ಕ್ಯುಆರ್‌ ಕೋಡ್‌ನಲ್ಲಿ SSLC ಪ್ರಶ್ನೋತ್ತರ!

By Suvarna NewsFirst Published Feb 14, 2020, 4:57 PM IST
Highlights

ಡಿಎಸ್‌ಇಆರ್‌ಟಿಯಿಂದ ಮಾದರಿ ಪ್ರಶ್ನೋತ್ತರ ಬ್ಯಾಂಕ್‌| ಕ್ಯುಆರ್‌ ಕೋಡ್‌ನಲ್ಲಿ ಎಸ್ಸೆಸ್ಸೆಲ್ಸಿ ಪ್ರಶ್ನೋತ್ತರ 

ಬೆಂಗಳೂರು[ಫೆ.14]: ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗೆ ಸಿದ್ಧತೆ ನಡೆಸಲು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ರಾಜ್ಯ ಶಿಕ್ಷಣ ಸಂಶೋಧನಾ ಮತ್ತು ತರಬೇತಿ ಸಂಸ್ಥೆ (ಡಿಎಸ್‌ಇಆರ್‌ಟಿ) ಮಾದರಿ ಪ್ರಶ್ನೋತ್ತರ ಬ್ಯಾಂಕ್‌ ಸಿದ್ಧಪಡಿಸಿದೆ.

ರಾಜ್ಯದ ವಿವಿಧೆಡೆ ಇರುವ ಹಿರಿಯ ತಜ್ಞ ಶಿಕ್ಷಕರು ಸೇರಿ ಈ ಪ್ರಶ್ನೋತ್ತರ ಬ್ಯಾಂಕ್‌ ಸಿದ್ಧಪಡಿಸಿದ್ದಾರೆ. ಸದ್ಯ ಆರಂಭದಲ್ಲಿ ಕ್ಯುಆರ್‌ ಕೋಡ್‌ (ಕ್ವಿಕ್‌ ರೀಡಿಂಗ್‌) ಪಠ್ಯಪುಸ್ತಕಗಳಾದ ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್‌ (ದ್ವಿತೀಯ ಭಾಷೆ) ಪಠ್ಯಗಳಿಗೆ ಮಾತ್ರ ಪ್ರಶ್ನೋತ್ತರ ನೀಡಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಉಳಿದ ಮೂರು ವಿಷಯಗಳಾದ ಕನ್ನಡ, ಹಿಂದಿ ಮತ್ತು ಸಮಾಜಶಾಸ್ತ್ರಗಳ ಪ್ರಶ್ನೋತ್ತರಗಳನ್ನು ನೀಡಲಾಗುವುದು ಎಂದು ಡಿಎಸ್‌ಇಆರ್‌ಟಿ ಅಧಿಕಾರಿಗಳು ತಿಳಿಸಿದ್ದಾರೆ.

ದೀಕ್ಷಾ ಆ್ಯಪ್‌ನಲ್ಲಿ ಲಭ್ಯ:

ಪ್ರಶ್ನೋತ್ತರಗಳನ್ನು ಕೇಂದ್ರ ಮಾನವ ಸಂಪನ್ಮೂಲ ಇಲಾಖೆ (ಎಂಎಚ್‌ಆರ್‌ಡಿ) ಅಭಿವೃದ್ಧಿಪಡಿಸಿರುವ ದೀಕ್ಷಾ ಆ್ಯಪ್‌ನಲ್ಲಿ ಡಿಎಸ್‌ಇಆರ್‌ಟಿ ಸಿದ್ಧಪಡಿಸಿರುವ ಈ ಪ್ರಶ್ನೋತ್ತರಗಳನ್ನು ಲಭ್ಯವಾಗಲಿವೆ. ವಿದ್ಯಾರ್ಥಿಗಳು ಬಹಳ ಸುಲಭವಾಗಿ ಈ ಪ್ರಶ್ನೋತ್ತರಗಳನ್ನು ಪಡೆಯಬಹುದಾಗಿದೆ. ಗಣಿತ ಮತ್ತು ವಿಜ್ಞಾನದಲ್ಲಿ ಪ್ರತಿ ಪಾಠದಲ್ಲಿ ಒಂದು ಅಂಕದ ಪ್ರಶ್ನೆ ಹಾಗೂ ಎರಡು, ನಾಲ್ಕು ಅಂಕದ ಪ್ರಶ್ನೆಗಳ ಉತ್ತರಗಳನ್ನು ನೀಡಲಾಗಿದೆ. ಇಂಗ್ಲಿಷ್‌ನಲ್ಲಿ ಹತ್ತು ಮಾದರಿ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಲಾಗಿದೆ. ಸುಮಾರು 30 ಪ್ರಬಂಧ ಹಾಗೂ 20 ಪತ್ರ ಬರವಣಿಗೆ ಅಪ್‌ಲೋಡ್‌ ಮಾಡಲಾಗಿದೆ.

