ರಾಮನಗರದಲ್ಲಿ ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಜನಾಕ್ರೋಶ

Published : May 28, 2017, 05:15 PM ISTUpdated : Apr 11, 2018, 12:54 PM IST
ರಾಮನಗರದಲ್ಲಿ ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಜನಾಕ್ರೋಶ

ಸಾರಾಂಶ

ಜಿಲ್ಲಾಡಳಿತ ಸಂಕೀರ್ಣದ ಎದುರೇ ಪ್ರತಿಭಟನೆ ನಡೆಯುತ್ತಿದ್ದರೂ ಕೂಡ ಜಿಲ್ಲಾಧಿಕಾರಿಗಳು ಇದುವರೆಗೂ ನಮ್ಮ ಸಮಸ್ಯೆ ಆಲಿಸಿಲ್ಲ. ಕನಿಷ್ಠ ಸೌಜನ್ಯಕ್ಕಾದರೂ ಅಹವಾಲು ಕೇಳದ ಇಂತಹ ಅಮಾನ ವೀಯ ಜಿಲ್ಲಾಧಿಕಾರಿಗಳಿಂದ ನಮಗೆ ನ್ಯಾಯ ಸಿಗಲು ಸಾಧ್ಯವಿಲ್ಲ ಎಂದ ಅವರು ಹಕ್ಕು ಪತ್ರ ನೀಡಿ, ಇಲ್ಲವೇ ಜಾಗ ಖಾಲಿ ಮಾಡಿ ಎಂದು ಆಗ್ರಹಿಸಿದರು.

ರಾಮನಗರ: ಶುಕ್ರವಾರ ರಾತ್ರಿ ಸುರಿದ ಧಾರಾಕಾರ ಮಳೆಯನ್ನೂ ಲೆಕ್ಕಿಸದ ಆದಿವಾಸಿಗಳು ಹಕ್ಕುಪತ್ರಕ್ಕಾಗಿ ನಾಲ್ಕನೇ ದಿನವೂ ಹೋರಾಟ ಮುಂದುವರಿಸಿದ್ದು, ಜಿಲ್ಲಾಡಳಿತದ ನಿರ್ಲಕ್ಷ್ಯದ ವಿರುದ್ಧ ಭಾರಿ ಜನಾಕ್ರೋಶ ವ್ಯಕ್ತವಾಗಿದೆ. ಆದಿವಾಸಿಗಳ ಹೋರಾಟಕ್ಕೆ ವಿವಿಧ ಪ್ರಗತಿಪರ ಸಂಘಟನೆಗಳು ಹೋರಾಟದಲ್ಲಿ ಭಾಗಿಯಾಗುವ ಮೂಲಕ ಬೆಂಬಲ ವ್ಯಕ್ತಪಡಿಸಿವೆ. ದಿನೇ ದಿನೇ ಹೋರಾಟದ ಕಿಚ್ಚು ಹೆಚ್ಚುತ್ತಿದ್ದು, ದಿಡ್ಡಳ್ಳಿಯ ಪ್ರತಿಭಟನೆಯಂತೆ ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ.

ಆಮ್‌ ಆದ್ಮಿ ಪಕ್ಷದ ಮೋಹನ್‌'ದಾಸ್‌, ಜಗದೀಶ್‌, ರವಿಚಂದ್ರನ್‌, ಸೀತಾರಾಮನ್‌, ಕರುನಾಡ ಪ್ರಜಾ ಸೇನೆಯ ರಾಜ್ಯ ಉಪಾಧ್ಯಕ್ಷ ರವಿ ಕಹಳೆ, ರುದ್ರೇಶ್‌ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಮೋಹನ್‌ ರಾಜ್‌ ಶನಿವಾರ ಪ್ರತಿಭಟನೆಯಲ್ಲಿ ಸಾಂಕೇತಿಕವಾಗಿ ಭಾಗಿಯಾಗಿದ್ದು, ಸೋಮವಾರ ಭಾರಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ.

ಮಹಿಳೆಯರು, ಮಕ್ಕಳೂ ಸೇರಿದಂತೆ ನೂರಾರು ಆದಿವಾಸಿಗಳು ನಗರದ ಜಿಲ್ಲಾಡಳಿತ ಸಂಕೀರ್ಣದ ಎದುರಿನ ಬೆಂಗಳೂರು-ಮೈಸೂರು ಹೆದ್ದಾರಿ ಬದಿಯಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರೂ ಜಿಲ್ಲಾ ಡಳಿತ ಅವರ ಅಹವಾಲು ಆಲಿಸದೆ ನಿರ್ಲಕ್ಷ್ಯ ವಹಿಸಿದೆ ಎಂದು ಪ್ರತಿಭಟನಾ ನಿರತರು ಜಿಲ್ಲಾಡಳಿತದ ವಿರುದ್ಧ ಕಿಡಿಕಾರಿದರು.

ಜಿಲ್ಲಾಡಳಿತ ಸಂಕೀರ್ಣದ ಎದುರೇ ಪ್ರತಿಭಟನೆ ನಡೆಯುತ್ತಿದ್ದರೂ ಕೂಡ ಜಿಲ್ಲಾಧಿಕಾರಿಗಳು ಇದುವರೆಗೂ ನಮ್ಮ ಸಮಸ್ಯೆ ಆಲಿಸಿಲ್ಲ. ಕನಿಷ್ಠ ಸೌಜನ್ಯಕ್ಕಾದರೂ ಅಹವಾಲು ಕೇಳದ ಇಂತಹ ಅಮಾನ ವೀಯ ಜಿಲ್ಲಾಧಿಕಾರಿಗಳಿಂದ ನಮಗೆ ನ್ಯಾಯ ಸಿಗಲು ಸಾಧ್ಯವಿಲ್ಲ ಎಂದ ಅವರು ಹಕ್ಕು ಪತ್ರ ನೀಡಿ, ಇಲ್ಲವೇ ಜಾಗ ಖಾಲಿ ಮಾಡಿ ಎಂದು ಆಗ್ರಹಿಸಿದರು.

