
ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ 10 ಮತ್ತು 12ನೇ ತರಗತಿಗಳ ಫಲಿತಾಂಶ ಪ್ರಕಟವಾಗಿದೆ. ಕಾಶ್ಮೀರದಲ್ಲಿಯೂ 10ನೇ ತರಗತಿ ಫಲಿತಾಂಶ ಪ್ರಕಟವಾಗಿದೆ. ಈಗ ಇಲ್ಲಿ 10 ನೇ ತರಗತಿಯ ಟಾಪರ್‌ಗಳ ಕಥೆಗಳು ಮತ್ತು ಅವರ ಅಂಕಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಆದರೆ ಇದೆಲ್ಲದರಲ್ಲೂ, 16 ವರ್ಷದ ಜಹೀನ್ ಆಶಾಯ್ ಕಥೆ ಸಂಪೂರ್ಣವಾಗಿ ಭಿನ್ನವಾಗಿದೆ. ಜಹೀನ್ 10 ನೇ ತರಗತಿಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣನಾಗಿದ್ದಾನೆ. ಆದರೆ ಜಹೀನ್ ಕಥೆ ವಿಶೇಷವಾಗಿದೆ. ಏಕೆಂದರೆ ಈತ ಯಾವುದೇ ಶಾಲೆಗೆ, ಯಾವುದೇ ತರಬೇತಿ ಕೇಂದ್ರಕ್ಕೆ ಹೋಗದೆ ಸ್ವತಃ ಓದಿ ಪರೀಕ್ಷೆಯಲ್ಲಿ ಉತ್ತೀರ್ಣನಾದನು. ಕಳೆದ ಐದು ವರ್ಷಗಳಿಂದ ಅವನು ಒಬ್ಬಂಟಿಯಾಗಿ ಅಧ್ಯಯನ ಮಾಡುತ್ತಿದ್ದಾನೆ. ಶಿಕ್ಷಕರು, ಕ್ಲಾಸ್ ರೂಂ ಅಥವಾ ನಿಗದಿತ ವೇಳಾಪಟ್ಟಿ ಇದಾವುದೂ ಇಲ್ಲ. ಆದರೆ ಫಲಿತಾಂಶ ಬಂದಾಗ ಅವನು ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣನಾಗಿದ್ದನು.
ಆದರೆ ಅಂಕಪಟ್ಟಿಯಲ್ಲಿರುವ ಈ ಅಂಕಗಳು ಜಹೀನ್ ಕಥೆಯ ಒಂದು ಸಣ್ಣ ಭಾಗ ಮಾತ್ರ. ಏಕೆಂದರೆ ಇತರ ಮಕ್ಕಳು ಮಾದರಿ ಪತ್ರಿಕೆಗಳನ್ನು ಬಿಡಿಸುವಾಗ, ಜಹೀನ್ ತನ್ನದೇ ಆದ ಸ್ಟಾರ್ಟ್ ಅಪ್ ಮಾಡುತ್ತಿದ್ದ. ಇತರರು ಪುಸ್ತಕಗಳನ್ನು ಓದುವುದರಲ್ಲಿ ನಿರತರಾಗಿದ್ದರೆ, ಜಹೀನ್ ಕೋಡಿಂಗ್ ಕಲಿಯುವುದು, ಲೋಗೋಗಳನ್ನು ವಿನ್ಯಾಸಗೊಳಿಸುವುದು, ಫುಟ್ಬಾಲ್ ಆಡುವುದು ಮತ್ತು ಗಿಟಾರ್‌ನಲ್ಲಿ ರಾಗ ಸಂಯೋಜನೆ ಮಾಡುತ್ತಿದ್ದ. ಅವನ ಗುರಿ ರಾಂಕ್ ಪಡೆಯುವುದು ಅಲ್ಲ, ಬದಲಾಗಿ ಜೀವನವನ್ನು ರೂಪಿಸಿಕೊಳ್ಳುವುದಾಗಿತ್ತು.
ಜೀವನವು ಅಂಕಗಳನ್ನು ಮೀರಿದ್ದು...
