ಬೆಂಗಳೂರು: ಬಿಬಿಎಂಪಿ ಶಾಲಾ, ಕಾಲೇಜಿಗೆ ಕನಸಿನ ಶಾಲೆಯಡಿ 1 ಲಕ್ಷ ನೆರವು

By Kannadaprabha NewsFirst Published Nov 3, 2022, 5:30 AM IST
Highlights

17 ಶಾಲೆ-ಕಾಲೇಜಿಗೆ ಪ್ರೋತ್ಸಾಹ ಧನ, ಎ.ಪಿ.ಜೆ ಅಬ್ದುಲ್‌ ಕಲಾಂ ಅವರ ‘ಕನಸಿನ ಶಾಲೆ’ಗೆ ಬಿಬಿಎಂಪಿಯಿಂದ 1 ಲಕ್ಷ ಅನುದಾನ

ಬೆಂಗಳೂರು(ನ.03):  ವಿಜ್ಞಾನಿ, ಮಾಜಿ ರಾಷ್ಟ್ರಪತಿ, ದಿವಂಗತ ಡಾ. ಎ.ಪಿ.ಜೆ ಅಬ್ದುಲ್‌ ಕಲಾಂ ಅವರ ‘ಕನಸಿನ ಶಾಲೆ’ ಪರಿಕಲ್ಪನೆಯಡಿ ಶಿಕ್ಷಣ ಗುಣಮಟ್ಟವೃದ್ಧಿಸಲು ಉತ್ತಮ ಕ್ರಿಯಾ ಯೋಜನೆ ರೂಪಿಸಿದ ಬಿಬಿಎಂಪಿಯ 17 ಶಾಲಾ, ಕಾಲೇಜುಗಳಿಗೆ ಬಿಬಿಎಂಪಿ ಶಿಕ್ಷಣ ವಿಭಾಗದಿಂದ ತಲಾ .1 ಲಕ್ಷ ಪ್ರೋತ್ಸಾಹ ಧನ ನೀಡಲಾಯಿತು. ಬುಧವಾರ ನಡೆದ ಸಮಾರಂಭದಲ್ಲಿ ‘ಕನಸಿನ ಶಾಲೆ’ ಕಾರ್ಯಕ್ರಮಕ್ಕೆ ಪಾಲಿಕೆ ಶಿಕ್ಷಣ ವಿಭಾಗದ ವಿಶೇಷ ಆಯುಕ್ತ ಡಾ. ರಾಮ್‌ಪ್ರಸಾತ್‌ ಮನೋಹರ್‌ ಚಾಲನೆ ನೀಡಿದರು.

ಬಿಬಿಎಂಪಿಯ ಶಿಕ್ಷಣ ವಿಭಾಗದಡಿ 93 ನರ್ಸರಿ ಶಾಲೆ, 16 ಪ್ರಾಥಮಿಕ ಶಾಲೆ, 18 ಪದವಿ ಪೂರ್ವ ಕಾಲೇಜು, 4 ಪದವಿ ಕಾಲೇಜು ಹಾಗೂ 2 ಸ್ನಾತಕೋತ್ತರ ಪದವಿ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ಈ ಎಲ್ಲ ಶಾಲಾ ಮುಖ್ಯಸ್ಥರಿಗೆ ಡಾ. ಎ.ಪಿ.ಜೆ ಅಬ್ದುಲ್‌ ಕಲಾಂ ಅವರ ‘ಕನಸಿನ ಶಾಲೆ’ ಪರಿಕಲ್ಪನೆಯಡಿ ಶಾಲಾ ಶಿಕ್ಷಣ ಗುಣಮಟ್ಟಸುಧಾರಣೆಗೆ ಸಂಬಂಧಿಸಿದಂತೆ ಕ್ರಿಯಾ ಯೋಜನೆ ರೂಪಿಸುವಂತೆ ನೀಡಿದ ಸೂಚನೆ ಮೇರೆಗೆ ಮುಖ್ಯಸ್ಥರು ಕ್ರಿಯಾ ಯೋಜನೆ ರೂಪಿಸಿ ಸಲ್ಲಿಕೆ ಮಾಡಿದ್ದರು. ಅದರಲ್ಲಿ ಅತ್ಯುತ್ತಮ ಕ್ರಿಯಾ ಯೋಜನೆ ರೂಪಿಸಿದ 17 ಶಾಲಾ ಕಾಲೇಜುಗಳಿಗೆ ಕ್ರಿಯಾ ಯೋಜನೆ ಅನುಷ್ಠಾನಕ್ಕೆ ತಲಾ .1 ಲಕ್ಷ ಪ್ರೋತ್ಸಾಹ ಧನವನ್ನು ನೀಡಲಾಯಿತು. ಪ್ರೋತ್ಸಾಹ ಧನ ಪಡೆದ ಶಾಲಾ ಕಾಲೇಜುಗಳ ಪೈಕಿ ಐದು ಪ್ರಾಥಮಿಕ, ಐದು ಪ್ರೌಢಶಾಲೆ, ಐದು ಪದವಿ ಪೂರ್ವ ಕಾಲೇಜು ಹಾಗೂ 2 ಪದವಿ ಕಾಲೇಜುಗಳಿವೆ.

