾಗಲೇ ನೀತಿಯ ಅನುಷ್ಠಾನಕ್ಕಾಗಿ ರೂಪಿಸಲಾಗಿರುವ ಕಾರ್ಯಪಡೆ ಮೊದಲ ವರದಿ ನೀಡಿದೆ. ಈ ವರ್ಷ ಎಲ್ಲಾ ಸಿದ್ಧತೆಯನ್ನು ಪರಿಣಾಮಕಾರಿಯಾಗಿ ಮಾಡಿಕೊಂಡು 2021ನೇ ಸಾಲಿನಿಂದ ನೂತನ ಶಿಕ್ಷಣ ನೀತಿಯನ್ನು ಹಂತಹಂತವಾಗಿ ಜಾರಿ ಮಾಡಲಾಗುವುದು. ಘಟಿಕೋತ್ಸವ ಕಾರ್ಯಕ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡ ಶಿಕ್ಷಣ ನೀತಿಯ ಮಹತ್ವದ ಬಗ್ಗೆ ಒತ್ತಿ ಹೇಳಿದ್ದಾರೆ. ನೂತನ ಶಿಕ್ಷಣ ನೀತಿಗೆ ಕಳೆದೆಂಟು ತಿಂಗಳಿಂದಲೇ ರಾಜ್ಯ ಸರ್ಕಾರ ಅಗತ್ಯ ತಯಾರಿ ಮಾಡಿಕೊಂಡಿದೆ ಎಂದು ಪ್ರಶ್ನೆಯೊಂದಕ್ಕೆ ಅಶ್ವತ್ಥ ನಾರಾಯಣ ಪ್ರತಿಕ್ರಿಯಿಸಿದರು.

ಎಂಜಿನಿಯರಿಂಗ್‌ ಕಾಲೇಜು ಪ್ರವೇಶ 1 ತಿಂಗಳು ವಿಳಂಬ

ಎಂಜಿನಿಯರಿಂಗ್‌ ಹಾಗೂ ಇತರ ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಗೆ ಹೊಸದಾಗಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಪ್ರವೇಶಾತಿ ಗಡುವನ್ನು ಮತ್ತೆ ಒಂದು ತಿಂಗಳ ಕಾಲ ವಿಸ್ತರಿಸಲಾಗಿದೆ. ಅಂದರೆ ಅ.31ಕ್ಕೆ ಮುಕ್ತಾಯವಾಗಬೇಕಿದ್ದ ಗಡುವನ್ನು ನ.30ರವರೆಗೆ ವಿಸ್ತರಿಸಲಾಗಿದೆ. ಹೀಗಾಗಿ ಮೊದಲ ಸೆಮಿಸ್ಟರ್‌ ತರಗತಿಗಳು ನ.1ರ ಬದಲಾಗಿ ಡಿ.1ರಿಂದ ಆರಂಭವಾಗಲಿದೆ ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ತಿಳಿಸಿದೆ. ಕೊರೊನಾ ಹಿನ್ನೆಲೆಯಲ್ಲಿ ದಾಖಲಾತಿ ಪ್ರಕ್ರಿಯೆ ಗಡುವು ವಿಸ್ತರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಶೈಕ್ಷಣಿಕ ವೇಳಾಪಟ್ಟಿಯಲ್ಲಿಯೂ ಬದಲಾವಣೆ ಆಗುವ ಸಾಧ್ಯತೆ ಇದೆ.

click me!