
ಬೆಂಗಳೂರು: ಜಯನಗರದ ಲಕ್ಷ್ಮಣರಾವ್ ಉದ್ಯಾನವನವನ್ನು ಮೆಟ್ರೋಕಾಮಗಾರಿ ಆಹುತಿ ತೆಗೆದುಕೊಳ್ಳುತ್ತಿದೆ ಎಂಬ ಕೂಗು ಹಳೆಯದು. ಆದರೆ ಈ ಕೂಗನ್ನು ಮೆಟ್ರೋ ಆಲಿಸುತ್ತಿಲ್ಲ. ಹಾಗೇ ಸ್ಥಳೀಯರು ಪ್ರಯತ್ನ ಬಿಡುತ್ತಿಲ್ಲ. ನಮ್ಮ ಮೆಟ್ರೊ ಕೈಗೊಂಡ ಕಾಂಗಾರಿಯಿಂ ದಾಗಿ ರಾಜಧಾನಿ ಬೆಂಗಳೂರಿನ ಸುಪ್ರಸಿದ್ಧ ಲಕ್ಷ್ಮಣರಾವ್ ಪಾರ್ಕ್ ಈಗಾಗಲೇ ಅರ್ಧ ಆಹುತಿಯಾಗಿದೆ. ಇನ್ನುಳಿದ ಭಾಗವನ್ನಾದರೂ ರಕ್ಷಿಸಲು ಜಯನಗರದ ಸ್ಥಳೀಯ ಸಂಘಸಂಸ್ಥೆಗಳು ಟೊಂಕ ಕಟ್ಟಿನಿಂತಿವೆ.
ಸದ್ಯ ನಿರ್ಧರಿಸಿರುವ ಯೋಜನೆ ಪ್ರಕಾರ ಲಕ್ಷ್ಮಣರಾವ್ ಪಾರ್ಕ್ಗೆ ಅಪಾಯವಿದೆ. ಇದನ್ನು ತಪ್ಪಿಸಲು ಏನೆಲ್ಲಾ ಪರ್ಯಾಯ ಕ್ರಮಗಳನ್ನು ಕೈಗೊಳ್ಳಬೇಕೆನ್ನುವ ಬಗ್ಗೆ ಸಂಘಟನೆಗಳು ನಿರ್ಧರಿಸಿವೆ. ಈ ಬಗ್ಗೆ ಸರ್ಕಾರಕ್ಕೂ ಮನವಿ ಸಲ್ಲಿಸಿವೆ.
ಜಯನಗರದ 4ನೇ ಮುಖ್ಯರಸ್ತೆಯ ಬಿ ಪಥ ಮಾರ್ಗ ನಿರ್ಮಾಣಕ್ಕೆ ಬದಲಾಗಿ ಪರ್ಯಾಯ ಯೋಜನೆಯನ್ನು ರೂಪಿಸಲು ಜಯನಗರ ಸಮನ್ವಯ ಸಮಿತಿ ಬಿಎಂಆರ್‌ಸಿಎಲ್ ಹಾಗೂ ಸರ್ಕಾರಕ್ಕೆ ಮನವಿ ಮಾಡಿದ್ದು, ಇದಕ್ಕೆ ಸರ್ಕಾರದಿಂದ ಹಾರಿಕೆ ಉತ್ತರ ಲಭ್ಯವಾಗಿದೆ ಎಂದು ಸಮಿತಿ ಸದಸ್ಯರು ದೂರಿದ್ದಾರೆ.
ಉದ್ಯಾನವನ್ನು ಉಳಿಸಲು ಮಾರ್ಗಗಳು: ಮಾರ್ಗ ನಿರ್ಮಾಣಕ್ಕೆ ಈಗಾಗಲೇ ಯೋಜನೆ ರೂಪಿಸಿದ್ದು, ಬೊಮ್ಮಸಂದ್ರದಿಂದ ಜಯನಗರ ಕಡೆಗೆ ತಲುಪುವ ಮಾರ್ಗವನ್ನು ಈಗಾಗಲೇ ರೂಪಿಸಿರುವ ಆರ್ಟ್ ಆಫ್ ಲಿವಿಂಗ್ ಆಶ್ರಮದ ಕಡೆಗೆ ಹೋಗುವ ಮಾರ್ಗದಲ್ಲಿಯೇ ವಿಲೀನಗೊಳಿಸಿ ಆರ್‌ವಿ ರಸ್ತೆ ಕಡೆಗೆ ಸಂಪರ್ಕ ಕಲ್ಪಿಸಿದಲ್ಲಿ ಉದ್ಯಾನದ ಬಹುಭಾಗವನ್ನು ರಕ್ಷಿಸಬಹುದಾಗಿದೆ ಜತೆಗೆ ಆರ್‌ವಿ ರಸ್ತೆಯಿಂದ ಸಾರಕ್ಕಿ ಸಿಗ್ನಲ್‌ವರೆಗೆ ದೆಹಲಿ ವಿಮಾನ ನಿಲ್ದಾಣ ಮಾದರಿಯಲ್ಲಿ ‘ವಾಕಲೇಟರ್' ನಿರ್ಮಿಸಿದರೆ ಕೂಡ ಬಹುಭಾಗ ಉದ್ಯಾನವನ್ನು ಉಳಿಸಿಕೊಳ್ಳಬಹುದು ಎಂದು ಸಲಹೆ ನೀಡಿದೆ.
