ಕಳ್ಳನೊಂದಿಗೆ ಸೆಣಸಿ ದೇವರ ಕಿರೀಟ ರಕ್ಷಿಸಿದ ಗೂರ್ಖಾ

By Web DeskFirst Published Sep 20, 2019, 12:10 PM IST
Highlights

ದೇವಸ್ಥಾನದಿಂದ ಬೆಳ್ಳಿ ಕಿರೀಟ ಕದ್ದುಕೊಂಡು ಅನುಮಾನಾಸ್ಪದವಾಗಿ ಹೋಗುತ್ತಿದ್ದ ಕಳ್ಳನೊಂದಿಗೆ ಗೂರ್ಖಾವೊಬ್ಬ ಸೆಣಸಾಡಿ ಕಿರೀಟ ವಶಪಡಿಸಿಕೊಂಡ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಬುಧವಾರ ತಡರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮುದ್ದೇಬಿಹಾಳ (ಸೆ. 20):  ದೇವಸ್ಥಾನದಿಂದ ಬೆಳ್ಳಿ ಕಿರೀಟ ಕದ್ದುಕೊಂಡು ಅನುಮಾನಾಸ್ಪದವಾಗಿ ಹೋಗುತ್ತಿದ್ದ ಕಳ್ಳನೊಂದಿಗೆ ಗೂರ್ಖಾವೊಬ್ಬ ಸೆಣಸಾಡಿ ಕಿರೀಟ ವಶಪಡಿಸಿಕೊಂಡ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಬುಧವಾರ ತಡರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಗೂರ್ಖಾ ಶೇರಬಹಾದ್ದೂರಸಿಂಗ ಎಂಬಾತ ಕಳ್ಳನೊಂದಿಗೆ ಸೆಣಸಾಟ ನಡೆಸಿ ಕಿರೀಟ ವಶಕ್ಕೆ ಪಡೆದುಕೊಂಡವರು. ಈ ಕಿರೀಟ ಮುದ್ದೇಬಿಹಾಳ ತಾಲೂಕಿನ ಸರೂರ ಗ್ರಾಮದ ಗಚ್ಚಿನಗುಡಿ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದ ಮೂರ್ತಿಯದ್ದು. ಹೀಗಾಗಿ ಗೂರ್ಖಾನ ಸಾಹಸ ಮೆಚ್ಚಿ ಈ ದೇವಸ್ಥಾನ ಮಂಡಳಿಯ ಮುಖಂಡರು ಪೊಲೀಸ್‌ ಠಾಣೆಯಲ್ಲಿ ಸನ್ಮಾನಿಸಿದ್ದಾರೆ.

ಶಿವಮೊಗ್ಗ : ಲೈಂಗಿಕ ಶೋಷಿತರ ಮಕ್ಕಳಿಗೆ ವಿವಿಯಲ್ಲಿ ಮೀಸಲಾತಿ

ಏನಿದು ಘಟನೆ?:

ನಿತ್ಯ ಗೂರ್ಖಾ ಶೇರಬಹಾದ್ದೂರಸಿಂಗ ರಾತ್ರಿ ಸಂಚಾರ ಮಾಡುತ್ತಿದ್ದ. ಮುದ್ದೇಬಿಹಾಳದಲ್ಲಿ ಬುಧವಾರ ರಾತ್ರಿ ಬೈಕ್‌ ಮೇಲೆ ಮೂವರು ಜನ ಆರೋ​ಪಿ​ಗಳು ಕಿರೀಟ ಕಳ್ಳ​ತನ ಮಾಡಿ​ಕೊಂಡು ಪರಾ​ರಿ​ಯಾ​ಗು​ತ್ತಿ​ದ್ದರು. ಈ ವೇಳೆ ಶಂಕಿ​ತ​ಗೊಂಡ ಗೂರ್ಖಾ ಅವರನ್ನು ತಡೆಯಲು ಯತ್ನಿಸಿದ್ದಾನೆ. ಆಗ ಬೈಕ್‌ ಮೇಲಿದ್ದ ಮೂವ​ರಲ್ಲಿ ಇಬ್ಬರು ಪರಾ​ರಿ​ಯಾ​ಗಿ​ದ್ದಾರೆ. ಮತ್ತೊಬ್ಬ ಕಳ್ಳ ಗೂರ್ಖಾ ಸೆಣ​ಸಾಟ ನಡೆ​ಸಿ, ಕದ್ದು ತಂದಿದ್ದ 850 ಗ್ರಾಮದ ಬೆಳ್ಳಿ ಕಿರೀ​ಟ​ವನ್ನು ಬಿಟ್ಟು ಓಡಿ ಹೋಗಿದ್ದಾನೆ.

