Education| ಕಳೆದ ವರ್ಷದ ಖಾಸಗಿ ಶಾಲಾ ಶುಲ್ಕ 15% ಕಡಿತ

By Kannadaprabha News  |  First Published Nov 14, 2021, 6:54 AM IST

*   2020-21ನೇ ಸಾಲಿನಲ್ಲಿ ಹೆಚ್ಚುವರಿ ಶುಲ್ಕ ಪಡೆದಿದ್ದರೆ ವಾಪಸ್‌ ಕೊಡಬೇಕು
*   ಅಭಿವೃದ್ಧಿ ಶುಲ್ಕ, ವಂತಿಗೆ ಪಡೆವಂತಿಲ್ಲ
*   ಸರ್ಕಾರದಿಂದ ನ್ಯಾಯಾಂಗ ನಿಂದನೆ
 


ಬೆಂಗಳೂರು(ನ.14):  ಹೈಕೋರ್ಟ್‌(Highcourt) ಆದೇಶದ ಹಿನ್ನೆಲೆಯಲ್ಲಿ 2020-21ನೇ ಸಾಲಿನಲ್ಲಿ ಖಾಸಗಿ ಅನುದಾನ ರಹಿತ ಶಾಲೆಗಳು ಶೇ. 15ರಷ್ಟು ಬೋಧನಾ ಶುಲ್ಕ ಕಡಿತಗೊಳಿಸಿ, ಶೇ. 85ರಷ್ಟು ಶುಲ್ಕ ಪಡೆಯಬೇಕು. ಹೆಚ್ಚುವರಿ ಶುಲ್ಕ(Fees) ಪಡೆದಿದ್ದರೆ ವಾಪಸ್‌ ನೀಡಬೇಕು, ಇನ್ನುಳಿದ ಯಾವುದೇ ಶುಲ್ಕ ಪಡೆಯಬಾರದೆಂದು ರಾಜ್ಯ ಸರ್ಕಾರ(Government Of Karnataka) ಆದೇಶ ಹೊರಡಿಸಿದೆ.

ಒಂದೊಮ್ಮೆ ಪೂರ್ಣ ಶುಲ್ಕ ಪಡೆದಿದ್ದರೆ ಪೋಷಕರಿಗೆ(Parents) ಹಿಂದಿರುಗಿಸಬೇಕು. ಇಲ್ಲದಿದ್ದರೆ, 2021-22 ನೇ ಸಾಲಿನ ಶುಲ್ಕಕ್ಕೆ ಹೊಂದಾಣಿಕೆ ಮಾಡಿಕೊಳ್ಳಬೇಕು, ಬೋಧನಾ ಶುಲ್ಕ (Tuition Feeಹೊರತುಪಡಿಸಿ ಬೇರಾವುದೇ ಶುಲ್ಕ ಪಡೆಯುವಂತಿಲ್ಲ. ಶಾಲಾ ಅಭಿವೃದ್ಧಿ ಶುಲ್ಕ(School Development Fee), ಐಚ್ಛಿಕ ಶುಲ್ಕ, ಟ್ರಸ್ಟ್‌ ಹಾಗೂ ಸೊಸೈಟಿಗಳಿಗೆ ಯಾವುದೇ ವಂತಿಗೆ ಸ್ವೀಕರಿಸದಂತೆ ಸರ್ಕಾರ ನಿರ್ಬಂಧ ವಿಧಿಸಿದೆ. ಒಂದೊಮ್ಮೆ, ಶೇ.15 ಕ್ಕಿಂತಲೂ ಹೆಚ್ಚು ಶುಲ್ಕ ಕಡಿತಗೊಳಿಸಲು ಆಡಳಿತ ಮಂಡಳಿಗಳು ಇಚ್ಛಿಸಿದರೆ ನೀಡಬಹುದು ಎಂದು ತಿಳಿಸಲಾಗಿದೆ.