ಆರ್'ವಿ ರಸ್ತೆ ನಿಲ್ದಾಣದಿಂದ ಜಯನಗರ ಮುಖ್ಯರಸ್ತೆ ತುದಿಯವರೆಗೆ ಒಂದೇ ಮಾರ್ಗ ನಿರ್ಮಿಸಿ ಅದರಲ್ಲೇ ನಾಲ್ಕು ಪಥಗಳನ್ನು ರೂಪಿಸಿದರೆ ಆರ್ಟ್ ಆಫ್ ಲಿವಿಂಗ್ ಬೊಮ್ಮಸಂದ್ರದ ಕಡೆಗೆ ತಲಾ ಎರಡೆರೆಡು ಪಥಗಳನ್ನು ವಿಭಜಿಸಬಹುದಾಗಿದೆ. ಇಲ್ಲವೇ ಆರ್‌ವಿ ರಸ್ತೆಯಿಂದ ಸಾರಕ್ಕಿ ಮಾರ್ಗವಾಗಿ ಚಲಿಸುವ ಮಾರ್ಗದಲ್ಲಿ ವಾಕಲೇಟರ್ ಅಳವಡಿಸುವುದರಿಂದ ಉದ್ಯಾನದ ಬಹುಭಾಗವನ್ನು ರಕ್ಷಿಸಬಹುದು. ಜತೆಗೆ ನಿರ್ಮಾಣ ವೆಚ್ಚವನ್ನು ತಗ್ಗಿಸಬಹುದು. ಜತೆಗೆ ಈಗಾಗಲೇ ಉದ್ಯಾನದ ಕಳೆಭಾಗದಲ್ಲಿ ಹಾದುಹೋಗಿರುವ ಕಾವೇರಿ ನೀರು ಪೂರೈಕೆಯ ಬೃಹತ್ ಕೊಳವೆ ಮಾರ್ಗವನ್ನು ಯಥಾ ಸ್ಥಿತಿಯಲ್ಲಿಯೇ ಉಳಿಸಿಕೊಳ್ಳಲು ಅವಕಾಶವಿದೆ.
ಫ್ರಾನ್ಸ್ ಸಚಿವರ ಭೇಟಿ ಶೀಘ್ರ: ಫ್ರಾನ್ಸ್ ದೇಶದ ವಿದೇಶ ವ್ಯವಹಾರಗಳು ಮತ್ತು ಅಂತಾರಾಷ್ಟ್ರೀಯ ಅಭಿವೃದ್ಧಿ ಸಚಿವ ಜೀನ್ ಮಾರ್ಕ್ ಆಯಾರಾಲ್ಟ್ ಅವರು ಜ.8ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ. ಜ.9ರಂದು ನಿಯೋಗವು ಬೆಂಗಳೂರಿನ ವಿಧಾನಸೌಧದ ಮುಂದಿರುವ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರೋ ನಿಲ್ದಾಣದಿಂದ ಎಂಜಿ ರಸ್ತೆಯ ಮೆಟ್ರೋ ನಿಲ್ದಾಣದವರೆಗೆ ರೈಲಿನಲ್ಲಿ ಪ್ರಯಾಣಿಸಲಿದೆ ಎಂದು ಬಿಎಂಆರ್‌ಸಿಎಲ್ ಮಾಹಿತಿ ನೀಡಿದೆ.
ಶಾರ್ಟ್'ಲೂಪ್ ಸೇವೆ ಮುಂದುವರಿಕೆ? ಇಂದಿರಾನಗರ-ವಿಜಯನಗರ ಮೆಟ್ರೋ ನಿಲ್ದಾಣಗಳ ನಡುವೆ ಬೆಳಗ್ಗೆ 8ರಿಂದ ರಾತ್ರಿ 10ಗಂಟೆಯವರೆಗೆ ಪ್ರಾಯೋಗಿಕವಾಗಿ ನಿಗದಿತ ಮೆಟ್ರೋ ರೈಲಿನ ಸಂಚಾರದ ಜತೆಗೆ ಪ್ರಯಾಣಿಕರ ಒತ್ತಡ ಇರುವ ಮಾರ್ಗದಲ್ಲಿ ಪೂರಕ ಮೆಟ್ರೋ ರೈಲು ಸಂಚಾರಕ್ಕೆ ಬಿಎಂಆರ್‌ಸಿಎಲ್ ಶನಿವಾರ ಚಾಲನೆ ನೀಡಿದೆ.
