
- ಶಿವಕುಮಾರ್ ಮೆಣಸಿನಕಾಯಿ
ಬೆಂಗಳೂರು: ಹೊಸ ವರ್ಷದ ಸಂಭ್ರಮಕ್ಕೆ ಭಾರಿ ಪ್ರಮಾಣದ ಆದಾಯ ನಿರೀಕ್ಷಿಸಿದ್ದ ರಾಜ್ಯದ ಅಬಕಾರಿ ಇಲಾಖೆಗೆ ಈ ಬಾರಿ ಬೆಂಗಳೂರಿಗರು ಭಾರಿ ನಿರಾಸೆ ಮೂಡಿಸಿದ್ದಾರೆ. ಹೊಸ ವರ್ಷಾಚರಣೆ ವೇಳೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮದ್ಯ ಮಾರಾಟ ಶೇ.೭೦ರಷ್ಟು ಕುಸಿತ ಕಂಡಿದೆ.
ಅಬಕಾರಿ ಇಲಾಖೆಯ ಉನ್ನತ ಮೂಲಗಳ ಪ್ರಕಾರ, ಮೊನ್ನೆ ಡಿಸೆಂಬರ್ 31ರ ರಾತ್ರಿ ಹೊಸ ವರ್ಷಾಚರಣೆಗೆ ಬೆಂಗಳೂರಿನಲ್ಲಿ ಮದ್ಯ ಮಾರಾಟ ಸಂಪೂರ್ಣ ಕುಸಿದು ಹೋಗಿದೆ. ಹೋದ ವರ್ಷ ದೇಶೀಯ ಮದ್ಯ ಸುಮಾರು 51 ಸಾವಿರ ಕೇಸ್ ಗಳಷ್ಟು ಮಾರಾಟ ಆಗಿದ್ದರೆ, ಈ ಬಾರಿ ಕೇವಲ 18 ಸಾವಿರ ಕೇಸ್‌ಗಳಷ್ಟು ಮಾತ್ರ ಮಾರಾಟವಾಗಿದೆ.
ಬಿಯರ್ ಮಾರಾಟ ಕಳೆದ ವರ್ಷ 34 ಸಾವಿರ ಕೇಸ್ ಆಗಿದ್ದರೆ ಈ ಬಾರಿ ಕೇವಲ 15 ಸಾವಿರ ಕೇಸ್ ಮಾರಾಟವಾಗಿದೆ. ಈ ಭಾರಿ ಇಳಿಕೆಗೆ ಅಬಕಾರಿ ಇಲಾಖೆ ತತ್ತರಿಸಿ ಹೋಗಿದ್ದು, ಕಾರಣಗಳನ್ನು ಹುಡುಕಲು ಆರಂಭಿಸಿದೆ. ಪ್ರಸಕ್ತ ವರ್ಷ ಮದ್ಯ ಮಾರಾಟದಿಂದ 18 ಸಾವಿರ ಕೋಟಿ ರು.ಗಳ ಆದಾಯ ನಿರೀಕ್ಷಿಸಿರುವ ಅಬಕಾರಿ ಇಲಾಖೆ ಈಗಾಗಲೇ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಸುಪ್ರಿಂಕೋರ್ಟ್ ಆದೇಶದ ಪರಿಣಾಮ ಮೂರುವರೆ ಸಾವಿರ ಬಾರ್‌ಗಳಿಗೆ ಬೀಗ ಹಾಕಿದ್ದರಿಂದ ಸಾವಿರಾರು ಕೋಟಿ ರು. ನಷ್ಟ ಅನುಭವಿಸಿದೆ. ಇದೀಗ ಹೊಸ ವರ್ಷದ ವೇಳೆ ಆಗಿರುವ ಹಿನ್ನಡೆಯಿಂದ ಗುರಿ ತಲುಪುವುದು ಹೇಗೆಂಬ ಜಿಜ್ಞಾಸೆಗೆ ಬಿದ್ದಿದೆ.
ಈ ವರ್ಷ ಡಿಸೆಂಬರ್ 31ರಂದು ಮದ್ಯ ಮಾರಾಟದ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. ಅಬಕಾರಿ ಇಲಾಖೆ ಇಂತಿಷ್ಟೇ ಮಾರಾಟ ಮಾಡುವ ಗುರಿಯೇನೂ ಹೊಂದಿರಲಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದಾಗ ಇಳಿಕೆ ಪ್ರಮಾಣ ಗೊತ್ತಾಗಿದೆ. ಬೆಂಗಳೂರು ಮಾತ್ರವಲ್ಲದೇ ಇಡೀ ರಾಜ್ಯದಲ್ಲಿ ಕುಸಿತವಾಗಿದೆ. ಆದರೆ ಡಿಸೆಂಬರ್ ಇಡೀ ತಿಂಗಳು ನೋಡಿದರೆ ಹೆಚ್ಚೂ-ಕಡಿಮೆ ಕಳೆದ ವರ್ಷದಷ್ಟೇ ಮಾರಾಟ ಆಗಿದೆ.
