
ಜನರ ನೆಮ್ಮದಿ ಕೆಡಿಸಿದ್ದ 500ರ ನೋಟಿನ ಬಗ್ಗೆ ಆರ್ ಬಿಐ (RBI) ಸ್ಪಷ್ಟನೆ ನೀಡಿದೆ. ಜನಸಾಮಾನ್ಯರು ನಿಟ್ಟುಸಿರು ಬಿಡುವಂತೆ ಮಾಡಿದೆ. 2026ರೊಳಗೆ 500 ರೂಪಾಯಿ ನೋಟುಗಳನ್ನು ನಿಷೇಧ ಮಾಡಲಾಗುತ್ತೆ ಎನ್ನುವ ಸುದ್ದಿ ಕೇವಲ ವದಂತಿ. ಅದ್ರಲ್ಲಿ ಹುರುಳಿಲ್ಲ ಎಂಬುದನ್ನು ಆರ್ ಬಿಐ ಸ್ಪಷ್ಟಪಡಿಸಿದೆ.
ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು (Andhra Pradesh Chief Minister Chandrababu Naidu), ಕೆಲ ದಿನಗಳ ಹಿಂದೆ, ಕೇಂದ್ರ ಸರ್ಕಾರ 500 ಹಾಗೂ ಅದಕ್ಕಿಂತ ಹೆಚ್ಚಿನ ಮುಖಬೆಲೆಯ ನೋಟುಗಳ ಮೇಲೆ ನಿಷೇಧ ಹೇರಬೇಕು ಎಂದಿದ್ದರು. ಆರ್ಬಿಐ ಬ್ಯಾಂಕ್ಗಳು ಮತ್ತು ಎಟಿಎಂ ನಿರ್ವಾಹಕರಿಗೆ 100 ಮತ್ತು 200 ರೂಪಾಯಿ ನೋಟುಗಳ ಲಭ್ಯತೆಯನ್ನು ಹೆಚ್ಚಿಸಲು ಸೂಚಿಸಿತ್ತು. ಇದಾದ್ಮೇಲೆ ಗೊಂದಲ ಸೃಷ್ಟಿಯಾಗಿತ್ತು. 500ರ ನೋಟಿನ ಬಗ್ಗೆ ಸಾಕಷ್ಟು ವದಂತಿ ಹಬ್ಬಿತ್ತು. ಯೂಟ್ಯೂಬ್ ಚಾನೆಲ್ ಒಂದು, ಮುಂದಿನ ವರ್ಷ ಮಾರ್ಚ್ 2026 ರ ವೇಳೆಗೆ 500 ರೂಪಾಯಿ ನೋಟು ಸಂಪೂರ್ಣವಾಗಿ ಚಲಾವಣೆಯಲ್ಲಿರೋದಿಲ್ಲ, ಸರ್ಕಾರ ಹೊಸ 500 ರೂಪಾಯಿ ನೋಟುಗಳ ಮುದ್ರಣ ನಿಲ್ಲಿಸಲಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿಯನ್ನು ಪ್ರಕಟಿಸಿತ್ತು. ಇದು ಮತ್ತೊಮ್ಮೆ ದೇಶದಲ್ಲಿ ನೋಟು ಅಮಾನ್ಯೀಕರಣದಂತಹ ಪರಿಸ್ಥಿತಿಗಳಿಗೆ ಕಾರಣವಾಗಬಹುದು ಎಂಬ ಆತಂಕ ಹುಟ್ಟುಹಾಕಿತ್ತು. ಜನರು 500ರ ನೋಟುಗಳನ್ನು ಪಡೆಯಲು ಹಿಂಜರಿಯುವಂತೆ ಮಾಡಿತ್ತು. ಆದ್ರೀಗ ಎಲ್ಲ ಊಹಾಪೋಹಗಳಿಗೆ ತೆರೆ ಬಿದ್ದಿದೆ. ಆರ್ ಬಿಐ ಈ ಬಗ್ಗೆ ಸ್ಪಷ್ಟನೆ ಜಾರಿಗೊಳಿಸಿದೆ.
