ಕಳೆದ ಹತ್ತು ವರ್ಷಗಳಲ್ಲಿ ಕೇವಲ ನಾಲ್ಕು ಬಾರಿ ಮಾತ್ರ ಪರೀಕ್ಷೆಗಳನ್ನು ನಡೆಸಿದೆ. 2021ರ ಫೆಬ್ರವರಿಯಲ್ಲಿ ಕೆಎಎಸ್ ಮುಖ್ಯ ಪರೀಕ್ಷೆ ಬರೆದಿದ್ದ ಸುಮಾರು 2,200 ಅಭ್ಯರ್ಥಿಗಳ ಫಲಿತಾಂಶ ಇನ್ನೂ ಪ್ರಕಟವಾಗಿಲ್ಲ.
ಬೆಂಗಳೂರು(ಮೇ.20): 2021ರ ಫೆಬ್ರವರಿಯಲ್ಲಿ ಕೆಎಎಸ್ (Karnataka Administrative Service) ಮುಖ್ಯ ಪರೀಕ್ಷೆ ಬರೆದಿದ್ದ ಸುಮಾರು 2,200 ಅಭ್ಯರ್ಥಿಗಳ ಫಲಿತಾಂಶ ಇನ್ನೂ ಪ್ರಕಟವಾಗಿಲ್ಲ.
ಕೆಎಎಸ್ ಪರೀಕ್ಷೆಗಳನ್ನು ನಡೆಸುವ ಕರ್ನಾಟಕ ಲೋಕಸೇವಾ ಆಯೋಗವು ( Karnataka Public Service Commission - ಕೆಪಿಎಸ್‌ಸಿ) ಕಳೆದ ಹತ್ತು ವರ್ಷಗಳಲ್ಲಿ ಕೇವಲ ನಾಲ್ಕು ಬಾರಿ ಮಾತ್ರ ಪರೀಕ್ಷೆಗಳನ್ನು ನಡೆಸಿದೆ. ಪರೀಕ್ಷೆಗಳನ್ನು ನಡೆಸುವಲ್ಲಿನ ಅನಿಯಮಿತ ವೇಳಾಪಟ್ಟಿ ಮತ್ತು ಫಲಿತಾಂಶಗಳನ್ನು ಪ್ರಕಟಿಸುವಲ್ಲಿನ ವಿಳಂಬವು ಕೆಎಎಸ್ ಆಕಾಂಕ್ಷಿಗಳನ್ನು ಅವಕಾಶಗಳಿಂದ ವಂಚಿತಗೊಳಿಸುತ್ತದೆ, ಏಕೆಂದರೆ ಸಾಮಾನ್ಯ ಅರ್ಹತೆಯ ಅಭ್ಯರ್ಥಿಯು 35 ವರ್ಷ ವಯಸ್ಸಿನ ಮಿತಿಯನ್ನು ದಾಟುವ ಮೊದಲು ಐದು ಬಾರಿ ಮಾತ್ರ ಪರೀಕ್ಷೆ ಬರೆಯಬಹುದಾಗಿದೆ.
2012, 2015, 2017 ಮತ್ತು 2020 ರಲ್ಲಿ ಕರ್ನಾಟಕ ಲೋಕಸೇವಾ ಆಯೋಗವು ಕೆಎಎಸ್ ಪರೀಕ್ಷೆಗಳನ್ನು ನಡೆಸಿತು. ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ( Union Public Service Commission - UPSC) ಪ್ರತಿ ವರ್ಷ ಪರೀಕ್ಷೆಗಳಿಗೆ ಅಧಿಸೂಚನೆಯನ್ನು ಹೊರಡಿಸುವುದಿಲ್ಲ. ಅಲ್ಲದೆ, ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಳು ಮತ್ತು ಸಂದರ್ಶನಗಳನ್ನು ನಡೆಸುವುದು ಸೇರಿದಂತೆ ಸಂಪೂರ್ಣ ಪ್ರಕ್ರಿಯೆಯು ತೀರಾ ವಿಳಂಬವಾಗಿದೆ.
