ಉಗ್ರರಿಗೆ ಪಾಠ ಕಲಿಸಿ, ಪಾಕ್‌ಗೆ ಸ್ಪಷ್ಟಸಂದೇಶ ನೀಡಿ: ದತ್ತಾತ್ರೇಯ ಹೊಸಬಾಳೆ

By Web DeskFirst Published Oct 11, 2016, 4:27 PM IST
Highlights

ವಮೊಗ್ಗ (ಅ.11):ಉಗ್ರರಿಗೆ ತಕ್ಕ ಪಾಠ ಕಲಿಸಿ ಪಾಕಿಸ್ತಾನಕ್ಕೆ ಸ್ಪಷ್ಟಸಂದೇಶ ರವಾನಿಸಬೇಕಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದರು.

ಶಿವಮೊಗ್ಗ (ಅ.11):ಉಗ್ರರಿಗೆ ತಕ್ಕ ಪಾಠ ಕಲಿಸಿ ಪಾಕಿಸ್ತಾನಕ್ಕೆ ಸ್ಪಷ್ಟಸಂದೇಶ ರವಾನಿಸಬೇಕಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದರು.

ಅವರು ಸಮೀಪದ ಗೊಂದಿ ಚಟ್ನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಶಿವಮೊಗ್ಗ ಗ್ರಾಮಾಂತರ ತಾಲೂಕು ವಿಭಾಗ ವಿಜಯದಶಮಿ ಅಂಗವಾಗಿ ಮಂಗಳವಾರ ಏರ್ಪಡಿಸಿದ್ದ ಪಥ ಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪಾಕ್‌ ಹಲವು ಸಲ ಭಾರತದ ಸಹನೆ ಪರೀಕ್ಷಿಸಿದೆ. ಭಾರತದೊಳಕ್ಕೆ ಉಗ್ರರನ್ನು ನುಗ್ಗಿಸಿ ಶಾಂತಿ ಕದಡಲು ಯತ್ನಿಸಿದೆ. ಈ ಮೂಲಕ ಭಾರತದಂತಹ ಬಹುದೊಡ್ಡ ಪ್ರಜಾಪ್ರಭುತ್ವ ದೇಶಕ್ಕೆ ಅನೇಕ ಬಾರಿ ಕಿರುಕುಳ ನೀಡಿದೆ. ಹಾಗಾಗಿ ಉಗ್ರರಿಗೆ ತಕ್ಕ ಪಾಠ ಕಲಿಸಲೇ ಬೇಕು. ಆ ಮೂಲಕ ಪಾಕ್‌ಗೆ ಸ್ಪಷ್ಟಸಂದೇಶ ರವಾನೆಯಾಗಬೇಕು ಎಂಬ ಆಸೆ ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲಿತ್ತು. ಅದನ್ನು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರನ್ನು ಸದೆ ಬಡಿಯುವ ಮೂಲಕ ನಮ್ಮ ಸೈನಿಕರು ಈಡೇರಿಸುವುದರ ಜತೆಗೆ ತಮ್ಮ ಶಕ್ತಿಯೇನೆಂಬುದನ್ನು ತೋರಿಸಿದ್ದಾರೆ. ಅದಕ್ಕೆ ಇಡೀ ದೇಶವೇ ಸಂಭ್ರಮ ಪಟ್ಟಿದೆ ಎಂದು ಹೇಳಿದರು.

ತಾಳ್ಮೆ ಹಾಗೂ ಶಾಂತಿಗೆ ಹೆಸರಾದ ಭಾರತವನ್ನು ಕೆಣಕಿದರೆ ಪರಿಣಾಮ ಏನಾಗುತ್ತದೆ ಎಂಬುದು ದೇಶದ ಹೆಮ್ಮೆಯ ಸೈನಿಕರು ಇತ್ತೀಚೆಗೆ ನಡೆಸಿದ ಕಾರ್ಯಾಚರಣೆಯೇ ಸಾಕ್ಷಿ ಎಂದ ಅವರು, ದೇಶ ರಕ್ಷಣೆ ವಿಷಯದಲ್ಲಿ ಭಾರತ ಕಿರುಕುಳ ಸಹಿಸುವುದಿಲ್ಲ. ತಾಳ್ಮೆ ಪರೀಕ್ಷಿಸಿದರೆ ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂಬ ಸಂದೇಶ ರವಾನೆಯಾಗಿದೆ ಎಂದರು.

ಗಾಂಧೀಜಿ, ಭಗತ್‌ ಸಿಂಗ್‌, ಚಂದ್ರಶೇಖರ್‌ ಆಜಾದ್‌, ವೀರ ಸಾವರ್ಕರ್‌, ಸುಭಾಷ್‌ ಚಂದ್ರಬೋಸ್‌ ಸೇರಿ ಅನೇಕರು ತಮ್ಮ ವೈಯುಕ್ತಿಕ ಉದ್ದೇಶಕ್ಕೆ ಬದುಕು ನಡೆಸದೇ ದೇಶಕ್ಕಾಗಿ ಸೇವೆ ಸಲ್ಲಿಸಿದ್ದಾರೆ. ಅದಕ್ಕಾಗಿಯೇ ಆ ಮಹನೀಯರು ಇಂದಿಗೂ ಸ್ಮರಣೀಯರಾಗಿದ್ದಾರೆ ಎಂದು ತಿಳಿಸಿದರು.

ಅಭಿವೃದ್ಧಿ ಪಥದಲ್ಲಿ ಸಾಗಿರುವ ದೇಶ ಇನ್ನಷ್ಟುವೇಗವಾಗಿ ಪ್ರಗತಿ ಹೊಂದಬೇಕಾಗಿದೆ. ಅದಕ್ಕಾಗಿ ನಮ್ಮಲ್ಲಿನ ಸಂಕುಚಿತ ಮನೋಭಾವ, ಅಹಂಕಾರ, ಜಾತಿ, ಸ್ವಾರ್ಥ ಇವುಗಳನ್ನು ಮೀರಿ ಮುನ್ನಡೆಯಬೇಕಿದೆ. ಸಮಾಜದಲ್ಲಿ ಎಲ್ಲರೂ ಒಗ್ಗಟ್ಟಾಗಿ ದೇಶ ರಕ್ಷಣೆಗೆ ಮುಂದಾಗಬೇಕಿದೆ ಎಂದರು. ಜಿಲ್ಲಾ ಸಂಚಾಲಕ ವೆಂಕಟೇಶ್‌ ಸಾಗರ್‌, ತಾಲೂಕು ಕಾರ್ಯವಾಹ ನಾಗರಾಜ, ಶ್ರುತಿ ಮೋಟಾ​ರ್‍ಸ್ ಮಾಲೀಕ ಡಿ.ಟಿ. ಪರಮೇಶ್‌ ಇತರರು ಪಾಲ್ಗೊಂಡಿದ್ದರು.

 

 

click me!