
ಬೀದರ್ (ನ.03): ಔರಾದ್-ಬೀದರ್ ಅಂತಾರಾಜ್ಯ ಹೆದ್ದಾರಿ ಅಭಿವೃದ್ಧಿ, ತಾಲೂಕಿನ ಕೌಠಾ (ಬಿ) ಬಳಿಯ ಸೇತುವೆ ನಿರ್ಮಾಣ, ಬೀದರ್ ನಿರ್ಮಿತಿ ಕೇಂದ್ರದಲ್ಲಿನ ಭ್ರಷ್ಟಾಚಾರ ಆರೋಪ ಸಾಬಿತಾದ ಅಧಿಕಾರಿ ಮೇಲೆ ಕ್ರಮ ಕೈಗೊಳ್ಳುವಂತೆ ಹಾಗೂ ವಿವಿಧ ಬೇಡಿಕೆಗಳು ಮುಂದಿಟ್ಟುಕೊಂಡು ಕನ್ನಡ ಸಮರ ಸೇನೆ ಸಂಘಟನೆ ಅಮರಣ ಉಪವಾಸ ಸತ್ಯಾಗ್ರಹ ನಡೆಸುತ್ತಿದೆ.
ಪಟ್ಟಣದ ಮಿನಿ ವಿಧಾನ ಸೌಧ ಮುಂದೆ ಕನ್ನಡ ಸಮರ ಸೇನೆ ಜಿಲ್ಲಾಧ್ಯಕ್ಷ ಅವಿನಾಶ ದಿನೆ ನೇತೃತ್ವದಲ್ಲಿ ಇನ್ನಿತರ ಕಾರ್ಯಕರ್ತರು ಗುರುವಾರ ಅಮರಣ ಉಪವಾಸ ಸತ್ಯಾಗ್ರಹ ಆರಂಭಿಸಿದ್ದು ಮುಖ್ಯಮಂತ್ರಿಗೆ ಬರೆದ ವಿವಿಧ ಬೇಡಿಕೆಗಳುಳ್ಳ ಮನವಿಪತ್ರವನ್ನು ತಹಸೀಲ್ದಾರರಿಗೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ತಾಲೂಕಿನಲ್ಲಿನ ಮೂಲಸೌಕರ್ಯಗಳ ಕೋರತೆ ಹಾಗೂ ಭ್ರಷ್ಟಾಚಾರ ತಾಂಡವವಾಡುತಿದ್ದರು ತಾಲೂಕಿನಲ್ಲಿ ಯಾವುದೇ ಅಭಿವೃದ್ದಿ ಕಾರ್ಯ ಕೈಗೊಳ್ಳಲು ಹಾಗೂ ಬ್ರಷ್ಟಾಚಾರ ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ ಎಂದರು. ಔರಾದ್-ಬೀದರ್ ಅಂತರರಾಜ್ಯ ಹೆದ್ದಾರಿ ಸುಮಾರು 40 ಕಿ.ಮೀ ರಸ್ತೆ ಹಾಳಾಗಿದ್ದು ರಸ್ತೆ ಹಾಳಾಗಿ 4 ವರ್ಷ ಕಳೆದರೂ ರಸ್ತೆ ಅಭಿವೃದ್ಧಿ ಮಾಡುವಲ್ಲಿ ಸರ್ಕಾರ ಮುಂದಾಗುತ್ತಿಲ್ಲ ಎಂದು ಕೀಡಿ ಕಾರಿದ ಅವರು ಈ ಭಾಗದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ರಸ್ತೆ ಅಭಿವೃದ್ಧಿಪಡಿಸಲು ಮುಂದಾಗುತ್ತಿಲ್ಲ ಎಂದರು. ಔರಾದ-ಬೀದರ್ ರಸ್ತೆ ಮೇಲೆ ನಿತ್ಯ ನೂರಾರು ವಾಹನಗಳು ತಗ್ಗು ಗುಂಡಿಗಳ ಮಧ್ಯ ಸಂಚರಿಸುವ ಅನಿವಾರ್ಯತೆ ಇದ್ದು ಅಧಿಕಾರಿಗಳು ಗುಂಡಿ ಮುಚ್ಚಿಸಿದರು ಮತ್ತೆ ಗುಂಡಿಗಳು ನಿರ್ಮಾಣಗೊಂಡು ಸಂಚಾರ ದುಸ್ತರವಾಗಿ ಪರಿಣಮಿಸಿದೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಬೀದರ್-ಔರಾದ್ ಮಧ್ಯೆ ಕೌಠಾ ಬಳಿಯ ಸೇತುವೆ ಸಂಪೂರ್ಣ ಶಿಥಿಲಗೊಂಡಿದ್ದು ಶೀಘ್ರವಾಗಿ ನೂತನ ಸೇತುವೆ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿರುವ ಕನ್ನಡ ಸಮರ ಸೇನೆ ನೂತನ ಸೇತುವೆ ನಿರ್ಮಾಣವಾದಲ್ಲಿ ಪ್ರಯಾಣಿಕರಿಗೆ ಅನೂಕಲವಾಗಲಿದೆ ಎಂದರು. ಇನ್ನು ಬೀದರ್ ನಿರ್ಮಿತಿ ಕೇಂದ್ರದಲ್ಲಿ ಸಿಬ್ಬಂದಿ ನೇಮಕಾತಿಯಲ್ಲಿ ಅಕ್ರಮ ನಡೆಸಿರುವ ಅಧಿಕಾರಿಗಳ ಆರೋಪ ಸಾಬಿತಾದರು ಜಿಲ್ಲಾಡಳಿತ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದ ಅವರು ನಿರ್ಮಿತಿ ಕೇಂದ್ರದ ಅಕ್ರಮದಲ್ಲಿ ಶಾಮಿಲಾದ ಮೂವರು ಅಧಿಕಾರಗಳ ಮೇಲೆ ಕ್ರಮ ಜರುಗಿಸಲು ಜಿಲ್ಲಾಡಳಿತ ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಿದರು. ಬೇಡಿಕೆಗಳು: ತಾಲೂಕಿನಲ್ಲಿ ಕೈಗಾರಿಕಾ ಪ್ರದೇಶ ವಿಸ್ತರಿಸಬೇಕು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ನಡೆಯುವ ಅಂಗನವಾಡಿಗಳಲ್ಲಿ ಕಳಪೆ ಆಹಾರ ಪೂರೈಕೆ ಮಾಡಲಾಗುತ್ತಿದ್ದು ಗುಣಮಟ್ಟದ ಆಹಾರ ಪೂರೈಕೆ ಮಾಡಬೇಕು, ಆರ್ ಟಿಓ ಕಚೇರಿಗಳಲ್ಲಿನ ದಲ್ಲಾಳಿಗಳ ಹಾವಳಿ ತಡೆಗಟ್ಟಿ ಜನಸಾಮಾನ್ಯರ ಇಲಾಖೆಯಾಗಿ ಪರಿವರ್ತಿಸಬೇಕು ಎಂಬ ಬೇಡಿಕೆಗಳು ಮಂಡಿಸಿದ್ದಾರೆ. ಸತ್ಯಾಗ್ರಹದಲ್ಲಿ ಕನ್ನಡ ಸಮರಸೇನೆ, ಕರ್ನಾಟಕ ರಕ್ಷಣಾ ಸೇನೆ, ಕರ್ನಾಟಕ ವಿಶ್ವ ನಿರ್ಮಾಣ ಸೇನೆ, ಜೈಭೀಮ ಬ್ರಿಗೇಡ್, ಬ್ಲ್ಯೂ ಟೈಗರ್ಸ್ ಸೇರಿದಂತೆ ವಿವಿಧ ಸಂಘಟನೆಗಳು ಬೇಡಿಕೆಗಳು ಈಡೆರಿಸುವವರೆಗೂ ಆಮರಣ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ದಿಲೀಪ ಯನಗುಂದೆ, ರಾಹುಲ ಡಾಂಗೆ, ಪ್ರಶಾಂತ ಮೋರೆ, ಅವಿನಾಶ ವರ್ಮಾ, ಸಂಗಮೇಶ ಬಾವಿದೊಡ್ಡೆ, ಬಂಡೆಪ್ಪ ಬೋರ್ಗಿ, ರಾಹುಲ ಕ್ರಾಂತಿಕಾರಿ,ರಘುನಾಥ ತೆಗಂಪೂರ ಧನರಾಜ ದಂಡೆ, ಮಾರುತಿ ಸಾಕ್ರೆ, ರಾಜಕುಮಾರ ವಾಘಮಾರೆ, ಮಾರುತಿ ಕೆ ಬೌದ್ಧೆ, ಬಾಲಾಜಿ ಕಂದಗುಳ ಸೇರಿದಂತೆ ಮತ್ತಿತರರು ಅಮರಣ ಉಪವಾಸ ಸತ್ಯಾಗ್ರದಲ್ಲಿ ಪಾಲ್ಗೊಂಡಿದ್ದಾರೆ.