ಎರಡು ಸಾವಿರ ಮುಖಬೆಲೆ ನೋಟು ಕೊಟ್ರೆ ಉಳಿದ ಚಿಲ್ಲರೆ ಯಾರು ಕೊಡ್ತಾರೆ?

Published : Nov 10, 2016, 02:26 PM ISTUpdated : Apr 11, 2018, 01:01 PM IST
ಎರಡು ಸಾವಿರ ಮುಖಬೆಲೆ ನೋಟು ಕೊಟ್ರೆ ಉಳಿದ ಚಿಲ್ಲರೆ ಯಾರು ಕೊಡ್ತಾರೆ?

ಸಾರಾಂಶ

ಬೆಳಗ್ಗೆ ಬ್ಯಾಂಕುಗಳು ಕಚೇರಿಗಳ ಬಾಗಿಲು ತೆಗೆಯುವ ಮುನ್ನವೇ ಸರತಿ ಆರಂಭಿಸಿದ್ದ ಗ್ರಾಹಕರು ಸಂಜೆವರೆಗೂ ಹಳೇ ನೋಟು ಕೊಟ್ಟು 100,50 ರ ನೋಟುಗಳನ್ನು ಪಡೆದು ಆರ್ಥಿಕ ವಹಿವಾಟಿನ ವಿಶೇಷ ಅನುಭವ ಪಡೆದರು.

ದಾವಣಗೆರೆ (ನ.10): ರೂ.2000  ಹೊಸ ನೋಟುಗಳನ್ನು ಪಡೆದು ಏನು ಮಾಡೋಣ. ಅಂಗಡಿಗೆ ಹೋದ್ರೆ 1900 ಚಿಲ್ಲರೆ ಯಾರು ಕೊಡ್ತಾರೆ. 100,50 ರ ನೋಟುಗಳನ್ನು ಕೊಡ್ರಪ್ಪ ಸಾಕು’

ರೂ.500 ಹಾಗೂ ರೂ.1000 ಮುಖಬೆಲೆಯ ಹಳೆಯ ನೋಚುಗಳ ಚಲಾವಣೆ ಕೇಂದ್ರ ಸರ್ಕಾರ ನಿಷೇಧ ಮಾಡಿದ ಹಿನ್ನೆಲೆಯಲ್ಲಿ ಗ್ರಾಹಕರು ಗುರುವಾರ ಬ್ಯಾಂಕುಗಳಿಗೆ ಮುಗಿಬಿದ್ದು ಅಧಿಕಾರಿಗಳ ಮುಂದೆ ಬೇಡಿಕೆಯಿಟ್ಟ ಪರಿಯಿದು.

ಬೆಳಗ್ಗೆ ಬ್ಯಾಂಕುಗಳು ಕಚೇರಿಗಳ ಬಾಗಿಲು ತೆಗೆಯುವ ಮುನ್ನವೇ ಸರತಿ ಆರಂಭಿಸಿದ್ದ ಗ್ರಾಹಕರು ಸಂಜೆವರೆಗೂ ಹಳೇ ನೋಟು ಕೊಟ್ಟು 100,50 ರ ನೋಟುಗಳನ್ನು ಪಡೆದು ಆರ್ಥಿಕ ವಹಿವಾಟಿನ ವಿಶೇಷ ಅನುಭವ ಪಡೆದರು.

ಕೆಲವು ಯುವಕರು 2 ಸಾವಿರದ ನೋಟು ನೋಡುವ ಸಂಭ್ರಮದಲ್ಲಿದ್ದರು. ಕೈಯಲ್ಲಿ ಬ್ಯಾಂಕ್ ಪಾಸ್ ಪುಸ್ತಕ, ಗುರುತಿನ ಚೀಟಿ, ಆಧಾರ್ ಕಾರ್ಡ್ ಹಿಡಿದು ಬ್ಯಾಂಕ್‌ಗೆ ಆಗಮಿಸಿದ್ದವರ ಮೊಗದಲ್ಲಿ ಕಳವಳದ ಗೆರೆಗಳೂ ಮೂಡಿದ್ದವು. ಹಣ ಜಮೆ ಮಾಡುವವರಿಗಿಂತ ಮಿಗಿಲಾಗಿ ನೋಟು ಬದಲಾವಣೆ ಮಾಡುವವರ ಸಂಖ್ಯೆಯೇ ಹೆಚ್ಚಾಗಿತ್ತು.

ಸರತಿಯಲ್ಲಿ ನಿಲ್ಲುವ ಗ್ರಾಹಕರು ಬಿಸಿಲಲ್ಲಿ ಬಳಲಬಾರದು ಎಂಬ ಕಾರಣಕ್ಕೆ ಎಲ್ಲ ಬ್ಯಾಂಕುಗಳ ಆವರಣದಲ್ಲೂ ಶಾಮಿಯಾನ ಹಾಕಿ, ನೆರಳು ವ್ಯವಸ್ಥೆ, ಕುಡಿವ ನೀರಿನ ವ್ಯವಸ್ಥೆ ಕೈಗೊಳ್ಳಲಾಗಿತ್ತು. ನೋಟು ಬದಲಾಯಿಸಿಕೊಂಡು ಬ್ಯಾಂಕ್‌ನಿಂದ ಹೊರಬರುತ್ತಿದ್ದ ಗ್ರಾಹಕರಲ್ಲಿ ನಿರಾಳ ಭಾವ ಎದ್ದುಕಾಣುತ್ತಿತ್ತು.