ಜಹೀನ್ ಹೇಳುವಂತೆ ತಾನು ಪರೀಕ್ಷೆಯಲ್ಲಿ ಉತ್ತೀರ್ಣನಾಗಬೇಕೆಂದಿರಲಿಲ್ಲ. ತನ್ನದೇ ಆದ ಏನಾದರೂ ಸ್ವಂತ ಬ್ರಾಂಡ್ ಕ್ರಿಯೇಟ್ ಮಾಡಬೇಕಿತ್ತು. ಮಕ್ಕಳ ಶಿಕ್ಷಣವು ಸಾಮಾನ್ಯವಾಗಿ ಅಂಕಗಳಿಗೆ ಸೀಮಿತವಾಗಿರುವಾಗ ಜಹೀನ್ ಮಾರ್ಗ ಮಾತ್ರ ವಿಭಿನ್ನವಾಗಿದೆ. ಮಾತ್ರವಲ್ಲದೆ ತುಂಬಾ ಧೈರ್ಯಶಾಲಿ ಹುಡುಗ. ಇಲ್ಲಿ ಹೆಚ್ಚಿನ ಮಕ್ಕಳು ಶಾಲೆ, ಟ್ಯೂಷನ್ ತರಬೇತಿ ಮತ್ತು ಪರೀಕ್ಷೆಗಳಲ್ಲಿ ನಿರತರಾಗಿರುತ್ತಾರೆ. ಆದರೆ ಜಹೀನ್ ವಿಭಿನ್ನ. ಕೇವಲ 13 ನೇ ವಯಸ್ಸಿನಲ್ಲಿ ತನ್ನ ಸಲಹಾ ಸಂಸ್ಥೆಯನ್ನು ನೋಂದಾಯಿಸಿಕೊಂಡು ಸಿಇಒ ಆದನು. ಈಗ ಒಂದು ಸಣ್ಣ ಉತ್ಪಾದನಾ ಘಟಕವನ್ನು ಪ್ರಾರಂಭಿಸಲು ಸಿದ್ಧತೆ ನಡೆಸುತ್ತಿದ್ದಾನೆ. ರಾಷ್ಟ್ರೀಯ ಮಟ್ಟದಲ್ಲಿ ಜಮ್ಮು ಮತ್ತು ಕಾಶ್ಮೀರ ಪರ ಫುಟ್ಬಾಲ್ ಆಡುತ್ತಾನೆ. ಜಹೀನ್ ಗ್ರಾಫಿಕ್ ಡಿಸೈನರ್, ಬಾಕ್ಸರ್, ಸಂಗೀತಗಾರ ಮತ್ತು ಕೋಡರ್ ಕೂಡ ಹೌದು. ಅವನ ಚಿಂತನೆ ಪುಸ್ತಕಗಳನ್ನು ಮೀರಿದ್ದಾಗಿದೆ.
ಈ ಬಾರಿ 66.14% SSLC ಫಲಿತಾಂಶ: ಕರಾವಳಿಯೇ ಕಿಂಗ್, ಟಾಪ್-3 ಸ್ಥಾನ ಪಡೆದ ಕರಾವಳಿ ಜಿಲ್ಲೆಗಳು!
ಪೋಷಕರ ಸಪೋರ್ಟ್
ಜಹೀನ್ ಪೋಷಕರು ಆರಂಭದಲ್ಲಿ ಸ್ವಲ್ಪ ಚಿಂತಿತರಾಗಿದ್ದರು. ಜಹೀನ್ ತಂದೆ ಫಾರೂಕ್ ಆಶಾಯ್ ಮೊದಲು ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದರು. ಆರಂಭದಲ್ಲಿ ತನಗೆ ಮಗನ ಬಗ್ಗೆ ಸಂಶಯವಿತ್ತು ಎಂದು ಅವರು ಹೇಳುತ್ತಾರೆ. ಆದರೆ ಜಹೀನ್ ಗಂಭೀರವಾಗಿರುವುದನ್ನು ನೋಡಿ, ಕಷ್ಟಪಟ್ಟು ಕೆಲಸ ಮಾಡುವುದನ್ನು ಮತ್ತು ಕಲಿಯುವುದನ್ನು ನೋಡಿದಾಗ, ಅವನಿಗೆ ತನ್ನದೇ ಆದ ಮಾರ್ಗವನ್ನು ಆರಿಸಿಕೊಳ್ಳಲು ಪೋಷಕರು ಬಿಟ್ಟರು.
ನಾವೆಲ್ಲರೂ ಕೇಳುವಷ್ಟು ಜಹೀನ್ ಅವರ ಹಾದಿ ಸುಲಭವಾಗಿರಲಿಲ್ಲ. ಆನ್‌ಲೈನ್ ವಿಡಿಯೋಗಳು, ಟ್ರೈಯಲ್ ಆಂಡ್ ಎರರ್ ಮತ್ತು ಗಂಟೆಗಟ್ಟಲೆಯ ಕಠಿಣ ಪರಿಶ್ರಮದ ಮೂಲಕ ಎಲ್ಲವನ್ನೂ ಕಲಿತ. ಆದರೆ ಜಹೀನ್ ತಾನು ಮಾತ್ರ ಕೇವಲ ವಿದ್ಯಾವಂತನಾಗುವುದಲ್ಲದೆ ಸಮಾಜಕ್ಕೆ ಉಪಯುಕ್ತನಾಗಬೇಕು ಎಂಬ ಉದ್ದೇಶ ಹೊಂದಿದ್ದಾನೆ. ಎಲ್ಲರಿಗೂ ತಿಳಿದಿರುವ ಹಾಗೆ ಕಾಶ್ಮೀರದಲ್ಲಿ ಸ್ಟಾರ್ಟ್ ಅಪ್ ಸಂಸ್ಕೃತಿ ಇನ್ನೂ ಹೊಸದು. ಯಶಸ್ಸಿನ ಸಾಂಪ್ರದಾಯಿಕ ವ್ಯಾಖ್ಯಾನದಿಂದ ಹೊರಬರಲು ಬಯಸುವ ಹೊಸ ಪೀಳಿಗೆಯ ಯುವಕರಲ್ಲಿ ಜಹೀನ್ ಒಬ್ಬರು. ಇಂದು ಜಹೀನ್ ಅಂಕಗಳ ಓಟವನ್ನು ಮೀರಿ ಏನನ್ನಾದರೂ ಮಾಡಲು ಬಯಸುವ ಅನೇಕ ಮಕ್ಕಳಿಗೆ ಸ್ಫೂರ್ತಿಯಾಗಿದ್ದಾನೆ.