8ರಿಂದ 10ನೇ ತರಗತಿ ವರೆಗಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಉಪಯುಕ್ತ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ.
ಬೆಂಗಳೂರು, (ಜುಲೈ.13): ಕರೋನಾ ಸಂಕಷ್ಟ ಕಾಲದಲ್ಲೂ ಮಕ್ಕಳ ಕಲಿಕೆಯನ್ನು ನಿರಂತರವಾಗಿಸುವ ನಿಟ್ಟಿನಲ್ಲಿ 8ರಿಂದ 10ನೇ ತರಗತಿ ವರೆಗಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜು.20ರಿಂದ ಆ. 8ರವರೆಗೆ ದೂರದರ್ಶನ ಚಂದನ ವಾಹಿನಿಯಲ್ಲಿ ಸೇತುಬಂಧ ಕಾರ್ಯಕ್ರಮ ಪ್ರಸಾರ ಮಾಡಲಾಗುತ್ತಿದೆ.
ಈ ಕುರಿತು ಇಂದು (ಸೋಮವಾರ) ಸುದ್ದಿಗೋಷ್ಠಿ ನಡೆಸಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ಕುಮಾರ್, ಮಕ್ಕಳು ಮನೆಯಲ್ಲಿ ಇದ್ದುಕೊಂಡೇ ಕಲಿಕೆಯಲ್ಲಿ ಭಾಗವಹಿಸಲು ಸಹಾಯವಾಗುವಂತೆ ಪ್ರೇರೇಪಿಸುವ ಉದ್ದೇಶದಿಂದ ತರಗತಿಗಳನ್ನು ನಡೆಸಲಾಗುತ್ತಿದೆ. ಯಾವ ಸಮಯಕ್ಕೆ ತರಗತಿಗಳು ಪ್ರಸಾರ ಆಗಲಿವೆ ಎಂಬ ವೇಳಾಪಟ್ಟಿಯನ್ನು ಸದ್ಯದಲ್ಲೇ ತಿಳಿಸಲಾಗುತ್ತದೆ. ಸೇತುಬಂಧ ಕಾರ್ಯಕ್ರಮದ ವಿಡಿಯೋಗಳನ್ನು ಯೂ ಟ್ಯೂಬ್ನಲ್ಲೂ ಅಪ್ಲೋಡ್ ಮಾಡಲಾಗುತ್ತದೆ ಎಂದು ತಿಳಿಸಿದರು.
ಸರ್ಕಾರದ ಆದೇಶಗಳಿಗೆ ತಡೆ ನೀಡಿ ಆನ್‌ಲೈನ್ ಶಿಕ್ಷಣಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ಹೈಕೋರ್ಟ್
ಸೇತುಬಂಧ ಕಾರ್ಯಕ್ರಮದ ಅಡಿ ಪ್ರಥಮ ಭಾಷೆ ಕನ್ನಡ, ಇಂಗ್ಲಿಷ್, ಸಂಸ್ಕೃತ, ಉರ್ದು, ದ್ವಿತೀಯ ಭಾಷೆ ಇಂಗ್ಲಿಷ್, ತೃತೀಯ ಭಾಷೆ ಹಿಂದಿ, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯವನ್ನು ಬಿತ್ತರಿಸಲಾಗುತ್ತದೆ. ಸದ್ಯ ಪ್ರೌಢಶಾಲಾ ವಿದ್ಯಾಥಿರ್ಗಳಿಗೆ ಕನ್ನಡ ಮಾಧ್ಯಮದಲ್ಲಿ ಮಾತ್ರ ತರಗತಿ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ 1ರಿಂದ 10ನೇ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೆ ಕನ್ನಡ ಹಾಗೂ ಇಂಗ್ಲಿಷ್ ಎರಡೂ ಮಾಧ್ಯಮದಲ್ಲಿ ವಿಡಿಯೋ ಪಾಠಗಳನ್ನು ಶಿಕ್ಷಣ ಇಲಾಖೆ ಸಹಯೋಗದಲ್ಲಿ ದೂರದರ್ಶನ ಚಂದನ ವಾಹಿನಿಯು ಪ್ರಸಾರ ಮಾಡಲಿದೆ ಎದು ಹೇಳಿದರು.
ಈ ತರಗತಿಗಳ ಕಲಿಕೆಯನ್ನು ಮೌಲ್ಯಮಾಪನ ಮಾಡುವುದಕ್ಕಾಗಿ ಪ್ರತಿ 20 ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಒಬ್ಬ ಶಿಕ್ಷಕರನ್ನು ನೇಮಿಸಲಾಗುತ್ತದೆ. ಈ ಶಿಕ್ಷಕರು ವಿದ್ಯಾರ್ಥಿಗಳ ಕಲಿಕೆಯನ್ನು ಯಾವ ರೀತಿಯಲ್ಲಿ ಮೌಲ್ಯಮಾಪನ ಮಾಡಬೇಕು ಎಂಬುದನ್ನು ತಿಳಿಯುವುದಕ್ಕಾಗಿ ಇಲಾಖೆ ವತಿಯಿಂದ ರೂಪುರೇಷೆ ಪ್ರಕಟಿಸಲಾಗುವುದು ಎಂದರು.