ಬೈಯ್ಯಪ್ಪನಹಳ್ಳಿ ಅಥವಾ ನಾಯಂಡ ಹಳ್ಳಿ ಕಡೆಗೆ ಸಾಗುವ ಪ್ರತಿ ರೈಲಿನ ಹಿಂದೆ ಶಾರ್ಟ್ ಲೂಪ್ ಮೆಟ್ರೋ ರೈಲು ಸಂಚರಿಸಿತು. ಇದರಿಂದ ವಿಧಾನಸೌಧ, ಮೆಜೆಸ್ಟಿಕ್ ಹಾಗೂ ಎಂಜಿ ರಸ್ತೆಗೆ ಹೋಗುವವರಿಗೆ ಅನುಕೂಲವಾಗಲಿದೆ. ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಇನ್ನು ಮುಂದೆ ಶಾರ್ಟ್'ಲೂಪ್ ಸೇವೆಯನ್ನು ಮುಂದುವರಿಸುವ ಕುರಿತು ಚಿಂತನೆ ನಡೆಸಲಿದ್ದೇವೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ಎನ್'ಜಿಟಿ ವಿಚಾರಣೆ 22ರಂದು:
ಮೆಟ್ರೋ ಕಾಮಗಾರಿಯಿಂದ ಜಯನಗರದಲ್ಲಿರುವ ಲಕ್ಷ್ಮಣ್‌ರಾವ್ ಉದ್ಯಾನಕ್ಕೆ ಉಂಟಾಗುತ್ತಿರುವ ಹಾನಿ ಕುರಿತಾಗಿ ಬಿಎಂಆರ್‌ಸಿಎಲ್ ವಿರುದ್ಧ ರಾಷ್ಟ್ರೀಯ ಹಸಿರು ನ್ಯಾಯಪೀಠಕ್ಕೆ ಜಯನಗರ ಸಮನ್ವಯ ಸಮಿತಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯಲ್ಲಿ ಅಗತ್ಯ ದಾಖಲೆ ಸಮೇತ ಸ್ಪಷ್ಟನೆ ನೀಡುವಲ್ಲಿ ಬಿಎಂಆರ್‌ಸಿಎಲ್ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಜಯನಗರ ಸಮನ್ವಯ ಸಮಿತಿ ಬಿಎಂಆರ್‌ಸಿಎಲ್ ವಿರುದ್ಧ ದಾಖಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಪೀಠವು ಜ.22ಕ್ಕೆ ಮುಂದೂಡಿದೆ. ಹಲವು ದಶಕಗಳ ಇತಿಹಾಸವಿರುವ ಲಕ್ಷ್ಮಣ್'ರಾವ್ ಪಾರ್ಕ್ ಉಳಿಸಲು ಪ್ರಯತ್ನಿಸುತ್ತಿರುವ ವೇದಿಕೆಯು ಆರ್‌ವಿ ರಸ್ತೆಯಲ್ಲಿ ನಿರ್ಮಾಣವಾಗಲಿರುವ 2ನೇ ಮೆಟ್ರೋ ಇಂಟರ್‌ಚೇಂಜ್ ನಿಲ್ದಾಣದ ವಿನ್ಯಾಸಕ್ಕೆ ವಿರೋಧ ವ್ಯಕ್ತಪಡಿಸಿ ಎನ್‌ಜಿಟಿಗೆ ದೂರು ಸಲ್ಲಿಸಿದೆ. ಈ ಸಂಬಂಧ ಸ್ಪಷ್ಟನೆ ಕೋರಿ ಬಿಎಂಆರ್‌ಸಿಎಲ್‌ಗೆ ನ್ಯಾಯಪೀಠ ನೋಟಿಸ್ ಜಾರಿ ಮಾಡಿದರೂ ಉತ್ತರಿಸದೆ, ಬೊಮ್ಮಸಂದ್ರ-ಆರ್‌ವಿ ರಸ್ತೆ ಮಾರ್ಗಕ್ಕೆ ಟೆಂಡರ್ ಕರೆದಿದೆ ಎಂದು ಸಮನ್ವಯ ವೇದಿಕೆ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ.
ಆರ್'ವಿ ರಸ್ತೆಯಿಂದ ಆರ್ಟ್ ಆಫ್ ಲಿವಿಂಗ್ ಕಡೆಗೆ ತೆರಳುವ ಮಾರ್ಗಕ್ಕೆ ಈಗಾಗಲೇ ಲಕ್ಷ್ಮಣರಾವ್ ಉದ್ಯಾನದ 400 ಮರಗಳನ್ನು ಆಹುತಿ ಮಾಡಲಾಗಿದೆ. ಈಗ ಮತ್ತೆ 400 ಮರಗಳನ್ನು ಬಲಿ ತೆಗೆದುಕೊಳ್ಳುವ ಬದಲು ಈಗಿರುವ ಮಾರ್ಗದಲ್ಲೇ ಪರ್ಯಾಯ ಯೋಜನೆ ರೂಪಿಸಿ ದ್ವಿಪಥದ ಮಾರ್ಗವನ್ನು ಚತುಷ್ಪಥವನ್ನಾಗಿ ಪರಿವರ್ತಿಸಬೇಕು
- ಮುರಳಿ, ಸಮನ್ವಯ ವೇದಿಕೆ ಸದಸ್ಯ
(ಕನ್ನಡಪ್ರಭ ವಾರ್ತೆ)
epaper.kannadaprabha.in