ಎಸ್‌ಬಿಎಂ ಮುಂಭಾಗ ಸರದಿಯಲ್ಲಿ ನಿಂತಿದ್ದ ಪರಮೇಶ್ವರಪ್ಪ ಎಂಬುವರು ‘ಕನ್ನಡಪ್ರಭ’ದೊಂದಿಗೆ ಮಾತನಾಡಿ, ನ.18 ರಂದು ಸ್ನೇಹಿತರ ಮಗಳ ಮದುವೆ ಇದೆ. ದಿನಸಿ ತಂದು ಕೊಡುವಂತೆ ಅವರು ಹಣ ನೀಡಿ ಹೋಗಿದ್ದರು. ಕಿರಾಣಿ ಅಂಗಡಿಯವರು ಸಾವಿರ ಹಾಗೂ ಐನೂರು ಮುಖಬೆಲೆಯ ನೋಟುಗಳನ್ನು ಪಡೆಯುತ್ತಿಲ್ಲ. ದುಡ್ಡು ನನ್ನ ಅಕೌಂಟ್‌ಗೆ ಜಮೆ ಆದ್ರೆ ಸಾಕು. ಕಾರ್ಡ್ ಮೂಲಕ ಹೇಗೂ ಮಹಲ್‌ಗೆ ಹೋಗಿ ರೇಷನ್ ಪಡೆಯಬಹುದು ಎಂದು ಪ್ರತಿಕ್ರಿಯಿಸಿದರು.

ಮದುವೆಗೆ ಬಟ್ಟೆ ಹೊಲಿಸಿದ ಕೂಲಿ ಕೊಡಬೇಕು, ಟೈಲರ್ ಐನೂರು,ಸಾವಿರ  ನೋಟು ಪಡೆಯುತ್ತಿಲ್ಲ. ಕೇವಲ 2 ಸಾವಿರ ಮಾತ್ರ ಬದಲಾವಣೆ ಮಾಡಿಕೊಡುತ್ತೇವೆ ಎಂದು ಬ್ಯಾಂಕ್‌ನವರು ಹೇಳುತ್ತಿದ್ದಾರೆ. ಅಷ್ಟು ಸಿಕ್ಕರೆ ಸಾಕು, ಹೇಗೋ ಟೈಲರ್‌ಗೆ ಉದ್ರಿ ಹೇಳಬಹುದೆಂಬ ಅನಿಸಿಕೆ ತಿಪ್ಪೇಸ್ವಾಮಿ ಅವರದು.

ಎ.ಟಿ.ಎಂ.ಗಳು ಬಾಗಿಲು ಹಾಕಿದ ಹಿನ್ನೆಲೆಯಲ್ಲಿ ಸಹಜವಾಗಿಯೇ ಬ್ಯಾಂಕುಗಳ ಮೇಲೆ ಅಧಿಕ ಒತ್ತಡ ಬಿದ್ದಿತ್ತು. ಶುಕ್ರವಾರದಿಂದ ಎ.ಟಿ.ಎಂ.ಗಳು ಕಾರ್ಯನಿರ್ವಹಿಸಲಿವೆ. ಇಂದೇ ರಾತ್ರಿ ಎಲ್ಲ ಎ.ಟಿ.ಎಂ.ಗಳಿಗೆ ನೂರರ ನೋಟುಗಳ ತುಂಬಲಾಗುವುದು. ಒಮ್ಮೆ 2 ಸಾವಿರ ಮಾತ್ರ ಡ್ರಾ ಮಾಡುವ ಅವಕಾಶ ಕಲ್ಪಿಸಲಾಗಿದೆ. ವಾರಕ್ಕೆ ಇಪ್ಪತ್ತು ಸಾವಿರ ದಾಟದಂತೆ ನೋಡಿಕೊಳ್ಳಲಾಗುವುದು ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದರು.

ಬಹುತೇಕ ಗ್ರಾಹಕರು ನೂರು, ಐವತ್ತು, ಹತ್ತರ ನೋಟುಗಳನ್ನು ಕೊಡುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಬೇಡಿಕೆ ಇಡುತ್ತಿದ್ದರು. ಇದನ್ನು ಹೊಂದಾಣಿಕೆ ಮಾಡುವುದು ಬ್ಯಾಂಕ್‌ನವರಿಗೂ ತ್ರಾಸದಾಯಕವಾಗಿತ್ತು.

PREV
click me!

Recommended Stories

ಕಾಫಿನಾಡಲ್ಲಿ 3ಗಂಟೆ ಬಾಗಿನ ಕೊಡಲು ಕಾದ ಬಿಜೆಪಿಗರು, ಅರಿಶಿನ-ಕುಂಕುಮ ತಿರಸ್ಕರಿಸಿದ ಸಚಿವೆ ಹೆಬ್ಬಾಳ್ಕರ್!
ಮದುವೆ ಸಂಭ್ರಮದಲ್ಲಿ ಮನೆಯಲ್ಲಿ ಸಾವು, ಡಾನ್ಸ್ ಮಾಡುತ್ತಲೇ ಹೃದಯಾಘಾತ ಉಸಿರು ಚೆಲ್ಲಿದ ಯುವಕ