ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಇದರ ಮಧ್ಯೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸುವ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆದಿವೆ. ಈ ಬಗ್ಗೆ ಸಚಿವ ಸುರೇಶ್ ಕುಮಾರ್ ಮಹತ್ವದ ವಿಚಾರಗಳನ್ನು ಹಂಚಿಕೊಂಡಿದ್ದಾರೆ
ಬೆಂಗಳೂರು, (ಮೇ.23): ಎಂಟೂವರೆ ಲಕ್ಷ ಎಸ್‌ಎಸ್‌ಎಲ್‌ಸಿ ಮಕ್ಕಳಿಗೂ ಮಾಸ್ಕ್ ನೀಡಲಾಗುವುದು. ಎಲ್ಲ ಪರೀಕ್ಷಾ ಸೆಂಟರ್ ಬಳಿ ಆರೋಗ್ಯ ಇಲಾಖೆ ಸಿಬ್ಬಂದಿ ಪರೀಕ್ಷೆಗೆ ಬರುವವರನ್ನು ಪರೀಕ್ಷೆ ಮಾಡಲಿದ್ದಾರೆ ಎಂದು ಹೇಳಿದ್ದಾರೆ.
ಶನಿವಾರ ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಪರೀಕ್ಷೆಗೆ ಮುಂಚೆ ಎಲ್ಲಾ ಕೊಠಡಿ ಸ್ಯಾನಿಟೈಸ್ಡ್ ಮಾಡುತ್ತೇವೆ. ಒಂದು ಕೊಠಡಿಯಲ್ಲಿ 18 ಜನ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡುತ್ತೇವೆ ಎಂದು ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಸ್ಪಷ್ಟಪಡಿಸಿದರು.
ಕರ್ನಾಟಕ SSLC ಪರೀಕ್ಷೆ ವೇಳಾಪಟ್ಟಿ ಪ್ರಕಟ
ಇನ್ನು ಚಿಕ್ಕ ಮಕ್ಕಳಿಗೂ ಆನ್ಲೈನ್ ಟೀಚಿಂಗ್ ಬಗ್ಗೆ ಸಚಿವರ ಬೇಸರ ವ್ಯಕ್ತಪಡಿಸಿದ್ದು, ಶಾಲೆಗಳಲ್ಲಿ ಆನ್ಲೈನ್ ಟೀಚಿಂಗ್ ಗೀಳು ಬಂದಿದೆ. ಎಲ್ಕೆಜಿ, ಯುಕೆಜಿ ಮಕ್ಕಳಿಗೂ ಆನ್ಲೈನ್ ತರಗತಿ ಅರ್ಥವಾಗದ ಒಪ್ಪಲಾಗದ ವಿಚಾರವಾಗಿದ್ದು, ಎಳೆ ಮಕ್ಕಳಿಗೆ ಆನ್ಲೈನ್ ಪಾಠದಿಂದಾಗುವ ಪರಿಣಾಮದ ಬಗ್ಗೆ ವರದಿ ನೀಡುವಂತೆ ನಿಮಾನ್ಸ್ಗೆ ಪತ್ರ ಬರೆದಿದ್ದೇವೆ. ಅವರು ಈ ರೀತಿ ಹಿಂಸೆ ನೀಡಬಾರದು ಎಂದು ಹೇಳಿದ್ದಾರೆ ಎಂದರು.
ಕೊರೋನಾ ವಾಸಿಯಾಗುವ ರೋಗ, ಆತಂಕ ಬೇಡ. ಸಾಮಾಜಿಕ ಅಂತರ ಸಾಮಾಜಿಕ ಎಚ್ಚರಿಕೆ ಆಗಬೇಕು. ಮುಂದಿನ ದಿನಗಳಲ್ಲಿ ಇನ್ನೂ ಸ್ವಲ್ಪ ಸೋಂಕಿತರ ಸಂಖ್ಯೆ ಜಾಸ್ತಿ ಆಗಬಹುದು ಇದನ್ನು ಹೆದರಿಸಿ ಗುಣಪಡಿಸುವ ಶಕ್ತಿ ನಮಗಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಹೋಲಿಸಿದ್ರೆ ನಮ್ಮ ಕೆಲಸ ಶ್ಲಾಘನೀಯ ಎಂದು ಅವರು ನಮ್ಮ ದೇಶದಲ್ಲಿ ಕೊರೋನಾ ನಿರ್ವಹಣೆ ಬಗ್ಗೆ ಸಮರ್ಥಿಸಿಕೊಂಡರು.
ಇದೇ ಜೂನ್ 25ರಿಂದ ಜುಲೈ 3ರ ವರೆಗೆ ಪರೀಕ್ಷೆಗಳು ನಡೆಯಲಿದ್ದು, ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30ರ ವರೆಗೆ ಪರೀಕ್ಷೆಗಳು ನಡೆಯಲಿವೆ.