
ಬೆಂಗಳೂರು: ಪರಿಶಿಷ್ಟ ಜಾತಿ ಹಾಗೂ ಜನಾಂಗದ ಸರ್ಕಾರಿ ನೌಕರರಿಗೆ ಬಡ್ತಿ ಮೀಸಲಾತಿ ನೀಡುವ ಸಂಬಂಧ ಗೊಂದಲ ಇತ್ಯರ್ಥಗೊಳ್ಳದ ಹಿನ್ನೆಲೆಯಲ್ಲಿ ಮುಂಬಡ್ತಿ ಪ್ರಕ್ರಿಯೆ ತಡೆಹಿಡಿಯುವ ಗಡುವನ್ನು ಮತ್ತಷ್ಟು ವಿಸ್ತರಿಸಲು ಮಂಗಳವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ಬಡ್ತಿ ಮೀಸಲಾತಿ ಪ್ರಕರಣ ಬಗೆಹರಿಯದ ಹಿನ್ನೆಲೆಯಲ್ಲಿ ರಾಜ್ಯ ಸಿವಿಲ್ ಸೇವೆಯ ನಾನಾ ವೃಂದದ ಮುಂಬಡ್ತಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಈಗಾಗಲೇ ಹೊರಡಿಸಿದ ಸುತ್ತೋಲೆ ಜಾರಿಯಲ್ಲಿದೆ. ಈ ನಡುವೆಯೂ ಲೋಕೋಪಯೋಗಿ ಇಲಾಖೆಯ 155 ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರುಗಳಿಗೆ ಕಾರ್ಯನಿರ್ವಾಹಕ ಎಂಜಿನಿಯರ್ ಹುದ್ದೆಗೆ ರೂಲ್ 32 ಅಡಿ ಬಡ್ತಿ ನೀಡಲು ಉದ್ದೇಶಿಸಲಾಗಿದೆ. ಈ ಸಂಬಂಧ ಮಂಗಳವಾರ ಇಲಾಖಾ ಪದನ್ನೋತಿ ಸಮಿತಿ ಸಭೆ ನಿಗದಿ ಪಡಿಸಲಾಗಿದೆ ಎಂದು ಗೊತ್ತಾಗಿದೆ.
ಈಗಾಗಲೇ ಲೋಕೋಪಯೋಗಿ ಇಲಾಖೆಯು 540 ಸಹಾಯಕ ಎಂಜಿನಿಯರ್‌ಗಳಿಗೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಹುದ್ದೆಗೆ ರೂಲ್ 32 ಅಡಿ ಬಡ್ತಿ ಪ್ರದಾನ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಈ ಕುರಿತ ಕಡತ ಸರ್ಕಾರಕ್ಕೆ ಹೋಗಿದೆ. ಹೀಗಾಗಿ ನಾಳಿನ ಸಂಪುಟದ ತೀರ್ಮಾನ ಕುತೂಹಲ ಕೆರಳಿಸಿದೆ.