ರೈತ ಸಂಘದಿಂದ ಹೆದ್ದಾರಿ ತಡೆದು ಪ್ರತಿಭಟನೆ;ಕಾಡಾ ನಿರ್ಣಯ ಪುನರ್ ಪರಿಶೀಲನೆಗೆ ಮನವಿ

By Suvarna Web DeskFirst Published Nov 8, 2016, 3:13 PM IST
Highlights

ಭದ್ರಾ ಕಾಲುವೆಯಲ್ಲಿ ನೀರು ಸ್ಥಗಿತಗೊಳಿಸುವ ದಿನಾಂಕ ಹತ್ತಿರ ಬಂದಂತೆಲ್ಲ ರೈತ ಸಂಘಟನೆಗಳು ಹೋರಾಟ ತೀವ್ರಗೊಳಿಸಿದ್ದು ಮಂಗಳವಾರ ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಾವಣಗೆರೆ (ನ.08): ಭದ್ರಾ ಕಾಲುವೆಯಲ್ಲಿ ನೀರು ಸ್ಥಗಿತಗೊಳಿಸುವ ದಿನಾಂಕ ಹತ್ತಿರ ಬಂದಂತೆಲ್ಲ ರೈತ ಸಂಘಟನೆಗಳು ಹೋರಾಟ ತೀವ್ರಗೊಳಿಸಿದ್ದು ಮಂಗಳವಾರ ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ನೇತೃತ್ವದಲ್ಲಿ ಕುಂದವಾಡ ಬಳಿಯ ಹೆದ್ದಾರಿಗೆ ಇಳಿದ ನೂರಾರು ರೈತರು ಅರ್ಧ ತಾಸು ರಸ್ತೆ ತಡೆ ಮಾಡಿದರು. ಇದರಿಂದಾಗಿ ಹುಬ್ಳಳ್ಳಿ ಮತ್ತು ಬೆಂಗಳೂರು ನಡುವಿನ ಸಂಚಾರದಲ್ಲಿ ಕೆಲ ಕಾಲ ಅಡಚಣೆಯುಂಟಾಗಿತ್ತು.

Latest Videos

ಹುಚ್ಚವ್ವನಹಳ್ಳಿ ಮಂಜುನಾಥ್ ಮಾತನಾಡಿ, ಆಫ್ ಆ್ಯಂಡ್ ಆನ್ ಪದ್ಧತಿ ಮುಗಿಯುತ್ತಾ ಬಂದಿದ್ದ ಕಾಡಾ ಸಮಿತಿ ನಿರ್ಣಯದಿಂದ ಸಾವಿರಾರು ಎಕರೆ ಪ್ರದೇಶದ ನೀರಾವರಿ ಜಮೀನಿನಲ್ಲಿ ಬತ್ತದ ಫಸಲು ಹಾಳಾಗುತ್ತಿದೆ. ಕಳೆದ ವರ್ಷದ ಬೇಸಿಗೆಯಲ್ಲಿಯೂ ಸಹ ರೈತರು ಬೆಳೆ ಬೆಳೆದಿಲ್ಲ. ಮಳೆಗಾಲದ ಬೆಳೆಯೂ ಸಹ ಹಾಳಾಗುತ್ತಿದೆ. ರೈತರ ನೋವು ಅರ್ಥ ಮಾಡಿಕೊಳ್ಳುವಲ್ಲಿ ಕಾಡಾ ಸಮಿತಿ ವಿಫಲವಾಗಿದೆ ಎಂದು ದೂರಿದರು.

ಹಿಂಗಾರು ಹಂಗಾಮು ಕೂಡಾ ಕೈ ಕೊಡುವ ಮನ್ಸೂಚನೆಗಳಿದ್ದು ಮುಂದಿನ ಬೇಸಿಗೆ ಬೆಳೆಗೆ ನೀರು ಸಿಗುವುದು ಕಷ್ಟವಾಗಿದೆ. ಸತತ ಮೂರು ಬೆಳೆಯೂ ಸಹ ನಷ್ಟವಾಗಿದೆ. ಇದರಿಂದ ರೈತರ ಬದುಕು ದುಸ್ತರವಾಗಿದ್ದು, ರೈತರ ಈ ಪರಿಸ್ಥಿತಿಗೆ ಕಾಡಾ ಸಮಿತಿಯ ತೀರ್ಮಾನ ಕಾರಣವಾಗಿದೆ ಎಂದು ದೂರಿದರು.

ಈಗಾಗಲೇ ಲಕ್ಷಾಂತರ ಎಕರೆಯಲ್ಲಿ ಫಸಲು ಬಂದಿದೆ. ಇನ್ನು 10 ರಿಂದ 15 ದಿನ ನೀರಿನ ಅವಶ್ಯಕತೆ ಇದೆ. ಆದ್ದರಿಂದ ನ.30 ರವರೆಗೆ ನೀರು ಹರಿಸಬೇಕೆಂದು ಒತ್ತಾಯಿಸಿದರು.

ನೀರಾವರಿ ಇಲಾಖೆಯ ಅಭಿಯಂತರ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾ ನಿರತ ರೈತರೊಂದಿಗೆ ಮಾತುಕತೆ ನಡೆಸಿದರು. ಈ ಬಾರಿಯ ಕಾಡಾ ಸಮಿತಿ ಸಭೆ ಬೆಂಗಳೂರಿನಲ್ಲಿ ನಡೆಯಲಿದ್ದು ನೀರು ಬಿಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ. ಬೆಳೆಯ ವಾಸ್ತವಾಂಶ ಪರಿಸ್ಥಿತಿಯ ಕಾಡಾ ಗಮನಕ್ಕೆ ತರಲಾಗಿದೆ ಎಂದರು.

ಕಾಡಾ ಸಮಿತಿ ಈ ಕುರಿತು ರೈತರ ಪರ ತೀರ್ಮಾನ ಕೈಗೊಳ್ಳಲಿದೆ ಎಂಬ ಭರವಸೆ ಮೇರೆಗೆ ರೈತರು ಪ್ರತಿಭಟನೆ ವಾಪಾಸ್ಸು ಪಡೆದರು.

 

click me!