
ಚಿತ್ರದುರ್ಗ (ನ.19): ಸಿಹಿ ನೀರು ಹೊಂಡದಲ್ಲಿ ಇರುವುದು ಮತ್ತೊಂದು ಹೊಂಡ ಅಲ್ಲ. ಪುಷ್ಕರಣಿ ಇರಬಹುದು ಎಂದು ಖ್ಯಾತ ಇತಿಹಾಸ ಸಂಶೋಧಕ ಪ್ರೊ. ಲಕ್ಷ್ಮಣ್ ತೆಲಗಾವಿ ತಿಳಿಸಿದರು.
ನಗರದ ಸಿಹಿನೀರು ಹೊಂಡದಲ್ಲಿ ಹೂಳು ತೆಗೆಯುವಾಗ ಸಿಕ್ಕಿರುವ ಹೊಸ ಪುಷ್ಕರಣಿ ಹೊಂಡದ ರೂಪದಲ್ಲಿರುವ ಭಾಗ. ಪೂರ್ಣ ತೆಗೆದಾಗ ಅದರ ಬಗ್ಗೆ ತಿಳಿಯುತ್ತದೆ. ಆದರೆ, ಸಿಹಿ ನೀರಿನ ಹೊಂಡದ ಮೊದಲ ಹೆಸರು ಉಚ್ಚಂಗಿ ಹೊಂಡ. ಇದೇ ರೀತಿ ಹೊಂಡದಲ್ಲಿ ಪುಷ್ಕರಣಿ ಕಲಬುರ್ಗಿಯಲ್ಲಿ ಸಿಕ್ಕಿದೆ. ಹೊಂಡದಲ್ಲಿ ನೀರು ಖಾಲಿಯಾದರು ಪುಷ್ಕರಣಿಯಲ್ಲಿ ಕುಡಿಯ ಲು ನೀರು ಉಳಿಸುವ ಉದ್ದೇಶದಿಂದ ನಿರ್ಮಾಣವಾಗಿದ್ದಾಗಿದೆ ಎಂದರು.
ವಾಸ್ತವದಲ್ಲಿ ಉಚ್ಚಂಗಿ ಹೊಂಡವು ಹೊರ ಸುತ್ತು ಕೋಟೆಯ ಕಂದಕವಾಗಿದ್ದು, ಅಗಳಿನ ಸ್ವರೂಪದಲ್ಲಿದೆ. ಚಿತ್ರದುರ್ಗದ ಚಾರಿತ್ರಿಕ ದಾಖಲೆಗಳಲ್ಲಿ ಇದನ್ನು ಉ(ಹು)ಚ್ಚಂಗಿ ಹೊಂಡವೆಂತಲು ಹುಚ್ಚಂಗಮ್ಮನ ಹೊಂಡವೆಂತಲೂ ಕರೆಯಲಾಗಿದೆ.
ಉಚ್ಚಂಗಿ ಹೊಂಡದ ಪರಿಸರವು ಪ್ರಾಚೀನ ಕಾಲದಿಂದಲೂ ಜನಬಳಕೆಯದಾಗಿದ್ದಿತೆನ್ನಲು ಇಲ್ಲಿಯ ಬಂಡೆಗಳ ಮೇಲೆ ಕಂಡು ಬಂದಿರುವ ಶಾಸನ ಬರಹಗಳೇ ಸಾಕ್ಷಿಯಾಗಿದೆ. ಕ್ರಿ.ಶ.1436 ರಲ್ಲಿ ವೀರ ವಿಜಯರಾಯನೆಂಬವನು ಹಾಕಿಸಿದ ದತ್ತಿ ವಿಚಾರವುಳ್ಳ ಶಾಸನ ಹಾಗೂ ಪಶ್ಚಿಮ ದಿಕ್ಕಿನ ಬಂಡೆಯ ಮೇಲೆ ಕಂಡರಿಸಲಾಗಿರುವ ವಚನವನ್ನು ಹೋಲುವ ರಚನೆಗಳು ಇದನ್ನು ಸಮರ್ಥಿಸುತ್ತವೆ.
