ಶೃಂಗೇರಿ ಮಠಕ್ಕೆ ಕೈ ನಾಯಕರ ಭೇಟಿ ಕೇವಲ ನಾಟಕ: ಶಾಸಕ ಜೀವರಾಜ್‌

By Suvarna Web DeskFirst Published Mar 22, 2018, 11:10 AM IST
Highlights

- ಹಿಂದೆ ಎರಡು ಬಾರಿ ಎನ್‌.ಆರ್‌.ಪುರಕ್ಕೆ ಆಗಮಿಸಿದ್ದ ಸಿಎಂ ಶೃಂಗೇರಿಗೆ ಭೇಟಿ ಕೊಟ್ಟಿರಲಿಲ್ಲ

- ಶೃಂಗೇರಿ ಭೇಟಿ ನೀಡುವ ನಾಟಕ ‘ಕೈ’ ನಾಯಕರಿಗೆ ತಿರುಗುಬಾಣವಾಗಲಿದೆ- ಶಾಸಕ

ಚಿಕ್ಕಮಗಳೂರು: ಭಗವಂತ ಒಲಿಯುವುದು ಭಕ್ತನಿಗೆ. ಹಣ ಮತ್ತು ಅಧಿಕಾರಕ್ಕಾಗಿ ಅಲ್ಲ. ಶೃಂಗೇರಿ ಮಠಕ್ಕೆ ಕಾಂಗ್ರೆಸ್‌ ನಾಯಕರು ಭೇಟಿ ನೀಡಿರುವ ನಾಟಕ ಅವರಿಗೆ ತಿರುಗುಬಾಣವಾಗಲಿದೆ ಎಂದು ಶೃಂಗೇರಿ ಕ್ಷೇತ್ರದ ಶಾಸಕ ಡಿ.ಎನ್‌.ಜೀವರಾಜ್‌ ಹೇಳಿದ್ದಾರೆ.

ಕೊಪ್ಪದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಭಕ್ತಿಯಿಂದ ಮಠಕ್ಕೆ ಬರುವವರಿಗೆ ಮಾತ್ರ ತಾಯಿ ಶಾರದಾಂಬೆ ಒಲಿಯುತ್ತಾಳೆ. ರಾಹುಲ್‌ಗಾಂಧಿ ಶೃಂಗೇರಿಗೆ ಆಗಮಿಸಿರುವುದನ್ನು ಸ್ವಾಗತಿಸುತ್ತೇನೆ. ಆದರೆ, ಅವರು ರಾಜಕೀಯಕ್ಕಾಗಿ, ಚುನಾವಣೆಗಾಗಿ ಬಂದಿರುವುದನ್ನು ವಿರೋಧಿಸುತ್ತೇನೆ ಎಂದರು.

ಕಾಂಗ್ರೆಸ್‌ ಮುಖಂಡರಿಗೆ ಮಠಕ್ಕೆ, ದೇವಸ್ಥಾನಗಳಿಗೆ ಬರುವ ಯಾವುದೇ ಹಕ್ಕು ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ 2016ರಲ್ಲಿ ಎನ್‌.ಆರ್‌.ಪುರಕ್ಕೆ ಬಂದಿದ್ದು, ರಸ್ತೆ ಮಾರ್ಗವಾಗಿ ಚಿಕ್ಕಮಗಳೂರಿಗೆ ತೆರಳಿ, ಮರು ದಿನ ಎನ್‌.ಆರ್‌.ಪುರದಿಂದ ಹೆಲಿಕಾಪ್ಟರ್‌ ಮೂಲಕ ಬೆಂಗಳೂರಿಗೆ ತೆರಳಿದ್ದರು.

ನವೆಂಬರ್‌ ನ.30 ರಂದು ಸಿಎಂ ಮತ್ತೆ ಎನ್‌.ಆರ್‌.ಪುರಕ್ಕೆ ಬಂದು, ಅಲ್ಲಿಂದ ಕೊಪ್ಪಕ್ಕೆ ಹೋಗಿ, ವಾಪಸ್‌ ಎನ್‌.ಆರ್‌.ಪುರದಲ್ಲಿ ರಾತ್ರಿ ಉಳಿದು ಮರುದಿನ ಬೆಳಗ್ಗೆ 11ರ ವರೆಗಿದ್ದು, ಬೆಂಗಳೂರಿಗೆ ವಾಪಸಾಗಿದ್ದರು. ಆದರೂ ಶೃಂಗೇರಿ ಮಠಕ್ಕೆ ಹೋಗಲಿಲ್ಲ, ಗುರುಗಳ ಆಶೀರ್ವಾದ ಪಡೆಯಲಿಲ್ಲ, ಶ್ರೀ ಶಾರದಾಂಬೆಯ ದರ್ಶನ ಪಡೆಯಲಿಲ್ಲ.

ಕೇಸರಿ ಅಂದರೆ ಶಾಸ್ತ್ರನ ಎಂದು ಟೀಕೆ ಮಾಡುತ್ತಿದ್ದ ಸಿಎಂ ಸೇರಿದಂತೆ ಕಾಂಗ್ರೆಸ್‌ ಮುಖಂಡರು ಶೃಂಗೇರಿ ಮಠಕ್ಕೆ ಭೇಟಿ ನೀಡಿದ್ದಾಗ ಕೇಸರಿ ಶಲ್ಯ ಹಾಕಿಕೊಂಡಿದ್ದರು. ಇವೆಲ್ಲವೂ ಚುನಾವಣಾ ಗಿಮಿಕ್‌ ಅಲ್ಲದೆ ಬೇರೇನೂ ಅಲ್ಲ ಎಂದು ವ್ಯಂಗ್ಯವಾಡಿದರು.

click me!