- ರಾಜೇಂದ್ರ ಪ್ರಸಾದ್, ಅಬಕಾರಿ ಇಲಾಖೆ ಹೆಚ್ಚುವರಿ ಆಯುಕ್ತ
ಆದರೆ ಸಮಾಧಾನದ ಸಂಗತಿ ಎಂದರೆ ಇಡೀ ಡಿಸೆಂಬರ್ ತಿಂಗಳಿನಲ್ಲಿ ಒಟ್ಟು ಮದ್ಯ ಮತ್ತು ಬಿಯರ್ ಮಾರಾಟದ ಪ್ರಮಾಣವು ಹೋದ ವರ್ಷದ ಸರಿಸಮನಾಗಿದ್ದು, ಇದರಿಂದ ಕೆಲಮಟ್ಟಿಗೆ ಸುಧಾರಿಸಿಕೊಳ್ಳುವ ಆಸೆ ಚಿಗುರಿದೆ. ಈ ವರ್ಷದ ಡಿಸೆಂಬರ್ 31ರ ರಾತ್ರಿ ಬೆಂಗಳೂರು ಸೇರಿದಂತೆ ಇಡೀ ರಾಜ್ಯದಲ್ಲಿ ಮದ್ಯ ಮತ್ತು ಬಿಯರ್ ಮಾರಾಟದ ಪ್ರಮಾಣ ಅಪಾರವಾಗಿ ಕುಸಿದಿರುವುದು ಏಕೆ ಎಂಬ ಹುಡುಕಾಟ ಶುರುವಾಗಿದೆ. ಕಳೆದ ವರ್ಷದ ಹೊಸ ವರ್ಷಾಚರಣೆ ವೇಳೆ ಬೆಂಗಳೂರಿನ ಎಂ.ಜಿ.ರಸ್ತೆ ಮತ್ತು ಬ್ರಿಗೇಡ್ ರಸ್ತೆಯಲ್ಲಿ ಯುವತಿಯರ ಮೇಲೆ ಸಾಮೂಹಿಕ ಲೈಂಗಿಕ ದೌರ್ಜನ್ಯ ನಡೆದ ಘಟನೆ ಹಿನ್ನೆಲೆಯಲ್ಲಿ ಈ ವರ್ಷ ಹೊಸ ವರ್ಷಾಚರಣೆ ನಿಷೇಧಿಸಬೇಕು ಎಂಬುದಾಗಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿತ್ತು. ಅದರಿಂದ ಈ ವರ್ಷ ಸಂಭ್ರಮಕ್ಕೆ ಭಾರಿ ಡ್ಡಿಯಾಗುತ್ತದೆ ಎಂದೇ ಭಾವಿಸಲಾಗಿತ್ತು. ಅಂತಿಮವಾಗಿ ಪೊಲೀಸ್ ಇಲಾಖೆ ನೀಡಿದ ಭರವಸೆ ಮೇರೆಗೆ ಹೈಕೋರ್ಟ್ ಅನುಮತಿ ನೀಡಿತ್ತಾದರೂ ಅನಾಹುತಕ್ಕೆ ಇಲಾಖೆಯನ್ನೇ ಹೊಣೆ ಮಾಡುವುದಾಗಿ ಎಚ್ಚರಿಕೆ ನೀಡಿತ್ತು. ಇದರ ಪರಿಣಾಮವಾಗಿ ಬೆಂಗಳೂರಿನಲ್ಲಿ 25 ಸಾವಿರ ಪೊಲೀಸರನ್ನುನಿಯೋಜಿಸಲಾಗಿತ್ತು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬೆಂಗಳೂರು ಮಾತ್ರವಲ್ಲದೇ ರಾಜ್ಯಾದ್ಯಂತ ಭಾರಿ ಭದ್ರತೆ ಮಾಡಲಾಗಿತ್ತು. ಪರಿಣಾಮವಾಗಿ ಜನರು ಮನೆಯಿಂದ ಹೊರಬರಲು ಹೆದರುವಂತಾಯಿತು.
ಒಂದೆಡೆ ಕೋರ್ಟ್ ನಿರ್ದೇಶನದಿಂದ ಪೊಲೀಸರು ಭಾರಿ ಕಟ್ಟುನಿಟ್ಟಾದ ಕ್ರಮ ಕೈಗೊಂಡರೆ ಮತ್ತೊಂದೆಡೆ ಚುನಾವಣಾ ವರ್ಷವಾದ್ದರಿಂದ ಗಲಾಟೆಗಳು ಸಂಭವಿಸಬಹುದು ಎಂಬ ಕಾರಣಕ್ಕಾಗಿ ಹೆಚ್ಚು ಜನರು ಮನೆಯಿಂದ ಹೊರ ಬರಲಿಲ್ಲ. ಹೀಗಾಗಿ ಬಹುತೇಕ ಜನರು ಡಿಸೆಂಬರ್ 31ರಂದು ಮದ್ಯ ಮತ್ತು ಬಿಯರ್ ಖರೀದಿಸದೇ ಕೆಲ ದಿನಗಳ ಮುಂಚಿತವಾಗಿಯೇ ತಮ್ಮ ತಮ್ಮ ಮನೆಗಳಲ್ಲಿ ಸಂಗ್ರಹಿಸಿಟ್ಟು ಮನೆಯಲ್ಲೇ ಪಾರ್ಟಿಗಳನ್ನು ಮಾಡಿದ್ದಾರೆ ಎನ್ನಲಾಗುತ್ತಿದೆ.
ಒಟ್ಟಾರೆ ಈ ವರ್ಷ ಡಿಸೆಂಬರ್ 31ರಂದು ಮದ್ಯ ಮತ್ತು ಬಿಯರ್ ಖರೀದಿಸಿದವರ ಸಂಖ್ಯೆ ಈ ಬಾರಿ ಶೇ. 70ರಷ್ಟು ಕುಸಿದಿದೆ ಎಂದು ಅಬಕಾರಿ ಇಲಾಖೆಯ ಅಂಕಿ-ಸಂಖ್ಯೆಗಳು ಖಚಿತವಾಗಿ ಹೇಳುತ್ತಿವೆ.