Tap to resize

Latest Videos

undefined

ಎನ್ಇಪಿ ಜಾರಿಯಿಂದ ಅಗ್ರಸ್ಥಾನಕ್ಕೆ ಭಾರತ : ಅಶ್ವತ್ಥನಾರಾಯಣ

ಶುಲ್ಕದ ಬಗ್ಗೆ ತಕರಾರು ಇದ್ದಲ್ಲಿ ಬೆಂಗಳೂರಿನಲ್ಲಿ(Bengaluru) ವಲಯವಾರು ನಿರ್ದೇಶಕರು, ಜಿಲ್ಲಾ ಮಟ್ಟದಲ್ಲಿ ಡಯಟ್‌ ಪ್ರಾಂಶುಪಾಲರು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ಸಮಿತಿಗಳನ್ನು ರಚಿಸಲು ಸರ್ಕಾರ ಮುಂದಾಗಿದೆ.
ಕೊರೋನಾ(Coronavirus) ಹಿನ್ನೆಲೆಯಲ್ಲಿ ಸರಿಯಾಗಿ ತರಗತಿ ನಡೆದಿಲ್ಲ. ಲಾಕ್‌ಡೌನ್‌(Lockdown) ಸಮಯದಲ್ಲಿ ಶಾಲೆಗೆ ರಜೆ ನೀಡಿದ್ದರಿಂದ ಶುಲ್ಕ ಕಡಿತ ಮಾಡಬೇಕು ಎಂದು ಪೋಷಕರು ಒತ್ತಾಯಿಸಿ ಪ್ರತಿಭಟನೆಯನ್ನೂ ನಡೆಸಿದ್ದರು. ಇದಕ್ಕೆ ಮಣಿದ ಸರ್ಕಾರ, ಶೇ.30 ರಷ್ಟು ಶುಲ್ಕ ಕಡಿತ ಮಾಡಿ ಜ.29 ರಂದು ಆದೇಶ ಹೊರಡಿಸಿತ್ತು. ಈ ಆದೇಶ ಪ್ರಶ್ನಿಸಿ ಖಾಸಗಿ ಶಾಲೆಗಳು ಹೈಕೋರ್ಟ್‌ ಮೊರೆ ಹೋಗಿದ್ದವು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಶೇ.15 ರಷ್ಟು ಮಾತ್ರ ಶುಲ್ಕ ಕಡಿತ ಮಾಡಬೇಕು ಎಂದು ಸೆ.16 ರಂದು ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಇದೀಗ ಹೊಸ ಆದೇಶ ಹೊರಡಿಸಿದೆ.

ಕೊರೋನಾ ಹಿನ್ನೆಲೆಯಲ್ಲಿ ಶಾಲಾ ಶುಲ್ಕ ಪಾವತಿಗೆ ಸಂಬಂಧಿಸಿದಂತೆ ಪೋಷಕರು ಮತ್ತು ಖಾಸಗಿ ಶಾಲೆಗಳ ನಡುವೆ ಒಮ್ಮತ ಮೂಡಿರಲಿಲ್ಲ. ಪೂರ್ತಿ ಶುಲ್ಕ ಪಾವತಿಸಿ, ಶುಲ್ಕ ಕಡಿಮೆ ಮಾಡಿದರೆ ಹಣ ವಾಪಸ್‌ ಮಾಡಲಾಗುವುದು ಎಂದು ಶಾಲೆಗಳ ಆಡಳಿತ ಮಂಡಳಿಯವರು ಈ ಹಿಂದೆ ತಿಳಿಸಿದ್ದರು. ಇದರಂತೆ ಕೆಲವರು ಪೂರ್ತಿ ಶುಲ್ಕ ಪಾವತಿಸಿದ್ದರೆ, ಮತ್ತೆ ಕೆಲವರು ಶೇ.70 ರಷ್ಟು, ಮತ್ತೆ ಕೆಲವರು ಶುಲ್ಕ ಪಾವತಿಸದೇ ನ್ಯಾಯಾಲಯದ(Court) ತೀರ್ಪಿಗೆ ಕಾಯುತ್ತಿದ್ದರು.

