
ರಾಯಚೂರು (ನ.18): ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಡಿ.2,3 ಮತ್ತು 4 ರಂದು ನಡೆಯಲಿರುವ 82 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಿಂದ ದೂರ ಉಳಿಯಲು ಗಡಿನಾಡಿನ ಕನ್ನಡಿಗರು ನಿರ್ಧರಿಸಿದ್ದಾರೆ.
ತೆಲಂಗಾಣ, ಆಂಧ್ರ ರಾಜ್ಯಗಳ ಅಕ್ಕಪಕ್ಕದಲ್ಲಿರುವ ರಾಯಚೂರು ಜಿಲ್ಲೆಯಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗಡಿನಾಡ ಸಮಸ್ಯೆಗಳ ಕುರಿತು ಗೋಷ್ಠಿ, ಸಮ್ಮೇಳನ ಪೂರ್ವ ಭಾವಿ ಸಿದ್ಧತೆ ಸಭೆ, ಉಪಸಮಿತಿಗಳ ರಚನೆಯಲ್ಲಿ ಗಡಿನಾಡ ಕನ್ನಡಿಗರ ಕಡೆಗಣನೆ ಖಂಡಿಸಿ ಈ ಕಠಿಣ ತೀರ್ಮಾನಕ್ಕೆ ಬಂದಿದ್ದಾರೆ.
ಐದಾರು ದಶಕಗಳಿಂದ ಹೊರರಾಜ್ಯದಲ್ಲಿ ಕನ್ನಡತನ ಮೆರೆಯುತ್ತಿರುವವರ ಸಮಸ್ಯೆಗಳಿಗೆ ಆಡಳಿತ ನಡೆಸಿದ ಸರ್ಕಾರಗಳು ತಾತ್ಸರ ಮನೋಭಾವನೆ ತಳೆಯುತ್ತಾ ಬಂದಿದ್ದು, ಗಡಿಯಲ್ಲಿ ಕನ್ನಡಪರ ಸಂಘ ಕಟ್ಟಿಕೊಂಡು ಅನೇಕ ಕಾರ್ಯಕ್ರಮಗಳು ಮತ್ತು ಹೋರಾಟ ನಡೆಸುತ್ತಾ ಬಂದವರಿಗೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತಮ್ಮ ಕಷ್ಟ-ಸುಖ ಹೇಳಿಕೊಳ್ಳುವುದಕ್ಕೆ ಒಂದು ಅವಕಾಶ ಸಿಗುತ್ತದೆ ಎಂದು ಆಸೆಯಲ್ಲಿದ್ದರು ಆದರೆ ಆಹ್ವಾನ ಪತ್ರಿಕೆಯಲ್ಲಿ ಗಡಿನಾಡಿನ ವಿಷಯದ ಬಗ್ಗೆ ಚಕಾರವೆತ್ತದಿರುವುದಕ್ಕೆ ತಕರಾರು ಸಹ ಮಾಡದೇ ನಿಸಹಯಕತೆ ಪ್ರದರ್ಶಿಸುತ್ತಿದ್ದಾರೆ.
ಗಡಿಯಾಚೆಗೆ ಕನ್ನಡ ಪ್ರೀತಿ:
ರಾಯಚೂರು ಗಡಿನಾಡಾಗಿರುವುದರಿಂದ ಅಕ್ಕಪಕ್ಕದ ಎರಡೂ ತೆಲುಗು ರಾಜ್ಯಗಳಲ್ಲಿ ಅನೇಕರು ಕನ್ನಡ ಭಾಷೆ, ಮಕ್ಕಳಿಗೆ ಕನ್ನಡದ ವಿದ್ಯಾಭ್ಯಾಸ ನೀಡುತ್ತಿದ್ದಾರೆ. ತೆಲಂಗಾಣದ ಮೆಹಬೂಬ್‌ನಗರ ಜಿಲ್ಲೆಯ ೧೩ ಗ್ರಾಮಗಳಲ್ಲಿ ಸುಮಾರು 18 ಸಾವಿರಕ್ಕೂ ಅಧಿಕ ಕನ್ನಡ ಭಾಷಿಕರಿದ್ದು, ಇದರ ಜೊತೆಗೆ ಹೈದರಾಬಾದ್, ಮೆದಕ್, ಕರ್ನೂಲ್, ಅನಂತಪುರ ಜಿಲ್ಲೆಗಳಲ್ಲಿ 113 ಶಾಲೆಗಳಲ್ಲಿ 24 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕನ್ನಡದಲ್ಲಿ ವಿದ್ಯಾಭ್ಯಾಸ ಮಾಡುಡುತ್ತಿದ್ದಾರೆ. ಇನ್ನು ಜಿಲ್ಲೆಯಲ್ಲಿ ಕನ್ನಡದಷ್ಟೇ ತೆಲುಗು ಭಾಷೆಯ ಬಳಕೆ ಸಹ ಹೆಚ್ಚಾಗಿದ್ದು, ಗಡಿಯಾಚೆಗೆ ಕನ್ನಡ ಪ್ರೀತಿಯನ್ನು ತೋರುತ್ತಿರುವಂತಹ ಜನರನ್ನು ಆರು ದಶಕಗಳ ನಂತರ ನಡೆಯುತ್ತಿರುವ 82ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೂಲೆಗುಂಪಾಗಿಸಿರುವುದು ಅವರ ಆಕ್ರೋಶಕ್ಕೆ ಕಾರಣವಾಗಿದೆ.
