
ಬೆಂಗಳೂರು(ಆ.21): ವೈದ್ಯಕೀಯ ಡಿಗ್ರಿ ಪಡೆದ ಬಳಿಕ ಎಂಟು ವಿಷಯಗಳಲ್ಲಿ ವೈದ್ಯಕೀಯ ಸ್ನಾತಕೋತ್ತರ ಡಿಪ್ಲೊಮಾ ಪದವಿ ಪಡೆಯುವ ಹೊಸ ಶಿಕ್ಷಣ ಕ್ರಮವನ್ನು ಅಳವಡಿಸಲು ಮುುಂದಾಗಿರುವುದು ಉನ್ನತ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಮೂಲಭೂತ ಬದಲಾವಣೆ ತರಲಿದೆ ಎಂದು ನಾರಾಯಣ ಹೆಲ್ತ್‌ನ ಮುಖ್ಯಸ್ಥ ಡಾ.ದೇವಿ ಪ್ರಸಾದ್ ಶೆಟ್ಟಿ ಹೇಳಿದ್ದಾರೆ.
ಗುರುವಾರ ಉನ್ನತ ವೈದ್ಯಕೀಯ ಶಿಕ್ಷಣದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದಿದ್ದಕ್ಕಾಗಿ ಪ್ರಧಾನ ಮಂತ್ರಿಗಳಿಗೆ ಧನ್ಯವಾದ ಸಲ್ಲಿಸಲು ವೈದ್ಯಕೀಯ ಸೇವೆ ನೀಡುವವರ ಸಂಘಟನೆ (ಎಎಚ್‌ಪಿಐ) ಆಯೋಜಿಸಿದ್ದ ವೆಬಿನಾರ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
'ಕೇಂದ್ರದ ಶಿಕ್ಷಣ ನೀತಿಯಿಂದ ತಾಂತ್ರಿಕ ಶಿಕ್ಷಣದ ದಿಕ್ಕು ಬದಲು'
ಎಂಬಿಬಿಎಸ್ ಡಿಗ್ರಿ ಪಡೆದು ಬಳಿಕ ಸ್ನಾತಕೊತ್ತರ ವೈದ್ಯಕೀಯ ಶಿಕ್ಷಣವನ್ನೇ ಪಡೆಯಬೇಕಾದ ಅನಿವಾರ್ಯತೆ ನಮ್ಮ ದೇಶದಲ್ಲಿತ್ತು. ದೇಶದಲ್ಲಿ ಸುಮಾರು 60,000 ವೈದ್ಯಕೀಯ ಡಿಗ್ರಿ ಸೀಟುಗಳು ಲಭ್ಯವಿದ್ದು ಸುಮಾರು 40,000 ಸ್ನಾತಕೋತ್ತರ ಸೀಟ್‌ಗಳು ಮಾತ್ರ ಲಭ್ಯವಿವೆ. ವೈದ್ಯಕೀಯ ಡಿಗ್ರಿ ಪಡೆದ ಬಳಿಕ ಸ್ನಾತಕೋತ್ತರ ಡಿಗ್ರಿ ಪಡೆಯಬೇಕು ಎಂಬುದು ಬಹುತೇಕ ವಿದ್ಯಾರ್ಥಿಗಳ ಆಸೆ. ಸ್ನಾತಕೋತ್ತರ ಸೀಟ್ ಸಿಗದೆ ಹೋದ ವಿದ್ಯಾರ್ಥಿಗಳು ಆ ಸೀಟು ಪಡೆಯಲು ಬಳಿಕ ಕೇರಳ, ಕೋಟಾಗಳಿಗೆ ಹೋಗಿ ನಾಲ್ಕೈದು ವರ್ಷ ಕೋಚಿಂಗ್ ಪಡೆಯುತ್ತಾರೆ. ಈ ಸಂದರ್ಭದಲ್ಲಿ ಅವರ ಸೇವೆ ರೋಗಿಗಳಿಗೆ ಸಿಗುವುದಿಲ್ಲ. ಇದು ಮೊದಲೇ ವೈದ್ಯರ ಕೊರತೆ ಅನುಭವಿಸುತ್ತಿರುವ ದೇಶಕ್ಕೆ ಮತ್ತಷ್ಟು ಸಂಕಷ್ಟತಂದೊಡ್ಡಿದೆ. ಇದೀಗ ಡಿಪ್ಲೋಮಾ ಕೋರ್ಸ್ ಪ್ರಾರಂಭಿಸಲು ಸರ್ಕಾರ ಮುಂದಾಗಿರುವುದರಿಂದ ಸ್ನಾತಕೋತ್ತರ ಪದವಿ ಸೀಟ್ ವಂಚಿತರು ಆಯ್ದ ವಿಷಯದಲ್ಲಿ ಡಿಪ್ಲೋಮಾ ಶಿಕ್ಷಣವನ್ನು ಪಡೆಯಬಹುದಾಗಿದೆ ಎಂದು ಹೇಳಿದರು.
