ವಾಟಾಳ್‌ರಿಂದ ‘ಪ್ರಜಾರಂಗ ಸಂಯುಕ್ತ ದಳ’

By Suvarna Web DeskFirst Published Mar 18, 2018, 9:28 AM IST
Highlights

ಕನ್ನಡ, ರೈತ ಮತ್ತು ದಲಿತ ಪರ ಹೋರಾಟಗಳಿಗೆ ಶಕ್ತಿ ತುಂಬಲು ಕನ್ನಡಪರ ಹೋರಾಟಗಾರರು, ರೈತ ಹಾಗೂ ದಲಿತ ಸಂಘಟನೆಗಳ ಮುಖಂಡರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸನ ಸಭೆಗೆ ಆಯ್ಕೆಯಾಗಬೇಕೆಂದು ಕನ್ನಡ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಕರೆ ನೀಡಿದ್ದಾರೆ.

ಬೆಂಗಳೂರು: ಕನ್ನಡ, ರೈತ ಮತ್ತು ದಲಿತ ಪರ ಹೋರಾಟಗಳಿಗೆ ಶಕ್ತಿ ತುಂಬಲು ಕನ್ನಡಪರ ಹೋರಾಟಗಾರರು, ರೈತ ಹಾಗೂ ದಲಿತ ಸಂಘಟನೆಗಳ ಮುಖಂಡರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸನ ಸಭೆಗೆ ಆಯ್ಕೆಯಾಗಬೇಕೆಂದು ಕನ್ನಡ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಕರೆ ನೀಡಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಿನ ಎಲ್ಲಾ ರಾಜಕೀಯ ಪಕ್ಷಗಳು ನಾಡು, ನುಡಿ, ಅನ್ನದಾತ ಮತ್ತು ದಲಿತ ಪರ ಹೋರಾಟಗಳನ್ನು ಕಡೆಗಣಿಸುತ್ತಿವೆ. ಕನ್ನಡಪರ, ರೈತ ಮತ್ತು ದಲಿತ ಸಂಘಟನೆಗಳ ಬಗ್ಗೆ ನಿರ್ಲಕ್ಷ್ಯ ತೋರುತ್ತಿವೆ. ಇಂತಹ ರಾಜಕೀಯ ಪಕ್ಷಗಳಿಗೆ ಬುದ್ಧಿ ಕಲಿಸಬೇಕಾದರೆ, ಕನ್ನಡ ಹೋರಾಟಗಾರರು, ದಲಿತರು, ರೈತರೇ ಚುನಾವಣೆಯಲ್ಲಿ ಗೆದ್ದು ಬರಬೇಕು ಎಂದರು.

ಈ ನಿಟ್ಟಿನಲ್ಲಿ ಮೂರೂ ಸಂಘಟನೆಗಳು ಒಟ್ಟಾಗಿ ಸೇರಿ ಒಂದು ರಾಜಕೀಯ ಶಕ್ತಿಯನ್ನು ಸೃಷ್ಟಿಸಬೇಕಾಗಿದೆ. ಸಮಾಜ ಪರ ಕಾಳಜಿ ಇರುವ ಸಂಘಟನೆಗಳ ಮುಖಂಡರು, ನಾಯಕರು ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾದರೆ, ಅವರೊಂದಿಗೆ ಚರ್ಚಿಸಿ ‘ಪ್ರಜಾರಂಗ ಸಂಯುಕ್ತ ದಳ’ದ ಹೆಸರಿನಲ್ಲಿ ಪ್ರಣಾಳಿಕೆ ಸಿದ್ಧಪಡಿಸಲು ಯೋಚಿಸಿರುವುದಾಗಿ ತಿಳಿಸಿದರು.

ನಾನು ಹೊಂದಾಣಿಕೆ ಮಾಡಿಕೊಂಡಿದ್ದರೆ ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದಿತ್ತು. ಆದರೆ, ನಾನು ನಾಡು, ನುಡಿ ವಿಚಾರದಲ್ಲಿ ಎಂದಿಗೂ ರಾಜಿಯಾಗುವುದಿಲ್ಲ. ಕನ್ನಡ ಭಾಷೆಯ ಪರವಾಗಿ ಹೋರಾಟ ಮಾಡಬೇಕು ಎಂಬ ಒಂದೇ ಕಾರಣಕ್ಕೆ ಹೊಂದಾಣಿಕೆಯ ಹತ್ತಿರವೂ ಸುಳಿದಿಲ್ಲ. ಅನೇಕ ಚುನಾವಣೆಗಳಲ್ಲಿ ನಾನು ಸ್ಪ​ರ್ಧಿಸಿದ್ದೇನೆ.

ಅದೇ ರೀತಿ ಇತರ ಹೋರಾಟಗಾರರು ಸ್ಪರ್ಧೆ ಮಾಡಬೇಕು. ರಾಜ್ಯದಲ್ಲಿ ಹೈದರಾಬಾದ್‌ ಕರ್ನಾಟಕ, ಉತ್ತರ ಕರ್ನಾಟಕ, ಮಹದಾಯಿ, ಕಳಸಾ ಬಂಡೂರಿ, ಕಾವೇರಿ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಹೋರಾಡುತ್ತಿರುವ ಶಕ್ತಿಗಳು ಒಟ್ಟಾಗಿ ರಾಜಕೀಯ ಶಕ್ತಿ ಪಡೆಯುವ ಅಗತ್ಯವಿದೆ. ಇದಕ್ಕಾಗಿ ಹೋರಾಟಗಾರರು ಇನ್ನಾದರೂ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದೆ ಬರಬೇಕು ಎಂದರು. 

click me!