ಸರ್ಕಾರದಿಂದ ನ್ಯಾಯಾಂಗ ನಿಂದನೆ

ಶಾಲೆಯ ವಾರ್ಷಿಕ ಶುಲ್ಕದಲ್ಲಿ ಶೇ.15 ರಷ್ಟನ್ನು ಕಡಿತ ಮಾಡಿ ಎಂದು ಸುಪ್ರೀಂ ಕೋರ್ಟ್‌(Supreme Court) ನೀಡಿದ್ದ ಆದೇಶ ಉಲ್ಲೇಖಿಸಿ ಹೈಕೋರ್ಟ್‌ ಆದೇಶ ಹೊರಡಿಸಿತ್ತು. ಆದರೆ ರಾಜ್ಯ ಸರ್ಕಾರ ಬೋಧನಾ ಶುಲ್ಕದಲ್ಲಿ ಶೇ.85 ಮಾತ್ರ ಪಡೆಯಬೇಕು ಎಂದು ಹೇಳಿ ಪೋಷಕರು ಮತ್ತು ಶಾಲೆಗಳ ನಡುವೆ ಘರ್ಷಣೆ ಉಂಟು ಮಾಡುತ್ತಿದೆ. ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ(Judicial Abuse) ಅರ್ಜಿ ದಾಖಲಿಸಲಾಗುವುದು ಎಂದು ಕ್ಯಾಮ್ಸ್‌ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್‌ ತಿಳಿಸಿದ್ದಾರೆ.  

ಡಿಗ್ರಿಯಲ್ಲಿ ಕನ್ನಡ ಕಡ್ಡಾಯ : ಮತ್ತೆ ಹೈಕೋರ್ಟ್‌ ಆಕ್ಷೇಪ

ಶಿಕ್ಷಕರಿಗೆ ಲಸಿಕೆ ಕಡ್ಡಾಯ:

ಶಿಕ್ಷಕರು, ಸಿಬ್ಬಂದಿ ಹಾಗೂ ಪೋಷಕರು ಕಡ್ಡಾಯವಾಗಿ ಎರಡು ಡೋಸ್‌ ಕೋವಿಡ್‌ ಲಸಿಕೆ (Covid Vaccine) ಪಡೆದಿರಬೇಕು. ಎಲ್ಲರೂ ಮಾಸ್ಕ್‌ (mask) ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು (Social Distancing), ಮಕ್ಕಳನ್ನು ಶಾಲೆಗೆ ಕಳುಹಿಸುವ ಪೋಷಕರ ಒಪ್ಪಿಗೆ ಪತ್ರ ಪಡೆಯುವುದು ಕಡ್ಡಾಯ ಎಂದು ಸರ್ಕಾರ ಸೂಚಿಸಿದೆ.

ಮಕ್ಕಳು ಮನೆಯಿಂದಲೇ ಉಪಾಹಾರ ತರಬೇಕು, ಶಾಲೆಗಳಲ್ಲಿ ಮಕ್ಕಳ ಸಂಖ್ಯೆಗೆ ಅಗತ್ಯಕ್ಕೆ ಅನುಗುಣವಾಗಿ ಕುಡಿಯಲು ಬಿಸಿ ನೀರಿನ ವ್ಯವಸ್ಥೆ ಮಾಡಬೇಕು. ಕೈ ತೊಳೆಯಲು ಸಾಬೂನು ವ್ಯವಸ್ಥೆ ಮಾಡಬೇಕು. ಮಕ್ಕಳನ್ನು ಕನಿಷ್ಠ 1 ಮೀಟರ್‌ ಅಂತರದಲ್ಲಿ ಕೂರಿಸಬೇಕು. ಮಕ್ಕಳ ಸಂಖ್ಯೆ ಹೆಚ್ಚಿದ್ದರೆ ತಂಡಗಳನ್ನು ರಚಿಸಿ ಒಂದು ತಂಡ ಒಂದು ದಿನ, ಮತ್ತೊಂದು ತಂಡ ಮರುದಿನ ಬರಲು ಸೂಚಿಸಬೇಕು. ಮಕ್ಕಳು, ಸಿಬ್ಬಂದಿ ಪ್ರತಿ 30 ನಿಮಿಷಕ್ಕೊಮ್ಮೆ ಕೈತೊಳೆಯಬೇಕು. ಕೇಂದ್ರಗಳಿಗೆ ಸಾರ್ವಜನಿಕರ ಸಂದರ್ಶನ ನಿರ್ಬಂಧಿಸಬೇಕು ಎಂದು ಸೂಚಿಸಲಾಗಿದೆ.
 

click me!