ಪಿಎಂ-ಉಷಾ ಯೋಜನೆಯಡಿ ಗುಲ್ಬರ್ಗ ವಿಶ್ವವಿದ್ಯಾಲಯಕ್ಕೆ 20 ಕೋಟಿ ಅನುದಾನ

By Kannadaprabha NewsFirst Published Feb 20, 2024, 11:20 PM IST
Highlights

ಪಿಎಂ-ಉಷಾ ಅನುದಾನ ಪಡೆದುಕೊಳ್ಳುವ ಮೂಲಕ ಶಿಕ್ಷಣ ಮತ್ತು ಸಂಶೋಧನೆಗೆ ಹೆಚ್ಚು ಪ್ರೋತ್ಸಾಹ ದೊರೆಯಲಿದೆ. ದೇಶದ 1,427 ವಿಶ್ವವಿದ್ಯಾಲಯಗಳ ಪೈಕಿ ರಾಜ್ಯದ 52 ವಿಶ್ವವಿದ್ಯಾಲಯಗಳು ಮಾತ್ರ (ಪಿಎಂ-ಉಷಾ) ಯೋಜನೆಯಡಿ ಅನುದಾನ ಪಡೆಯಲು ಅರ್ಹವಾಗಿದ್ದು ಗುವಿವಿಗೆ ಇದು ಹೆಮ್ಮೆ ಎಂದ ಕುಲಪತಿ ಡಾ. ದಯಾನಂದ ಅಗಸರ್‌ 

ಕಲಬುರಗಿ(ಫೆ.20):  ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಉಚ್ಛತರ್ ಶಿಕ್ಷಾ ಅಭಿಯಾನ (ಪಿಎಂ-ಉಷಾ) ಯೋಜನೆಯಡಿ ಮೂಲಸೌಕರ್ಯ ಮತ್ತು ಸಂಶೋಧನಾ ಸೌಲಭ್ಯ ಉನ್ನತೀಕರಣಕ್ಕೆ ಗುಲ್ಬರ್ಗ ವಿವಿಗೆ 20 ಕೋಟಿ ರು. ಅನುದಾನ ಘೋಷಣೆಯಾಗಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಲಪತಿ ಡಾ. ದಯಾನಂದ ಅಗಸರ್‌, ಪಿಎಂ-ಉಷಾ ಅನುದಾನ ಪಡೆದುಕೊಳ್ಳುವ ಮೂಲಕ ಶಿಕ್ಷಣ ಮತ್ತು ಸಂಶೋಧನೆಗೆ ಹೆಚ್ಚು ಪ್ರೋತ್ಸಾಹ ದೊರೆಯಲಿದೆ ಎಂದಿದ್ದಾರೆ. ದೇಶದ 1,427 ವಿಶ್ವವಿದ್ಯಾಲಯಗಳ ಪೈಕಿ ರಾಜ್ಯದ 52 ವಿಶ್ವವಿದ್ಯಾಲಯಗಳು ಮಾತ್ರ (ಪಿಎಂ-ಉಷಾ) ಯೋಜನೆಯಡಿ ಅನುದಾನ ಪಡೆಯಲು ಅರ್ಹವಾಗಿದ್ದು ಗುವಿವಿಗೆ ಇದು ಹೆಮ್ಮೆ ಎಂದರು.

20 ಕೋಟಿ ರು. ನಲ್ಲಿ ಇವೆಲ್ಲ ಯೋಜನೆ: 

ಯೋಜನೆಯಡಿ ಒಟ್ಟಾರೆ 20 ಕೋಟಿ ಅನುದಾನದಲ್ಲಿ ಸುಮಾರು 7 ಕೋಟಿ ವೆಚ್ಚದಲ್ಲಿ ವಿದ್ಯಾರ್ಥಿಗಳ ಕಲಿಕೆಗಾಗಿ ಕೌಶಲ್ಯ ಅಭಿವೃದ್ಧಿ ಕೇಂದ್ರ ಹಾಗೂ ಸಂಯೋಜಿತ ಉಪನ್ಯಾಸ ಸಭಾಂಗಣ, 7 ಕೋಟಿಗಳಲ್ಲಿ ಎಲ್ಲಾ ಸ್ನಾತಕೋತ್ತರ ವಿಭಾಗಗಳ ಶೈಕ್ಷಣಿಕ ಕಟ್ಟಡಗಳು, ಸಿಲ್ವರ್ ಜುಬಿಲಿ ಗೆಸ್ಟ್‌ ಹೌಸ್, ಅಂತರಾಷ್ಟ್ರೀಯ ಮಟ್ಟದ ಅತಿಥಿ ಗೃಹ, ಬಯಲು ರಂಗಮಂದಿರ ಉನ್ನತೀಕರಣ, ವಿಭಾಗಗಳಿಗೆ ಡಿಜಿಟಲ್ ಉಪಕರಣ ಅಳವಡಿಕೆ ಮತ್ತು ಕೌಶಲ್ಯ ಕಲಿಕೆಗೆ ಉತ್ತೇಜನ, 5.75 ಕೋಟಿಯಲ್ಲಿ ವಿಜ್ಞಾನ ವಿಭಾಗಗಳಿಗೆ ಅಗತ್ಯ ಶೈಕ್ಷಣಿಕ ಉಪಕರಣಗಳ ಖರೀದಿ, 25 ಲಕ್ಷದಲ್ಲಿ ಉನ್ನತ ಶಿಕ್ಷಣ ವಿದ್ಯಾರ್ಥಿಗಳ ಕಲಿಕೆಗಾಗಿ ಬೇಕಿರುವ ತಂತ್ರಾಂಶ, ವಿವಿಧ ಸೌಲಭ್ಯಗಳಿಗಾಗಿ ವೆಚ್ಚ ಮಾಡಲಾಗುತ್ತಿದೆ.

