
ಶಿವಮೊಗ್ಗ: 'ಹುಟ್ಟಿದ ಮೇಲೆ ಸಾವು ಖಚಿತ,' ಎಂದು ಕರಾವಳಿಯ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಕೊಲೆಗೆ ಸಂಬಂಧಿಸಿದಂತೆ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಪರೀತ ಟೀಕೆಗೆ ಒಳಗಾಗುತ್ತಿದೆ.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, 'ನಮ್ಮೂರು, ನಿಮ್ಮೂರಲ್ಲಿ ಕೊಲೆಗಳು ಆಗೋದಿಲ್ವೇ? ಆದರೆ ಮಂಗಳೂರು, ಉಡುಪಿಯಲ್ಲಿ ಇಂಥ ಘಟನೆಗಳಿಗೆ ಬಣ್ಣ ಹಚ್ಚುವ ಕೆಲಸ ನಡೆಯುತ್ತದೆ. ಇದನ್ನು ತಡೆಯಲು ರಾಜ್ಯ ಸರ್ಕಾರ ಸಮರ್ಥವಾಗಿದೆ. ಐಪಿಸಿ (ಇಂಡಿಯನ್ ಪೀನಲ್ ಕೋಡ್) ಬರೋ ಮುಂಚೆಯೂ ಕೊಲೆಗಳು ಆಗುತ್ತಿರಲಿಲ್ಲವೇ?' ಎಂದು ಘಟನೆಗೆ ಸಂಬಂಧಿಸಿದಂತೆ ಬೇಜವಾಬ್ದಾರಿ ಉತ್ತರ ನೀಡಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
'ಭಾರತದಂಥ ಬಹುಸಂಸ್ಕೃತಿ ಹೊಂದಿರುವ ದೇಶಗಳಲ್ಲಿ ಇಂಥ ಘಟನೆಗಳು ಸಹಜ. ರಾಮನೇ ತನ್ನ ಗರ್ಭಿಣಿ ಪತ್ನಿಯನ್ನು ವನವಾಸಕ್ಕೆ ತಳ್ಳಲಿಲ್ಲವೇ? ಅದು ಅಪರಾಧವಲ್ಲವೇ?' ಎಂದು ಕೇಳಿದ ಅವರು, ಸಾವನ್ನೂ ಕೋಮುವಾದಿ ಪಕ್ಷಗಳು ಅವಕಾಶ ಸಿಕ್ಕರೆ ತಮ್ಮ ಉಪಯೋಗಕ್ಕೆ ಬಳಸಿಕೊಳ್ಳುತ್ತವೆ ಎಂದು ಆರೋಪಿಸಿದರು.
'ಭಾರತೀಯ ಸಮಾಜದಲ್ಲಿರುವ ಜಾತಿ, ಧಾರ್ಮಿಕ ವ್ಯವಸ್ಥೆ ಬೇರೆ ಯಾವ ದೇಶದಲ್ಲೂ ಇಲ್ಲ. ಆಸ್ತಿಗಾಗಿ ಸಹೋದರರ ನಡುವೆಯೇ ಗಲಾಟೆಗಳು ಆಗುತ್ತವೆ. ಹೊಡೆದಾಡಿಕೊಳ್ಳುತ್ತಾರೆ. ಇದು ಮನುಷ್ಯನ ಸಂಸ್ಕೃತಿ,' ಎಂದರು.