ಗೂರ್ಖಾ ಹರಿಸಿಂಗನ ಶೌರ್ಯ ಮೆಚ್ಚಿದ ಗ್ರಾಮಸ್ಥರು, ದೇವಸ್ಥಾನ ಆಡಳಿತ ಮಂಡಳಿ ಮುಖಂಡರು ಗೂರ್ಖಾನನ್ನು ಮುದ್ದೇ​ಬಿ​ಹಾಳ ಪೊಲೀಸ್‌ ಠಾಣೆ ಮುಂದೆ ಸನ್ಮಾನಿಸಿದ್ದಾರೆ. ಈ ವೇಳೆ ಕ್ರೈಂ ಪಿಎಸೈ ಜಿ.ಟಿ. ನೆಲವಾಸಿ ಗ್ರಾಮಕ್ಕೆ ತೆರಳಿ ಪ್ರಕರಣದ ಮಾಹಿತಿ ಸಂಗ್ರಹಿಸಿದರು. ಆದರೆ, ಈ ಕುರಿತು ಇದುವರೆಗೆ ದೂರು ದಾಖಲಾಗಿಲ್ಲ.

ಡಿಜಿಟಲ್ ನತ್ತ ಅಂಗನವಾಡಿ ಕೇಂದ್ರಗಳು, ಕಾರ್ಯಕರ್ತೆಯರಿಗೆ ಬಂತು ಸ್ಮಾರ್ಟ್‌ ಫೋನ್‌

ಈ ಸಂದರ್ಭದಲ್ಲಿ ಸರೂರು ಹಾಲುಮತ ಮೂಲ ಗುರುಪೀಠದ ಮರುಳಸಿದ್ದಯ್ಯ ಗುರುವಿನ ಮಾತನಾಡಿ, ದೇವಸ್ಥಾನದ ಕಿರೀಟ ಕಳ್ಳತನ ಮಾಡಿಕೊಂಡು ಕೆಂಪು ಬೈಕಿನಲ್ಲಿ ಹೊರಟಿದ್ದ ಅಂದಾಜು 25 ವರ್ಷದ ಯುವಕನೊಬ್ಬನ ಮೇಲೆ ಸಂಶಯಗೊಂಡು ಮುದ್ದೇಬಿಹಾಳ ಪಟ್ಟಣದ ದ್ಯಾಮವ್ವನ ಕಟ್ಟೆಬಳಿ ತಡೆದಾಗ, ಆ ಯುವಕ ಕಿರೀಟ ಬಿಟ್ಟು ಓಡಿ ಹೋಗಿದ್ದಾನೆ. ನಂತರ ವಿಚಾರಣೆ ನಡೆಸಿ ಕಿರೀಟ ಸರೂರದ್ದೆಂದು ತಿಳಿದು ಅದನ್ನು ಸಂಬಂಧಿಸಿದವರಿಗೆ ಹಸ್ತಾಂತರಿಸಿದ್ದಾನೆ. ಈ ಘಟನೆ ಮಾಹಿತಿಯನ್ನು ಪೊಲೀಸ್‌ ಠಾಣೆಗೂ ಮುಟ್ಟಿಸಿದ್ದಾನೆ. ರಾತ್ರಿ ಕಾವಲು ಕಾಯುವ ಗೂರ್ಖಾನ ಸಮಯಪ್ರಜ್ಞೆ ಮೆಚ್ಚುವಂಥದ್ದು ಎಂದು ಶ್ಲಾಘಿಸಿದರು.

ಈ ಸಂದರ್ಭದ​ಲ್ಲಿ ಸಣ್ಣಯ್ಯ ಗುರುವಿನ್‌, ಸಿದ್ದಯ್ಯ ಗುರುವಿನ, ಶಿವಯ್ಯ ಗುರುವಿನ, ಮಹಾವೀರ ಗುರುವಿನ, ರಾಮಣ್ಣ ಬೋರಗಿ, ಶಿವಣ್ಣ ಹೂಗಾರ, ವಣಸಿದ್ದಯ್ಯ ಗುರುವಿನ್‌, ಶಾಂತಯ್ಯ ಗುರುವಿನ್‌, ಶ್ರೀ​ಶೈಲ್‌ ಗುರುವಿನ್‌, ಚನ್ನಪ್ಪಗೌಡ ಪಾಟೀಲ, ಪ್ರಚಂಡಪ್ಪ ಚಲವಾದಿ ಗ್ರಾಮಸ್ಥರು ಇದ್ದರು.

ಈ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿದ ಪಿಎಸೈ ಮಲ್ಲಪ್ಪ ಮಡ್ಡಿ, ಈ ಬಗ್ಗೆ ದೂರು ದಾಖಲಾಗಿಲ್ಲ. ಗೋರ್ಖಾ ಠಾಣೆಗೆ ಬಂದು ಘಟನೆ ಬಗ್ಗೆ ತಿಳಿಸಿದ್ದಾನೆ. ಕ್ರೈಂ ಪಿಎಸೈ ಪ್ರಕರಣದ ಬಗ್ಗೆ ಗ್ರಾಮಕ್ಕೆ ತೆರಳಿ ಮಾಹಿತಿ ಸಂಗ್ರಹಿಸಿದ್ದಾರೆ. ಕಿರೀಟ ಕಳ್ಳತನದ ಬಗ್ಗೆ ದೂರು ಸಲ್ಲಿಸಿದರೆ ಸ್ವೀಕರಿಸಿ ಆರೋಪಿ ಪತ್ತೆಗೆ ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಿದರು.

 

click me!