ಪ್ರಥಮ ದರ್ಜೆ ಮತ್ತು ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳು ಸೇರಿದಂತೆ ಕಳೆದ 2017ರಿಂದ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ಕೆಪಿಎಸ್‌ಸಿ ಅಧಿಸೂಚನೆ ಹೊರಡಿಸಿದೆ. ಅಲ್ಲದೆ, ಕೆಲ ಹುದ್ದೆಗಳ ಭರ್ತಿಗೆ ಲಿಖಿತ ಪರೀಕ್ಷೆಗಳನ್ನು ಪೂರ್ಣಗೊಳಿಸಿದೆ. ಆದರೆ, ಈವರೆಗೂ ಫಲಿತಾಂಶ ಪ್ರಕಟಿಸಿಲ್ಲ. ಪರಿಣಾಮ ಉದ್ಯೋಗಾಕಾಂಕ್ಷಿಗಳಲ್ಲಿ ಗೊಂದಲಕ್ಕೆ ಕಾರಣವಾಗಿದೆ.
ಬೆಂಗಳೂರು (ಸೆ. 28): ಸರ್ಕಾರಿ ಕಚೇರಿಗಳಲ್ಲಿ ಖಾಲಿಯಿರುವ ವಿವಿಧ ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಅಧಿಸೂಚನೆ ಹೊರಡಿಸಿ ಒಂದು ವರ್ಷ ಕಳೆಯುತ್ತಿದ್ದರೂ ಫಲಿತಾಂಶ ಮಾತ್ರ ಪ್ರಕಟಿಸುತ್ತಿಲ್ಲ. ಲಿಖಿತ ಪರೀಕ್ಷೆ ಬರೆದಿರುವ ಲಕ್ಷಾಂತರ ಅಭ್ಯರ್ಥಿಗಳು ಫಲಿತಾಂಶಕ್ಕಾಗಿ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದು, ಹಲವು ಅಭ್ಯರ್ಥಿಗಳು ವಯೋಮಿತಿ ಮೀರುವ ಆತಂಕದಲ್ಲಿರುವಂತಾಗಿದೆ.
ಪ್ರಥಮ ದರ್ಜೆ ಮತ್ತು ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳು ಸೇರಿದಂತೆ ಕಳೆದ 2017ರಿಂದ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ಕೆಪಿಎಸ್‌ಸಿ ಅಧಿಸೂಚನೆ ಹೊರಡಿಸಿದೆ. ಅಲ್ಲದೆ, ಕೆಲ ಹುದ್ದೆಗಳ ಭರ್ತಿಗೆ ಲಿಖಿತ ಪರೀಕ್ಷೆಗಳನ್ನು ಪೂರ್ಣಗೊಳಿಸಿದೆ. ಆದರೆ, ಈವರೆಗೂ ಫಲಿತಾಂಶ ಪ್ರಕಟಿಸಿಲ್ಲ. ಪರಿಣಾಮ ಉದ್ಯೋಗಾಕಾಂಕ್ಷಿಗಳಲ್ಲಿ ಗೊಂದಲಕ್ಕೆ ಕಾರಣವಾಗಿದೆ.
ಕರ್ನಾಟಕ ಪೊಲೀಸ್ ಅಧಿಕಸೂಚನೆ: 3026 ಕಾನ್ಸ್ ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ವಸತಿ ಶಾಲೆಗಳ ಶಿಕ್ಷಕ, ಶಿಕ್ಷಕೇತರ ಹಾಗೂ ವಿವಿಧ ಇಲಾಖೆಗಳಲ್ಲಿನ ಎಫ್‌ಡಿಎ, ಎಸ್‌ಡಿಎ (2017ರ ಅಧಿಸೂಚನೆ) ಹುದ್ದೆಗಳ ಆಯ್ಕೆಗೆ ಪರೀಕ್ಷೆಗಳನ್ನು ನಡೆಸಿ ಕೀ ಉತ್ತರಗಳನ್ನು ಪ್ರಕಟಿಸಲಾಗಿದೆ. ಆದರೆ, ಅವುಗಳಲ್ಲಿ ಆಯ್ಕೆಯಾದ ಅರ್ಹ ಅಭ್ಯರ್ಥಿಗಳ ಪಟ್ಟಿಈವರೆಗೂ ಪ್ರಕಟಿಸಿಲ್ಲ.
