ಖಾಸಗಿ ಶಾಲೆಗಳ ಆರಂಭಕ್ಕೆ ಅರ್ಜಿ ಸಲ್ಲಿಸಿ ಎನ್ನುವ ಸರ್ಕಾರದ ಒಂದೇ ಅಧಿಸೂಚನೆಗೆ ಜಿಲ್ಲೆಯಲ್ಲಿ ಬರೋಬ್ಬರಿ 26 ಅರ್ಜಿಗಳು ಸಲ್ಲಿಕೆಯಾಗಿವೆ. ಸರ್ಕಾರವೇ ಸರ್ಕಾರಿ ಶಾಲೆಗಳ ಅವನತಿಗೆ ಕಾರಣವಾಗುತ್ತಿದೆಯಾ?
ವರದಿ: ಗಣೇಶ್ ತಮ್ಮಡಿಹಳ್ಳಿ
ಶಿವಮೊಗ್ಗ(ಆ.8) : ಖಾಸಗಿ ಶಾಲೆಗಳ ಆರಂಭಕ್ಕೆ ಅರ್ಜಿ ಸಲ್ಲಿಸಿ ಎನ್ನುವ ಸರ್ಕಾರದ ಒಂದೇ ಅಧಿಸೂಚನೆಗೆ ಜಿಲ್ಲೆಯಲ್ಲಿ ಬರೋಬ್ಬರಿ 26 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಮೂಲಕ ಜಿಲ್ಲೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಹೆಬ್ಬಾಗಿಲು ತೆಗೆಯಲಾಗಿದ್ದು, ಸರ್ಕಾರಿ ಶಾಲೆಗೆ ಅವನತಿಗೆ ದಾರಿ ತೋರಲಾಗುತ್ತಿದೆ! ಒಂದೆಡೆ ಮಕ್ಕಳ ದಾಖಲಾತಿ ಸಂಖ್ಯೆ ಕುಸಿತದಿಂದ ಸರ್ಕಾರಿ ಶಾಲೆಗಳಿಗೆ ಬೀಗ ಜಡಿಯುತ್ತಿರುವ ಸರ್ಕಾರ ಇನ್ನೊದೆಡೆ ಅದೇ ಸರ್ಕಾರವೇ ಹೊಸದಾಗಿ ಖಾಸಗಿ ಶಾಲೆಗಳ ಆರಂಭಕ್ಕೆ ಮುನ್ನುಡಿ ಬರೆದಿದ್ದು, ಜಿಲ್ಲೆಯ ಬಂಡವಾಳಶಾಹಿಗಳ ಪಾಲಿಗೆ ವರವಾಗಿದೆ. ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಸಾಗರ, ಶಿವಮೊಗ್ಗ, ತೀರ್ಥಹಳ್ಳಿಯಲ್ಲಿ ತಲಾ ಒಂದೊಂದು ಎಂಬಂತೆ 3 ಸರ್ಕಾರಿ ಶಾಲೆಯ ಬಾಗಿಲು ಬಂದ್ ಆಗಿವೆ. ಆದರೆ, ಇದರ ಬೆನ್ನಲ್ಲೆ ಹೊಸದಾಗಿ 26 ಖಾಸಗಿ ಶಾಲೆಗಳ ಆರಂಭಕ್ಕೆ ಅರ್ಜಿ ಸಲ್ಲಿಕೆಯಾಗಿದ್ದು, ಇದಕ್ಕೆ ನಿದರ್ಶನವಾಗಿದೆ.
