ಶೌಚಾಲಯಕ್ಕೆ ಹೋದ ಗರ್ಭಿಣಿಗೆ ಹೆರಿಗೆಯಾದಾಗ... ಬಾಗಲಕೋಟೆಯಲ್ಲೊಂದು ಮಾನವೀಯತೆಯ ಘಟನೆ

By Suvarna Web DeskFirst Published Jul 17, 2017, 5:02 PM IST
Highlights

ಆಕೆ ದುಡಿಯೋಕ್ಕಂತ ಗಂಡನೊಂದಿಗೆ ಗೋವಾಕ್ಕೆ ಹೋಗಿದ್ದವಳು, ಆದ್ರೆ ಗರ್ಭಿಣಿಯಾಗಿದ್ರಿಂದ ತವರುಮನೆಗೆ ಬಿಡೋಕೆ ಅಂತ ಪತಿಯೊಬ್ಬ ತನ್ನ ಪತ್ನಿಯನ್ನ ಕರೆತರುವ ವೇಳೆಯೇ ಬಸ್​ನಿಲ್ದಾಣದ ಶೌಚಾಲಯದಲ್ಲೇ ಗರ್ಭಿಣಿಗೆ ಹೆರಿಗೆಯಾಗಿರೋ ಅಚ್ಚರಿ  ಘಟನೆಯೊಂದು ಬಾಗಲಕೋಟೆ ಜಿಲ್ಲೆಯ ಇಲಕಲ್​ ಪಟ್ಟಣದಲ್ಲಿ ನಡೆದಿದೆ. ಮುಂದೇನಾಯ್ತು? ಎನ್ನುವುದರ ಕುರಿತ ವರದಿ ಇಲ್ಲಿದೆ ನೋಡಿ.

ಬಾಗಲಕೋಟೆ: ಶೌಚಕ್ಕೆ ತೆರಳಿದ ವೇಳೆ ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ; ಹೆರಿಗೆಯಾದ ಮಹಿಳೆಯ ನೆರವಿಗೆ ತಕ್ಷಣ ಧಾವಿಸಿ ಬಂದ ಮಹಿಳೆಯರು; 108 ಅಂಬ್ಯುಲೆನ್ಸ್​ ಮೂಲಕ ಆಸ್ಪತ್ರೆಗೆ ದಾಖಲಾದ ತಾಯಿ ಮಗು...

ಹೌದು. ಇಂತಹದ್ದೊಂದು ಅಚ್ಚರಿಯ ಘಟನೆ ನಡೆದಿರೋದು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಇಲಕಲ್​ ಪಟ್ಟಣದಲ್ಲಿ. ಶೌಚಾಲಯದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ತಾಯಿಯ ಹೆಸರು ನಿರ್ಮಲಾ. ಈಕೆ ತನ್ನ ಪತಿ ಸಿದ್ದೇಶನೊಂದಿಗೆ ದುಡಿಯಲು ಗೋವಾಕ್ಕೆ ಹೋಗಿದ್ದರು. ಇತ್ತ ನಿರ್ಮಲಾ 7 ತಿಂಗಳ ಗರ್ಭಿಣಿಯಾಗುತ್ತಲೇ ಆಕೆಯನ್ನ ತವರುಮನೆಯಾದ ಬಾಗಲಕೋಟೆ ಜಿಲ್ಲೆಯ ಕಂದಗಲ್​ ಗ್ರಾಮಕ್ಕೆ ಬಿಟ್ಟುಬರಲು ಗೋವಾದಿಂದ ಇಲಕಲ್​ ಬಸ್​ನಿಲ್ದಾಣಕ್ಕೆ ಬಂದಿರುತ್ತಾರೆ. ಬೆಳಗಿನ ವೇಳೆ ಗರ್ಭಿಣಿ ನಿರ್ಮಳಾ ಶೌಚಾಲಯಕ್ಕೆ ತೆರಳಿದಾಗ ಅಲ್ಲಿಯೇ ನೋವು ಕಾಣಿಸಿಕೊಂಡು ತಕ್ಷಣ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಇದರಿಂದ ಅಚ್ಚರಿಗೊಂಡ ಶೌಚಾಲಯದಲ್ಲಿ ನೆರೆದಿದ್ದ ಮಹಿಳೆಯರು ತಕ್ಷಣ ಧಾವಿಸಿ ಬಂದು ಆಕೆಗೆ ಬಹುಮುಖ್ಯ ಆರೈಕೆ ಮಾಡುತ್ತಾರೆ. ನಂತರ ಮಗು ಮತ್ತು ನಿರ್ಮಲಾಳನ್ನ 108 ಅಂಬ್ಯುಲೆನ್ಸ್​ ಮೂಲಕ ಆಸ್ಪತ್ರೆಗೆ ದಾಖಲಿಸುತ್ತಾರೆ.

ಇನ್ನು, ಇಲಕಲ್​ ಸರ್ಕಾರಿ ಆಸ್ಪತ್ರೆಗೆ ದಾಖಲಾದ ತಾಯಿ ಮಗುವನ್ನು ಇದೀಗ ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಅವಧಿಪೂರ್ಣಕ್ಕೆ ಮುನ್ನವೇ, ಅಂದ್ರೆ 7 ತಿಂಗಳಿಗೇ ಈ ಹೆರಿಗೆಯಾಗಿದ್ದು, ಇದ್ರಿಂದ ಮಗುವಿನ ತೂಕ 1 ಕೆಜಿಗೂ ಕಡಿಮೆ ಇದೆ. ಹೀಗಾಗಿ, ತೀವ್ರ ನಿಗಾ ಘಟಕ (ಐಸಿಯು)ದಲ್ಲಿಟ್ಟು ಆರೈಕೆ ಮಾಡಲಾಗುತ್ತಿದೆ. ತಾಯಿ ಆರೋಗ್ಯ ಸ್ಥಿರವಾಗಿದೆ ಎಂದು ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ.

ಒಟ್ಟಿನಲ್ಲಿ, ಹೆರಿಗೆಯಾಗದೇ ವಾರಗಟ್ಟಲೇ ಗರ್ಭಿಣಿಯರನ್ನ ಆಸ್ಪತ್ರೆಗೆ ಕರೆದೊಯ್ಯುವ ಇಂದಿನ ದಿನಗಳಲ್ಲಿ ಮಹಿಳೆಯೊಬ್ಬಳಿಗೆ ಶೌಚಕ್ಕೆ ಹೋದ ಸಂದರ್ಭದಲ್ಲಿಯೇ ಸಹಜವಾಗಿಯೇ ಹೆರಿಗೆಯಾಗಿದ್ದು ಮಾತ್ರ ನಿಜಕ್ಕೂ ಅಚ್ಚರಿಪಡುವಂತಾಗಿದೆ.

- ಮಲ್ಲಿಕಾರ್ಜುನ ಹೊಸಮನಿ, ಸುವರ್ಣನ್ಯೂಸ್, ಬಾಗಲಕೋಟೆ

click me!