ಅಬಕಾರಿ ಇಲಾಖೆ ಗಾರ್ಡ್ ಮತ್ತು ವಿವಿಧ ಇಲಾಖೆಗಳ ಗ್ರೂಪ್ ‘ಸಿ’ ತಾಂತ್ರಿಕೇತರ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳ ಆಯ್ಕೆ ಪಟ್ಟಿಪ್ರಕಟಿಸಿದ್ದರೂ ಶೈಕ್ಷಣಿಕ ದಾಖಲೆಗಳ ಪರಿಶೀಲನೆ ಪ್ರಾರಂಭಿಸಿಲ್ಲ. ಅಲ್ಲದೆ, 2016 ರಲ್ಲಿ ಆರಂಭಿಸಿದ 150 ಹುದ್ದೆಗಳ ಮೋಟಾರು ವೆಹಿಕಲ್ ಇನ್‌ಸ್ಪೆಕ್ಟರ್, ಎಫ್‌ಡಿಎ, ಎಸ್‌ಡಿಎ, ಅಬಕಾರಿ ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳ ನೇಮಕಾತಿ ದಾಖಲಾತಿಗಳ ಪರಿಶೀಲನೆ ನಡೆಸಿರುವ ಆಯೋಗ ಇಲ್ಲಿಯವರೆಗೂ ಆಯ್ಕೆ ಪಟ್ಟಿಪ್ರಕಟಿಸಿಲ್ಲ.
Recruitment 2019: 8500 ಹುದ್ದೆಗಳಿಗೆ LIC ಅರ್ಜಿ ಆಹ್ವಾನ
ಫಲಿತಾಂಶ ಪ್ರಕಟಗೊಳ್ಳದ ಅಧಿಸೂಚನೆಗಳು
* ಮೌಲಾನಾ ಆಜಾದ್ ಶಾಲೆಗಳ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರು(554) ಹುದ್ದೆಗಳ ಭರ್ತಿಗೆ 2018ರ ನವೆಂಬರ್ ತಿಂಗಳಲ್ಲಿ ಅಧಿಸೂಚನೆ ಹೊರಡಿಸಲಾಗಿದ್ದು, ಪರೀಕ್ಷಾ ದಿನಾಂಕ ನಿಗದಿ ಪಡಿಸಿಲ್ಲ.
* ಗ್ರೂಪ್ ಸಿ ವರ್ಗಕ್ಕೆ ಸೇರಿದ ಹುದ್ದೆಗಳನ್ನು ಭರ್ತಿ ಮಾಡಲು 2017ರ ನವೆಂಬರ್ 25ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಅಲ್ಲದೆ, 2018ರ ಸೆಪ್ಟಂಬರ್ 23 ರಂದು ಲಿಖಿತ ಪರೀಕ್ಷೆ ನಡೆಸಿದ್ದು, ದಾಖಲೆಗಳನ್ನು ಪರಿಶೀಲನೆಯನ್ನೂ ನಡೆಸಲಾಗಿದೆ. ಆದರೆ, ಫಲಿತಾಂಶ ಪ್ರಕಟಿಸಿಲ್ಲ.
* 2017ನೇ ಸಾಲಿನಲ್ಲಿ ಪ್ರಥಮ ದರ್ಜೆ ಮತ್ತು ದ್ವಿತೀಯ ದರ್ಜೆ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. 2018ರಲ್ಲಿ ಲಿಖಿತ ಪರೀಕ್ಷೆಗಳನ್ನು ನಡೆದಿವೆ. ಜೊತೆಗೆ 1:5 ಅನುಪಾತದಲ್ಲಿ ದಾಖಲೆಗಳ ಪರಿಶೀಲನೆ ನಡೆದಿದ್ದು, ಫಲಿತಾಂಶ ಬರಬೇಕಾಗಿದೆ.
* 230 ಚಿತ್ರಕಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ದಾಖಲೆಗಳ ಪರಿಶೀಲನೆ ಪೂರ್ಣಗೊಂಡಿದೆ ಫಲಿತಾಂಶ ಪ್ರಕಟವಾಗಿಲ್ಲ.
* ಸುಮಾರು 250 ಮಹಾನಗರ ಪಾಲಿಕೆ ಎಂಜಿನಿಯರ್‌ಗಳ ನೇಮಕ ಸಂಬಂಧ ಲಿಖಿತ ಪರೀಕ್ಷೆ ಪೂರ್ಣಗೊಂಡಿದ್ದು, ಫಲಿತಾಂಶ ಹೊರ ಬಂದಿಲ್ಲ.