ಜಯದೇವ ಅಸ್ಪತ್ರೆಯ ನಿರ್ದೇಶಕ ಸಿ.ಎನ್.ಮಂಜುನಾಥ್ ಮಾತನಾಡಿ, ಜಿಲ್ಲೆ ಮತ್ತು ತಾಲೂಕು ಅಸ್ಪತ್ರೆಗಳಲ್ಲಿ ಅತ್ಯಂತ ಅಗತ್ಯದ ವೈದ್ಯಕೀಯ ಸೇವೆಗಳಾದ ಗೈನಕಾಲಜಿ, ಅನಸ್ತೇಶಿಯಾ ಮತ್ತು ರೇಡಿಯೋಲಜಿಯಲ್ಲಿನ ಪರಿಣತ ವೈದ್ಯರೇ ಎಷ್ಟೋ ಸಂದರ್ಭಗಳಲ್ಲಿ ಇರುವುದಿಲ್ಲ. ಗ್ರಾಮಾಂತರ ಭಾಗದಲ್ಲಿ ನವಜಾತ ಶಿಶುಗಳ ಸಾವಿನ ಪ್ರಮಾಣ ಹೆಚ್ಚು. ಹಾಗೆಯೇ ಇನ್ನಿತರ ತುರ್ತು ವೈದ್ಯಕೀಯ ನೆರವು ನೀಡಲು ವೈದ್ಯರ ಕೊರತೆ ಇರುತ್ತದೆ. ಆದರೆ ಆ ಅಸ್ಪತ್ರೆಗಳಲ್ಲಿ ಡಿಪ್ಲೋಮಾ ಸೆಂಟರ್ ತೆರೆಯುವುದರಿಂದ ತಜ್ಞ ವೈದ್ಯರ ಲಭ್ಯತೆ ಹೆಚ್ಚಾಗಲಿದೆ ಎಂದು ಅಭಿಪ್ರಾಯ ಪಟ್ಟರು. ರಾಜ್ಯದ 170 ತಾಲೂಕು ಅಸ್ಪತ್ರೆಗಳನ್ನು ಕೂಡ ಡಿಪ್ಲೋಮಾ ಕೇಂದ್ರವನ್ನಾಗಿಸಲು ಪರಿಶೀಲನೆ ನಡೆಸಬೇಕು ಎಂದು ಇದೇ ವೇಳೆ ಮಂಜುನಾಥ್ ಸಲಹೆ ನೀಡಿದರು.
ದೇಶದ ವಿವಿಧ ವೈದ್ಯಕೀಯ ಸಂಸ್ಥೆಗಳ ಮುಖ್ಯಸ್ಥರು ಕೇಂದ್ರ ಸರ್ಕಾರದ ಈ ನಡೆಯನ್ನು ಸ್ವಾಗತಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಎಎಚ್‌ಪಿಐಯ ಅಧ್ಯಕ್ಷ ಗಿರಿಧರ್ ಗಿಯಾನಿ, ಮೇಧಾಂತದ ಮುಖ್ಯಸ್ಥ ಡಾ. ನರೇಶ್ ಟ್ರೇಹನ್, ಮೆಡಿಕಲ್ ಕೌನ್ಸಿಲ್ ಅಫ್ ಇಂಡಿಯಾದ ಅಧ್ಯಕ್ಷ ವಿನೋದ್ ಪೌಲ್, ರಾಷ್ಟ್ರೀಯ ಪರೀಕ್ಷಾ ಮಂಡಳಿಯ ಅಧ್ಯಕ್ಷ ಡಾ. ಅಭಿಜಿತ್ ಸೇಥ್, ಎಕ್ಸುಕ್ಯೂಟೀವ್ ಡೈರೆಕ್ಟರ್ ಡಾ. ಪವನೀಂದ್ರ ಲಾಲ್ ಮುಂತಾದವರು ಭಾಗವಹಿಸಿದ್ದರು.