ಎಚ್‌.ಎಸ್‌. ದೊರೆಸ್ವಾಮಿ ಭಾಗಿ:
ಹಿರಿಯ ಸ್ವತಂತ್ರ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ, ಭೂಮಿ ಮತ್ತು ವಸತಿ ಹೋರಾಟಗಾರ ನೂರ್‌ ಶ್ರೀಧರ್‌, ತಿರಿಮನೆ ನಾಗರಾಜು, ದಸಂಸ ರಾಜ್ಯಾಧ್ಯಕ್ಷ ಮೋಹನ್‌ರಾಜ್‌, ಕರುನಾಡ ಪ್ರಜಾ ಸೇನೆ ಸಂಘಟನೆ ರಾಜ್ಯಾಧ್ಯಕ್ಷ ರವಿ ಕಹಳೆ ಸೇರಿದಂತೆ ಇನ್ನಿತರೆ ಪ್ರಗತಿಪರ ಹೋರಾಟಗಾರರು ಪ್ರತಿಭಟನೆಯಲ್ಲಿ ಭಾಗಿಯಾಗುವ ಮೂಲಕ ಹೋರಾಟವನ್ನು ತೀವ್ರ ಗೊಳಿಸಲು ಚಿಂತನೆ ನಡೆಸಿದ್ದಾರೆ. 

ಪೊಲೀಸರ ಸರ್ಪಗಾವಲು:
ಆದಿವಾಸಿಗಳ ಪ್ರತಿಭಟನೆಗೆ ವ್ಯಾಪಕ ಬೆಂಬಲ ದೊರೆಯುತ್ತಿರುವುದು ಜಿಲ್ಲಾಡಳಿತಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಹೋರಾಟ ಗಂಭೀರತೆ ಪಡೆಯಬಹುದೆಂಬ ಮುನ್ಸೂಚನೆ ಅರಿತಿರುವ ಜಿಲ್ಲಾಡಳಿತ ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡುವ ಮೂಲಕ ಸರ್ಪಗಾವಲು ಹಾಕಿದೆ. ಜಿಲ್ಲಾಡಳಿತದ ಈ ಕ್ರಮದ ವಿರುದ್ಧ ಆದಿವಾಸಿಗಳು ಹರಿಹಾಯ್ದಿದ್ದಾರೆ. ಕನಿಷ್ಠ ಮಾನವೀಯತೆ ಹೊಂದಿರದ ಜಿಲ್ಲಾಡಳಿತ ನಮ್ಮನ್ನು ಭಯೋತ್ಪಾದಕರಂತೆ ಕಾಣುತ್ತಿದೆ. ಹಕ್ಕುಪತ್ರ ನೀಡದ ಹೊರತು ನಾವು ಧರಣಿ ಹಿಂಪಡೆಯುವುದಿಲ್ಲ ಎಂಬುದು ಪ್ರತಿಭಟನಾ ಕಾರರ ನಿಲುವಾಗಿದೆ.

ಜಿಪಂ ಅಧ್ಯಕ್ಷರ ಸಂಧಾನ ವಿಫಲ:
ಆದಿವಾಸಿಗಳ ಪ್ರತಿಭಟನಾ ಸ್ಥಳಕ್ಕೆ ಜಿಪಂ ಅಧ್ಯಕ್ಷ ಸಿ.ಪಿ.ರಾಜೇಶ್ ಭೇಟಿ ನೀಡಿ ಸಮಸ್ಯೆ ಆಲಿಸಿದರು. ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ನ್ಯಾಯ ಒದಗಿಸುವ ಭರವಸೆ ನೀಡಿ, ಪ್ರತಿಭಟನೆಯನ್ನು ಹಿಂಪಡೆಯುವಂತೆ ಮನವಿ ಮಾಡಿದರು. ಆದರೆ, ಅಧ್ಯಕ್ಷರ ಮಾತನ್ನು ತಿರಸ್ಕರಿಸಿದ ಪ್ರತಿಭಟನಾನಿರತರು ನಮ್ಮ ಪ್ರತಿಭಟನೆಯನ್ನು ನಿರ್ಲಕ್ಷಿಸಿರುವ ಜಿಲ್ಲಾಧಿಕಾರಿಗಳಿಂದ ನಮಗೆ ನ್ಯಾಯ ಸಿಗುವ ಭರವಸೆ ಇಲ್ಲ. ನ್ಯಾಯಾಲಯದ ಆದೇಶದಂತೆ ನಮಗೆ ಹಕ್ಕುಪತ್ರ ನೀಡದ ಹೊರತು ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದರು.

ಕನ್ನಡಪ್ರಭ ವಾರ್ತೆ
epaper.kannadaprabha.in

PREV
click me!

Recommended Stories

ಕಾಫಿನಾಡಲ್ಲಿ 3ಗಂಟೆ ಬಾಗಿನ ಕೊಡಲು ಕಾದ ಬಿಜೆಪಿಗರು, ಅರಿಶಿನ-ಕುಂಕುಮ ತಿರಸ್ಕರಿಸಿದ ಸಚಿವೆ ಹೆಬ್ಬಾಳ್ಕರ್!
ಮದುವೆ ಸಂಭ್ರಮದಲ್ಲಿ ಮನೆಯಲ್ಲಿ ಸಾವು, ಡಾನ್ಸ್ ಮಾಡುತ್ತಲೇ ಹೃದಯಾಘಾತ ಉಸಿರು ಚೆಲ್ಲಿದ ಯುವಕ