ಆರ್ ಬಿಐ ಹೇಳಿದ್ದೇನು? : 500 ರೂಪಾಯಿ ನೋಟುಗಳನ್ನು ಅಮಾನ್ಯಗೊಳಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಯಾವುದೇ ನಿರ್ದೇಶನವನ್ನು ನೀಡಿಲ್ಲ. ನೋಟು ಮಾನ್ಯವಾಗಿಯೇ ಉಳಿದಿದೆ. ಎಲ್ಲಾ ವಹಿವಾಟುಗಳಿಗೆ ದೇಶಾದ್ಯಂತ ಬಳಸಲಾಗುತ್ತಿದೆ. ಬ್ಯಾಂಕ್ ಹಾಗೂ ಎಟಿಎಂಗಳಲ್ಲಿ 100 ಮತ್ತು 200 ರೂಪಾಯಿ ನೋಟುಗಳ ಲಭ್ಯತೆಯನ್ನು ಹೆಚ್ಚಿಸುವಂತೆ ಸೂಚಿಸಲು ಕಾರಣ ಅದಕ್ಕಿರುವ ಹೆಚ್ಚಿನ ಬೇಡಿಕೆ. ಈ ನೋಟುಗಳ ಸಂಖ್ಯೆ ಮಾರುಕಟ್ಟೆಯಲ್ಲಿ ಕಡಿಮೆ ಇದೆ ಎನ್ನುವ ದೂರಿದೆ. ಜನಸ ಸಮಸ್ಯೆಗೆ ಪರಿಹಾರವಾಗಿ ಆರ್ ಬಿಐ, ಅದ್ರ ಲಭ್ಯತೆ ಹೆಚ್ಚಿಸುವಂತೆ ಸೂಚನೆ ನೀಡಿತ್ತೇ ವಿನಃ 500 ರೂಪಾಯಿ ನೋಟುಗಳನ್ನು ಅಮಾನ್ಯ ಮಾಡಲಲ್ಲ ಎಂಬುದನ್ನು ಆರ್ ಬಿಐ ಹೇಳಿದೆ.
ಮಹಾತ್ಮ ಗಾಂಧಿ (ಹೊಸ) ಸರಣಿಯ ಹೊಸ 500 ರೂಪಾಯಿ ನೋಟುಗಳನ್ನು ಇನ್ನೂ ಮುದ್ರಿಸಲಾಗುತ್ತಿದೆ ಮತ್ತು ವಿತರಿಸಲಾಗುತ್ತಿದೆ. ಇದು 500 ರೂಪಾಯಿ ಮುಖಬೆಲೆಯ ನಿರಂತರ ಬಳಕೆಯನ್ನು ಒತ್ತಿಹೇಳುತ್ತಿದೆ. ದೀರ್ಘಾವಧಿಯಲ್ಲಿ ಹೆಚ್ಚಿನ ಮೌಲ್ಯದ ನೋಟುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ನೀತಿ ನಿರೂಪಕರು ಕೆಲಸ ಮಾಡುತ್ತಿದ್ದರೂ, 500 ರೂಪಾಯಿ ನೋಟನ್ನು ಹಿಂಪಡೆಯುವ ಯಾವುದೇ ಯೋಚನೆ ಆರ್ ಬಿಐಗೆ ಇಲ್ಲ. ಸದ್ಯ ಭಾರತ ಡಿಜಿಟಲ್ ಪಾವತಿಗಳನ್ನು ಹೆಚ್ಚಿಸುತ್ತಿದೆ. ಕಡಿಮೆ ಮೌಲ್ಯದ ಕರೆನ್ಸಿಗೆ ಆದ್ಯತೆ ನೀಡುತ್ತದೆ. ಈ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಮಾತನಾಡಿದ್ದಾರೆ. ಡಿಜಿಟಲ್ ಪಾವತಿ ತೀವ್ರವಾಗಿ ಬೆಳೆಯುತ್ತಿದೆ. ಡಿಸೆಂಬರ್ 2024 ರಲ್ಲಿ 23.25 ಲಕ್ಷ ಕೋಟಿ ಮೌಲ್ಯದ 16.73 ಬಿಲಿಯನ್ ವಹಿವಾಟುಗಳನ್ನು ಯುಪಿಐ ಪ್ರಕ್ರಿಯೆಗೊಳಿಸಿದೆ. ಇದು ನವೆಂಬರ್ನಲ್ಲಿ 21.55 ಲಕ್ಷ ಕೋಟಿ ಹೆಚ್ಚಾಗಿದೆ. ವಾರ್ಷಿಕ ಯುಪಿಐ ವಹಿವಾಟುಗಳು ಹೆಚ್ಚಾಗ್ತಾನೆ ಇದೆ. 2024 ರಲ್ಲಿ 172 ಬಿಲಿಯನ್ ತಲುಪಿತ್ತು. 2023ರಕ್ಕೆ ಹೋಲಿಕೆ ಮಾಡಿದ್ರೆ ಇದು ಶೇಕಡಾ 46ರಷ್ಟು ಹೆಚ್ಚಾದಂತಾಗಿದೆ.