ದೊರೆಯದ ಮನ್ನಣೆ
ಕನ್ನಡ ಭಾಷೆಯ ಮೇಲಿನ ಅಕ್ಕರೆಯಿಂದ ಕನ್ನಡವನ್ನು ಓದುತ್ತಿರುವ ವಿದ್ಯಾರ್ಥಿಗಳು ಐಟಿಐ ಪ್ರವೇಶ, ಬಸ್ ಪಾಸ್, ಆದಾಯ ಪ್ರಮಾಣ ಪತ್ರ ಪಡೆಯಲು ಸಮಸ್ಯೆ ಅನುಭವಿಸುತ್ತಿದ್ದು, ಸಿಇಟಿ ಪ್ರವೇಶ ಪರೀಕ್ಷೆಗೂ ಅನರ್ಹತೆಗೊಳಪಡುತ್ತಿರುವ ಇವರ ಉನ್ನತ ಶಿಕ್ಷಣ ಕನಸು ಗಗನ ಕುಸುಮವಾಗಿದೆ. ಕರ್ನಾಟಕದ ಗಡಿಯಾಚೆಗೂ ಕನ್ನಡ ಭಾಷೆಯ ಮೇಲೆ ಪ್ರೀತಿ, ಗೌರವ, ಅಭಿಮಾನ ತೋರುತ್ತಿರುವ ಗಡಿನಾಡ ಕನ್ನಡಿಗರಿಗೆ ಸಾಹಿತ್ಯ ಸಮ್ಮೇಳನದಲ್ಲಿ ಅದೂ ರಾಯಚೂರಿನಂತಹ ಗಡಿ ಜಿಲ್ಲೆಯಲ್ಲಿ ಯಾವುದೇ ರೀತಿಯಲ್ಲಿ ದೊರೆಯದ ಮನ್ನಣೆಯಿಂದಾಗಿ ಗಡಿನಾಡಿನ ಕನ್ನಡಿಗರು ತೀವ್ರ ಅಸಮಧಾನಗೊಂಡಿದ್ದಾರೆ.
ಮೂರು ದಿನಗಳ ಕಾಲ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನ ದಿನಗಣನೆ ಆರಂಭವಾಗಲಿದ್ದು, ಇಂತಹ ಸಮಯದಲ್ಲಿ ತಮ್ಮ ಅಸಮಧಾನ, ಆಕ್ರೋಶಗಳನ್ನು ವ್ಯಕ್ತಪಡಿಸುವುದು ಸರಿಯಲ್ಲ. ಅಕ್ಷರ ಜಾತ್ರೆಯನ್ನು, ದೊಡ್ಡ ಹಬ್ಬದಂತೆ ಆಚರಣೆ ಮಾಡುವುದಕ್ಕೆ ಸಕಲ ಸಿದ್ಧತೆಗಳು ಸಾಗಿದ್ದು, ಎಲ್ಲರೂ ಉತ್ಸುಕತೆಯಲ್ಲಿ ಕೆಲಸ ಮಾಡುತ್ತಿದ್ದು ಈ ವೇಳೆ ಯಾವುದೇ ರೀತಿಯ ತರಕಾರು, ಪ್ರತಿಭಟನೆ ಮಾಡದೇ ತೊಂದರೆ ನೀಡುವುದಕ್ಕಿಂತ ನಾವೇ ಸಮ್ಮೇಳನದಿಂದ ದೂರವಿರುವುದು ಒಳಿತು ಎಂಬ ನಿಲುವನ್ನು ಗಡಿನಾಡಿನ ಕನ್ನಡಿಗರು ಹೊಂದಿದ್ದಾರೆ.
ಗಡಿನಾಡಿನ ಕನ್ನಡಿಗರ ಸಣ್ಣಪುಟ್ಟ ಸಮಸ್ಯೆಗಳ ಬಗ್ಗೆ ಐದು ದಶಗಳಿಂದ ಹೋರಾಟ ಮಾಡುತ್ತಾ ಬಂದಿದ್ದು, ಇಲ್ಲಿ ತನಕ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಸಮ್ಮೇಳನದ ಗೋಷ್ಠಿಯಲ್ಲಿ ಸಹ ಅದರ ಪ್ರಸ್ತಾವನೆ ಇಲ್ಲ. ಕಸಾಪದವರು ಕಡಿನಾಡ ಗನ್ನಡಿಗರನ್ನು ಸಂಪರ್ಕಿಸಿಲ್ಲ. ಈ ಎಲ್ಲಾ ವಿಚಾರಗಳು ಬೇಸರ ಮೂಡಿಸಿದ್ದು, ಸಮ್ಮೇಳನ ಸಿದ್ಧತೆ ಸಮಯದಲ್ಲಿ ತಕರಾರು ಎತ್ತುವುದು ಸರಿಯಲ್ಲ ಎಂಬ ಕಾರಣಕ್ಕಾಗಿ ಸಮ್ಮೇಳನದಿಂದಲೆನೇ ದೂರ ಉಳಿಯಲು ನಿರ್ಧರಿಸಲಾಗಿದೆ.
ಅಮರ್ ದೀಕ್ಷಿತ್ ಗೌರವ ಕಾರ್ಯದರ್ಶಿ ಗಡಿನಾಡು ಕನ್ನಡಿಗರ ಹೋರಾಟ ಸಮಿತಿ ಕೃಷ್ಣಾ,