ಎಸ್‌ಸ್ಸೆಸ್ಸೆಲ್ಸಿ ಮಂಡಳಿಯಲ್ಲೂ ಲಭ್ಯ:

ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಕೂಡ ಪ್ರತಿ ವರ್ಷ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಿಂದಿನ ವರ್ಷದ ಪ್ರಶ್ನೋತ್ತರಗಳನ್ನು ವೆಬ್‌ಸೈಡ್‌ನಲ್ಲಿ ಅಪ್‌ಲೋಡ್‌ ಮಾಡಿದೆ. ಇದೀಗ ಡಿಎಸ್‌ಇಆರ್‌ಟಿ ಕೂಡ ಪ್ರಶ್ನೋತ್ತರ ಸಿದ್ಧಪಡಿಸಿದ್ದು, ವಿದ್ಯಾರ್ಥಿಗಳಿಗೆ ಮತ್ತಷ್ಟುಅನುಕೂಲವಾಗಿದೆ.

ಈ ಪ್ರಶ್ನೋತ್ತರಗಳನ್ನು ಮತ್ತಷ್ಟು ಸುಲಭವಾಗಿ ವಿದ್ಯಾರ್ಥಿಗಳಿಗೆ ತಿಳಿಸಬಹುದು ಎನಿಸಿದಲ್ಲಿ ರಾಜ್ಯದ ಯಾವುದೇ ಶಿಕ್ಷಕರು ದೀಕ್ಷಾ ಆ್ಯಪ್‌ ಮೂಲಕ ತಿಳಿಸಿದರೆ ಅದನ್ನು ಕೂಡ ಅಪ್‌ಲೋಡ್‌ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಪ್ರಶ್ನೋತ್ತರ ಪಡೆಯುವುದು ಹೇಗೆ?

ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ದೀಕ್ಷಾ ಆ್ಯಪ್‌ನಲ್ಲಿ 10ನೇ ತರಗತಿ ವಿಷಯದ ಕ್ಯುಆರ್‌ ಕೋಡ್‌ ಕ್ಲಿಕ್‌ ಮಾಡಿದರೆ ಫೋಕಸ್‌ ಎಂಬ ಆ್ಯಪ್ಷನ್‌ ತೆರೆದುಕೊಳ್ಳಲಿದೆ. ಅದನ್ನು ಕ್ಲಿಕ್‌ ಮಾಡಿ ತಮಗೆ ಬೇಕಾದ ಪಾಠವನ್ನು ಒತ್ತಿದರೆ ಪ್ರಶ್ನೋತ್ತರಗಳು ತೆರೆದುಕೊಳ್ಳಲಿವೆ. ತಮಗೆ ಬೇಕಾದ ಪ್ರಶ್ನೋತ್ತರಗಳನ್ನು ಓದಿ ತಿಳಿದುಕೊಳ್ಳಬಹುದು. ವಿದ್ಯಾರ್ಥಿಗಳು ಏಕಾಂಗಿಯಾಗಿ ಅಥವಾ ಗುಂಪು ಚರ್ಚೆ ಮೂಲಕ ಚರ್ಚಿಸಿ ಪರೀಕ್ಷೆಗೆ ಸಿದ್ಧತೆ ನಡೆಸಬಹುದಾಗಿದೆ.

ಕ್ಯುಆರ್‌ ಕೋಡ್‌ ಸೌಲಭ್ಯವಿರುವ ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್‌ ಪಠ್ಯಪುಸ್ತಕಗಳಲ್ಲಿ ಮಾತ್ರ ಪ್ರಶ್ನೋತ್ತರ ರಚನೆ ಮಾಡಲಾಗಿದೆ. ಹೀಗಾಗಿ, ಅದೇ ಮಾದರಿಯಲ್ಲಿ ಪ್ರಶ್ನೋತ್ತರಗಳನ್ನು ಸಿದ್ಧಪಡಿಸಲಾಗಿದೆ. ಮುಂದಿನ ವರ್ಷ ಉಳಿದ ವಿಷಯಗಳು ಪಠ್ಯಪುಸ್ತಕಗಳಿಗೆ ಕ್ಯುಆರ್‌ ಕೋಡ್‌ ಅಳವಡಿಸಲಾಗುತ್ತದೆ. ಅದೇ ರೀತಿ ಪರೀಕ್ಷೆ ವೇಳೆಗೆ ಪ್ರಶ್ನೋತ್ತರ ಕೂಡ ಸಿದ್ಧಪಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

click me!