* ಬೆಂಗಳೂರು ವಿಶ್ವವಿದ್ಯಾಲಯದ ಅದ್ಧೂರಿ 56ನೇ ಘಟಿಕೋತ್ಸವ
* 321 ವಿದ್ಯಾರ್ಥಿಗಳಿಂದ ಚಿನ್ನದ ಪದಕ ಬೇಟೆ
* 7 ಚಿನ್ನದ ಪದಕ ಪಡೆದ ಸುಷ್ಮಾ ಚಿನ್ನದ ಹುಡುಗಿ
* ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನ
ವರದಿ: ಮಾರುತೇಶ್ ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು
ಬೆಂಗಳೂರು(ಏ.29): ಬೆಂಗಳೂರು ವಿಶ್ವವಿದ್ಯಾಲಯದ 56 ನೇ ಘಟಿಕೋತ್ಸವ ಇಂದು(ಶುಕ್ರವಾರ) ಅದ್ದೂರಿಯಾಗಿ ನಡೀತು. ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉದ್ಘಾಟನೆ ಮಾಡಿದ್ರು. ಕಾರ್ಯಕ್ರಮದಲ್ಲಿ ನ್ಯಾಕ್ (NAAC) ನಿರ್ದೇಶಕ ಡಾ. ಎಸ್ಪಿ ಶರ್ಮಾ ಭಾಗವಹಿಸಿದ್ರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಇಸ್ಕಾನ್ ನ ಮಧು ಪಂಡಿತ ದಾಸ, ಚಿತ್ರ ಕಲಾವಿದ ಎಸ್.ಜಿ.ವಾಸುದೇವ ಮತ್ತು ನಟ, ಸಮಾಜ ಸೇವಕ ಮುತ್ತುರಾಜ್ ಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯ್ತು. ಘಟಿಕೋತ್ಸವದಲ್ಲಿ 68211 ವಿದ್ಯಾರ್ಥಿಗಳಿಗೆ ರಾಜ್ಯಪಾಲರು ಪದವಿ ಪ್ರದಾನ ಮಾಡಿದ್ರು. 127 ವಿದ್ಯಾರ್ಥಿಗಳಿಗೆ ಪಿಎಚ್ಡಿ ಪ್ರದಾನ ಮಾಡಿದ್ರು.
ಘಟಿಕೋತ್ಸವದಲ್ಲಿ 321 ವಿದ್ಯಾರ್ಥಿಗಳು ಚಿನ್ನದ ಬೇಟೆಯಾಡಿದ್ರು. ಬೆಂಗಳೂರು ವಿವಿಯ ಸ್ನಾತಕೋತ್ತರ ವಿಭಾಗದ ರಸಾಯನಶಾಸ್ತ್ರದ ವಿದ್ಯಾರ್ಥಿನಿ ಸುಷ್ಮಾ 7 ಚಿನ್ನದ ಪದಕ ಬಾಚಿಕೊಂಡು ಚಿನ್ನದ ಹುಡುಗಿಯಾದರು. ಸಂಸ್ಕೃತ ವಿಭಾಗದಲ್ಲಿ ಐಶ್ವರ್ಯ 6 ಚಿನ್ನದ ಪದಕ, ಕನ್ನಡ ವಿಭಾಗದ ಶ್ರೀನಿವಾಸ್ 6 ಚಿನ್ನದ ಪದಕ ಪಡೆದ್ರು. ಪದವಿ ವಿಭಾಗದಲ್ಲಿ ಯಲಹಂಕ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿ ನಂದಿನಿ 6 ಚಿನ್ನದ ಪದಕ ಪಡೆದು ಟಾಪರ್ ಆದ್ರು.
ಗ್ಯಾರೇಜ್ ನಡೆಸುವ ಮೆಕಾನಿಕ್ನ ಮಗಳು ಫಸ್ಟ್ ರ‍್ಯಾಂಕ್
ಚಿನ್ನದ ಹುಡುಗಿ ಸುಷ್ಮಾ ಮಾತನಾಡಿ, ನಮ್ಮ ತಂದೆ ಒಂದಾದರೂ ಚಿನ್ನದ ಪದಕ ಪಡೆಯಬೇಕು ಎಂದಿದ್ರು ನಾವು 7 ಚಿನ್ನದ ಪದಕ ಪಡೆದಿರೋದು ತಂದೆ ತಾಯಿಗೆ ಖುಷಿಯಾಗಿದೆ ಎಂದರು. ಓದುವ ಸಮಯದಲ್ಲಿ ಚೆನ್ನಾಗಿ ಓದಬೇಕು. ಓದು ಅಷ್ಟೇ ನಮ್ಮ ಗುರಿಯಾಗಿರಬೇಕು ಎಂದು ಕಿರಿಯ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ರು. ಮುಂದೆ Upsc ಪರೀಕ್ಷೆಗೆ ತಯಾರಿ ಸಡೆಸುತ್ತೇನೆ ಎಂದು ಹೇಳಿದರು.
ರೈತನ ಮಗನಾಗಿರುವ ಶ್ರೀನಿವಾಸ್ ಕನ್ನಡ ವಿಭಾಗದಲ್ಲಿ 6 ಪದಕ ಪಡೆದಿದ್ದಾರೆ. ತಮ್ಮ ಅನುಭವವನ್ನು ಹಂಚಿಕೊಂಡ ಶ್ರೀನಿವಾಸ್, ನಾನು ಹಳ್ಳಿಯಲ್ಲಿ ಹುಟ್ಟಿ ಬೆಳದರೂ ಓದಿನಲ್ಲಿ ಏನಾದರೂ ಸಾಧಿಸುವ ಹಂಬಲ ಹೊಂದಿದ್ದೆ, ಅದೇ ಈ ಸಾಧನೆಗೆ ಕಾರಣ, ತಾಯಿಯನ್ನ ಕಳೆದುಕೊಂಡಿರುವ ನನಗೆ ತಂದೆಯೇ ಎಲ್ಲಾ. ಅವರಿಗಾಗಿಯೇ ನಾವು ಇಷ್ಟು ಕಲಿಯಲು ಸಾಧ್ಯವಾಯಿತು ಎಂದರು. ಮುಂದೆ ನಾನು ಶಿಕ್ಷಕನಾಗಿ ಅನೇಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಲು ಇಚ್ಚಿಸುತ್ತೇನೆ ಎಂದರು.
ಕಾರ್ಯಕ್ರಮಕ್ಕೆ ಉನ್ನತ ಶಿಕ್ಷಣ ಇಲಾಖೆ ಸಚಿವ ಅಶ್ವಥ್ ನಾರಾಯಣ ಗೈರಾಗಿದ್ದರು. ರಾಜ್ಯಪಾಲರು ತಮ್ಮ ಭಾಷಣದಲ್ಲಿ ವಿದ್ಯಾರ್ಥಿಗಳಿಗೆ ಮಹಾಪುರುಷರ ರೀತಿ ಸಾಧನೆ ಮಾಡುವಂತೆ ಕಿವಿಮಾತು ಹೇಳಿದ್ರು.