ವಠಾರ ಶಾಲೆ ಮಕ್ಕಳಿಗೂ ಅಂಟಿದ ಕೊರೋನಾ ಸೋಂಕು..!

By Kannadaprabha NewsFirst Published Oct 9, 2020, 8:17 AM IST
Highlights

ವಠಾರ ಶಾಲೆಯಲ್ಲಿ ಪಾಠ ಮಾಡುತ್ತಿದ್ದ ಶಿಕ್ಷಕರೊಬ್ಬರಿಗೆ ಕೊರೋನಾ ಸೋಂಕು ತಗಲಿದ ಬಳಿಕ ಇದೀಗ ನಾಲ್ಕು ಮಕ್ಕಳಿಗೆ ಸೋಂಕು ದೃಢಪಟ್ಟಿರುವ ಆತಂಕಕಾರಿ ಘಟನೆ ಕಲಬುರಗಿ ಜಿಲ್ಲೆಯ ಅಫಜಲ್ಪುರ ತಾಲೂಕಿನ ಮಾಶಾಳದಿಂದ ವರದಿಯಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಅಫಜಲ್ಪುರ(ಅ.09): ವಿದ್ಯಾಗಮ ಯೋಜನೆಯಡಿ ವಠಾರ ಶಾಲೆಯಲ್ಲಿ ಪಾಠ ಮಾಡುತ್ತಿದ್ದ ಶಿಕ್ಷಕರೊಬ್ಬರಿಗೆ ಕೊರೋನಾ ಸೋಂಕು ತಗಲಿದ ಬಳಿಕ ಇದೀಗ ನಾಲ್ಕು ಮಕ್ಕಳಿಗೆ ಸೋಂಕು ದೃಢಪಟ್ಟಿರುವ ಆತಂಕಕಾರಿ ಘಟನೆ ಕಲಬುರಗಿ ಜಿಲ್ಲೆಯ ಅಫಜಲ್ಪುರ ತಾಲೂಕಿನ ಮಾಶಾಳದಿಂದ ವರದಿಯಾಗಿದೆ. ಕೋವಿಡ್‌ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬಂದ್‌ ಆಗಿದ್ದ ಶಾಲೆಗಳನ್ನು ಈಗ ಪ್ರಾರಂಭ ಮಾಡಬೇಕೇ, ಬೇಡವೇ ಎಂಬ ಬಗ್ಗೆ ಪರ ವಿರೋಧಗಳು ವ್ಯಕ್ತವಾಗುತ್ತಿರುವ ಸಂದರ್ಭದಲ್ಲೇ ಇಂತಹ ಘಟನೆ ನಡೆದಿರುವುದು ಪೋಷಕರಲ್ಲಿ ತೀವ್ರ ಕಳವಳಕ್ಕೆ ಕಾರಣವಾಗಿದೆ.

ಸುಮಾರು 20 ದಿನಗಳ ಹಿಂದೆ ಮಾಶಾಳ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಿಗೆ ಕೊರೋನಾ ಪಾಸಿಟಿವ್‌ ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಶಾಲೆಯ 20 ಶಿಕ್ಷಕರ ಕೋವಿಡ್‌ ಟೆಸ್ಟ್‌ ನಡೆಸಲಾಗಿದ್ದು ಎಲ್ಲರ ವರದಿಯೂ ನೆಗೆಟಿವ್‌ ಬಂದಿತ್ತು. ಜೊತೆಗೆ ಒಟ್ಟು 865 ವಿದ್ಯಾರ್ಥಿಗಳಿರುವ ಶಾಲೆಯ ಒಟ್ಟು 207 ವಿದ್ಯಾರ್ಥಿಗಳಿಗೆ ಕೋವಿಡ್‌ ಪರೀಕ್ಷೆ ನಡೆಸಲಾಗಿದೆ. ಅವರಲ್ಲಿ ನಾಲ್ಕು ವಿದ್ಯಾರ್ಥಿಗಳಲ್ಲಿ ಸೋಂಕು ಕಂಡಿಬಂದಿದ್ದು, ಇನ್ನೂ 24 ವಿದ್ಯಾರ್ಥಿಗಳ ವರದಿ ಬರಬೇಕಿದೆ. ಏತನ್ಮಧ್ಯೆ ಸೋಂಕಿಗೊಳಗಾಗಿದ್ದ ಮುಖ್ಯಶಿಕ್ಷಕರು ಸಂಪೂರ್ಣ ಗುಣಮುಖರಾಗಿದ್ದಾರೆ.

