ಈ ಮಕ್ಕಳ ತಾಯಂದಿರಿಗೆ ಇನ್ಮುಂದೆ ಎಕ್ಸಾಮ್ ಟೆನ್ಷನ್ ಇಲ್ಲ!

By Kannadaprabha NewsFirst Published Oct 15, 2019, 11:13 AM IST
Highlights

ಮಕ್ಕಳಲ್ಲಿ ಪರೀಕ್ಷಾ ಭಯ ಹೋಗಲಾಡಿಸಲು ಲಿಖಿತ ಅಥವಾ ಮೌಖಿಕ ಪರೀಕ್ಷೆ ಮಾಡುವಂತಿಲ್ಲ | ಅಲ್ಲದೇ ಪಾಸ್‌ ಅಥವಾ ಫೇಲ್‌ ಎಂದು ವಿದ್ಯಾರ್ಥಿಯ ಸಾಮರ್ಥ್ಯವನ್ನು ಅಳೆಯುವಂತಿಲ್ಲ | ಎನ್‌ಸಿಇಆರ್‌ಟಿಯಿಂದ ಹೊಸ ನಿಯಮ ಜಾರಿ 

ನವದೆಹಲಿ (ಅ.15): ಸಣ್ಣ ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ ಹೋಗಲಾಡಿಸಲು ಮುಂದಾಗಿರುವ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ, ಯಾವುದೇ ಕಾರಣಕ್ಕೂ ಪ್ರೀ ಸ್ಕೂಲ್‌ ವಿದ್ಯಾರ್ಥಿಗಳಿಗೆ ಲಿಖಿತ ಹಾಗೂ ಮೌಖಿಕ ಪರೀಕ್ಷೆ ಮಾಡುವಂತಿಲ್ಲ ಎಂದು ಸೂಚನೆ ನೀಡಿದೆ.

ಕಲ್ಯಾಣ ಕರ್ನಾಟಕದಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ಸುರೇಶ್ ಕುಮಾರ್ ಮಹತ್ವದ ನಿರ್ಧಾರ

ಅಲ್ಲದೇ ಪಾಸ್‌ ಅಥವಾ ಫೇಲ್‌ ಎಂದು ವಿದ್ಯಾರ್ಥಿಯ ಸಾಮರ್ಥ್ಯವನ್ನು ಅಳೆಯುವಂತಿಲ್ಲ ಎಂದಿದೆ. ಜೊತೆಗೆ ಇದು ಪೋಷಕರ ತಿಳುವಳಿಕೆ ಕೊರತೆಯಿಂದ ಉಂಟಾದ ಹಾನಿಕಾರಕ ಹಾಗೂ ಅನಪೇಕ್ಷಿತ ಅಭ್ಯಾಸ ಎಂದು ಅಭಿಪ್ರಾಯ ಪಟ್ಟಿದೆ.

ಈ ಬಗ್ಗೆ ಆದೇಶ ಹೊರಡಿಸಿರುವ ಮಂಡಳಿ, ಸದ್ಯ ಇರುವ ಪ್ರೀ ಸ್ಕೂಲ್‌ ನಿಯಮಾವಳಿಗಳು ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಕುಸಿಯುವಂತೆ ಮಾಡುತ್ತದೆ. ಆಗಾಗ್ಗೆ ಪರೀಕ್ಷೆ ಮಾಡುವುದು ಹಾಗೂ ಅತಿಯಾದ ಹೋಂ ವರ್ಕ್ ನೀಡುವುದರಿಂದ ಅವರ ಆಟದ ಹಕ್ಕನ್ನು ಕಸಿದುಕೊಂಡಂತಾಗುತ್ತದೆ ಎಂದಿದೆ.

ಅಲ್ಲದೇ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯನ್ನು ಅಳೆಯಲು ಕೆಲ ಮಾನದಂಡಗಳನ್ನು ಎನ್‌ಸಿಇಆರ್‌ಟಿ ಪಟ್ಟಿಮಾಡಿದ್ದು, ದಾಖಲೆಗಳು, ಪರಿಶೀಲನಾ ಪಟ್ಟಿ, ವಿಷಯ ಹಾಗೂ ಇತರ ಮಕ್ಕಳೊಂದಿಗೆ ವಿದ್ಯಾರ್ಥಿಗಳ ಸಂವಹನ ಆಧರಿಸಿ ವಿದ್ಯಾರ್ಥಿಗಳ ಪ್ರಗತಿಯನ್ನು ಅಳೆಯಬೇಕು.

LIC ಪರೀಕ್ಷೆಯಲ್ಲೂ ಕನ್ನಡ ಇಲ್ಲ! ಹಿಂದಿ- ಇಂಗ್ಲೀಷ್ ನಲ್ಲೇ ಬರೆಯಬೇಕು!

ವಿದ್ಯಾರ್ಥಿಗಳು ಎಲ್ಲಿ ಹೇಗೆ ಕಾಲ ಕಳೆಯುತ್ತಾರೆ, ಸಾಮಾಜಿಕ ಸಂಬಂಧ, ಭಾಷಾ ಬಳಕೆ, ವಿನಿಮಯ ಶೈಲಿ, ಆರೋಗ್ಯ ಮತ್ತು ಪೌಷ್ಠಿಕಾಂಶ ಅಭ್ಯಾಸ ಮುಂತಾದವುಗಳ ಬಗ್ಗೆ ಶಿಕ್ಷಕರು ಪಟ್ಟಿಮಾಡಬೇಕು. ಪ್ರತೀ ವಿದ್ಯಾರ್ಥಿಯ ಮಾಹಿತಿ ಪೋಷಕರು ಹಾಗೂ ಶಿಕ್ಷಕರಿಗೆ ಲಭ್ಯವಾಗಬೇಕು. ಕನಿಷ್ಠ ವರ್ಷಕ್ಕೊಂದು ಬಾರಿಯಾದರೂ ಮಕ್ಕಳ ಪ್ರಗತಿ ಬಗ್ಗೆ ಪೊಷಕರಿಗೆ ಲಿಖಿತ ಹಾಗೂ ಮೌಖಿಕ ಮಾಹಿತಿ ಲಭಿಸುವಂತಾಗಬೇಕು. ವಿದ್ಯಾರ್ಥಿ ಶಾಲೆ ಬಿಟ್ಟು ಹೋಗುವವರೆಗೆ ಅಥವಾ ಪ್ರಾಥಮಿಕ ಶಾಲೆ ಸೇರುವವರೆಗೆ ಈ ಎಲ್ಲಾ ಮಾಹಿತಿಗಳು ಇರಬೇಕು ಎಂದು ಅಧಿಸೂಚನೆಯಲ್ಲಿ ಹೇಳಿದೆ.

ಜತೆಗೆ ಶಾಲೆಗಳಲ್ಲಿ ಇರಬೇಕಾದ ಮೂಲಭೂತ ಸೌಕರ್ಯ, ಶಿಕ್ಷಕರ ಅರ್ಹತೆ ಮತ್ತು ವೇತನ, ಪ್ರವೇಶಾತಿ ಪ್ರಕ್ರೀಯೆ, ದಾಖಲೆಗಳ ನಿರ್ವಹಣೆ, ಕಾರ್ಯವಿಧಾನ ಹಾಗೂ ಶಿಕ್ಷಕ ಮತ್ತು ಪೋಷಕರ ನಡುವಿನ ಸಮನ್ವಯತೆಯ ಬಗ್ಗೆ ಕೂಡ ಅಧಿಸೂಚನೆಯಲ್ಲಿ ಹೇಳಲಾಗಿದೆ.

click me!