ಮುಕ್ತ ವಿವಿ: 2011-12ರ ಸಾಲಿನ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅವಕಾಶ

By Web DeskFirst Published May 28, 2019, 10:05 AM IST
Highlights

ಮುಕ್ತ ವಿವಿ: 2011-12ರ ಸಾಲಿನ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅವಕಾಶ | 2011-12ನೇ ಸಾಲಿನವರಿಗೆ ಒಂದು, 2012-13ನೇ ಸಾಲಿನ ಬಿಎ, ಬಿಕಾಂ ವಿದ್ಯಾರ್ಥಿಗಳಿಗೆ 2 ಅವಕಾಶ
 

ಮೈಸೂರು (ಮೇ. 28): ಯುಜಿಸಿ ಮಾನ್ಯತೆ ರದ್ದುಪಡಿಸಿದ್ದ 2011-12 ಮತ್ತು 2012-13ನೇ ಸಾಲಿನ(ಅಂತರ್‌ ಗೃಹ) ಬಿಎ, ಬಿಕಾಂ ವಿಷಯಗಳಿಗೆ ಪ್ರವೇಶಾತಿ ಪಡೆದು ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಮತ್ತು ಪರೀಕ್ಷೆ ತೆಗೆದುಕೊಳ್ಳಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಈಗ ಮತ್ತೊಮ್ಮೆ ಪರೀಕ್ಷೆ ಬರೆಯಲು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ(ಕೆಎಸ್‌ಒಯು) ಅವಕಾಶ ನೀಡಿದೆ.

ಅಂದರೆ 2011-12ನೇ ಸಾಲಿನ ಬಿಎ, ಬಿಕಾಂ ವಿದ್ಯಾರ್ಥಿಗಳಿಗೆ ಒಂದು ಹಾಗೂ 2012-13ನೇ ಸಾಲಿನ ಬಿಎ, ಬಿಕಾಂ ವಿದ್ಯಾರ್ಥಿಗಳಿಗೆ ಎರಡು ಅವಕಾಶಗಳನ್ನು ನೀಡುವ ಮೂಲಕ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ಪ್ರಸ್ತುತ 2019ರ ಜುಲೈಗೆ 31 ವಿಷಯಗಳಿಗೆ ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯಬಹುದಾಗಿದ್ದು, ವಿವಿಯ ಅಧಿಕೃತ ವೆಬ್‌ಸೈಟ್‌

 ksoumysore.karnataka.gov.in ನಿಂದ ಶುಲ್ಕ, ವಿವರಣಾ ಪುಸ್ತಕ ಪಡೆಯಬಹುದು. ವಿದ್ಯಾರ್ಥಿಗಳ ಪ್ರವೇಶಾತಿಗೆ ಆ.31 ಕಡೇ ದಿನ ಎಂದು ವಿವಿ ಕುಲಪತಿ ಪ್ರೊ. ಶಿವಲಿಂಗಯ್ಯ ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

2018-19ನೇ ಶೈಕ್ಷಣಿಕ ಸಾಲಿನಲ್ಲಿ ಹೊಸದಾಗಿ ಪ್ರವೇಶ ಪಡೆದಿರುವ 12 ಸಾವಿರ ವಿದ್ಯಾರ್ಥಿಗಳು ಕೂಡ ವಿವಿಯು ಪ್ರಕಟಿಸುವ ವೇಳಾಪಟ್ಟಿಯ ಪ್ರಕಾರ ಪರೀಕ್ಷೆ ಬರೆಯಲು ಅವಕಾಶವಿದೆ. ಅಂತೆಯೇ ಯುಜಿಸಿ ವಿವಿಯ ಮಾನ್ಯತೆಯನ್ನು 2012-13ನೇ ಸಾಲಿನಿಂದ ಅನ್ವಯವಾಗುವಂತೆ ಮೇ 16ರ ಅಧಿಸೂಚನೆಯಲ್ಲಿ ಹಿಂಪಡೆದಿದ್ದರಿಂದ ಸಂಶೋಧನಾ ವಿದ್ಯಾರ್ಥಿಗಳ ಪ್ರವೇಶಾತಿ ತಡೆ ಹಿಡಿಯಲಾಗಿತ್ತು.

ಈಗ ವಿವಿಯಲ್ಲಿ 2008 ಮತ್ತು 2012ರ ಪಿಎಚ್‌.ಡಿ ಪರಿನಿಯಮಗಳ ಪ್ರಕಾರ ನೋಂದಣಿ ಮಾಡಿಕೊಂಡಿದ್ದ ಸಂಶೋಧನಾರ್ಥಿಗಳ ಸಂಶೋಧನಾ ಕಾರ್ಯ ಮುಂದುವರೆಸುವ ಕುರಿತು ವಿವಿಯ ವ್ಯವಸ್ಥಾಪನಾ ಮಂಡಳಿ ತೀರ್ಮಾನಿಸಿದೆ ಎಂದು ಹೇಳಿದರು.

ಮುಕ್ತ ವಿವಿಯಲ್ಲಿ ಪ್ರವೇಶಾತಿ ಪಡೆದ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮಗಳಾದ ಆಡಳಿತ ಕನ್ನಡ, ಇಂಗ್ಲಿಷ್‌ ಸಂವಹನ ಕೌಶಲ್ಯ, ವೆಬ್‌ ಡಿಸೈನಿಂಗ್‌, ಕಂಪ್ಯೂಟರ್‌ ಫಂಡಮೆಂಟಲ್ಸ್‌, ಡೆಸ್ಕ್‌ಟಾಪ್‌ ಪಬ್ಲಿಷಿಂಗ್‌, ಮಲ್ಟಿಮೀಡಿಯಾ ಮತ್ತು ಬೇಸಿಕ್‌ ಆಫ್‌ ನೆಟ್‌ವರ್ಕಿಂಗ್‌ ಆಯ್ಕೆ ಮಾಡಿಕೊಂಡಿದ್ದು, ಈ ಕೋರ್ಸುಗಳಿಗೆ ಮೈಸೂರು, ಬೆಂಗಳೂರು, ದಾವಣಗೆರೆ, ಧಾರವಾಡ, ಕಲಬುರಗಿ ಮತ್ತು ಉಡುಪಿಯಲ್ಲಿ ಅಗತ್ಯ ತರಬೇತಿ ನೀಡಲಾಗುವುದು. ತರಬೇತಿಗೆ ಹಾಜರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಗುವುದು ಎಂದು ತಿಳಿಸಿದರು.

ಮೈಸೂರು ವಿವಿಯು ದೂರ ಶಿಕ್ಷಣ ಆರಂಭಿಸುವುದರಿಂದ ಕರ್ನಾಟಕ ರಾಜ್ಯ ಮುಕ್ತ ವಿವಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಏಕೆಂದರೆ ಮೈಸೂರು ವಿವಿ ವ್ಯಾಪ್ತಿಯು ಕೇವಲ 3 ಜಿಲ್ಲೆಗೆ ಸೀಮಿತವಾಗಿದೆ, ಶುಲ್ಕದ ಪ್ರಮಾಣವೂ ಹೆಚ್ಚಿದೆ. ಆದರೆ ಕರ್ನಾಟಕ ರಾಜ್ಯ ಮುಕ್ತ ವಿವಿ ವ್ಯಾಪ್ತಿ ರಾಜ್ಯಾದ್ಯಂತ ಇದ್ದು, ಶುಲ್ಕವೂ ಕಡಿಮೆ ಇದೆ. ಆದ್ದರಿಂದ ನಮಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದರು.

click me!