BBMP Night School; ಬಡ ವಿದ್ಯಾರ್ಥಿಗಳ ಅನುಕೂಲಕ್ಕೆ ಬಿಬಿಎಂಪಿ ತೆರೆಯಲಿದೆ ಸಂಜೆ ಶಾಲೆ

ಜತೆಗೆ ಉತ್ತಮ ಕ್ರಿಯಾ ಯೋಜನೆ ಸಿದ್ಧಪಡಿಸಿದ 17 ಶಾಲಾ ಮುಖ್ಯಸ್ಥರಿಗೆ ಕಾರ್ಯಕ್ರಮದಲ್ಲಿ ಪ್ರಶಂಸನಾ ಪತ್ರ ವಿತರಣೆ ಮಾಡಲಾಯಿತು. ಇದೇ ವೇಳೆ ಡಾ. ಎ.ಪಿ.ಜೆ ಅಬ್ದುಲ್‌ ಕಲಾಂ ಅವರ ಕನಸಿನ ಶಾಲೆ ಕಾರ್ಯಕ್ರಮದ ಸಂಚಿಕೆಯನ್ನು ಅನಾವರಣಗೊಳಿಸಲಾಯಿತು. ಸಮಾರಂಭದಲ್ಲಿ ಸಹಾಯಕ ಆಯುಕ್ತ ಉಮೇಶ್‌, ಶಿಕ್ಷಣ ಇಲಾಖೆಯ ಉಪ ನಿರ್ದೇಶಕ(ಶಿಕ್ಷಣ) ವಿ.ಜಿ ಲೋಕೇಶ್‌, ಹಿರಿಯ ಸಹಾಯ ನಿರ್ದೇಶಕ ಹನುಮಂತಯ್ಯ ಇದ್ದರು.

ಹಳ್ಳಿಯಿಂದ ಬಂದು ಬೆಂಗಳೂರು ನಗರದ ಬೆಳವಣಿಗಾಗಿ ದುಡಿಯುತ್ತಿರುವ ಸಮುದಾಯದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಕೆಲಸವನ್ನು ಬಿಬಿಎಂಪಿ ಶಿಕ್ಷಣ ವಿಭಾಗ ಮಾಡುತ್ತಿದೆ ಅಂತ ಪಾಲಿಕೆ ಶಿಕ್ಷಣ ವಿಭಾಗ ವಿಶೇಷ ಆಯುಕ್ತ ಡಾ. ರಾಮ್‌ಪ್ರಸಾತ್‌ ಮನೋಹರ್‌ ತಿಳಿಸಿದ್ದಾರೆ. 
 

click me!