ಜೂನ್ ಮೂರನೇ ವಾರದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ
ಕೊನೆಯ ಬಾರಿಗೆ ಜನವರಿ 2020 ರಲ್ಲಿ 106 ಹುದ್ದೆಗಳಿಗೆ ಕೆಪಿಎಸ್ ಸಿ ಪರೀಕ್ಷಾ ಅಧಿಸೂಚನೆ ಹೊರಡಿಸಿತ್ತು, ಇದಕ್ಕಾಗಿ ಆಗಸ್ಟ್ 2020 ರಲ್ಲಿ ಪೂರ್ವಭಾವಿ ಪರೀಕ್ಷೆ ನಡೆಸಿತ್ತು. 1.67 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದು ಅವರಲ್ಲಿ ಸುಮಾರು 2,200 ಜನರು ಮುಖ್ಯ ಪರೀಕ್ಷೆಗಳನ್ನು ಬರೆಯಲು ಅರ್ಹರಾಗಿದ್ದರು. ಫೆಬ್ರವರಿ 2021 ರಲ್ಲಿ ಪರೀಕ್ಷೆ ನಡೆದಿತ್ತು 15 ತಿಂಗಳುಗಳು ಕಳೆದರೂ ಇನ್ನೂ ಫಲಿತಾಂಶ ಪ್ರಕಟವಾಗಿಲ್ಲ ಎಂದು ಎಕ್ಸಾಂ ಬರೆದಿದ್ದ ಆಕಾಂಕ್ಷಿಯೊಬ್ಬರು ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.
ಸಾಮಾನ್ಯ ವರ್ಗಕ್ಕೆ 35 ವರ್ಷ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 38 ವರ್ಷ ವಯೋಮಿತಿ ಇರುವುದರಿಂದ ನಮಗೆ ಅವಕಾಶ ಸಿಗುವುದು ತೀರಾ ಕಡಿಮೆ. ಅಲ್ಲದೆ, ಸಾಮಾನ್ಯ ವರ್ಗಕ್ಕೆ ಐದು ಮತ್ತು ಒಬಿಸಿ ಆಕಾಂಕ್ಷಿಗಳಿಗೆ ಕೇವಲ ಏಳು ಪ್ರಯತ್ನಗಳ ಮಿತಿ ಇದೆ, ಮತ್ತೊಬ್ಬ ಅಭ್ಯರ್ಥಿ ಹೇಳಿದ್ದಾರೆ.
ತಾನು ಫೆಬ್ರವರಿ 2021 ರಲ್ಲಿ ಕೆಎಎಸ್ ಮುಖ್ಯ ಪರೀಕ್ಷೆ ತೆಗೆದುಕೊಂಡಿದ್ದೇನೆ ಎಂದು ಈಗಾಗಲೇ ಎರಡು ಪ್ರಯತ್ನಗಳನ್ನು ಮಾಡಿರುವ ಇನ್ನೊಬ್ಬ ಆಕಾಂಕ್ಷಿ ಹೇಳಿದ್ದಾರೆ. ಐಎಎಸ್ ಮುಖ್ಯ ಪರೀಕ್ಷೆಗಳು ಅದಕ್ಕಿಂತ ಒಂದು ತಿಂಗಳ ಹಿಂದೆ ನಡೆದಿದ್ದವು. “ನಾವು ಇನ್ನೂ ನಮ್ಮ ಫಲಿತಾಂಶಗಳಿಗಾಗಿ ಕಾಯುತ್ತಿದ್ದೇವೆ, ಆದರೆ ಐಎಎಸ್ ಪರೀಕ್ಷೆ ಬರೆದವರು ತಮ್ಮ ಫಲಿತಾಂಶಗ ಪ್ರಕಟವಾಗಿ ಆಯ್ಕೆಯಾಗಿದ್ದಾರೆ. ಮುಂದಿನ ಐಎಎಸ್ ಪರೀಕ್ಷಾ ಬ್ಯಾಚ್ ಕೂಡ ತಮ್ಮ ಮುಖ್ಯ ಪರೀಕ್ಷೆಗಳನ್ನು ಬರೆದು ಆಯ್ಕೆಯ ಅಂತಿಮ ಹಂತದಲ್ಲಿದೆ. ಸುಮಾರು 6 ಲಕ್ಷ ಅಭ್ಯರ್ಥಿಗಳಿರುವ ಯುಪಿಎಸ್‌ಸಿ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿದಾಗ, ಕೆಪಿಎಸ್‌ಸಿಗೆ ಏಕೆ ಸಾಧ್ಯವಿಲ್ಲ ಎಂದು ಅಭ್ಯರ್ಥಿ ಪ್ರಶ್ನಿಸಿದ್ದಾರೆ. 