ಸರ್ಕಾರಿ ಶಾಲೆಗಳ ಉಳಿವಿಗಾಗಿ ಎಸ್ಎಫ್ಐ ಜಾಥಾ
ಜಿಲ್ಲೆಯಲ್ಲಿ ಈಚೇಗೆ ಸರ್ಕಾರಿ ಶಾಲೆಗಳು ಒಂದಾಂಗಿಯೇ ಬಾಗಿಲು ಮುಚ್ಚುತ್ತಿದ್ದು, ಖಾಸಗಿ ಶಾಲೆಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಈ ನಡುವೆ ಪುನಃ ಮತ್ತಷ್ಟುಶಾಲೆಗಳ ಆರಂಭಕ್ಕೆ ಸರ್ಕಾರವೇ ಮಣೆ ಹಾಕಿರುವುದು ಆತಂಕದ ಸಂಗತಿಯಾಗಿದೆ.
ಎರಡು ವರ್ಷದಲ್ಲಿ 7 ಶಾಲೆಗಳಿಗೆ ಬೀಗ!:
ಜಿಲ್ಲೆಯಲ್ಲಿ ಮಕ್ಕಳಿಲ್ಲ ಎಂಬ ಕಾರಣಕ್ಕೆ ಕಳೆದ ಎರಡು ವರ್ಷದಲ್ಲಿ ಒಟ್ಟು 7 ಸರ್ಕಾರಿ ಶಾಲೆಗಳಿಗೆ ಬೀಗ ಜಡಿಯಲಾಗಿದೆ. ಜಿಲ್ಲೆಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳು 1835 ಇದ್ದರೆ, ಪ್ರೌಢಶಾಲೆಗಳು 164 ಇವೆ. ಇದರಲ್ಲಿ ಮಕ್ಕಳ ದಾಖಲಾತಿ ಕುಸಿತ ಪರಿಣಾಮ ಎರಡು ವರ್ಷದಲ್ಲಿ ಸಾಗರದಲ್ಲಿ 3, ಹೊಸನಗರ, ಭದ್ರಾವತಿ, ತೀರ್ಥಹಳ್ಳಿ, ಶಿವಮೊಗ್ಗದಲ್ಲಿ ತಲಾ ಒಂದೊಂದು ಶಾಲೆಗಳು ಮುಚ್ಚಿವೆ. ಆದರೆ, ಇದೇ ಅವಧಿಯಲ್ಲಿ ಒಟ್ಟು 18 ಖಾಸಗಿ ಶಾಲೆ ಆರಂಭ ಮಾಡಲು ಶಿಕ್ಷಣ ಇಲಾಖೆ ಅನುಮತಿ ನೀಡಿದೆ. ಹೊಸ ಶಾಲೆ ಆರಂಭಕ್ಕೆ ಒಟ್ಟು 48 ಅರ್ಜಿಗಳು ಬಂದಿದ್ದು, 30 ಅರ್ಜಿಗಳು ತಿರಸ್ಕಾರಗೊಂಡಿವೆ. ಸದ್ಯ 365 ಪ್ರಾಥಮಿಕ, 145 ಖಾಸಗಿ ಪ್ರೌಢ ಶಾಲೆಗಳು ಜಿಲ್ಲೆಯಲ್ಲಿ ಚಾಲ್ತಿಯಲ್ಲಿವೆ. ಜಿಲ್ಲೆಯ 7 ತಾಲೂಕು ಪೈಕಿ ಶಿವಮೊಗ್ಗ, ಭದ್ರಾವತಿಯಲ್ಲಿ ಅತಿ ಹೆಚ್ಚು ಖಾಸಗಿ ಹೊಸ ಶಾಲೆ ಆರಂಭಿಸಲು ಅರ್ಜಿ ಬಂದಿವೆ.