* 2016ರಲ್ಲಿ ಅಧಿಸೂಚನೆಗೊಂಡಿದ್ದ 150 ಮೋಟಾರು ವಾಹನ ನಿರೀಕ್ಷಕರ ಹುದ್ದೆಗಳ ನೇಮಕಾತಿಗೆ ಸಂಬಂಧ ಅಂತಿಮ ಪಟ್ಟಿಪ್ರಕಟಿಸಿಲ್ಲ.
* ಮೊರಾರ್ಜಿ ದೇಸಾಯಿ ಶಾಲೆಗಳ ಶಿಕ್ಷಕರ ಭರ್ತಿ ಕುರಿತು 2017ರಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. ಆದರೆ, ಈ ವರೆಗೂ ನೇಮಕ ಪ್ರಕ್ರಿಯೆ ಪೂರ್ಣಗೊಳಿಸಿಲ್ಲ.
ಪ್ರತಿಕ್ರಿಯೆಗೆ ಕೆಪಿಎಸ್ಸಿ ನಿರಾಕರಣೆ
ಕೆಪಿಎಸ್‌ಸಿ ನೇಮಕಾತಿ ವಿಳಂಬ ಕುರಿತು ಪ್ರತಿಕ್ರಿಯೆ ಪಡೆಯಲು ಆಯೋಗದ ಕಾರ್ಯದರ್ಶಿ ಜಿ.ಸತ್ಯವತಿಯವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಸಾಧ್ಯವಾಗುವುದಿಲ್ಲ. ಮೊಬೈಲ್ ಸಂಖ್ಯೆಗೆ ಸಂಪರ್ಕಿಸಲು ಪ್ರಯತ್ನಿಸಿದರೆ, ಇದು ನಮ್ಮ ವೈಯಕ್ತಿಕ ಸಂಖ್ಯೆ, ಕರೆ ಮಾಡಬೇಡಿ. ಕೆಪಿಎಸ್‌ಸಿ ಕುರಿತಂತೆ ಯಾವುದೇ ಮಾಹಿತಿ ಅಗತ್ಯವಿದ್ದರೆ ಕಚೇರಿ ಸಂಖ್ಯೆಗೆ ಕರೆ ಮಾಡಿ ಎಂದು ತಿಳಿಸುತ್ತಾರೆ.
ಕಚೇರಿ ಸಂಖ್ಯೆಗೆ ಸಂಪರ್ಕಿಸಿದರೆ ಕರೆ ಸ್ವೀಕರಿಸುವ ಕಾರ್ಯದರ್ಶಿಗಳ ಕಚೇರಿ ಸಿಬ್ಬಂದಿ ‘ಮೇಡಂ ಬ್ಯುಸಿ’ ಇದ್ದಾರೆ ಎಂದು ಕರೆ ಸ್ಥಗಿತಗೊಳಿಸುತ್ತಾರೆ. ಪರಿಣಾಮ ಕೆಪಿಎಸ್‌ಸಿ ಫಲಿತಾಂಶ ಯಾವಾಗ ಪ್ರಕಟವಾಗಲಿದೆ ಎಂಬುದು ಗೊತ್ತಾಗುತ್ತಿಲ್ಲ ಎಂದು ಹಲವು ಅಭ್ಯರ್ಥಿಗಳ ಆರೋಪವಾಗಿದೆ.
ಕಾಲಕಾಲಕ್ಕೆ ಸರ್ಕಾರಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಬೇಕು. ಅಧಿಸೂಚನೆ ಹೊರಡಿಸಿದ ಬಳಿಕ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲಿ ಸಂಪೂರ್ಣಗೊಳಿಸಬೇಕು. ಪಿ.ಸಿ.ಹೋಟಾ ಸಮಿತಿ ಶಿಫಾರಸುಗಳನ್ನು ಯಥಾವತ್ತಾಗಿ ಜಾರಿ ಮಾಡಬೇಕು. ಇಲ್ಲವಾದಲ್ಲಿ ಆಕಾಂಕ್ಷಿಗಳ ವಯೋಮಿತಿ ಹೆಚ್ಚಳ ಮಾಡಬೇಕು.
- ಎಸ್. ಸಂತೋಷ್ ಕುಮಾರ್, ಸರ್ಕಾರಿ ಉದ್ಯೋಗಾಂಕ್ಷಿಗಳ ಹಿತರಕ್ಷಣೆ ವೇದಿಕೆ ಅಧ್ಯಕ್ಷ