
ಶಿವಮೊಗ್ಗ (ನ.10): ಬಿಜೆಪಿಯವರ ವಿರೋಧದ ನಡುವೆ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಜಿಲ್ಲಾಡಳಿತ ಟಿಪ್ಪು ಸುಲ್ತಾನ್ ಜಯಂತಿ ಆಚರಿಸುತ್ತಿದ್ದು ಇದಕ್ಕಾಗಿ ಎಲ್ಲ ಮುಂಜಾಗ್ರತೆ ಕ್ರಮ ಕೈಗೊಂಡಿದೆ. ಆದರೆ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕರು ಪಾಲ್ಗೊಂಡು ಏನಾದರೂ ವಿರೋಧದ ಮಾತುಗಳನ್ನಾಡಿದರೆ ಏನು ಮಾಡುವುದು ಎಂಬ ಹೊಸ ನಮೂನೆಯ ಆತಂಕ ಜಿಲ್ಲಾಳಿತವನ್ನು ಕಾಡಿದೆ. ಪರ ವಿರೋಧಗಳ ಅಡಕತ್ತರಿಯಲ್ಲಿ ಸಿಲುಕಿದ ಜಿಲ್ಲಾಡಳಿತದ್ದಾಗಿದೆ.
ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲವೆಂದು ಯಾರಾದರೂ ಶಾಸಕರು ಹೇಳಿದರೆ ಅವರ ಹೆಸರನ್ನು ಆಹ್ವಾನ ಪತ್ರಿಕೆಯಿಂದ ಕೈ ಬಿಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಜಿಲ್ಲೆಯಲ್ಲಿ ಮೊಳಕಾಲ್ಮುರು ಹಾಗೂ ಚಿತ್ರದುರ್ಗ ವಿಧಾನಸಭೆ ಕ್ಷೇತ್ರವನ್ನು ಇಬ್ಬರು ಬಿಜೆಪಿ ಶಾಸಕರು ಪ್ರತಿನಿಸುತ್ತಿದ್ದಾರೆ. ಪ್ರೋಟೋಕಾಲ್ ಪ್ರಕಾರ ಚಿತ್ರದುರ್ಗದಲ್ಲಿ ನಡೆಯುವ ಟಿಪ್ಪು ಸುಲ್ತಾನ್ ಕಾರ್ಯಕ್ರಮಕ್ಕೆ ಸ್ಥಳೀಯ ಬಿಜೆಪಿ ಶಾಸಕ ತಿಪ್ಪಾರೆಡ್ಡಿ ಅಧ್ಯಕ್ಷತೆ ವಹಿಸಲೇಬೇಕು. ಅವರ ಹೆಸರು ಆಹ್ವಾನ ಪತ್ರಿಕೆಯಲ್ಲಿ ಮುದ್ರಿತವಾಗಿದೆ. ಮುಖ್ಯ ಅತಿಥಿಗಳ ಸಾಲಿನಲ್ಲಿ ಮೊಳಕಾಲ್ಮುರು ಶಾಸಕ ತಿಪ್ಪೇಸ್ವಾಮಿ ಅವರ ಹೆಸರಿದೆ.
ಏನಂತಾರೆ ಬಿಜೆಪಿ ಶಾಸಕರು?
ಟಿಪ್ಪು ಸುಲ್ತಾನ್ ಜಯಂತಿ ಬಗ್ಗೆ ಕನ್ನಡಪ್ರಭದೊಂದಿಗೆ ಮಾತನಾಡಿದ ಶಾಸಕರಾದ ತಿಪ್ಪಾರೆಡ್ಡಿ ಹಾಗೂ ತಿಪ್ಪೇಸ್ವಾಮಿ ಯಾವುದೇ ಕಾರಣದಿಂದ ಭಾಗವಹಿಸುವುದಿಲ್ಲವೆಂಬ ಸ್ಪಷ್ಟನೆ ನೀಡಿದ್ದಾರೆ. ಆದರೆ ಇದು ಎಷ್ಟರ ಮಟ್ಟಿಗೆ ನಿಜ ಎನ್ನುವುದೇ ಜಿಲ್ಲಾಡಳಿತವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾರಣವಾಗಿದೆ. ಹಾಗೊಂದು ವೇಳೆ ಬಿಜೆಪಿ ಹೈಕಮಾಂಡ್ ರಾತ್ರೋರಾತ್ರಿ ತೀರ್ಮಾನ ಕೈಗೊಂಡು ಎಲ್ಲ ಶಾಸಕರು ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯಗಳ ಹೊರ ಹಾಕಬೇಕು ಎಂಬ ಫರ್ಮಾನು ಹೊರಡಿಸಿದರೆ ಶಾಸಕರು ಅನಿವಾರ್ಯವಾಗಿ ಪಾಲ್ಗೊಳ್ಳುತ್ತಾರೆ. ಜಿಲ್ಲಾಡಳಿತಕ್ಕೆ ಸಂದಿಗ್ದಗಳು ಎದುರಾಗುತ್ತವೆ. ಕಡೇಗಳಿಗೆಯಲ್ಲಿ ಶಾಸಕರು ತಮ್ಮ ನಿಲುವುಗಳ ಬದಲಾಯಿಸಲಾರರು ಎಂಬುದರ ಬಗ್ಗೆ ಗ್ಯಾರಂಟಿಗಳಿಲ್ಲ.