ಸರ್ಕಾರದಿಂದಲೇ ಸರ್ಕಾರಿ ಶಾಲೆಗಳ ಅವನತಿ!:
‘ಹೆಣ್ಣಿಗೆ ಹೆಣ್ಣೇ ಶತೃ’ ಎಂಬಂತೆ, ಸರ್ಕಾರಿ ಶಾಲೆಗಳ ಅವನತಿಗೆ ಸರ್ಕಾರವೇ ಕಾರಣವಾಗುತ್ತಿದೆ. ಇಂಗ್ಲೀಷ್ ವ್ಯಾಮೋಹಕ್ಕೆ ಬಿದ್ದಿರುವ ಪೋಷಕರು ಸರ್ಕಾರಿ ಶಾಲೆ ಬಿಟ್ಟು ಖಾಸಗಿ ಶಾಲೆಗಳ ಹಾದಿಹಿಡಿದಿದ್ದಾರೆ. ಇತ್ತ ನಾನಾ ಕಾರಣಕ್ಕೆ ಸರ್ಕಾರಿ ಶಾಲೆಯ 1ರಿಂದ 5ನೇ ತರಗತಿ ಮಕ್ಕಳಿಗೆ ಇಂಗ್ಲೀಷ್ ಮಾಧ್ಯಮ ಆರಂಭ ಮಾಡಲು ಸರ್ಕಾರವೂ ಮೀನ ಮೇಷ ಎಣಿಸುತ್ತಿದೆ. ಇದೇ ಕಾರಣಕ್ಕೆ ಸದ್ದಿಲ್ಲದೇ ಸರ್ಕಾರಿ ಶಾಲೆಗಳಿಗೆ ಬೀಗ ಬೀಳುತ್ತಿದೆ. ಬಹುತೇಕ ನಗರ, ಪಟ್ಟಣ ಪ್ರದೇಶಕ್ಕೆ ಸೀಮಿತವಾಗಿದ್ದ ಖಾಸಗಿ ಶಿಕ್ಷಣ ಸಂಸ್ಥೆ ಈಗ ಗ್ರಾಮೀಣ ಭಾಗದತ್ತಲೂ ಕಾಲಿಟ್ಟಿವೆ. ಈ ಬಾರಿ ಹೊಸದಾಗಿ ಸಲ್ಲಿಕೆಯಾದ ಅರ್ಜಿಗಳಲ್ಲಿ ನಗರದ ಪ್ರದೇಶದಿಂದೇ ಹೆಚ್ಚು ಅರ್ಜಿ ಬಂದಿದ್ದರೂ, ಗ್ರಾಮೀಣ ಭಾಗದಲ್ಲಿಯೂ ಅರ್ಜಿಗಳು ಸಲ್ಲಿಕೆಯಾಗಿವೆ. ಗ್ರಾಮೀಣ ಭಾಗದಲ್ಲೂ ಶಾಲೆ ತೆಗೆಯುವ ಇರಾದೆ ವ್ಯಕ್ತಪಡಿಸಿವೆ.
ಹೊಸ ಶಾಲೆ ಆರಂಭಕ್ಕೆ ಸಲ್ಲಿಕೆ ಆಗಿರುವ ಅರ್ಜಿಗಳನ್ನು ಶಿಕ್ಷಣ ಇಲಾಖೆ ಸರ್ಕಾರದ ಮಾರ್ಗಸೂಚಿಯಂತೆ ಸೌಲಭ್ಯ ಇರುವ ಕಡೆ ಮಾತ್ರ ಶಿಕ್ಷಣ ಇಲಾಖೆ ಹೊಸ ಶಾಲೆಗಳಿಗೆ ಅನುಮತಿ ನೀಡಲಾಗಿದೆ. ಈಗಾಗಲೇ ಹೊಸದಾಗಿ ಆರಂಭಗೊಂಡಿರುವ ಖಾಸಗಿ ಶಾಲೆಗಳ ಸುತ್ತಮುತ್ತ ಇರುವ ಸರ್ಕಾರಿ ಶಾಲೆಗಳಿಗೆ ಮುಳುವಾಗುವುದು ಗ್ಯಾರಂಟಿ ಎಂಬುದು ಶಿಕ್ಷಕರ ವಲಯದಲ್ಲೇ ಕೇಳಿಬರುತ್ತಿರುವ ಆರೋಪ.