ಮಾಶಾಳ ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡಲು ಒಂದೊಂದು ಕಡೆ 40 ವಿದ್ಯಾರ್ಥಿಗಳಂತೆ ಒಟ್ಟು 19 ವಠಾರ ಶಾಲೆಗಳನ್ನು ಗುರುತಿಸಲಾಗಿತ್ತು. ಇದೀಗ ಉನ್ನತಾಧಿಕಾರಿಗಳ ಸೂಚನೆಯಂತೆ ಸೋಂಕು ದೃಢಪಟ್ಟಿರುವ 5 ವಠಾರ ಶಾಲೆಗಳನ್ನು 2 ವಾರ ಸೀಲ್‌ಡೌನ್‌ ಮಾಡಲಾಗಿದೆ. ಈ ಮೊದಲು ಶಿಕ್ಷಕರು ವಠಾರ ಶಾಲೆಯಲ್ಲಿ 40ರಿಂದ 50 ಮಕ್ಕಳನ್ನು ಸೇರಿಸಿಕೊಂಡು ಪಾಠ ಬೋಧಿಸುತ್ತಿದ್ದರು. ಈಗ ಈ ಸಂಖ್ಯೆ ಕಡಿಮೆ ಮಾಡಿ ಶಾಲೆಯಲ್ಲಿ ಕೇವಲ 20 ವಿದ್ಯಾರ್ಥಿಗಳನ್ನು ಕರೆಯಿಸಿ ಪಾಠ ಬೋಧಿಸಬೇಕೆಂದು ತಾಲೂಕಿನ ವಠಾರ ಶಾಲೆಯ ಎಲ್ಲಾ ಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆದೇಶ ನೀಡಿದ್ದಾರೆ.

ಶಾಲೆ ಆರಂಭ ಬೇಡ, ಎಲ್ಲರನ್ನು ಪಾಸ್ ಮಾಡಿ ಎಂದ ಮಾಜಿ ಸಿಎಂ ಸಿದ್ದರಾಮಯ್ಯ

ಶಾಲೆಯ ನಾಲ್ಕು ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್‌ ದೃಢಪಟ್ಟವಿಷಯವನ್ನು ಮುಖ್ಯ ಗುರುಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಿಳಿಸಿದಾಗ ಇದಕ್ಕೆ ಪ್ರತಿಕ್ರಿಯಿಸಿದ ಬಿಇಓ ಚಿತ್ರಶೇಖರ ದೇಗಲಮಡಿ ಅವರು ಸೋಂಕು ಕಂಡುಬಂದಿರುವ ವಠಾರಶಾಲೆಗಳನ್ನು ಇನ್ನೂ 15 ದಿವಸಗಳವರೆಗೆ ನಡೆಸದಿರುವಂತೆ ಆದೇಶಿಸಿದ್ದಾರೆ.

ವಠಾರ ಶಾಲೆಯ ವಿದ್ಯಾರ್ಥಿಗಳನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಿರಿ ಎಂದು ಶಿಕ್ಷಣ ಇಲಾಖೆಯಿಂದ ಯಾವುದೇ ಆದೇಶ ಬಂದಿಲ್ಲ, ಆದರೆ ಮಾಶಾಳದಲ್ಲಿ ಮುಖ್ಯಗುರು ಸೋಂಕಿತರ ಸಂಪರ್ಕಕ್ಕೆ ಬಂದು ಕೋವಿಡ್‌ ಧೃಢಪಟ್ಟಿದ್ದರಿಂದ ಈಗಾಗಲೇ 5 ವಠಾರ ಶಾಲೆಯ ವಿದ್ಯಾರ್ಥಿಗಳನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗಿದೆ. ಇನ್ನುಳಿದ ವಠಾರ ಶಾಲೆ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರು ಇದರಿಂದ ಹೆದರಿ ತಮ್ಮ ಮಕ್ಕಳನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲು ಹೆದರಿ ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ.

ಯಾವ ಗ್ರಾಮದಲ್ಲಿ ವಠಾರ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕೋವಿಡ್‌ ಪಾಸಿಟಿವ್‌ ದೃಢಪಡುತ್ತದಯೋ ಆ ಶಾಲೆಗಳನ್ನು ಮಾತ್ರ ಬಂದ್‌ ಮಾಡಲಾಗುತ್ತದೆ. ಕೋವಿಡ್‌ ಪಾಸಿಟಿವ್‌ ದೃಢಪಡದ ಶಾಲೆಗಳನ್ನು ಬಂದ್‌ ಮಾಡಬೇಕೆಂದು ಸರಕಾರದಿಂದ ನಮಗೆ ಯಾವುದೇ ಆದೇಶ ಬಂದಿಲ್ಲ. ಹೀಗಾಗಿ ಕೋವಿಡ್‌ ನಿಯಮಾವಳಿ ಪಾಲಿಸಿ ಕಡಿಮೆ ವಿದ್ಯಾರ್ಥಿಗಳೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಪಾಠ ಮಾಡುವಂತೆ ಶಿಕ್ಷಕರಿಗೆ ಸೂಚಿಸಲಾಗಿದೆ.  -ಚಿತ್ರಶೇಖರ ದೇಗಲಮಡಿ, ಕ್ಷೇತ್ರ ಶಿಕ್ಷಣಾಧಿಕಾರಿ, ಅಫಜಲಪುರ

click me!