ಉಚ್ಚಂಗಿ ಹೊಂಡ ನಿರ್ಮಾಣಗೊಂಡದ್ದು ಚಿತ್ರದುರ್ಗ ನಾಯಕರಲ್ಲಿ ಹತ್ತನೇ ದೊರೆಯಾಗಿದ್ದ ರಾಜಾ ಬಿಚ್ಚುಗತ್ತಿ ಭರಮಣ್ಣನಾಯಕ ಕ್ರಿ.ಶ. 1689 ರಿಂದ 1721 ರವರೆಗಿನ ಆಡಳಿತಾಧಿಯಲ್ಲಿ. ಇವನು ತಮ್ಮ ಮನೆಯ ದೇವರುಗಳಲ್ಲಿ ಒಂದಾದ ಉಚ್ಚಂಗಿಯ ಗೌರವಾರ್ಥ ಈ ಹೊಂಡ ನಿರ್ಮಿಸಿದ ಉಚ್ಚಂಗಿಯ ಮಜ್ಜನಸೇವೆ ಇದೇ ಹೊಂಡದಲ್ಲಿ ನಡೆಯುತ್ತಿದ್ದಿತೆನ್ನಲಾಗುತ್ತದೆ.
ದುರ್ಗ ಸಂಸ್ಥಾನದ 13 ನೇ ಹಾಗೂ ಕೊನೆಯ ದೊರೆ ರಾಜಾ ವೀರಮದಕರಿನಾಯಕ ಕ್ರಿ.ಶ. 1754 ರಿಂದ 1779 ರಲ್ಲಿ ಆಡಳಿತಾವಧಿಯಲ್ಲಿ ದುರಸ್ತಿಗೊಳಿಸಲಾಗಿತ್ತು.
ಭೀಮೊಜಿ ಪಂತನ ಚಿತ್ರದುರ್ಗದ ಬಖೈರು ಮತ್ತು ಚಿನ್ನದಮನೆ ರಾಮಪ್ಪನ ಚಿನ್ಮೂಲಾದ್ರಿ ಗಿರಿದುರ್ಗದಲ್ಲಿ ಆಳಿದ ಹಿಂದಿನ ಅರಸರುಗಳು ದಾಖಲೆಗಳಲ್ಲಿ ಉಚ್ಚಂಗಿ ಹೊಂಡವನ್ನು ಸಿಹಿ ನೀರು ಹೊಂಡವೆಂತಲೇ ಕರೆಯಲಾಗಿದೆ. ಇಲ್ಲಿರುವ ಬಾಗಿಲನ್ನು ಸಿಹಿನೀರು ಹೊಂಡದ ಬಾಗಿಲೆಂತಲೇ ಗುರುತಿಸಲಾಗಿದೆ.
ಕ್ರಿ.ಶ. 1779 ರಲ್ಲಿ ರಾಜಾ ವೀರಮದಕರಿನಾಯಕ ಮತ್ತು ಹೈದರಾಲಿಯ ನಡುವೆ ನಡೆಯುವ ಅಂತಿಮ ಯುದ್ಧದಲ್ಲಿ ಸಿಹಿನೀರು ಹೊಂಡಕ್ಕಿದ್ದ ಪ್ರಾಮುಖ್ಯತೆ ತಿಳಿಯುವುದು. ಇಡೀ ಚಿತ್ರದುರ್ಗಕ್ಕೆ ಸಿಹಿನೀರುಹೊಂಡದ ನೀರು ಬಳಸುವರು ಎಂಬ ಮಾಹಿತಿ ತಿಳಿಯುವುದು. ಆದ್ದರಿಂದ ಸಿಹಿನೀರು ಹೊಂಡ ವಶಕ್ಕೆ ತೆಗೆದುಕೊಂಡರೆ ಇಡೀ ದುರ್ಗ ವಶಕ್ಕೆ ಬರುತ್ತದೆ ಎಂದು ಸೂಚಿಸಿದ್ದಾನೆ. ಹೀಗೆ ಸಿಹಿನೀರು ಹೊಂಡ ತನ್ನ ಪ್ರಾಮುಖ್ಯತೆ ಉಳಿಸಿಕೊಂಡು ಬಂದಿದೆ. ಈಗಲೂ ಇದನ್ನು ಉಳಿಸುವ ಕಾರ್ಯ ಒಳ್ಳೆಯದು ಎಂದರು.