ಸರ್ಕಾರಿ ಶಾಲೆಯ ದುಸ್ಥಿತಿಯ ಬಗ್ಗೆ ವರದಿ ಮಾಡಿದ ಬಾಲಕ: ವಿಡಿಯೋ ವೈರಲ್
ಖಾಸಗಿ ಶಾಲೆ ಆರಂಭಕ್ಕೆ ಅಧಿಸೂಚನೆ ಬೀಳುವುದನ್ನೆ ಕಾಯುತ್ತಿರುವ ಪ್ರಭಾವಿಗಳು ಶಿಕ್ಷಣ ಸಂಸ್ಥೆ ಕಟ್ಟಲು ಉತ್ಸುಕರಾಗಿದ್ದಾರೆ. ಸರ್ಕಾರದ ಮೇಲೆ ಒತ್ತಡ ತಂದಾದರೂ ಶಾಲೆಗಳನ್ನು ಆರಂಭಿಸುವ ಪರಂಪರೆ ಮುಂದುವರಿದಿದೆ. ಹೊಸ ಶಾಲೆ ಆರಂಭಕ್ಕೆ ಅನುಮತಿ ನೀಡುವ ಬರದಲ್ಲಿ ಸರ್ಕಾರಿ ನಿಯಮಗಳನ್ನೇ ಗಾಳಿಗೆ ತೂರಲಾಗುತ್ತಿದೆ. ಹೊಸದಾಗಿ ಆರಂಭವಾಗುವ ಶಾಲೆಗೆ ಸ್ವಂತ ಕಟ್ಟಡ, ವಿಶಾಲ ಕ್ರೀಡಾಂಗಣ, ಗುಣಮಟ್ಟಶಿಕ್ಷಣ ನೀಡಬಲ್ಲ ಸಿಬ್ಬಂದಿ ಸಂಖ್ಯೆ ಮೂಲ ಸೌಕರ್ಯಗಳನ್ನು ವೃದ್ಧಿಸುವ ಪ್ರಮಾಣ ಪತ್ರ ನೀಡಬೇಕು. ಹೀಗೆ ಪ್ರಮಾಣ ಪತ್ರ ನೀಡಿ ಆರಂಭವಾದ ಅದೆಷ್ಟೊಶಾಲೆಗಳಲ್ಲಿ ಇನ್ನೂ ಮೂಲ ಸೌಕರ್ಯವಿಲ್ಲ. ಈಗ ಮತ್ತಷ್ಟುಶಾಲೆ ಆರಂಭಕ್ಕೆ ಮುಂದಾಗಿದ್ದು, ಸರ್ಕಾರಿ ಶಾಲೆಗಳ ಪಾಲಿಗೆ ಇದು ನುಂಗಲಾಗದ ತುತ್ತು.
ಹೊಸ ಖಾಸಗಿ ಶಾಲೆಗಳಿಗೆ ಈಗಾಗಲೇ ಅರ್ಜಿ ಬಂದಿದ್ದು, ಸ್ಥಳ ಪರಿಶೀಲನೆ ಮತ್ತು ದಾಖಲಾತಿ ಪರಿಶೀಲನೆ ನಡೆಸಿದ ನಂತರ ಪರವಾನಗಿ ನೀಡಲಾಗುತ್ತದೆ. ಅರ್ಜಿ ಪರಿಶೀಲನೆ ನಡೆಯುತ್ತಿದೆ. ಸರ್ಕಾರ ನಿಯಮಾನುಸಾರ ದಾಖಲಾತಿ ಇರುವ ಸಂಸ್ಥೆಗಳಿಗೆ ಪರವಾನಗಿ ನೀಡಲಾಗುತ್ತಿದೆ
- ಪರಮೇಶ್ವರಪ್ಪ, ಡಿಡಿಪಿಐ, ಶಿವಮೊಗ್ಗ
- - -