ಕರ್ನಾಟಕ ಬಜೆಟ್ 2024: ಕಲಬುರಗಿ ಪಾಲಿಗೆ ಚುರುಮುರಿ ಪ್ರಸಾದ ಸಿಕ್ಕಷ್ಟೇ ಶಿವಾಯನಮಃ!

2024-25ರ ಶೈಕ್ಷಣಿಕ ಸಾಲಿನಿಂದ ಹೊಸ ಸ್ನಾತಕೋತ್ತರ ಡಿಪ್ಲೋಮಾ ಕೋರ್ಸುಗಳನ್ನು ಆರಂಭಿಸಲು ವಿಶ್ವವಿದ್ಯಾಲಯ ನಿರ್ಧರಿಸಲಾಗಿದೆ. ವಾಣಿಜ್ಯ ವಿಭಾಗದಲ್ಲಿ ಅಕೌಂಟ್ಸ್ ಅಂಡ್ ಟ್ಯಾಕ್ಸ್ ಮ್ಯಾನೇಜೆಮೆಂಟ್, ವಸ್ತು ವಿಜ್ಞಾನ ವಿಭಾಗದ ಅಡಿಯಲ್ಲಿ ಬಹುಶಿಸ್ತೀಯ ಅಧ್ಯಯನ ವಿಷಯಗಳಾದ ಆಹಾರ ಮತ್ತು ತಂತ್ರಜ್ಞಾನ, ಪ್ರಾದೇಶಿಕ ಉದ್ದಿಮೆ ತಂತ್ರಜ್ಞಾನ ಮತ್ತು ಸಕ್ಕರೆ ಕಾರ್ಖಾನೆ ಕೌಶಲ್ಯ ಆಧಾರಿತ ಕೋರ್ಸುಗಳನ್ನು ಆರಂಭಿಸಲು ತೀರ್ಮಾನಿಸಲಾಗಿದೆ.
ವಿವಿಯಲ್ಲಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ನೇಮಕಾತಿ ಬಗ್ಗೆ, ಈಗಾಗಲೇ ಮೂಲ ವೃಂದ ಮತ್ತು 371ಜೆ ಸ್ಥಳಿಯ ವೃಂದ ವರ್ಗವಾರು ವಿಂಗಡಣೆ ಮಾಹಿತಿಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಸಕಾರದ ಹಣಕಾಸು ಇಲಾಖೆ ಒಪ್ಪಿಗೆ ಸೂಚಿಸಿದ ನಂತರ ನೇಮಕಾತಿ ಪ್ರಕ್ರಿಯೆ ನಡೆಸಲಾಗುವುದು ಎಂದರು.

ನೋಡಲ್ ಅಧಿಕಾರಿ ಪ್ರೊ. ವಿವೇಕಾನಂದ ಜಾಲಿ, ಉಪ ಹಣಕಾಸು ಅಧಿಕಾರಿ ಪ್ರೊ. ವಾಘ್ಮೋರೆ ಶಿವಾಜಿ ಹಾಗೂ ಮಾಧ್ಯಮ ಸಂಯೋಜಕ ಡಾ. ಕೆ. ಎಂ. ಕುಮಾರಸ್ವಾಮಿ ಇದ್ದರು.

ವಿಡಿಯೋ ಕಾನ್ಪರೆನ್ಸ್‌ ಮೂಲಕ ಉದ್ಘಾಟಿಸಿದ ಮೋದಿ 

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಉಚ್ಛತರ್ ಶಿಕ್ಷಾ ಅಭಿಯಾನ (ಪಿಎಂ-ಉಷಾ) ಯೋಜನೆಯನ್ನು ಫೆ.20ರಂದು ಬೆ.11 ಗಂಟೆಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಉದ್ಘಾಟಿಸಿದ್ದಾರೆ. ಗುವಿವಿಯಿಂದ ಬೆ.10.30 ಗಂಟೆಗೆ ಗುವಿವಿಯ ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಸನ್ಮಾನ್ಯ ಪ್ರಧಾನ ಮಂತ್ರಿಗಳ ‘ಪ್ರಧಾನ ಮಂತ್ರಿ ಉಚ್ಚತರ್ ಶಿಕ್ಷಾ ಅಭಿಯಾನ’ ಉದ್ಘಾಟನೆಯ ನೇರ ಪ್ರಸಾರವನ್ನು ವೀಕ್ಷಿಸಲು ವಿವಿ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. 

click me!