2015ರ ಪರೀಕ್ಷೆಗಳಲ್ಲಿ ಕೆಲವು ಅಭ್ಯರ್ಥಿಗಳು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಮೊರೆ ಹೋಗಿದ್ದರಿಂದ ವಿಳಂಬವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದು ಡಿಜಿಟಲ್ ಮೌಲ್ಯಮಾಪನವಾಗಿರುವುದರಿಂದ ಕೆಲವು ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ಉತ್ತರಗಳನ್ನು ತಿರುಚಲಾಗಿದೆ ಎಂದು ಆರೋಪಿಸಿ ಕೆಲವು ಅಭ್ಯರ್ಥಿಗಳು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (Karnataka Administrative Tribunal-ಕೆಎಟಿ) ಸಂಪರ್ಕಿಸಿದರು. ಹಿಂದಿನ ಖಾಸಗಿ ಏಜೆನ್ಸಿಗಳು ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿದ್ದವು ಆದರೆ ಈಗ ರಾಷ್ಟ್ರೀಯ ಮಾಹಿತಿ ಕೇಂದ್ರವು ಅದನ್ನು ಮಾಡುತ್ತದೆ ಎಂದು ಅಭ್ಯರ್ಥಿಗಳು ವಿವರಿಸಿದ್ದಾರೆ.
ಜೂನ್ ಮೂರನೇ ವಾರದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ
ಹಿಂದಿನ ಬ್ಯಾಚ್‌ಗಳಲ್ಲಿ ಸಮಸ್ಯೆಗಳಿದ್ದರೇ ನಮ್ಮ ಭವಿಷ್ಯವನ್ನು ಏಕೆ ಹಾಳು ಮಾಡಿಕೊಳ್ಳಬೇಕು ಎಂದು ಅವರು ಪ್ರಶ್ನಿಸಿದ್ದಾರೆ. ಅನೇಕ ಅಭ್ಯರ್ಥಿಗಳು ಕೆಎಎಸ್ ಪರೀಕ್ಷೆಗಳಿಗೆ ತಯಾರಾಗಲು ತಮ್ಮ ಖಾಸಗಿ ಉದ್ಯೋಗಗಳನ್ನು ತೊರೆದಿದ್ದಾರೆ. ಈಗ ಅವರು ತಮ್ಮ ಹಳೆಯ ಉದ್ಯೋಗಗಳಿಗೆ ಹಿಂತಿರುಗಲು ಸಾಧ್ಯವಾಗುತ್ತಿಲ್ಲ, ಜೊತೆಗೆ ಫಲಿತಾಂಶ ಕೂಡ ಪ್ರಕಟಿಸದ ಕಾರಣ ಖಿನ್ನತೆಗೆಗೊಳಗಾಗಿದ್ದಾರೆ.
ಐಚ್ಛಿಕ ಪತ್ರಿಕೆಗಳನ್ನು ತೆಗೆದುಹಾಕಲು ಮತ್ತು ಸಾಮಾನ್ಯ ಪತ್ರಿಕೆಯನ್ನು ಪರಿಚಯಿಸಲು ಸರ್ಕಾರ ನಿರ್ಧರಿಸಿದೆ, ಇದು ಸಂಪೂರ್ಣ ಕೆಎಎಸ್ ಪರೀಕ್ಷೆ ಮತ್ತು ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ತೆಗೆದುಕೊಳ್ಳುವ ಸಮಯವನ್ನು ಕಡಿಮೆ ಮಾಡುತ್ತದೆ. ಮುಂದಿನ ದಿನಗಳಲ್ಲಿ ಇದನ್ನು ಸುವ್ಯವಸ್ಥಿತಗೊಳಿಸಲಾಗುವುದು ಎಂದು ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಮುಖ್ಯಸ್ಥ ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್ ಹೇಳಿದ್ದಾರೆ.