ಈ ಬಗ್ಗೆ ಕನ್ನಡಪ್ರಭದೊಂದಿಗೆ ಮಾತನಾಡಿದ ಡಿಸಿ ವಿ.ವಿ.ಜ್ಯೋತ್ಸ್ನಾ ಈವರೆಗೆ ಬಿಜೆಪಿ ಶಾಸಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲವೆಂಬ ಯಾವುದೇ ಪತ್ರ ನೀಡಿಲ್ಲ. ಪ್ರೋಟೋಕಾಲ್ ಪ್ರಕಾರ ಅವರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಲಾಗಿದೆ ಎಂದರು.
ಅಕ್ಕಪಕ್ಕ ಜಿಲ್ಲೆಗಳ ಎಸ್ಐ, ಡಿವೈಎಸ್ಪಿಗಳ ಬಳಕೆ:
ಚಿತ್ರದುರ್ಗದ ಯಾವ ಮೂಲೆಗೆ ಹೋದರೂ ಪೊಲೀಸರೇ ಕಣ್ಣಿಗೆ ರಾಚುತ್ತಿದ್ದಾರೆ. ಟಿಪ್ಪು ಜಯಂತಿ ನಡೆಯುವ ರಂಗಮಂದಿರದ ಮೇಲೆ ಇಡೀ ರಕ್ಷಣಾ ಇಲಾಖೆ ವಿಶೇಷ ಗಮನವಿರಿಸಿದೆ. ಚಿತ್ರದುರ್ಗ, ಹಾವೇರಿ, ಶಿವಮೊಗ್ಗ, ದಾವಣಗೆರೆಯಿಂದ ಡಿವೈಎಸ್ಪಿ ಇನ್ಸ್ಪೆಕ್ಟರ್ ಹಾಗೂ ಸಬ್ಇನ್ಸ್ಪೆಕ್ಟರ್ಗಳನ್ನು ಬಂದೋಬಸ್ತ್ ಕರ್ತವ್ಯದಲ್ಲಿ ತೊಡಗಿಸಿಕೊಳ್ಳಲಾಗಿದೆ. ಪರಿಸ್ಥಿತಿಯ ಸೂಕ್ಷತೆಯನ್ನು ಅರಿತು ಅರೆಸೇನಾಪಡೆ ಹಾಗೂ ಸಶಸ ಮೀಸಲು ಪಡೆಯನ್ನು ನಗರಕ್ಕೆ ಕರೆಸಿಕೊಳ್ಳಲಾಗಿದೆ. 144 ಸೆಕ್ಷನ್ ಜಾರಿಯಲ್ಲಿರುವುದರಿಂದ ಗಾಂವೃತ್ತ, ಜಿಲ್ಲಾಕಾರಿ ಕಚೇರಿ ವೃತ್ತ, ಪ್ರವಾಸಿ ಮಂದಿರ, ನಗರಸಭೆ ಎದುರುಗಿರುವ ಮಸೀದಿ, ಹೊರಪೇಟೆ, ಬಸವೇಶ್ವರ ಟಾಕೀಸ್ ಸಮೀಪ, ಅಂಬೇಡ್ಕರ್ ವೃತ್ತ, ಖಾಜಿಮೊಹಲ್ಲಾದಲ್ಲಿ ಪೊಲೀಸರು ದಿನವಿಡಿ ಕಟ್ಟೆಚ್ಚರ ವಹಿಸಿ ಕರ್ತವ್ಯ ನಿರ್ವಹಿಸಿದರು.